More

    ಪ್ರಾದೇಶಿಕ ಆಯುಕ್ತರಿಂದ ವಿಚಾರಣೆ ಶುರು

    ಕಾರವಾರ: ಕೋವಿಡ್ ಸಮಯದಲ್ಲಿ ಸಾಮೂಹಿಕವಾಗಿ ರಾಜೀನಾಮೆ ನೀಡಿದ ಮಲ್ಲಾಪುರ ಗ್ರಾಪಂ ಸದಸ್ಯರ ಸದಸ್ಯತ್ವ ರದ್ದತಿಗೆ ಜಿಪಂ ಸಿಇಒ ಶಿಫಾರಸು ಮಾಡಿದ್ದು, ಈ ಸಂಬಂಧ ಸದಸ್ಯರು ಶನಿವಾರ ಬೆಳಗಾವಿಯ ಪ್ರಾದೇಶಿಕ ಆಯುಕ್ತರ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಿತು.

    ಗ್ರಾಪಂನ ಮಾಜಿ ಅಧ್ಯಕ್ಷ ಚಂದ್ರಶೇಖರ ಬಾಂದೇಕರ್ ಸೇರಿ 23 ಸದಸ್ಯರು ಬೆಳಗಾವಿ ಪ್ರಾದೇಶಿಕ ಆಯುಕ್ತ ಅಮ್ಲನ್ ಆದಿತ್ಯ ಬಿಸ್ವಾಸ್ ಅವರ ಬಳಿ ಹೇಳಿಕೆ ದಾಖಲಿಸಿದ್ದು, ಅನಾರೋಗ್ಯ ಕಾರಣದಿಂದ ಮೂವರು ಸದಸ್ಯರು ಗೈರಾಗಿದ್ದರು. ಈ ಸಂಬಂಧ ಪ್ರಾದೇಶಿಕ ಆಯುಕ್ತರ ಆದೇಶ ಇನ್ನು ಹೊರಡಿಸಬೇಕಿದೆ.

    ಆಗಿದ್ದೇನು?: ಕರೊನಾ ಭಯ ಹೆಚ್ಚಿದ್ದ ಸಮಯದಲ್ಲಿ ಸರ್ಕಾರದ ಆದೇಶದಂತೆ ಜಿಲ್ಲೆಯ ಎಲ್ಲ ಗ್ರಾಪಂಗಳಲ್ಲಿ ಗ್ರಾಪಂ ಕಾವಲು ಸಮಿತಿಯನ್ನು ರಚಿಸಲಾಗಿತ್ತು. ಗ್ರಾಪಂ ಸದಸ್ಯರನ್ನು ಸಮಿತಿಯ ಸದಸ್ಯರನ್ನಾಗಿ ನೇಮಿಸಲಾಗಿತ್ತು. ಗ್ರಾಪಂಗಳಲ್ಲಿ ಹೊರಗಿನವರು ಬಂದರೆ ಮಾಹಿತಿ ನೀಡುವ ಕಾರ್ಯ ಸಮಿತಿಯದ್ದಾಗಿತ್ತು. ಕಳೆದ ಏಪ್ರಿಲ್ 30ರಂದು ಜಾರ್ಖಂಡ್ ರಾಜ್ಯದಿಂದ ಕೈಗಾ ಅಣು ವಿದ್ಯುತ್ ಸ್ಥಾವರಕ್ಕೆ ಆಗಮಿಸಿದ ತಂತ್ರಜ್ಞರನ್ನು ಕ್ವಾರಂಟೈನ್ ಮಾಡಬೇಕು ಎಂದು ಗ್ರಾಪಂ ಅಧ್ಯಕ್ಷ ಹಾಗೂ ಸದಸ್ಯರು ಪಟ್ಟು ಹಿಡಿದಿದ್ದರು. ಆದರೆ, ಇದಕ್ಕೆ ಜಿಲ್ಲಾಡಳಿತ ಸ್ಪಂದಿಸದ ಕಾರಣ ಮೇ 1 ರಂದು ಗ್ರಾಪಂನ ಅಧ್ಯಕ್ಷ ಚಂದ್ರಶೇಖರ ಸೇರಿ ಎಲ್ಲ 26 ಸದಸ್ಯರು ಕಾರವಾರ ಉಪವಿಭಾಗಾಧಿಕಾರಿಗೆ ರಾಜೀನಾಮೆ ಸಲ್ಲಿಸಿದ್ದರು.

    ಆದರೆ, ಈ ಸಂಬಂಧ ಜಿಪಂ ಸಿಇಒ ಎಂ.ರೋಶನ್ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಎಲ್ಲ ಸದಸ್ಯರಿಗೆ ನೋಟಿಸ್ ಜಾರಿ ಮಾಡಿದ್ದರು. ಅಲ್ಲದೆ, ಸದಸ್ಯತ್ವ ರದ್ದತಿಗೆ ಬೆಳಗಾವಿ ಪ್ರಾದೇಶಿಕ ಆಯುಕ್ತರಿಗೆ ಶಿಫಾರಸು ಮಾಡಿದ್ದರು. ಕೈಗಾ ಅಣು ವಿದ್ಯುತ್ ಸ್ಥಾವರದಲ್ಲಿ ತುರ್ತು ಕಾರ್ಯಕ್ಕಾಗಿ ಆಗಮಿಸಿದ ತಂತ್ರಜ್ಞರನ್ನು ಸರ್ಕಾರದ ನಿಯಮಾವಳಿಯಂತೆ ಫೀವರ್ ಕ್ಲೀನಿಕ್​ಗೆ ಕರೆದೊಯ್ದು ಪರೀಕ್ಷೆ ಮಾಡಿಸಲಾಗಿದೆ. ಆದರೆ, ಅವರನ್ನು ಕ್ವಾರಂಟೈನ್ ಮಾಡಬೇಕು ಎಂದು ಗ್ರಾಪಂ ಸದಸ್ಯರು ಪಟ್ಟು ಹಿಡಿದಿದ್ದು ಸರಿಯಲ್ಲ. ಕರೊನಾದಂಥ ಸಾಂಕ್ರಾಮಿಕ ರೋಗ ಹರಡಿದ ಸಮಯದಲ್ಲಿ ಎಲ್ಲ ಸದಸ್ಯರು ರಾಜೀನಾಮೆ ನೀಡಿ, ಅವರ ಕರ್ತವ್ಯ ನಿರ್ವಹಿಸಲು ವಿಫಲರಾಗಿದ್ದಾರೆ. ಇದರಿಂದ ಪಂಚಾಯಿತಿ ರಾಜ್ ಕಾಯ್ದೆ 1993 ರ ಪ್ರಕರಣ 43(ಎ)(1) ರ ಅನ್ವಯ ಎಲ್ಲರ ಸದಸ್ಯತ್ವವನ್ನು ರದ್ದು ಮಾಡಬೇಕು ಎಂದು ಶಿಫಾರಸು ಮಾಡಿದ್ದರು. ಈ ಹಿನ್ನೆಲೆಯಲ್ಲಿ ಪ್ರಾದೇಶಿಕ ಆಯುಕ್ತರು ಎಲ್ಲ ಸದಸ್ಯರಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಿದ್ದಾರೆ. ಜಿಪಂ ಪರವಾಗಿ ಕಾರವಾರ ತಾಪಂ ಇಒ ಆನಂದಕುಮಾರ ಹಾಜರಾಗಿದ್ದರು.

    ಪರಿಣಾಮವೇನು?: ಗ್ರಾಪಂ ಅವಧಿ ಈಗಾಗಲೇ ಮುಕ್ತಾಯವಾಗಿದೆ. ಇದರಿಂದ ಗ್ರಾಪಂ ಆಡಳಿತಕ್ಕೆ ಸದಸ್ಯರ ರಾಜೀನಾಮೆ ಅಥವಾ ಸದಸ್ಯತ್ವ ರದ್ದತಿಯಿಂದ ಯಾವುದೇ ಪರಿಣಾಮ ಬೀರುವುದಿಲ್ಲ. ಆದರೆ, ಸದಸ್ಯತ್ವ ರದ್ದಾಗುವ ವಿಚಾರದ ವಿಚಾರಣೆ ಮುಂದುವರಿದರೆ ಸದಸ್ಯರು ಸದ್ಯದಲ್ಲೇ ಬರಲಿರುವ ಗ್ರಾಪಂ ಚುನಾವಣೆಯಲ್ಲಿ ಸ್ಪರ್ಧಿಸಲು ಕಷ್ಟವಾಗಬಹುದು.

    ನಮ್ಮ ಗ್ರಾಪಂ ಕೈಗಾ ಅಣು ಸ್ಥಾವರವಿರುವ ಅತಿ ಸೂಕ್ಷ್ಮ ಪ್ರದೇಶ ಹೊರ ರಾಜ್ಯಗಳ ಸಾಕಷ್ಟು ಜನ ಇಲ್ಲಿಗೆ ಬಂದು ಹೋಗುತ್ತಾರೆ. ಕೋವಿಡ್ ಸಮಯದಲ್ಲಿ ಜಿಲ್ಲಾಡಳಿತ ಅಥವಾ ಸರ್ಕಾರದಿಂದ ಯಾವುದೇ ವಿಶೇಷ ಅನುದಾನ ಬಂದಿಲ್ಲ. ಸದಸ್ಯರು ಸ್ವಂತ ಖರ್ಚುರ್ಚಿನಿಂದ ಓಡಾಡಿ, ಕಾರ್ಯನಿರ್ವಹಿಸಿದ್ದೇವೆ. ಇಲ್ಲಿನ ಜನರ ಸುರಕ್ಷತೆಯ ಬಗ್ಗೆ ಗಮನ ಹರಿಸಿದ್ದೇವೆ. ಇದರಿಂದಲೇ ಕರೊನಾ ನಿಯಂತ್ರಣ ಸಾಧ್ಯವಾಗಿದೆ. ಆದರೆ, ಜಿಲ್ಲಾಡಳಿತವಾಗಲೀ ಜಿಪಂ ಆಗಲೀ ನಮಗೆ ಸ್ಪಂದಿಸಿಲ್ಲ. ಗ್ರಾಪಂ ಸದಸ್ಯರ ಮಾತಿಗೆ ಸ್ವಲ್ಪವೂ ಬೆಲೆ ಇಲ್ಲ ಎಂದ ಮೇಲೆ ನಾವಿದ್ದು ಪ್ರಯೋಜನವೇನಾಯಿತು. ಇದರಿಂದ ಸಾಮೂಹಿಕ ರಾಜೀನಾಮೆ ನೀಡಿದ್ದೇವು. ಈಗ ನಮ್ಮ ಕರ್ತವ್ಯ ಲೋಪ ಎಂದು ಅಧಿಕಾರಿಗಳು ವಾದಿಸುತ್ತಿರುವುದು ಸರಿಯಲ್ಲ. ಪ್ರಾದೇಶಿಕ ಆಯುಕ್ತರ ಬಳಿ ಎಲ್ಲ ವಿಷಯವನ್ನು ವಿವರಿಸಿ ಬಂದಿದ್ದೇವೆ. ನಮ್ಮ ಪರವಾಗಿಯೇ ತೀರ್ಪು ಬರುವ ವಿಶ್ವಾಸವಿದೆ. ರಾಜೇಶ ಗಾಂವಕರ್ ಮಲ್ಲಾಪುರ ಗ್ರಾಪಂ ಮಾಜಿ ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts