More

    ಫಲಾನುಭವಿಗಳು ನಿವೇಶನ ಮಾರಬೇಡಿ : ವಸತಿ ಸಚಿವ ವಿ. ಸೋಮಣ್ಣ ಮನವಿ 

    ಕನಕಪುರ : ವಸತಿರಹಿತರ ಸೂರಿನ ಕನಸು ನನಸಾಗಿಸಲು ರಾಯಸಂದ್ರದಲ್ಲಿ 2461 ನಿವೇಶನಗಳನ್ನು ಇ -ಲಾಟರಿ ಮುಖಾಂತರ ಹಂಚಿಕೆ ಮಾಡುತ್ತಿರುವುದಾಗಿ ವಸತಿ ಸಚಿವ ವಿ.ಸೋಮಣ್ಣ ತಿಳಿಸಿದರು.

    ರಾಯಸಂದ್ರ ಸಂಯುಕ್ತ ವಸತಿ ಬಡಾವಣೆಯಲ್ಲಿ ರೈತರಿಗೆ ಸಾಂತ್ವನ ನಿವೇಶನ ಹಾಗೂ ಫಲಾನುಭವಿಗಳಿಗೆ ಇ- ಲಾಟರಿ ಮೂಲಕ ನಿವೇಶನ ಹಂಚಿಕೆ ಮಾಡಿ ಮಾತನಾಡಿ, ಈ ಭಾಗದಲ್ಲಿ ರೆವಿನ್ಯೂ ಹಾಗೂ ಅರಣ್ಯ ಪ್ರದೇಶದಲ್ಲಿ ಗೃಹ ಮಂಡಳಿ ನಿವೇಶನ ವಿಂಗಡಿಸಿರುವುದಾಗಿ ಸ್ಥಳೀಯ ಸಂಘಟನೆಗಳು ಆರೋಪಿಸಿದ ಹಿನ್ನೆಲೆಯಲ್ಲಿ ಭೂಮಿಗೆ ಸಂಬಂಧಿಸಿದಂತೆ ಎಲ್ಲ ಇಲಾಖೆಗಳಿಂದ ಜಂಟಿ ಸರ್ವೇ ಮಾಡಲಾಗಿದೆ. ಆದ್ದರಿಂದ ನಿವೇಶನ ಪಡೆದವರಿಗೆ ಭೀತಿ ಬೇಡ ಎಂದರು. ಮುಂದಿನ ದಿನಗಳಲ್ಲಿ ಜಿಲ್ಲೆಯ ನಾಲ್ಕು ತಾಲೂಕುಗಳು ಸ್ಯಾಟಲೈಟ್ ಟೌನ್‌ಗಳಾಗಿ ರೂಪುಗೊಳ್ಳುವುದರಲ್ಲಿ ಸಂದೇಹವಿಲ್ಲ. ಹೀಗಾಗಿ ಗೃಹ ಮಂಡಳಿಯಿಂದ ನಿವೇಶನ ಪಡೆದ ಫಲಾನುಭವಿಗಳು ಯಾವುದೇ ಕಾರಣಕ್ಕೂ ಮಾರಿಕೊಳ್ಳಬಾರದು ಎಂದು ಮನವಿ ಮಾಡಿದರು.

    ಗೃಹ ಮಂಡಳಿ ಅಧ್ಯಕ್ಷ ಆರಗ ಜ್ಞಾನೇಂದ್ರ ಮಾತನಾಡಿ, ನಗರ ವ್ಯಾಪ್ತಿಯಲ್ಲಿ ಬಹಳಷ್ಟು ಜನ ಖಾಸಗಿ ಬಡಾವಣೆಗಳಲ್ಲಿ ನಿವೇಶನ ಪಡೆದು ಮೋಸ ಹೋಗುತ್ತಿದ್ದಾರೆ. ಸಾರ್ವಜನಿಕರು ಗೃಹ ಮಂಡಳಿಗೆ ಅರ್ಜಿ ಹಾಕುವ ಮೂಲಕ ಕಾನೂನು ಬದ್ಧವಾಗಿ ನಿವೇಶನ ಪಡೆದು ನೆಮ್ಮದಿ ಬದುಕು ಸಾಗಿಸಬಹುದು ಎಂದು ತಿಳಿಸಿದರು.

    ಗೃಹಮಂಡಳಿಗೆ ಭೂಮಿ ನೀಡಿದ ಯಾವುದೇ ರೈತರು ಪರಿಹಾರಕ್ಕಾಗಿ ಕಚೇರಿಗೆ ಅಲೆದಾಡುವಂತಿಲ್ಲ. ನೇರವಾಗಿ ಆನ್‌ಲೈನ್ ಮೂಲಕ ನಿಮ್ಮ ಖಾತೆಗೆ ಹಣ ಕಳುಹಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಇಲ್ಲಿ ನಿವೇಶನ ಕೊಳ್ಳಲು ಕಾನೂನಿನಲ್ಲಿ ತೊಡಕಿಲ್ಲ. ನಿರ್ಭೀತಿಯಿಂದ ನಿವೇಶನ ಖರೀದಿಸಬಹುದಾಗಿದೆ. ಇದರ ಪಕ್ಕದಲ್ಲಿ ಮೂರೂವರೆ ಎಕರೆ ಬಫರ್‌ಝೋನ್ ಹಾಗೂ ಅರಣ್ಯ ಇಲಾಖೆಯ ಏಳೂವರೆ ಎಕರೆ ಗೋಮಾಳದ ಜಮೀನು ಪ್ರತ್ಯೇಕವಾಗಿದೆ. ವಿವಿಧ ವರ್ಗದ ನಿವೇಶನಗಳು 2443, ವಿವಿಧ ವರ್ಗದ ಮನೆಗಳು 18, ಸಿ.ಎ. ನಿವೇಶನಗಳು 9, ವಾಣಿಜ್ಯ ನಿವೇಶನಗಳು 8, 24 ಉದ್ಯಾನವನ ಸೇರಿ ಚದರ ಅಡಿಗೆ 1000 ರೂ. ನಿಗದಿಯಾಗಿದ್ದ ಹಣವನ್ನು 950 ರೂ.ಗಳಿಗೆ ನಿಗದಿ ಮಾಡಲಾಗಿದೆ ಎಂದು ವಿವರಿಸಿದರು.

    ಜೋಡೆತ್ತುಗಳ ವರ್ಣನೆ : ಮಾತು ಪ್ರಾರಂಭ ಮಾಡುತ್ತಿದ್ದಂತೆ ಸೋಮಣ್ಣ ಎಂದಿನ ಶೈಲಿಯಲ್ಲಿಯೇ ಶಾಸಕ ಡಿ.ಕೆ.ಶಿವಕುಮಾರ್ ಹಾಗೂ ಡಿ.ಕೆ.ಸುರೇಶ್ ಅವರನ್ನು ಜೋಡೆತ್ತುಗಳು ಹಾಗೂ ಹಕ್ಕ-ಬುಕ್ಕರು ಎಂದು ವರ್ಣಿಸಿದ್ದು ಬಿಜೆಪಿಯ ಮುಖಂಡರಲ್ಲಿ ಇರಿಸು-ಮುರಿಸು ಆಯಿತು. ಕಾರ್ಯಕ್ರಮದಲ್ಲಿ ಹೆಚ್ಚಾಗಿ ಕಾಂಗ್ರೆಸ್ ಕಾರ್ಯಕರ್ತರು ಸೇರಿದ್ದು ಬಿಜೆಪಿಯ ಬೆರಳೆಣಿಕೆಯಷ್ಟು ಮುಖಂಡರು ಹಾಜರಿದ್ದುದು ಎದ್ದುಕಾಣುತ್ತಿತ್ತು.

    ಇ-ಹರಾಜು ಬಗ್ಗೆ ಗೊಂದಲ : ಇ-ಹರಾಜಿನ ನಿವೇಶನ ಹಂಚಿಕೆಯಲ್ಲಿ ನೆರೆದಿದ್ದ ನೂರಾರು ಫಲಾನುಭವಿಗಳಲ್ಲಿ ಗೊಂದಲ ಉಂಟಾಗಿ ಗೃಹಮಂಡಳಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಕ್ರಮಸಂಖ್ಯೆಯ ಪ್ರಕಾರ ಲಾಟರಿ ಮೂಲಕ ನಿವೇಶನ ದೊರಕದಿರುವ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿ 1 ರಿಂದ 200 ಕ್ರಮಸಂಖ್ಯೆ ಫಲಾನುಭವಿಗಳ ಲಾಟರಿ ಹಂಚಿಕೆಯಾಗಿಲ್ಲ. 200 ರ ಮೇಲೆ ಹಂಚಿಕೆಯಾಗಿದೆ. ಒಂದೇ ರೀತಿಯ ಕ್ರಮಸಂಖ್ಯೆ ಜತೆಗೆ ಒಂದೇ ಮಾದರಿಯಲ್ಲಿ ಮೂರ‌್ನಾಲ್ಕು ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಇ-ಹರಾಜಿನಲ್ಲಿ ಸಂಪೂರ್ಣ ಗೊಂದಲವಿದೆ, ಇದನ್ನು ರದ್ದುಪಡಿಸಿ ಲಾಟರಿ ಮೂಲಕ ಹಂಚಿಕೆ ಮಾಡಿ ಎಂದು ಒತ್ತಾಯಿಸಿದರು.ಸಂಸದ ಡಿ.ಕೆ.ಸುರೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಗಿರೀಶ್, ತಹಸೀಲ್ದಾರ್ ವರ್ಷಾ ಒಡೆಯರ್, ಎಂಎಲ್‌ಸಿ ಅ.ದೇವೇಗೌಡ, ಜಿಪಂ ಉಪಾಧ್ಯಕ್ಷೆ ಜಯರತ್ನಾ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts