More

    ಪ್ರತ್ಯೇಕ ಹಾಲು ಉತ್ಪಾದಕರ ಒಕ್ಕೂಟ ರಚನೆ ನನೆಗುದಿಗೆ

    ರೇವಣಸಿದ್ದಪ್ಪ ಪಾಟೀಲ್ ಬೀದರ್
    ಕಲಬುರಗಿ-ಬೀದರ್-ಯಾದಗಿರಿ ಹಾಲು ಉತ್ಪಾದಕರ ಒಕ್ಕೂಟದ ಹಾಲು ಸಂಗ್ರಹದಲ್ಲಿ ಬೀದರ್ ಜಿಲ್ಲೆ ಸಿಂಹಪಾಲು ಇದೆ. ಆದರೆ ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದಾಗಿ ಪ್ರತ್ಯೇಕ ಒಕ್ಕೂಟ ರಚನೆ ನನೆಗುದಿಗೆ ಬಿದ್ದಿದೆ.

    ಅತ್ಯಧಿಕ ಹಾಲು ಉತ್ಪಾದನೆ, ಉತ್ತಮ ಮಾರುಕಟ್ಟೆ ವ್ಯವಸ್ಥೆ, ಹಾಲಿನ ಪ್ಯಾಕೆಟ್ ಸಿದ್ಧಪಡಿಸುವುದು, ಪೇಡಾ, ತುಪ್ಪ, ಮಜ್ಜಿಗೆ ತಯಾರಿಸುವಂಥ ಸಕಲ ಸೌಲಭ್ಯ ಹೊಂದಿರುವ ಜಿಲ್ಲೆಗೆ ಪ್ರತ್ಯೇಕ ಒಕ್ಕೂಟದ ಸಾಮರ್ಥ್ಯ ಇದ್ದರೂ ಕಡೆಗಣಿಸಲಾಗುತ್ತಿದೆ. ಬೀದರ್, ಕಲಬುರಗಿ, ಯಾದಗಿರಿ ಜಿಲ್ಲೆ ಸೇರಿ ಒಕ್ಕೂಟದಲ್ಲಿ ನಿತ್ಯ 57 ಸಾವಿರ ಕೆಜಿ ಹಾಲು ಸಂಗ್ರಹವಾಗುತ್ತಿದೆ. 2021-22ರಲ್ಲಿ ಬೀದರ್ ಜಿಲ್ಲೆ ಪಾಲು 33 ಸಾವಿರ ಕೆಜಿ. ಕಲಬುರಗಿ ಜಿಲ್ಲೆಯಿಂದ 21 ಸಾವಿರ ಕೆಜಿ, ಯಾದಗಿರಿಯಿಂದ ಕೇವಲ 1263 ಕೆಜಿ ಹಾಲು ಸಂಗ್ರಹವಾಗುತ್ತಿದೆ. ಒಟ್ಟಾರೆ ಶೇ.65 ಪಾಲು ಗಡಿ ಜಿಲ್ಲೆ ಬೀದರ್ನದ್ದಾಗಿದೆ. ಹಾಲು ಸಂಗ್ರಹದಲ್ಲಿ ಅಗ್ರಸ್ಥಾನದಲ್ಲಿ ಇದ್ದುದ್ದರಿಂದ ಕಲಬುರಗಿ, ಬೀದರ್, ಯಾದಗಿರಿ ಹಾಲು ಒಕ್ಕೂಟ ವಿಭಜಿಸಿ ಹೊಸದಾಗಿ ಬೀದರ್ಗೆ ಪ್ರತ್ಯೇಕ ಒಕ್ಕೂಟ ಸ್ಥಾಪನೆ ಮಾಡದಿರುವುದು ವಿಪರ್ಯಾಸ.

    ಪ್ರತ್ಯೇಕ ಒಕ್ಕೂಟ ರಚನೆ ಸಂಬಂಧ ಈ ಹಿಂದೆ ಹೋರಾಟ ನಡೆದ ವೇಳೆ ಚಿಕ್​ಪೇಟ ಬಳಿ ಬೀದರ್ ಡೇರಿ ಸ್ಥಾಪಿಸಲಾಯಿತು. ಜಿಲ್ಲೆಯಲ್ಲಿ ಒಂದು ಡೇರಿ ಜತೆಗೆ ಠಾಣಾಕುಶನೂರ, ಹುಲಸೂರು ಹಾಗೂ ಭಾಲ್ಕಿಗಳಲ್ಲಿ ಹಾಲು ಶೇಖರಣಾ ಕೇಂದ್ರಗಳಿವೆ. ಇಲ್ಲಿನ ಡೇರಿಯಲ್ಲಿ ಸಂಗ್ರಹವಾಗುವ ಹಾಲು ಇಲ್ಲೇ ಪ್ಯಾಕಿಂಗ್ ಮಾಡಿ ವಿತರಿಸಲಾಗುತ್ತಿದೆ. ಅಲ್ಲದೆ ಸಹ ಉತ್ಪನ್ನಗಳಾದ ಮೊಸರು, ಮಜ್ಜಿಗೆ, ಖವಾ ಹಾಗೂ ಪೇಡಾ ತಯಾರಿಸಲಾಗುತ್ತಿದೆ. ಇನ್ನು ಮೂರು ಶೇಖರಣಾ ಕೇಂದ್ರದಲ್ಲಿ ಸಂಗ್ರಹವಾಗುವ ಹಾಲು ಒಕ್ಕೂಟದ ಕೇಂದ್ರ ಕಚೇರಿ ಕಲಬುರಗಿಗೆ ನೇರವಾಗಿ ಕಳಿಸಲಾಗುತ್ತ್ತಿದೆ.

    ಮೂರು ದಶಕದ ಹಿಂದೆ ಚಿಕ್ಪೇಟ ಬಳಿ ಬೀದರ್ ಡೇರಿ ಸ್ಥಾಪಿಸಲಾಗಿದೆ. 11 ಎಕರೆಯಲ್ಲಿರುವ ಡೇರಿಯಲ್ಲಿ ಕಳೆದ ವರ್ಷ ಪೇಡಾ ತಯಾರಿಕೆಗೆ ಚಾಲನೆ ನೀಡಲಾಗಿದೆ. ಪ್ರತ್ಯೇಕ ಒಕ್ಕೂಟಕ್ಕೆ ಬೇಕಾಗುವ ಎಲ್ಲ ಸೌಲಭ್ಯಗಳಿವೆ. ಅಲ್ಲದೆ ರಾಜ್ಯದ ಏಕೈಕ ಪಶು ವಿಶ್ವವಿದ್ಯಾಲಯವೂ ಇಲ್ಲಿದೆ. ಹೀಗಾಗಿ ಜಿಲ್ಲೆಯ ಜನಪ್ರತಿನಿಧಿಗಳು ಸರ್ಕಾರದ ಮೇಲೆ ಒತ್ತಡ ಹೇರಿ ಬೀದರ್ ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ರಚಿಸಲು ಮುಂದಾಗುವುದು ಜರೂರಿ ಎನಿಸಿದೆ.

    ಬೀದರ್​ ಜಿಲ್ಲೆಯಲ್ಲಿ ಅಧಿಕ ಸಂಘ: ಹಾಲು ಉತ್ಪಾದಕರ ಸಹಕಾರ ಸಂಘಗಳು ಬೀದರ್ ಜಿಲ್ಲೆಯಲ್ಲಿ ಹೆಚ್ಚಿವೆ. ಬೀದರ್​ನಲ್ಲಿ 459 ನೋಂದಾಯಿತ ಸಂಘಗಳಿದ್ದರೆ, ಕಲಬುರಗಿ 346, ಯಾದಗಿರಿ ಜಿಲ್ಲೆಯಲ್ಲಿ 85 ಸೇರಿ 890 ಸಂಘಗಳಿವೆ. ಆದರೆ ಕಾಯರ್ಾಚರಣೆಯಲ್ಲಿ ಇರುವ ಸಂಘಗಳು 404 ಮಾತ್ರ. ಬೀದರ್ನಲ್ಲಿ 235, ಕಲಬುರಗಿ 152 ಹಾಗೂ ಯಾದಗಿರಿ ಜಿಲ್ಲೆಯಲ್ಲಿ 17 ಸಂಘಗಳು ಮಾತ್ರ ಕಾರ್ಯಾಚರಣೆ ಮಾಡುತ್ತಿವೆ.

    ಒಂದೂವರೆ ದಶಕದ ಹಿಂದೆ ನಡೆದಿತ್ತು ಹೋರಾಟ: ಪ್ರತ್ಯೇಕ ಹಾಲು ಒಕ್ಕೂಟ ರಚನೆ ಸಂಬಂಧ ಒಂದೂವರೆ ದಶಕದ ಹಿಂದೆ ಜಿಲ್ಲೆಯಲ್ಲಿ ಹೋರಾಟ ನಡೆದಿತ್ತು. ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿಯಿಂದ ನಿರಂತರ ಹೋರಾಟ ನಡೆಸಿ ನಂಜುಂಡಪ್ಪ ವರದಿ ಆಧರಿಸಿ ಈ ಭಾಗಕ್ಕೆ ಪ್ರತ್ಯೇಕ ಹಾಲು ಒಕ್ಕೂಟ ನೀಡಬೇಕು ಇಲ್ಲವೆ ಅಧಿಕ ಹಾಲು ಸಂಗ್ರಹವಾಗುವ ಬೀದರ್ನಲ್ಲಿ ಸದ್ಯದ ಒಕ್ಕೂಟದ ಕೇಂದ್ರ ಕಚೇರಿ ಸ್ಥಾಪಿಸಬೇಕೆಂಬ ಒತ್ತಡ ಸಕರ್ಾರದ ಮೇಲೆ ಹೇರಲಾಗಿತ್ತು. ಸಮಿತಿಯ ಅನೀಲಕುಮಾರ ಬೆಲ್ದಾರ, ಪಂಡಿತ ಚಿದ್ರಿ, ದೇವೇಂದ್ರ ಕಮಲ ಮೊದಲಾದವರು ಹೋರಾಟ ಮಾಡಿದ್ದರ ಫಲವಾಗಿ ಚಿಕ್ಪೇಟ ಬಳಿ ಬೀದರ್ ಡೇರಿ ಸ್ಥಾಪಿಸಿ ಪ್ರತ್ಯೇಕ ಒಕ್ಕೂಟದ ಬೇಡಿಕೆ ತಗ್ಗಿಸಲಾಯಿತು.

    ಕಲಬುರಗಿ-ಬೀದರ್-ಯಾದಗಿರಿ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದಲ್ಲಿ ಬೀದರ್ ಪಾಲು ಅಧಿಕವಿದೆ. ಪ್ರತ್ಯೇಕ ಒಕ್ಕೂಟ ರಚನೆ ಸಂಬಂಧ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಕೆಎಂಎ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರನ್ನು ಭೇಟಿಯಾಗಿ ಚರ್ಚೆ ಮಾಡುವೆ. ಈ ಮೂಲಕ ಬೀದರ್ನಲ್ಲಿ ಪ್ರತ್ಯೇಕ ಒಕ್ಕೂಟ ಸ್ಥಾಪನೆಗೆ ಪ್ರಯತ್ನಿಸುವೆ.
    | ಪ್ರಭು ಚವ್ಹಾಣ್, ಪಶು ಸಂಗೋಪನೆ ಸಚಿವ

    ಬೀದರ್ ಜಿಲ್ಲೆ ಹಾಲು ಸಂಗ್ರಹದಲ್ಲಿ ಮೊದಲ ಸ್ಥಾನದಲ್ಲಿದೆ. ಆದರೆ ಸೂಕ್ತ ಮಾರುಕಟ್ಟೆ ಸಿಗುತ್ತಿಲ್ಲ. ಸಂಗ್ರಹವಾದಷ್ಟು ಹಾಲು ಮಾರಾಟದ ವ್ಯವಸ್ಥೆ ಮಾಡಬೇಕಾಗಿದೆ. ಬೀದರ್​ನಲ್ಲಿ ಪ್ರತ್ಯೇಕ ಒಕ್ಕೂಟ ರಚನೆ ಸಂಬಂಧ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು.
    | ಮಲ್ಲಿಕಾರ್ಜುನ ಬಿರಾದಾರ, ಕಲಬುರಗಿ-ಬೀದರ್-ಯಾದಗಿರಿ ಹಾಲು ಒಕ್ಕೂಟ ನಿರ್ದೇಶಕ

    ಪ್ರತ್ಯೇಕ ಒಕ್ಕೂಟ ರಚಿಸುವಂತೆ ನಿರಂತರ ಹೋರಾಟ ಮಾಡಿದ್ದರಿಂದಾಗಿ ಬೀದರ್ ಡೇರಿ ಸ್ಥಾಪಿಸಲಾಗಿದೆ. ಒಕ್ಕೂಟದಲ್ಲಿ ಸಂಗ್ರಹವಾಗುವ ಹಾಲಿನಲ್ಲಿ ಅಧಿಕ ಪಾಲು ಬೀದರ್ ಜಿಲ್ಲೆಯದಿದ್ದರೂ ಅನ್ಯಾಯವಾಗುತ್ತಿದೆ. ರಾಜಕೀಯ ಇಚ್ಛಾಶಕ್ತಿ ಕೊರತೆ ಕಾರಣ ಪ್ರತ್ಯೇಕ ಒಕ್ಕೂಟ ರಚನೆಯಾಗಿಲ್ಲ.
    | ಅನೀಲಕುಮಾರ ಬೆಲ್ದಾರ್, ಹೈಕ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts