More

    ಪ್ರಾಣಿಗಳ ಲಸಿಕೆಗೂ ಬರ!

    ಬೆಳಗಾವಿ/ಬೋರಗಾಂವ: ಕೋವಿಡ್ ಸಂಕಷ್ಟ ಕಾಲದಲ್ಲಿ ಲಸಿಕೆ ಬರ ಮನುಷ್ಯರಿಗಷ್ಟೇ ಅಲ್ಲ, ಜಾನುವಾರುಗಳಿಗೂ ತಟ್ಟಿದೆ. ಬೇಸಿಗೆ ಮುಗಿಯಲು ಬಂದರೂ ಈವರೆಗೆ ಜಿಲ್ಲೆಯಲ್ಲಿ ಕಾಲುಬಾಯಿ ಬೇನೆ ಲಸಿಕೆ ಬಂದಿಲ್ಲ.

    ಜಿಲ್ಲೆಯಲ್ಲಿ ಹಸು, ಎಮ್ಮೆ, ಎತ್ತು, ಕರುಗಳು ಸೇರಿ 14.20 ಲಕ್ಷ ಜಾನುವಾರುಗಳಿವೆ. ಅವುಗಳಿಗೆ ಸಾಂಕ್ರಾಮಿಕ ಕಾಯಿಲೆಗೆ ಬಾರದಿರಲಿ ಎಂದು ಪ್ರತಿವರ್ಷ ಎರಡು ಬಾರಿ ಲಸಿಕೆ ಹಾಕಲಾಗುತ್ತದೆ. 2020ರಲ್ಲಿ ಅಕ್ಟೋಬರ್‌ನಿಂದ ಡಿಸೆಂಬರ್‌ನಲ್ಲಿ ಲಸಿಕೆ ಹಾಕಲಾಗಿತ್ತು. ಈ ಬಾರಿ ಏಪ್ರಿಲ್, ಮೇ ತಿಂಗಳಲ್ಲಿ ಲಸಿಕೆ ಹಾಕಬೇಕಿತ್ತು. ಆದರೆ, ಕೋವಿಡ್ ಮತ್ತಿತರ ಕಾರಣಗಳಿಂದ ಈವರೆಗೂ ಜಿಲ್ಲೆಗೆ ಲಸಿಕೆ ಪೂರೈಕೆಯಾಗಿಲ್ಲ. ಈವರೆಗೂ ಲಸಿಕೆ ಪೂರೈಕೆಯಾಗುವ ಮುನ್ಸೂಚನೆ ಸಿಗದ ಕಾರಣ ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆ ಯಾವುದೇ ಸಿದ್ಧತೆ ಕೈಗೊಂಡಿಲ್ಲ.

    ಲಸಿಕಾ ಅಭಿಯಾನ ಮುಂದೂಡಿಕೆ: ಪ್ರತಿವರ್ಷ ಬೇಸಿಗೆಯಲ್ಲಿ ಜಾನುವಾರುಗಳಿಗೆ ಲಸಿಕಾ ಅಭಿಯಾನ ನಡೆಯುತ್ತಿತ್ತು. ಕಳೆದ ವರ್ಷ ಕೋವಿಡ್-19 ಸಂಕಷ್ಟದ ಮಧ್ಯೆಯೂ ಲಸಿಕಾ ಅಭಿಯಾನ ಎಂದಿನಂತೆ ನಡೆದಿತ್ತು. ಈ ಬಾರಿ ಕೋವಿಡ್-2ನೇ ಅಲೆ ಹಿನ್ನೆಲೆಯಲ್ಲಿ ಲಸಿಕೆ ನೀಡುವಲ್ಲಿ ವಿಳಂಬವಾಗಿದ್ದು, ಲಸಿಕಾ ಅಭಿಯಾನವೇ ಮುಂದೂಡಿಕೆಯಾಗಿದೆ. ಜುಲೈ, ಆಗಸ್ಟ್‌ನಲ್ಲಿ ಲಸಿಕೆ ಅಭಿಯಾನ ಆರಂಭವಾಗಲಿದೆ. ಈ ವಿಚಾರವಾಗಿ ಪಶು ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ. ರೈತರು ಆತಂಕಪಡುವ ಅಗತ್ಯವಿಲ್ಲ ಎಂದು ನಿಪ್ಪಾಣಿ ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕ ಜಯಕುಮಾರ ಕಂಕಣವಾಡಿ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

    ರೈತರು ಇಕ್ಕಟ್ಟಿನಲ್ಲಿ: ಕೋವಿಡ್ ಮಹಾಮಾರಿ ಜಿಲ್ಲೆಯಲ್ಲಿ ಅಬ್ಬರಿಸುತ್ತಿದೆ. ಆಗಾಗ ಸುರಿಯುತ್ತಿರುವ ಮಳೆ ಹಾಗೂ ಹವಾಮಾನ ವೈಪರೀತ್ಯದಿಂದಾಗಿ ಜಾನುವಾರುಗಳು ನಾನಾ ಕಾಯಿಲೆಗೆ ತುತ್ತಾಗುತ್ತಿವೆ. ಹೊಟ್ಟೆಉಬ್ಬರ, ಬಾಯಿ ಬೇನೆಯಿಂದ ಬಳಲುತ್ತಿರುವ ಜಾನುವಾರುಗಳಿಗೆ ಚಿಕಿತ್ಸೆ ಕೊಡಿಸಲು ಹಾಗೂ ಲಸಿಕೆ ಹಾಕಿಸಲಾಗದೆ ರೈತರು, ಹೈನುಗಾರರು ನಿತ್ಯವೂ ಪಶು ಆಸ್ಪತ್ರೆಗಳಿಗೆ ಎಡತಾಕುತ್ತಿದ್ದಾರೆ.

    ಕೋವಿಡ್ ಬಿಕ್ಕಟ್ಟಿನ ಪರಿಸ್ಥಿತಿಯಿಂದಾಗಿ ಜಾನುವಾರುಗಳಿಗೆ ಲಸಿಕೆ ಹಾಕುವ ಅಭಿಯಾನಕ್ಕೆ ಹಿನ್ನಡೆಯಾಗಿದೆ. ಶೀಘ್ರ ಲಸಿಕೆ ಪೂರೈಕೆಯಾಗಲಿದ್ದು, ಇನ್ನೊಂದು ತಿಂಗಳಲ್ಲಿ ಅಭಿಯಾನ ಆರಂಭಿಸಲಾಗುವುದು. ಜಾನುವಾರುಗಳಿಗೆ ಯಾವುದೇ ಕಾಯಿಲೆ ಬಾರದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.
    | ಡಾ.ಅಶೋಕ ಕೊಳ್ಳ ಉಪನಿರ್ದೇಶಕ, ಪಶುಪಾಲನೆ, ಪಶು ವೈದ್ಯಕೀಯ ಇಲಾಖೆ, ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts