More

    ಪ್ರವಾಸಿ ತಾಣದ ಪ್ರಯಾಣ ಹೈರಾಣ

    ರಾಜು ಹೊಸಮನಿ ನರಗುಂದ
    ಅದು 350 ಅಡಿ ಎತ್ತರ ಹಾಗೂ 250 ಎಕರೆ ವಿಸ್ತೀರ್ಣ ಹೊಂದಿರುವ, ರಾಜ್ಯದಲ್ಲೇ ಸೀತಾಫಲಕ್ಕೆ ಹೆಸರಾದ ನರಗುಂದದ ಸುಂದರ ಗುಡ್ಡ. ಬಗೆ ಬಗೆಯ ಸಾವಿರಾರು ಮರಗಳು, ಗುಡ್ಡದ ಬದಿಯ ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ. ಆದರೆ, ರಸ್ತೆ ಮಾರ್ಗ ಸಂಪೂರ್ಣ ಹದಗೆಟ್ಟಿದ್ದರಿಂದ ಪ್ರಕೃತಿ ಸಿರಿಯ ಸೊಬಗು ಸವಿಯಬೇಕು ಎನ್ನುವ ಪ್ರವಾಸಿಗರಿಗೆ ಬೇಸರ ಮೂಡಿಸಿದೆ. ಜತೆಗೆ ಪ್ರವಾಸೋದ್ಯಮ ಅಭಿವೃದ್ಧಿಗೆ ಹಿನ್ನಡೆ ಉಂಟಾಗಿದೆ.
    2016-17 ರಲ್ಲಿ 7 ಕೋಟಿ ರೂ. ವೆಚ್ಚದಲ್ಲಿ ಪ್ರಾಕೃತಿಕ ಸಂಪತ್ತು ಹೆಚ್ಚಿಸುವುದು. ಕೆಂಪಕೆರಿಯಲ್ಲಿ ನಡುಗಡ್ಡೆ ನಿರ್ವಿುಸಿ ಪ್ರವಾಸಿಗರಿಗೆ ಬೋಟಿಂಗ್ ವ್ಯವಸ್ಥೆ, ಸುಸಜ್ಜಿತ ಉದ್ಯಾನ, ರಸ್ತೆ, ಗುಡ್ಡದ ಬದಿಯಲ್ಲಿ ಮಕ್ಕಳ ಉದ್ಯಾನ, ಟ್ರೀ ಪಾರ್ಕ್, ಗುಡ್ಡಕ್ಕೆ ಸಾಗುವ ರಸ್ತೆಗೆ ಸ್ವಾಗತ ಕಮಾನುಗಳ ಪರಗೋಲಾ, ಗುಡ್ಡದ ಮೇಲೆ ಬಾಬಾಸಾಹೇಬರ ಕಾಲದ ಕುರುಹುಗಳನ್ನು ಸ್ಮರಿಸುವ ಮದ್ದು ಗುಂಡುಗಳ ಸಂಗ್ರಹ ಕೊಠಡಿ, ನೀರಿನ ಹೊಂಡ, ಸೈನಿಕರ ಕೋಣೆ ಜೀರ್ಣೆದ್ಧಾರಗೊಳಿಸಿ ಪ್ರವಾಸಿಗರನ್ನು ಆಕರ್ಷಿಸುವುದರ ಜತೆಗೆ ನರಗುಂದದ ಇತಿಹಾಸವನ್ನು ಇಡೀ ಜಗತ್ತಿಗೆ ಸ್ಮರಿಸುವ ಮಹತ್ವದ ಯೋಜನೆಗೆ ಚಾಲನೆ ನೀಡಲಾಗಿತ್ತು. ಆದರೆ,ಸರ್ಕಾರ ಸಕಾಲಕ್ಕೆ ಅನುದಾನ ಬಿಡುಗಡೆ ಮಾಡದ ಕಾರಣ ಕೇವಲ 1 ಕೋಟಿ 80 ಲಕ್ಷ 86 ಸಾವಿರ ರೂ. ವೆಚ್ಚದಲ್ಲಿ ಆಲ, ಅರಳೆ, ತಪಸ್ಸಿ, ಬೇವು, ಹೊಂಗೆ, ನೇರಳೆ, ಪೇರಲ, ಹಲಸು, ಶಿರಸಲ ಸೇರಿದಂತೆ ವಿವಿಧ ಜಾತಿಯ 2000ಕ್ಕೂ ಅಧಿಕ ಸಸಿಗಳನ್ನು ನೆಟ್ಟಿದ್ದು ಹೆಮ್ಮರವಾಗಿ ಬೆಳೆದಿವೆ. 3 ಕಟ್ಟಿಗೆ, 2 ಸಿಮೆಂಟ್ ಪರಗೋಲಾ, ಕುಡಿಯುವ ನೀರು, ಗುಡ್ಡದ ಸುತ್ತಲು ತಂತಿಬೇಲಿ, ಗುಡ್ಡದ ಮೇಲೆ ಕಬ್ಬಿಣದ ಗ್ರಿಡ್, ಭದ್ರತಾ ಕೊಠಡಿ, ಟಿಕೆಟ್ ಕೌಂಟರ್, ಪುರುಷ, ಮಹಿಳೆಯರಿಗೆ 2 ಪ್ರತ್ಯೇಕ ಶೌಚಗೃಹ, ಪ್ರವಾಸಿಗರು ಕುಳಿತುಕೊಳ್ಳಲು 10 ಸಿಮೆಂಟ್ ಆಸನ, ಪ್ರಾಣಿ, ಪಕ್ಷಿಗಳ ಕುರಿತಾದ ಮಾಹಿತಿ ಫಲಕ, ಪುಟ್ಟ ಮಕ್ಕಳಿಗೆ ಜೋಕಾಲಿ, ಹಗ್ಗದ ನಡಿಗೆ, ಜಾರು ಬಂಡಿನ್ನು ಅಳವಡಿಸಲಾಗಿದೆ. ನಿತ್ಯವೂ ಹತ್ತಾರು ಜನರು ಆಗಮಿಸುತ್ತಾರೆ. ಹಬ್ಬ ಹರಿದಿನಗಳಲ್ಲಿ ನೂರಾರು ಜನರು ಇಲ್ಲಿಗೆ ಆಗಮಿಸುತ್ತಾರೆ. ಆದರೀಗ ಇಲ್ಲಿನ ಸಸ್ಯೋದ್ಯಾನಕ್ಕೆ ತೆರಳಲು ಗುಣಮಟ್ಟದ ರಸ್ತೆ, ಸಾರಿಗೆ, ಸಮರ್ಪಕ ಮಾಹಿತಿ ಇಲ್ಲದ ಕಾರಣ ದೂರದೂರಿನಿಂದ ಆಗಮಿಸುವ ಪ್ರವಾಸಿಗರಿಗೆ ನಿರಾಸೆ ಉಂಟಾಗುತ್ತಿದೆ. ಮಳೆಗಾಲದಲ್ಲಂತೂ ಈ ರಸ್ತೆ ಸ್ಥಿತಿ ಆ ದೇವರೇ ಬಲ್ಲ. ಅಕಸ್ಮಾತ್ ಮಾಹಿತಿ ಇಲ್ಲದೆ ಯಾರಾದರು ಈ ರಸ್ತೆಯಲ್ಲಿ ಸಂಚರಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಬೋಟಿಂಗ್, ಜೀಪ್​ಲೈನ್, ಸ್ಮಾರಕಗಳ ನಿರ್ವಣ, ಗುಡ್ಡದ ಮೇಲೆ ಉದ್ಯಾನ, ಪ್ರವಾಸಿಗರಿಗಾಗಿ ಪ್ರತ್ಯೇಕ ವಸತಿ ಗೃಹಗಳು, ಗೈಡ್​ಗಳು, ಯಾವುದೇ ರೀತಿಯ ಸಾರಿಗೆ ಸೌಲಭ್ಯವೇ ಇಲ್ಲದ್ದರಿಂದ ಪ್ರವಾಸೋದ್ಯಮಕ್ಕೆ ತೀವ್ರ ಹಿನ್ನಡೆ ಉಂಟಾಗಿದೆ.
    ನರಗುಂದ ಗುಡ್ಡವನ್ನು ಸಂಪೂರ್ಣ ಅಭಿವೃದ್ಧಿ ಪಡಿಸುವುದರ ಜೊತೆಗೆ ಐತಿಹಾಸಿಕ ಕುರುಹುಗಳನ್ನು ರಕ್ಷಿಸಬೇಕು. ಹುಬ್ಬಳ್ಳಿ-ವಿಜಯಪುರ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ನರಗುಂದದಲ್ಲಿ ಶ್ರೀವೆಂಕಟೇಶ್ವರ ದೇವಸ್ಥಾನ, ನರಸಿಂಹರಾಜರ ದೇವಸ್ಥಾನ, ಬಾಬಾಸಾಹೇಬರ ಅರಮನೆ, ಕೆಂಪಗಸಿ, ದುಂಡೇಶ್ವರ ದೇವಸ್ಥಾನ, ಪುರಾತನ ರಾಮಮಂದಿರ, ಬಿಲ್ವ ಪತ್ರಿಗಳ ತಪೋತಾಣ ಪುಣ್ಯಾರಣ್ಯ ಪತ್ರಿವನಮಠವಿದೆ. ನರಗುಂದ ಮಾರ್ಗವಾಗಿ ಲಕ್ಷಾಂತರ ಪ್ರವಾಸಿಗರು ವಿವಿಧೆಡೆಗೆ ತೆರಳುತ್ತಾರೆ. ಪ್ರವಾಸೋದ್ಯಮ ಇಲಾಖೆಯಿಂದ ಈ ತಾಣವನ್ನು ಅಭಿವೃದ್ಧಿಪಡಿಸಿದರೆ ಬಂಡಾಯದ ನಾಡಿನಲ್ಲಿ ಪ್ರವಾಸೋದ್ಯಮಕ್ಕೆ ಮೆರುಗು ನೀಡಿದಂತಾಗುತ್ತದೆ. ಐತಿಹಾಸಿಕ ದೇವಸ್ಥಾನಗಳ ಅಭಿವೃದ್ಧಿಗೂ ಜೀವಕಳೆ ತುಂಬಿದಂತಾಗಿ ಸರ್ಕಾರಕ್ಕೆ ನಿರಂತರ ಆದಾಯ ಬರುತ್ತದೆ ಎನ್ನುವುದು ಸ್ಥಳೀಯರ ಆಶಯವಾಗಿದೆ.

    ಸರ್ಕಾರದಿಂದ ದೊರೆತ ಅಲ್ಪ ಅನುದಾನದಲ್ಲಿಯೇ ಇಲ್ಲಿನ ಸಸ್ಯೋದ್ಯಾನ ಸಾಕಷ್ಟು ಅಭಿವೃದ್ಧಿ ಪಡಿಸಲಾಗಿದೆ. ನರಗುಂದ ಗುಡ್ಡವು ಪುರಸಭೆ ಮಾಲೀಕತ್ವದಲ್ಲಿ ಇರುವುದರಿಂದ ಹೆಚ್ಚಿನ ಅಭಿವೃದ್ಧಿ ಮಾಡಲು ಸಾಧ್ಯವಾಗಿಲ್ಲ. ಪ್ರಾದೇಶಿಕ ಅರಣ್ಯ ಇಲಾಖೆಗೆ 170 ಎಕರೆ ಗುಡ್ಡ ನೀಡಿದರೆ ಕೇಂದ್ರ ಸರ್ಕಾರದಿಂದ ದೊರೆಯುವ ಅನುದಾನದಲ್ಲಿ ಬಾಕಿ ಉಳಿದ ಅಭಿವೃದ್ಧಿ ಕಾರ್ಯ ಕೈಗೊಳ್ಳಬಹುದು. ಈ ಬಗ್ಗೆ ಪುರಸಭೆ ಸಾಮಾನ್ಯ ಸಭೆಯಲ್ಲಿ ಈಗಾಗಲೇ ಮನವಿ ಸಲ್ಲಿಸಿದ್ದು, ಇದಕ್ಕೆ ಸಚಿವರು ಒಮ್ಮತ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
    | ಸತೀಶ ಮಾಲಾಪುರ, ಪ್ರಾದೇಶಿಕ ಉಪವಲಯ ಅರಣ್ಯಾಧಿಕಾರಿ ನರಗುಂದ

    ಗುಡ್ಡದ ಮೇಲೆ ಪವನಯಂತ್ರ ಅಳವಡಿಸಿ ಗಾಳಿಯಿಂದ ವಿದ್ಯುತ್ ಉತ್ಪಾದಿಸುತ್ತಿರುವ ಖಾಸಗಿ ಸಂಸ್ಥೆಯಿಂದ ಸಸ್ಯೋದ್ಯಾನಕ್ಕೆ ತೆರಳುವ 1 ಕಿಲೋ ಮೀಟರ್ ರಸ್ತೆ ನಿರ್ವಿುಸಿಕೊಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಹೈಟೆಕ್ ಉದ್ಯಾನ ನಿರ್ವಿುಸಲು ನನ್ನ ಅವಧಿಯಲ್ಲಿ 1.50 ಕೋಟಿ ರೂಪಾಯಿ ಅನುದಾನ ತಂದಿದ್ದೇನೆ. ಇನ್ನುಳಿದ ಬಾಕಿ ಅಭಿವೃದ್ಧಿ ಕಾಮಗಾರಿಗಳನ್ನು ಹಂತಹಂತವಾಗಿ ಕೈಗೊಳ್ಳಲಾಗುತ್ತದೆ.
    | ಸಿ.ಸಿ.ಪಾಟೀಲ. ಲೋಕೋಪಯೋಗಿ ಸಚಿವ.

    ನರಗುಂದದಲ್ಲಿರುವ ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನಕ್ಕೆ ತೆರಳುವ ಏಕೈಕ ಸಂಪರ್ಕ ರಸ್ತೆ ಸಂಪೂರ್ಣ ಹಾಳಾಗಿದೆ. ಸಾರಿಗೆ, ಮೂಲ ಸೌಲಭ್ಯಗಳ ಕೊರತೆ ಇದೆ. ಅಭಿವೃದ್ಧಿಯ ಬಗ್ಗೆ ಬದ್ಧತೆ, ದೂರದೃಷ್ಟಿ ನಾಯಕತ್ವದ ಕೊರತೆ ಇರುವುದರಿಂದ ಇಲ್ಲಿನ ಪ್ರವಾಸೋದ್ಯಮ ಅಭಿವೃದ್ಧಿಗೆ ಸಾಕಷ್ಟು ಹಿನ್ನಡೆಯಾಗಲು ಪ್ರಮುಖ ಕಾರಣವಾಗಿದೆ.
    | ಬಿ.ಆರ್. ಯಾವಗಲ್, ಮಾಜಿ ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts