More

    ಫಲವತ್ತಾದ ಭೂಮಿ ಸ್ವಾಧೀನಕ್ಕೆ ಅನ್ನದಾತರ ವಿರೋಧ

    ಬೆಳಗಾವಿ: ಬೆಳಗಾವಿ ಸುತ್ತ ವರ್ತುಲ ರಸ್ತೆ ನಿರ್ಮಾಣ ಮಾಡುವುದಕ್ಕೆ ಸರ್ಕಾರ ರೈತರಿಂದ ಫಲವತ್ತಾದ ಭೂಮಿ ವಶಕ್ಕೆ ಪಡೆದುಕೊಳ್ಳುತ್ತಿದೆ. ಹೀಗಾಗಿ ವರ್ತುಲ ರಸ್ತೆ ನಿರ್ಮಿಸುವ ಯೋಜನೆ ಕೈ ಬಿಡಬೇಕು ಎಂದು ಒತ್ತಾಯಿಸಿ ರೈತರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

    ನಗರದ ಸಂಭಾಜಿ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾ ಕಾರರು, ಸಂಭಾಜಿ ವೃತ್ತದಿಂದ ಚನ್ನಮ್ಮ ವೃತ್ತ ಹಾಗೂ ಚನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ರ‌್ಯಾಲಿ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

    ಬೆಳಗಾವಿ ಸುತ್ತ ವರ್ತುಲ ರಸ್ತೆ ನಿರ್ಮಾಣ ಮಾಡುವುದಕ್ಕೆ 32 ಗ್ರಾಮಗಳ ರೈತರ 1,300 ಎಕರೆ ಫಲವತ್ತಾದ ಭೂಮಿಯನ್ನು ವಶಪಡಿಸಿಕೊಳ್ಳಲಾಗುತ್ತಿದೆ. ಸರ್ಕಾರದ ಅಭಿವೃದ್ಧಿ ಕಾರ್ಯಗಳಿಗೆ ನಮ್ಮ ಬೆಂಬಲವಿದೆ. ಆದರೆ, ಫಲವತ್ತಾದ ಭೂಮಿ ವಶ ಪಡೆಯುವುದಕ್ಕೆ ವಿರೋಧವಿದೆ. ತಾಲೂಕಿನಲ್ಲಿ ಚಿಕ್ಕ ಹಿಡುವಳಿದಾರ ರೈತರ ಸಂಖ್ಯೆ ಹೆಚ್ಚಿದೆ. ಕಡಿಮೆ ಭೂಮಿ ಇರುವ ರೈತರು ಬೇಸಾಯ ನಂಬಿ ಜೀವನ ಸಾಗಿಸುತ್ತಿದ್ದಾರೆ. ಹೀಗಾಗಿ ಯಾವುದೇ ಕಾರಣಕ್ಕೂ ಜಮೀನನ್ನು ವಶಕ್ಕೆ ಪಡೆಯಬಾರದು ಎಂದು ಆಗ್ರಹಿಸಿದರು.

    ಮುಂಬೈ, ಕೊಲ್ಕತ್ತದಂತೆ ಮೆಟ್ರೋ ಸಿಟಿಗಳಲ್ಲಿರುವ ಸಂಚಾರ ಕಿರಿಕಿರಿ ಬೆಳಗಾವಿಯಲ್ಲಿ ಇಲ್ಲ. ಈಗಾಗಲೇ ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಬಹಳಷ್ಟು ಹಣ ಖರ್ಚು ಮಾಡಲಾಗಿದೆ. ಈಗ ಮತ್ತೆ ವರ್ತುಲ ರಸ್ತೆ ನಿರ್ಮಿಸಬೇಕೆನ್ನುವುದಕ್ಕೆ ಅರ್ಥವಿಲ್ಲ. ಸರ್ಕಾರವು ಬೆಳಗಾವಿ ಅಧಿವೇಶನಕ್ಕೂ ಮುನ್ನ ಡಿ. 15ರೊಳಗೆ ವರ್ತುಲ ರಸ್ತೆ ನಿರ್ಮಾಣ ಯೋಜನೆ ರದ್ದುಪಡಿಸುವ ಪ್ರಸ್ತಾವನೆ ಹೊರಡಿಸಬೇಕು. ಇಲ್ಲವಾದರೆ ಸರ್ಕಾರದ ವಿರುದ್ಧ ರೈತರ ಚಳವಳಿ ಆರಂಭಿಸಬೇಕಾಗುತ್ತದೆ ಎಚ್ಚರಿಕೆ ನೀಡಿದರು. ಜಿಲ್ಲಾಧಿಕಾರಿ ನಿತೇಶ ಪಾಟೀಲ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಮಾಜಿ ಶಾಸಕ ಮನೋಹರ ಕಿಣೇಕರ, ಮಾಜಿ ಮೇಯರ್ ಮಾಲೋಜಿ ಅಷ್ಟೇಕರ ಪ್ರಕಾಶ ಮರಗಾಳೆ, ಶಿವಾಜಿ ಸುಂಟಕರ, ಸುಜೀತ ಮುಳಗುಂದ, ಸಿದಗೌಡ ಮೋದಗಿ, ಎನ್.ಆರ್. ಲಾತೂರ್, ಪ್ರಭು ಯತ್ನಟ್ಟಿ, ಸುಧೀರ ಚವ್ಹಾಣ, ಎಸ್.ಎಲ್. ಚೌಗಲೆ, ಬಾಗೋಜಿರಾವ್ ಪಾಟೀಲ, ವಿಲಾಸ ಘಾಡಿ, ಎಂ.ಜಿ. ಪಾಟೀಲ, ವರ್ತುಲ ರಸ್ತೆಯ ಜಮೀನಿನ ಸಂತ್ರಸ್ತ ರೈತರು, ಬೆಳಗಾವಿ-ಕಿತ್ತೂರು ರೈಲ್ವೆ ಮಾರ್ಗದ ಭೂಸ್ವಾಧೀನ ರೈತರು, ಹಲಗಾ-ಮಚ್ಛೆ ಬೈ ಪಾಸ್‌ಗೆ ಭೂಸ್ವಾಧೀನಕ್ಕೆ ಒಳಗಾದ ರೈತರು ಸೇರಿ ಸುಮಾರು 10 ಸಾವಿರ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಭಾರತೀಯ ಕೃಷಿಕ ಸಮಾಜ, ಎಂಇಎಸ್ ತಾಲೂಕು ಘಟಕ, ಶಿವಸೇನಾ ಬೆಳಗಾವಿ, ಮಹಿಳಾ ಅಘಾಡಿ, ಮಾರ್ಕೆಟ್ ಯಾರ್ಡ್ ವ್ಯಾಪಾರಿ ಸಂಘ, ಮಾಜಿ ಮಹಾಪೌರರ ಸಂಘಟನೆ, ಜಿಲ್ಲಾ ಛಲವಾದಿ ಮಹಾಸಭಾ, ಬೆಳಗಾವಿ ಕಟ್ಟಡ ಮತ್ತು ಇತರ ನಿರ್ಮಾಣ ಸಂಘ, ಕ್ರೇಡಾಯ್, ಇಂಜಿನಿಯರ್ಸ್ ಅಸೋಸಿಯೇಷನ್, ಖಾನಾಪುರ ಎಂಇಎಸ್ ಸಂಘಟನೆ, ಬೆಳಗಾವಿ ವಕೀಲರ ಸಂಘ, ಎಪಿಎಂಸಿ ತರಕಾರಿ ಮಾರುಕಟ್ಟೆ, ಚೇಂಬರ್ ಆಫ್ ಕಾಮರ್ಸ್, ಜೈ ಕಿಸಾನ್ ತರಕಾರಿ ಮಾರುಕಟ್ಟೆ ಸೇರಿ 20 ಸಂಘಟನೆಗಳು ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದ್ದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts