More

    ಪ್ಲೈಟ್ ಲೆಫ್ಟಿನೆಂಟ್ ಜಗದೀಶ ‘ಅಮರ ರಹೇ’

    ಶಿಗ್ಗಾಂವಿ: ಅಸ್ಸಾಂನ ಜೋರ್ಹತ್​ನಲ್ಲಿ ಗುರುವಾರ ನಿಧನರಾಗಿದ್ದ ಪಟ್ಟಣದ ನಿವಾಸಿ ಪ್ಲೈಟ್ ಲೆಫ್ಟಿನೆಂಟ್ ಜಗದೀಶ ಸುತಗಟ್ಟಿ ಅವರ ಅಂತಿಮ ಸಂಸ್ಕಾರ ಸರ್ಕಾರಿ ಗೌರವದೊಂದಿಗೆ ಪಟ್ಟಣದ ಮುಗುಳಿ ರಸ್ತೆಯಲ್ಲಿರುವ ರುದ್ರಭೂಮಿಯಲ್ಲಿ ಶನಿವಾರ ನೆರವೇರಿಸಲಾಯಿತು.

    ಶನಿವಾರ ಬೆಳಗ್ಗೆ ವಾಯು ಸೇನಾ ವಾಹನದಲ್ಲಿ ಪಟ್ಟಣದ ಅಜ್ಜ-ಅಮ್ಮನ ಮನೆಗೆ ಯೋಧನ ಪಾರ್ಥಿವ ಶರೀರ ಆಗಮಿಸುತ್ತಿದ್ದಂತೆ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತು. ಗೆಳೆಯರ ಬಳಗ ದುಃಖದಲ್ಲಿ ಮುಳುಗಿತ್ತು. ಕುಟುಂಬಸ್ಥರನ್ನು ಸಮಾಧಾನ ಪಡಿಸಿದ ಸ್ಥಳೀಯರು, ಮನೆಯ ಮುಂದೆ ಪಾರ್ಥಿವ ಶರೀರವನ್ನಿರಿಸಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಿದ್ದರು.

    ನಂತರ ಪಟ್ಟಣದ ಅಂಚೆ ಕಚೇರಿ, ಪಿಎಲ್​ಡಿ ಬ್ಯಾಂಕ್, ಹಳೆ ಬಸ್ ನಿಲ್ದಾಣ, ಪುರಸಭೆ ವೃತ್ತ, ಪೇಟೆ ಮುಖ್ಯ ರಸ್ತೆ, ಹಳೆಪೇಟೆ, ಜೋಳದ ಪೇಟೆ, ತಾಲೂಕು ಕ್ರೀಡಾಂಗಣ, ಮುಗಳಿ ರಸ್ತೆ ಸೇರಿದಂತೆ ವಿವಿಧ ಪ್ರಮುಖ ಬೀದಿಗಳಲ್ಲಿ ಯೋಧನ ಪಾರ್ಥಿವ ಶರೀರದ ಮೆರವಣಿಗೆ ನಡೆಯಿತು.

    ಮೆರವಣಿಗೆಯಲ್ಲಿ ರಾಜಕಾರಣಿಗಳು, ಅಭಿಮಾನಿಗಳು, ಸಾರ್ವಜನಿಕರು ಹೂಮಾಲೆ, ಹೂಪುಷ್ಪಗಳನ್ನು ಹಾಕಿ ಅಂತಿಮ ನಮನ ಸಲ್ಲಿಸಿದರು. ತಹಸೀಲ್ದಾರ್ ಪ್ರಕಾಶ ಕುದರಿ ಭೇಟಿ ನೀಡಿ ಅಂತಿನ ದರ್ಶನ ಪಡೆದರು. ರುದ್ರಭೂಮಿಯಲ್ಲಿ ಹುತಾತ್ಮ ಯೋಧ ಜಗದೀಶ ಸುತಗಟ್ಟಿ ಅವರ ಪಾರ್ಥಿವ ಶರೀರ ಮುಂದೆ ಭಾರತೀಯ ವಾಯು ಸೇನಾ ಪಡೆ, ಜಿಲ್ಲಾ ಸಶಸ್ತ್ರ ಪೊಲೀಸ್(ಡಿಎಆರ್)ಪಡೆಯಿಂದ ಮೂರು ಸುತ್ತಿನ ಗುಂಡಿನ ತೋಪು ಹಾರಿಸಿ ಗೌರವ ಅರ್ಪಿಸಿದರು. ಈ ವೇಳೆ ಮೃತ ಯೋಧನ ತಂದೆ-ತಾಯಿಯವರಿಗೆ ಆತನ ಬಟ್ಟೆ ಮತ್ತು ರಾಷ್ಟ್ರಧ್ವಜ ಸಮರ್ಪಣೆ ಮಾಡಿದರು.

    ಈ ವೇಳೆ ಮೃತನ ಅಜ್ಜ,ಅಜ್ಜಿ, ತಂದೆ, ತಾಯಿ, ಸಹೋದರ ಸೇರಿದಂತೆ ಸಂಬಂಧಿಕರ ಅಕ್ರಂದನ ಮುಗಿತು ಮುಟ್ಟುವಂತಿತ್ತು. ಯೋಧನ ಅಂತಿಮ ಸಂಸ್ಕಾರದಲ್ಲಿ ವಿವಿಧ ರಾಜಕೀಯ ಮುಖಂಡರು, ವಿವಿಧ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು, ಸಂಘ-ಸಂಸ್ಥೆಗಳ ನಿರ್ದೇಶಕರು, ಕಲಾವಿದರು, ಸಾರ್ವಜನಿಕರು ಪಾಲ್ಗೊಂಡಿದ್ದರು.

    ಸಾವಿಗೆ ಸಿಗದ ನಿಖರ ಮಾಹಿತಿ

    ಅಸ್ಸಾಂನ ಜೋರ್ಹತ್​ನಲ್ಲಿ ಗುರುವಾರ ನಿಧನರಾದ ಯೋಧನ ಸಾವಿನ ಕುರಿತು ಇದುವರೆಗೂ ಯಾವುದೇ ನಿಖರ ಮಾಹಿತಿ ಸಿಕ್ಕಿಲ್ಲ. ಕೆಲವರು ಅಪಘಾತದಲ್ಲಿ ನಿಧನರಾಗಿದ್ದಾರೆ ಎನ್ನುತ್ತಿದ್ದರೆ ಇನ್ನೂ ಕೆಲವರು ಆತ್ಮಹತ್ಯೆ ಮಾಡಿಕೊಂಡಿದ್ದ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಈ ಕುರಿತು ಯೋಧನ ಮೃತದೇಹದ ಜೊತೆಗೆ ಬಂದ ವಾಯುಸೇನಾ ಅಧಿಕಾರಿಗಳು ಯಾವುದೇ ಮಾಹಿತಿ ನೀಡಲು ಹಿಂದೇಟು ಹಾಕಿದ್ದು ಮೃತನ ಸಾವಿನ ಕುರಿತು ಸಾರ್ವಜನಿಕರಲ್ಲಿ ಗೊಂದಲ ಮೂಡಿಸಿದೆ. ಮೇಲ್ನೋಟಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.

    ಕಮರಿದ ಯೋಧನ ಬದುಕು

    ವಿದ್ಯಾರ್ಥಿ ದಿಸೆಯಲ್ಲಿ ಪ್ರತಿಭಾವಂತ, ಆದರ್ಶ ಮಗನಾಗಿ, ದೇಶಕ್ಕೆ ಸೇವಕನಾಗಿ ಚಿರಕಾಲ ಬದುಕಬೇಕು ಎನ್ನುವ ಕನಸು ಕಂಡಿದ್ದ. ಆದರೆ, ವಿಧಿಯಾಟಕ್ಕೆ ಅರಳುವ ಮುನ್ನವೇ ಈ ಯುವಕನ ಬದುಕು ಕಮರಿತು.

    ಇದು ಆಸ್ಸಾಂನ ಜೋರ್ಹತ್​ನಲ್ಲಿ ಮೃತಪಟ್ಟ ವಾಯಪಡೆಯ ಫ್ಲೈಟ್ ಲೆಫ್ಟಿನೆಂಟ್ ಸೇವೆಯಲ್ಲಿದ್ದ ಪಟ್ಟಣದ 29ವರ್ಷದ ಯುವಕ ಜಗದೀಶ ಸುತಗಟ್ಟಿಯ ಪಾರ್ಥಿವ ಶರೀರ ಪಟ್ಟಣಕ್ಕೆ ಬಂದ ಸಮಯದಲ್ಲಿ ಕುಟುಂಬದವರು, ಆಪ್ತರು ಕಣ್ಣೀರಿಟ್ಟರು.

    ಮೂಲತಃ ಸವದತ್ತಿ ತಾಲೂಕು ಹೊಸೂರು ಗ್ರಾಮದ ಸ್ವಾತಂತ್ರ್ಯ ಹೋರಾಟಗಾರ ವೀರಪ್ಪ ಸುತಗಟ್ಟಿ ಅವರ ಮೊಮ್ಮಗನಾದ ಜಗದೀಶ, ಹುಟ್ಟಿನಿಂದಲೂ ತನ್ನ ತಾಯಿ ತವರೂರು ಶಿಗ್ಗಾಂವಿಯಲ್ಲಿ ಅಜ್ಜ, ಅಜ್ಜಿಯರೊಂದಿಗೆ ನೆಲೆಸಿದ್ದ.

    ಮಾರ್ಚ್ 25ರಂದು ಊರಿಗೆ ಬಂದಿದ್ದ ಜಗದೀಶ, ಮೇ 25ರಂದು ಕರ್ತವ್ಯಕ್ಕೆ ಹೋಗವ ಸಮಯದಲ್ಲಿ ಮುಂದಿನ ಜನೇವರಿಗೆ ಬರುತ್ತೇನೆ. ಹೆಣ್ಣು ನೋಡಿ ಮದುವೆಯಾಗುತ್ತೇನೆ. ಎಂದು ಅಜ್ಜ, ಅಜ್ಜಿ ಮುಂದೆ ಹೇಳಿ ಹೋಗಿದ್ದ. ಆದರೆ ಮೊಮ್ಮಗ ಜನವರಿಗೂ ಮುನ್ನವೇ ಬಂದ ಆದರೆ, ಹೆಣವಾಗಿ ಬಂದಿದ್ದು, ವೃದ್ಧರ ದುಃಖವನ್ನು ಇಮ್ಮಡಿಗೊಳಿಸಿತ್ತು.

    ಬದುಕಿನುದ್ದಕ್ಕೂ ಹೆತ್ತವರಿಗೆ ಆದರ್ಶ ಮಗನಾಗಿ, ದೇಶದ ಸೇವಕನಾಗಿ ಬದುಕುವ ಆಸೆಯೂ ನಿರಾಸೆಯಾಯಿತು. ಹೆತ್ತ ತಂದೆ, ತಾಯಿ, ಬಾಲ್ಯದಿಂದ ಆಡಿಸಿ, ಬೆಳೆಸಿದ ಅಜ್ಜ, ಅಜ್ಜಿಯೊಂದಿಗೆ ಸ್ವಲ್ಪ ದಿನ ಕಳೆಯಬೇಕು ಎಂದು ಊರಿಗೆ ಬಂದಾಗಲೂ ಈತನ ಸಂತಸ, ಸಂಭ್ರಮಕ್ಕೆ ಕೋವಿಡ್ ಅಡ್ಡಿಯಾಗಿತ್ತು. ಆತನ ಬದುಕಿನ ಸಂತಸ, ಸಂಭ್ರಮ ಕಿತ್ತು ತಿಂದ ವಿಧಿಗೆ ಅರಳುವ ಮುನ್ನುವೇ ಯೋಧ ಜಗದೀಶನ ಬದುಕು ಕಮರಿ ಹೋಗಿದ್ದು ವಿಪರ್ಯಾಸ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts