More

    ಪ್ರವಾಸಿಗರ ಸಂಖ್ಯೆ ಗಣನೀಯ ಇಳಿಕೆ

    ಕಾರವಾರ: ಇತ್ತೀಚಿನ ವರ್ಷಗಳಲ್ಲಿ ವೇಗ ಪಡೆದುಕೊಂಡಿದ್ದ ಜಿಲ್ಲೆಯ ಪ್ರವಾಸೋದ್ಯಮ ಚಟುವಟಿಕೆಗಳನ್ನು ಕರೊನಾ ಮಕಾಡೆ ಮಲಗಿಸಿದೆ. ವರ್ಷಕ್ಕೆ 40 ರಿಂದ 50 ಲಕ್ಷದಷ್ಟು ಪ್ರವಾಸಿಗರು ಭೇಟಿ ನೀಡುತ್ತಿದ್ದ ಜಿಲ್ಲೆಗೆ ಈ ವರ್ಷ ಬಂದವರ ಸಂಖ್ಯೆ 1 ಲಕ್ಷ ದಾಟಿಲ್ಲ.

    ಹೌದು, ಕಳೆದ ನಾಲ್ಕೂವರೆ ತಿಂಗಳು ಜಿಲ್ಲೆಯ ಎಲ್ಲ ಪ್ರವಾಸಿ ತಾಣಗಳು ಸಂಪೂರ್ಣ ಮುಚ್ಚಿಕೊಂಡಿದ್ದವು. ಈಗ ತೆರೆದರೂ ಬರುವ ಪ್ರವಾಸಿಗರ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ. ಇದರಿಂದ ಇದನ್ನೇ ನಂಬಿಕೊಂಡ ಲಾಜ್, ರೆಸಾರ್ಟ್, ಹೋಟೆಲ್, ಪ್ರವಾಸಿ ಕೇಂದ್ರಗಳ ಬೀದಿಬದಿ ವ್ಯಾಪಾರಿಗಳ ಪರಿಸ್ಥಿತಿ ಶೋಚನೀಯವಾಗಿದೆ.

    ಇಳಿದ ಪ್ರವಾಸಿಗರ ಸಂಖ್ಯೆ:

    2018 ರಲ್ಲಿ ಜಿಲ್ಲೆಯಲ್ಲಿ 55,49,930 ದೇಶೀಯ ಪ್ರವಾಸಿಗರು, 16,666 ವಿದೇಶಿ ಪ್ರವಾಸಿಗರು ಭೇಟಿ ನೀಡಿದ್ದರು. 2018ರಲ್ಲಿ ನೆರೆಯ ಕಾರಣಕ್ಕೆ ಪ್ರವಾಸಿಗರ ಸಂಖ್ಯೆಯಲ್ಲಿ ಕೊಂಚ ಇಳಿಕೆಯಾಗಿತ್ತು. 43,06,488 ದೇಶೀಯ ಪ್ರವಾಸಿಗರು, 13,955 ವಿದೇಶಿ ಪ್ರವಾಸಿಗರು ಜಿಲ್ಲೆಗೆ ಭೇಟಿ ನೀಡಿದ್ದರು. ಈ ಬಾರಿ ಜನವರಿ, ಫೆಬ್ರವರಿ ಮಾರ್ಚ್​ನಲ್ಲಿ ಮಾತ್ರ ಪ್ರವಾಸಿ ಚಟುವಟಿಕೆಗೆ ಅವಕಾಶ ಸಿಕ್ಕಿದೆ. ಈಗ ಆಗಸ್ಟ್​ನಿಂದ ಅಲ್ಪ ಸ್ವಲ್ಪ ನಡೆಯುತ್ತಿದೆ. ಒಟ್ಟಾರೆ ನಾಲ್ಕು ತಿಂಗಳಲ್ಲಿ 1,82,910 ದೇಶೀಯ ಹಾಗೂ 3480 ವಿದೇಶಿ ಪ್ರವಾಸಿಗರು ಜಿಲ್ಲೆಗೆ ಬಂದಿದ್ದಾರೆ. ಅದರಲ್ಲಿ ಜನವರಿಯಲ್ಲಿ 81 ಸಾವಿರ, ಫೆಬ್ರವರಿಯಲ್ಲಿ 72 ಸಾವಿರ ಮಾರ್ಚ್​ನಲ್ಲಿ 31 ಸಾವಿರ, ಹಾಗೂ ಈಗ ಆಗಸ್ಟ್​ನಲ್ಲಿ 8 ಸಾವಿರ ಪ್ರವಾಸಿಗರು ಜಿಲ್ಲೆಗೆ ಭೇಟಿ ನೀಡಿದ್ದಾರೆ ಎಂದು ಪ್ರವಾಸೋದ್ಯಮ ಇಲಾಖೆ ಮಾಹಿತಿ ಹೇಳುತ್ತದೆ.

    ಪ್ರವಾಸಿಗರ ಲೆಕ್ಕಾಚಾರ ಹೇಗೆ?

    ಕಾರವಾರದ ಟ್ಯಾಗೋರ್ ಕಡಲ ತೀರ, ಗೋಕರ್ಣ ಮುಖ್ಯ ತೀರ ಹಾಗೂ ಓಂ ಕಡಲ ತೀರ, ಕಾಸರಕೋಡು ಕಡಲ ತೀರ, ಯಾಣ, ಸಾತೊಡ್ಡಿ ಜಲಪಾತ, ಬನವಾಸಿ, ದಾಂಡೇಲಿ ವನ್ಯಜೀವಿಧಾನ, ಉಂಚಳ್ಳಿ, ಓಂ ಕಡಲ ತೀರ, ಮುಂಡಗೋಡ ಅತ್ತಿವೇರಿ ಪಕ್ಷಿಧಾಮ, ಅಂಬಿಕಾನಗರ ಪವರ್ ಹೌಸ್ ಸೇರಿ 12 ಸ್ಥಳಗಳಿಗೆ ಭೇಟಿ ನೀಡಿದ ಪ್ರವಾಸಿಗರ ಲೆಕ್ಕವನ್ನು ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಪಡೆಯುತ್ತಿದೆ. ಪ್ರವೇಶ ಶುಲ್ಕ ಹಾಗೂ ಸ್ಥಳೀಯ ಲೈಫ್​ಗಾರ್ಡ್​ಗಳ ಅಂದಾಜಿನ ಮೇಲೆ ಈ ಲೆಕ್ಕ ಹಾಕಲಾಗುತ್ತದೆ.

    ಇಂದಿನಿಂದ ಪ್ರಾರಂಭ

    ಈಗ ಹಂತ ಹಂತವಾಗಿ ಪ್ರವಾಸಿ ಕೇಂದ್ರಗಳು ತೆರೆದಿದ್ದು, ಪ್ರವಾಸೋದ್ಯಮ ಕ್ಷೇತ್ರಕ್ಕೆ ಮರು ಚೈತನ್ಯ ನೀಡುವ ಪ್ರಯತ್ನ ನಡೆದಿದೆ. ರೆಸಾರ್ಟ್, ಹೋಂ ಸ್ಟೇ ಮಾಲೀಕರು ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚಾರ ಮಾಡಿ ಪ್ರವಾಸಿಗರನ್ನು ಸೆಳೆಯುವ ಯತ್ನ ನಡೆಸಿದ್ದಾರೆ. ಸೆ. 27 ರಂದು ವಿಶ್ವ ಪ್ರವಾಸೋದ್ಯಮ ದಿನ ಜಿಲ್ಲೆಯ ಎಲ್ಲ ಪ್ರವಾಸಿ ತಾಣಗಳನ್ನು ಮತ್ತೆ ಪ್ರಾರಂಭಿಸಲಾಗುತ್ತಿದೆ. ಪ್ರವಾಸಿಗರಲ್ಲಿ ಸ್ವಚ್ಛತೆ ಹಾಗೂ ಸುರಕ್ಷತೆ ಬಗ್ಗೆ ಆತ್ಮವಿಶ್ವಾಸ ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಲು ಹೋಟೆಲ್ ಹಾಗೂ ಹೋಂ ಸ್ಟೇ ಮಾಲೀಕರಲ್ಲಿ ಕೇಳಿಕೊಂಡಿದ್ದೇವೆ. ಮುರ್ಡೆಶ್ವರದಲ್ಲಿ ವಾಟರ್ ಸ್ಪೋರ್ಟ್ಸ್ ಚಟುವಟಿಕೆಗಳಿಗೆ ಟೆಂಡರ್ ಆಗಿದ್ದು, ಸೋಮವಾರದಿಂದ ಪ್ರಾರಂಭವಾಗಲಿವೆ ಎಂದು ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ಪುರುಷೋತ್ತಮ ತಿಳಿಸಿದ್ದಾರೆ.

    ಕಾರ್ಯಕ್ರಮ ಇಂದು

    ಸದಾಶಿವಗಡ ಕೋಟೆಯಲ್ಲಿ ಸೆ. 27 ರಂದು ಸಂಜೆ 4 ಗಂಟೆಗೆ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿದೆ. ಅದರ ಜತೆಗೆ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವ ಸ್ವಚ್ಛತಾ ಪಖ್ವಾಡ ಎಂಬ ಕಾರ್ಯಕ್ರಮವನ್ನೂ ಉದ್ಘಾಟಿಸಲಾಗುತ್ತಿದೆ.

    ಜಿಲ್ಲೆಯಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳು ನಿಧಾನವಾಗಿ ಪ್ರಾರಂಭವಾಗುತ್ತಿವೆ. ಪ್ರವಾಸಿ ಕೇಂದ್ರಗಳಿಗೆ ಸಾಕಷ್ಟು ಫೋನ್​ಗಳು ಬರುತ್ತಿವೆ. ಜನ ಬರಲು ಇಚ್ಛಿಸಿದ್ದಾರೆ. ಆದರೆ, ಅವರಲ್ಲಿರುವ ಭಯದ ವಾತಾವರಣ ಹೋಗಲಾಡಿಸುವ ಕಾರ್ಯವನ್ನು ಮುಂದಿನ ದಿನದಲ್ಲಿ ಮಾಡಲಾಗುವುದು.

    | ಪುರುಷೋತ್ತಮ ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ, ಕಾರವಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts