More

    ನೀರಿಲ್ಲದೆ ಬರಿದಾದ ಭದ್ರೆಯ ಒಡಲು

    ಎನ್.ಆರ್.ಪುರ: ಸಮುದ್ರದ ನೆಂಟಸ್ತಿಕೆ ಉಪ್ಪಿಗೆ ಬರ ಎಂಬಂತೆ ಸುತ್ತಮುತ್ತಲೂ ಭದ್ರಾ ಹಿನ್ನೀರಿನಿಂದ ಆವೃತವಾಗಿರುವ ತಾಲೂಕಾಗಿದ್ದರೂ ಬೇಸಿಗೆಯಲ್ಲಿ ನೀರಿಲ್ಲದೆ ಬರಗಾಲದ ಛಾಯೆ ಮೂಡುತ್ತದೆ. ಈ ಬಾರಿಯ ಬಿಸಿಲಿನ ಝಳಕ್ಕೆ ಭದ್ರೆಯ ಒಡಲು ಬರಿದಾಗಿದ್ದು ಇದರಿಂದ ಜಲ ಕ್ಷಾಮ ಉಂಟಾಗುವ ಭೀತಿ ಎದುರಾಗಿದೆ.
    ರಬ್ಬರ್ ಬೆಲೆ ಕುಸಿತದಿಂದಾಗಿ ತಾಲೂಕಿನಲ್ಲಿ ಅಡಕೆ ತೋಟಗಳು ಮತ್ತೆ ನಿರ್ಮಾಣವಾಗುತ್ತಿವೆ. ಭತ್ತದ ಕಣಜ ಎಂದೇ ಹೆಸರುವಾಸಿಯಾಗಿದ್ದ ತಾಲೂಕು ಇದೀಗ ವಾಣಿಜ್ಯ ಬೆಳೆಗಳ ತವರಾಗಿ ಮಾರ್ಪಾಡಾಗಿದೆ. ಎಲ್ಲೆಂದರಲ್ಲಿ ಕಾಣುತ್ತಿದ್ದ ಹಚ್ಚ ಹಸಿರಿನ ಭತ್ತದ ಗದ್ದೆಗಳು ಮಾಯವಾಗಿವೆ. ಕೆಲ ಕೃಷಿಕರು ತಮ್ಮ ಮನೆಗೆ ಎಷ್ಟು ಬೇಕೋ ಅಷ್ಟಕ್ಕೆ ಮಾತ್ರ ಗದ್ದೆಗಳನ್ನು ಇಟ್ಟುಕೊಂಡಿದ್ದು ಉಳಿದಂತೆ ಸಂಪೂರ್ಣವಾಗಿ ವಾಣಿಜ್ಯ ಬೆಳೆ ಬೆಳೆದಿದ್ದಾರೆ.
    ಮೊದಲು ಕೆಲಸಕ್ಕೆ ಜನ ಸಿಗಲ್ಲ ಎಂದು ಭತ್ತ ಕೃಷಿ ಮಾಡುತ್ತಿರಲಿಲ್ಲ. ನಂತರದ ದಿನಗಳಲ್ಲಿ ಸರಿಯಾದ ಬೆಂಬಲ ಬೆಲೆ ದೊರೆಯದೆ, ಈಗ ನೀರಿನ ಅಭಾವದಿಂದ ಭತ್ತ ಬೆಳೆಯುವುದನ್ನು ಹಲವು ರೈತರು ನಿಲ್ಲಿಸಿದ್ದಾರೆ. ಕೆಲವು ರೈತರು ಅಕ್ಕಿಯನ್ನು ಕೊಂಡು ತಿನ್ನುವ ಸ್ಥಿತಿ ನಿರ್ಮಾಣವಾಗಿದೆ. ಈ ಭಾಗದಲ್ಲಿ ಹಿಂದೆ ಭತ್ತ ನಂಬಿಕೊಂಡು 7 ಅಕ್ಕಿಗಿರಣಿಗಳು ಕೆಲಸ ಮಾಡುತ್ತಿದ್ದವು. ಇದೀಗ ಕೇವಲ 1 ಗಿರಣಿ ಕೆಲಸ ನಿರ್ವಹಿಸುತ್ತಿರುವುದು ಭತ್ತದ ಬೆಳೆ ಇಳಿಕೆಯಾಗಿರುವುದಕ್ಕೆ ನಿದರ್ಶನ.
    ಕಳೆದ ವಾರ ಒಂದೆರಡು ದಿನ ಉತ್ತಮ ಮಳೆಯಾಗಿ ರೈತರಲ್ಲಿ ಮಂದಹಾಸ ಮೂಡಿಸಿದ್ದ ಮಳೆರಾಯ ಮರೆಯಾಗಿ ಮತ್ತೆ ಬಿಸಿಲಿನ ಝಳದಿಂದ ಭೂಮಿ ಕೆಂಡದಂತಾಗಿದೆ. ಬಿಸಿಲ ಝಳಕ್ಕೆ ಅಡಕೆ ತೋಟಗಳು ಒಣಗುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಬೋರ್‌ವೆಲ್ ಕೊರೆಸಿದರೂ ನೀರು ಸಿಗದೆ ಬೆಳೆಗಾರರು ಕಂಗಾಲಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts