More

    ಫಲಾನುಭವಿಗಳ ಖಾತೆಗೆ ಸಹಾಯಧನ ಜಮೆ

    ಹಾನಗಲ್ಲ: ಸರ್ಕಾರದ ವಿವಿಧ ಯೋಜನೆಗಳಿಗೆ ಮಂಜೂರಾಗಿರುವ ಸಹಾಯಧನಗಳು ಫಲಾನುಭವಿಗಳ ಖಾತೆಗೆ ಜಮಾ ಆಗಿದ್ದು, ಅವು ವಾಪಸ್ ಹೋಗುವುದಿಲ್ಲ. ಜನರು ಭಯ ಬೀಳುವ ಅಗತ್ಯವಿಲ್ಲ ಎಂದು ತಹಸೀಲ್ದಾರ್ ಪಿ.ಎಸ್. ಎರ್ರಿಸ್ವಾಮಿ ಮನವಿ ಮಾಡಿದರು.

    ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದಲ್ಲಿ ಗುರುವಾರ ತಾಲೂಕಿನ ಎಲ್ಲ ಬ್ಯಾಂಕ್​ಗಳ ವ್ಯವಸ್ಥಾಪಕರ ಸಭೆ ನಡೆಸಿದ ಅವರು, ಬ್ಯಾಂಕ್​ಗಳಲ್ಲಿ ಉಂಟಾಗಿರುವ ನೂಕುನುಗ್ಗಲು ನಿಭಾಯಿಸುವ ಕುರಿತು ರ್ಚಚಿಸಿದರು.

    ಸರ್ಕಾರದಿಂದ ಜನಧನ್, ಉಜ್ವಲ ಹಾಗೂ ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಡಿ ಎಲ್ಲ ಫಲಾನುಭವಿಗಳ ಖಾತೆಗೆ ಹಣ ಜಮಾ ಆಗಿದೆ. ಈ ಹಣ ತೆಗೆದುಕೊಳ್ಳಲು ಫಲಾನುಭವಿಗಳು ಬ್ಯಾಂಕ್ ಎದುರು ಜಮಾಯಿಸುತ್ತಿದ್ದಾರೆ. ಈಗಾಗಲೇ ಜಮಾ ಆಗಿರುವ ಹಣ ಮರಳಿ ಹೋಗಲಾರದು. ಅನಗತ್ಯವಾಗಿ ಹಣಕ್ಕಾಗಿ ಸರದಿಯಲ್ಲಿ ನಿಲ್ಲಬೇಕಿಲ್ಲ. ಬ್ಯಾಂಕ್​ಗಳಲ್ಲಿನ ಜನದಟ್ಟಣೆಯಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗುತ್ತಿಲ್ಲ ಎಂದರು.

    ಮೂರು ದಿನ ಬ್ಯಾಂಕ್​ಗಳು ರಜೆಯಿದ್ದರೂ, ಎಲ್ಲ ಗ್ರಾಮಗಳಲ್ಲಿರುವ ಸೇವಾ ಕೇಂದ್ರಗಳಲ್ಲಿ ಹಣ ನೀಡಲಾಗುತ್ತದೆ. ಪಟ್ಟಣದ ಹುಲ್ಲತ್ತಿ ಅವರ ಕಟ್ಟಡದಲ್ಲಿ, ಎಸ್​ಬಿಐ ಪಕ್ಕ, ತಹಸೀಲ್ದಾರ್ ಕಚೇರಿ ಪಕ್ಕ, ಕೆಸಿಸಿ ಬ್ಯಾಂಕ್ ಪಕ್ಕದಲ್ಲಿ ಸೇವಾ ಕೇಂದ್ರಗಳಿದ್ದು, ಅಲ್ಲಿ ಹಣ ಪಡೆಯಬಹುದಾಗಿದೆ. ಎಟಿಎಂಗಳಲ್ಲಿಯೂ ಹಣ ಪಡೆದುಕೊಳ್ಳಬಹುದಾಗಿದೆ. ಹಣದ ಅಗತ್ಯವಿದ್ದವರು ಮಾತ್ರ ಬರಬೇಕು. ಅನಗತ್ಯವಾಗಿ ಜನಜಂಗುಳಿಯಾಗಬಾರದು. ಈ ಮಾಹಿತಿಗಳ ಕುರಿತು ಬ್ಯಾಂಕ್​ನ ಎದುರು ಮಾಹಿತಿ ಫಲಕ ಹಾಕಲು ಸೂಚಿಸಲಾಗಿದೆ ಎಂದು ವಿವರಿಸಿದರು.

    ಜನಧನ್ ಖಾತೆಗೆ 500 ರೂಪಾಯಿ

    ಲಾಕ್​ಡೌನ್ ಹಿನ್ನೆಲೆಯಲ್ಲಿ ಮಹಿಳೆಯರ ಜನಧನ್ ಖಾತೆಗೆ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ ಮೂರು ತಿಂಗಳ ಕಾಲ ತಲಾ 500 ರೂ. ಜಮಾ ಮಾಡುವುದಾಗಿ ಕೇಂದ್ರ ಸರ್ಕಾರ ಘೊಷಿಸಿದೆ. ಅದರಂತೆ ಈಗ 500 ರೂ. ಜಮಾ ಮಾಡಿದೆ ಎಂದು ಶಾಸಕ ಸಿ.ಎಂ. ಉದಾಸಿ ತಿಳಿಸಿದ್ದಾರೆ.

    ಜಿಲ್ಲೆಯಲ್ಲಿ ಒಟ್ಟು 3,93,996 ಖಾತೆದಾರರು ಇದರ ಪ್ರಯೋಜನ ಪಡೆಯಲಿದ್ದಾರೆ. ಒಟ್ಟು 19.84 ಕೋಟಿ ರೂ. ಮೊತ್ತದಲ್ಲಿ ಈಗಾಗಲೇ ಶೇ. 90ರಷ್ಟು ಖಾತೆದಾರರಿಗೆ ಜಮಾ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

    ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಉದ್ದೇಶದಿಂದ ಮಹಿಳಾ ಖಾತೆದಾರರು ಬ್ಯಾಂಕ್ ಮತ್ತು ಎಟಿಎಂಗಳಲ್ಲಿ ಅಗತ್ಯವಿದ್ದರೆ ಮಾತ್ರ ಹಣ ಪಡೆದುಕೊಳ್ಳಬೇಕು. ತಮ್ಮ ಖಾತೆಗೆ ಜಮಾ ಆಗಿರುವ ಹಣ ತಮ್ಮ ಖಾತೆಯಲ್ಲಿಯೇ ಇರುತ್ತದೆ. ಯಾವುದೇ ಕಾರಣಕ್ಕೂ ವಾಪಸ್ ಹೋಗುವುದಿಲ್ಲ. ಈ ಕುರಿತಾದ ವದಂತಿಗಳಿಗೆ ಕಿವಿಗೊಡಬಾರದು. ಬ್ಯಾಂಕ್​ನ ಸಿಬ್ಬಂದಿಯೊಂದಿಗೆ ಸಹಕರಿಸಬೇಕು ಎಂದು ಉದಾಸಿ ಮನವಿ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts