More

    ಪ್ರಾಮಾಣಿಕರ ಕೊರತೆಯಿಂದ ಸಹಕಾರ ಕ್ಷೇತ್ರದಲ್ಲಿ ಸಮಸ್ಯೆಗಳು ಹೆಚ್ಚಳ: ಬಿ.ಎಸ್.ಯಡಿಯೂರಪ್ಪ

    ಶಿಕಾರಿಪುರ: ಸಹಕಾರ ಕ್ಷೇತ್ರ ರೈತ ಮಿತ್ರ. ರೈತರ ಸಂಕಷ್ಟದ ಸಮಯದಲ್ಲಿ ಸಹಕಾರ ಸಂಘಗಳು ರೈತರ ಬೆಂಬಲಕ್ಕೆ ನಿಂತಿವೆ. ಇಂದು ಎಲ್ಲರ ಸಹಕಾರದ ಫಲವಾಗಿ ಈ ಕ್ಷೇತ್ರ ತ್ರಿವಿಕ್ರಮನಂತೆ ಬೆಳೆದು ನಿಂತಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
    ಗುರುವಾರ ಸಾಂಸ್ಕೃತಿಕ ಭವನದಲ್ಲಿ ಏರ್ಪಡಿಸಿದ್ದ ಸಹಕಾರ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ತಾಲೂಕಿನಲ್ಲಿ ಅತಿ ಹೆಚ್ಚು ಸಹಕಾರಿ ಸಂಘಗಳಿರುವುದು ತಾಲೂಕಿನ ಸಹಕಾರಿಗಳ ಶ್ರಮದ ಫಲ. ಸಹಕಾರ ಕ್ಷೇತ್ರ ಪರಿಶುಭ್ರವಾದ ನೀರಿನಂತೆ ನಿರ್ಮಲವಾಗಿರಬೇಕು. ಅದಕ್ಕೆ ಪ್ರಾಮಾಣಿಕ ಸೇವೆಯ ಅಗತ್ಯವಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಪ್ರಾಮಾಣಿಕತೆಯ ಕೊರತೆಯಿಂದ ಸಮಸ್ಯೆಗಳು ಹೆಚ್ಚಾಗುತ್ತಿವೆ. ಸಹಕಾರ ಕ್ಷೇತ್ರ ಬಲಿಷ್ಠವಾದಷ್ಟೂ ಸಹಕಾರಿಗಳ ಸಂಖ್ಯೆ ಜಾಸ್ತಿಯಾಗುತ್ತದೆ ಎಂದರು.
    ಸಹಕಾರ ತತ್ವದ ಅಗತ್ಯ ಇಂದಿನ ಪರಿಸ್ಥಿತಿಯಲ್ಲಿ ಅಗತ್ಯವಾಗಿದೆ. ಕೃಷಿ ಪ್ರಧಾನ ನಮ್ಮ ದೇಶದಲ್ಲಿ ಸಹಕಾರ ಚಿಂತನೆಗಳು ಸಹಕಾರಿಯಾಗಲಿವೆ. ಸಹಕಾರಿಗಳು ಸರ್ಕಾರದ ಸೌಲಭ್ಯಗಳನ್ನು ಸಮರ್ಪಕವಾಗಿ ರೈತರಿಗೆ ತಲುಪಿಸುವ ಕೆಲಸ ಮಾಡಬೇಕು. ರಾಜ್ಯ ಸರ್ಕಾರ ಸಹಕಾರ ಸಂಘಗಳ ಗಣಕೀಕರಣಕ್ಕೆ 48 ಕೋಟಿ ರೂಪಾಯಿ ಮೀಸಲಿಟ್ಟಿದೆ. ಇದರಿಂದ ರೈತರ ಖಾತೆಗೆ ಹಣ ಭ್ರಷ್ಟಾಚಾರ ರಹಿತವಾಗಿ ತಲುಪಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಸಹಕಾರ ಸಂಘಗಳು ಇರುವುದು ಕೂಡ ಹೆಮ್ಮೆಯ ವಿಚಾರ ಎಂದು ಹೇಳಿದರು.
    ನಾನು ಸಹಕಾರಿ ಕ್ಷೇತ್ರದಿಂದಲೇ ಸಾರ್ವಜನಿಕ ಕ್ಷೇತ್ರಕ್ಕೆ ಬಂದೆ. ಮೊದಲು ಶಿಕಾರಿಪುರ ವೀರಶೈವ ಸಹಕಾರ ಸಂಘದ ಅಧ್ಯಕ್ಷನಾಗಿದ್ದೆ. ನಾನು ಕೂಡ ಸಹಕಾರ ಕ್ಷೇತ್ರದ ಕೊಡುಗೆ. ಪ್ರತಿಯೊಬ್ಬ ಸಹಕಾರಿಯೂ ಈ ಸಮಾಜದ ಆಸ್ತಿ. ಸಹಕಾರಿಗಳು ಬೆಳೆದಂತೆ ಸಹಕಾರ ಸಂಘಗಳು, ಸಹಕಾರಿ ತತ್ವಗಳು ಬೆಳೆಯುತ್ತವೆ ಎಂದು ತಿಳಿಸಿದರು.
    ಸಹಕಾರ ಕ್ಷೇತ್ರಕ್ಕೆ ಚೈತನ್ಯ: ಯಡಿಯೂರಪ್ಪ ಅವರ ಅಧಿಕಾರ ಅವಧಿಯಲ್ಲಿ ಸಹಕಾರಿ ಕ್ಷೇತ್ರಕ್ಕೆ ಸಾಕಷ್ಟು ಯೋಜನೆಗಳನ್ನು ರೂಪಿಸಿದ್ದಾರೆ. ದಶಕಗಳ ಹಿಂದೆ ಬಸ್ ಗಳಲ್ಲಿ ಸಹಕಾರಿಗಳನ್ನು ಮುಂಬೈಗೆ ಕರೆದುಕೊಂಡು ಹೋಗಿ ಕಡಿಮೆ ದರದಲ್ಲಿ ಬಟ್ಟೆ ತಂದು ಇಲ್ಲಿ ಮಾರಾಟ ಮಾಡಿಸಿ ಸಹಕಾರ ಸಂಘಗಳಿಗೆ ಆರ್ಥಿಕ ಚೈತನ್ಯ ತುಂಬಿದವರು ಯಡಿಯೂರಪ್ಪ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts