More

    ಪ್ರತಿಯೊಂದನ್ನು ಎದುರಿಸಿ ಪ್ರಕೃತಿ ಉಳಿಸಿಕೊಳ್ಳಿ: ನಾವು ಎಲ್ಲವನ್ನೂ ಮತ್ತೆ ಸೃಷ್ಟಿಸಲು ಸಾಧ್ಯವಿಲ್ಲ: ನಾಗೇಶ್ ಹೆಗಡೆ

    ಸಾಗರ: ಜೀವರಾಶಿಗಳು, ಮೃಗಪಕ್ಷಿಗಳು, ಜಂತುಗಳು ಮತ್ತು ಸಸ್ತನಿಗಳಿಗೆ ಆಶ್ರಯ ತಾಣವೇ ಮಳೆಕಾಡುಗಳು. ಪಶ್ಚಿಮಘಟ್ಟ ವೈಶಿಷ್ಟ್ಯತೆಯಿಂದ ಕೂಡಿದೆ ಎಂಬುದೂ ಶಾಪವಾಗಿ ಪರಿಣಮಿಸುತ್ತಿದೆ ಎಂದು ಪರಿಸರ ಬರಹಗಾರ ನಾಗೇಶ್ ಹೆಗಡೆ ಹೇಳಿದರು.
    ತಾಲೂಕಿನ ಹೊನ್ನೆಮರಡು ಭಾರತೀಯ ಸಾಹಸ ಸಮನ್ವಯ ಕೇಂದ್ರದ ಪ್ರಕೃತಿಯ ಮಡಿಲಿನಲ್ಲಿ ಶನಿವಾರ ಕನ್ನಡ ಸಾಹಿತ್ಯ ಪರಿಷತ್ ಶಿವಮೊಗ್ಗ ಹಾಗೂ ಸಾಗರ ಶಾಖೆ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಕಥಾಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದರು.
    ಮಾನವನು ಸಹ ಅನಾಹುತಗಳನ್ನು ಸೃಷ್ಟಿಸುತ್ತಿದ್ದಾನೆ. ನಿಸರ್ಗವು ಬೆಂಬಿಡದೆ ವೈಪರೀತ್ಯದ ಸವಾಲುಗಳನ್ನು ಒಡ್ಡುತ್ತಿದೆ. ನಾವು ಮತ್ತೆ ಎಲ್ಲವನ್ನು ಸೃಷ್ಟಿಸುತ್ತೇವೆ ಎನ್ನುವ ವಾದ ನಿಜವಲ್ಲ. ನಿಸರ್ಗದ ಮಧ್ಯಯೇ ಬದುಕನ್ನು ಕಟ್ಟಿಕೊಳ್ಳಬೇಕಾಗಿದೆ. ಅದು ಭೂಮಿಯ ಕಂಪನವಿರಲಿ, ಬರಗಾಲವಿರಲಿ, ನೆರೆಪ್ರವಾಹಗಳು ಬರಲಿ, ಎಲ್ಲವನ್ನೂ ಎದುರಿಸಿ ಪ್ರಕೃತಿಯನ್ನು ಉಳಿಸಿಕೊಳ್ಳುವ ಪ್ರಯತ್ನ ಆಗಬೇಕಾಗಿದೆ. ಅದು ಯಾವುದೇ ಕಾಲೇಜಿನ ಕೊಠಡಿಯ ಪಾಠ, ಕಾರ್ಯಾಗಾರ, ಶಿಬಿರಗಳಿಂದ ಸಾಧ್ಯವಿಲ್ಲ. ಹೊನ್ನೆಮರಡುವಿನ ಇಂತಹ ಪರಿಸರದಲ್ಲಿ ಅವೆಲ್ಲವನ್ನು ಅರ್ಥೈಸಿಕೊಳ್ಳಬಹುದು ಎಂದು ಹೇಳಿದರು.
    ಕಸಾಪ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್ ಮಾತನಾಡಿ, ಅಭಿವೃದ್ಧಿಯ ಹೆಸರಿನಲ್ಲಿ ಎಲ್ಲವೂ ನಾಶವಾಗುತ್ತಿದೆ. ಕಥೆಗಾರರು ಕವಿಗಳೂ ತಮ್ಮ ಅನುಭವವನ್ನು ತಮ್ಮ ಚಿಂತನೆಗಳ ಮೂಲಕ ಕಟ್ಟಿಕೊಡುತ್ತಿದ್ದಾರೆ. ಪ್ರಸ್ತುತ ದಿನಗಳಲ್ಲಿ ಪಠ್ಯ ಪುಸ್ತಕಗಳನ್ನು ವಿಕೃತಗೊಳಿಸಿದವರಿಗೂ ಪ್ರಶಸ್ತಿ ನೀಡುತ್ತಿರುವುದು ದುರ್ದೈವ ಎಂದರು.
    ಬದುಕಿನ ಜೀವನಾನುಭವವೇ ಕಥೆ: ಕಥೆ ಹೇಗೆ ಹುಟ್ಟುತ್ತದೆ ಎನ್ನುವುದಕ್ಕೆ ಉತ್ತರ ಹಾಗೂ ನಿದರ್ಶನಗಳನ್ನು ಕೊಡಲು ಸಾಧ್ಯವಿಲ್ಲ. ಪ್ರತಿ ಮೂವತ್ತು ಸೆಕೆಂಡಿನ ಬದುಕಿನ ಜೀವನಾನುಭವವೆ ಕಥೆಯಾಗಿ ಬಿಡುತ್ತದೆ ಎಂದು ಸಾಹಿತ್ಯ ಅಕಾಡೆಮಿ ಸದಸ್ಯ ಮಾರ್ಷಲ್ ಷರಾಮ್ ಹೇಳಿದರು.
    ಪ್ರಕೃತಿಯ ಮಡಿಲು ಕಾರಂತರು, ಕುವೆಂಪು, ಮಾಸ್ತಿ, ನಾ.ಡಿಸೋಜ ಮುಂತಾದ ಕಥೆಗಾರರಿಗೆ ಸ್ಫೂರ್ತಿ ನೀಡಿದೆ. ನಾವು ಕಥೆ, ಕಾವ್ಯ, ಕವನವನ್ನು ಸೃಷ್ಟಿಸಿದ ಅದೇ ಪರಿಸರದಲ್ಲಿ ನಿಂತು ಅನುಭವಗಳನ್ನು ತೆರೆದಿಡುವುದು ಜೀವನದ ಒಂದು ವಿಶಿಷ್ಟ ಅನುಭವ. ಮಲೆನಾಡಿನ ಜನರಿಗೆ ಮುಳುಗಡೆ ದಟ್ಟವಾದ ಪ್ರಭಾವ ಬೀರಿದೆ. ಶರಾವತಿ ಕಣಿವೆಯ ಜನರು ಪಟ್ಟ ಪಾಡು, ಪಡುತ್ತಿರುವ ಪಾಡು ಎರಡೂ ಒಂದು ದೋಡ್ಡ ಗೋಳಿನ ಕಥೆ. ಶಿವಮೊಗ್ಗ ಜಿಲ್ಲೆಯಲ್ಲಿ ಹೊಸನಗರ ತಾಲೂಕು ಮುಳುಗಡೆಯಿಂದ ಕಳೆದುಹೋಗಿದೆ. ನಮ್ಮ ಭೂ ಭಾಗ ಆರು ಬಾರಿ ಮುಳುಗಡೆ ಆಗಿದೆ. ತಾಲೂಕು ಕೇಂದ್ರದ ಜನಸಂಖ್ಯೆ ಕೇವಲ ಆರು ಸಾವಿರಕ್ಕೆ ಇಳಿದಿದೆ. ರಾಜ್ಯದ ಕಥೆಗಾರರು ತಾವು ಕಟ್ಟಿದ ಕಥೆಗಳನ್ನು ಪ್ರಕೃತಿಯ ಮಡಿಲಿನಲ್ಲಿ ನಿಂತು ಓದುತ್ತಿರುವುದು ಒಂದು ವಿಶಿಷ್ಟ ಅನುಭವ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts