More

    ಪೌಷ್ಟಿಕ ಆಹಾರ ಮನೆಗೇ ಪೂರೈಸಿ

    ಹಾವೇರಿ: ಕರೊನಾ ಹಿನ್ನೆಲೆಯಲ್ಲಿ ಅಂಗನವಾಡಿಗೆ ಮಕ್ಕಳು ಬರುತ್ತಿಲ್ಲ. ಈ ಕಾರಣಕ್ಕಾಗಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಅವರವರ ಮನೆಯಲ್ಲಿಯೇ ಸೂಕ್ತ ಚಿಕಿತ್ಸೆ ಹಾಗೂ ಇಲಾಖೆಯ ಪೌಷ್ಟಿಕ ಆಹಾರ ಪೂರೈಸಲು ಕ್ರಮವಹಿಸುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಸಂಜಯ ಶೆಟ್ಟಣ್ಣವರ ಸೂಚಿಸಿದರು.

    ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ರಾಷ್ಟ್ರೀಯ ಪೋಷಣ ಅಭಿಯಾನ ಜಿಲ್ಲಾಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಗರ್ಭಿಣಿಯರ ಆರೋಗ್ಯದ ಮೇಲೆ ಸತತ ನಿಗಾ ವಹಿಸಬೇಕು. ಅಪೌಷ್ಟಿಕತೆಯ ಮಕ್ಕಳನ್ನು ಗುರುತಿಸಿ ಎನ್​ಆರ್​ಸಿ ಕೇಂದ್ರಗಳಿಗೆ ದಾಖಲಿಸಬೇಕು. ನಿಯಮಾನುಸಾರ ಚಿಕಿತ್ಸೆ, ಪೌಷ್ಟಿಕ ಆಹಾರ ಒದಗಿಸಬೇಕು. ಪ್ರಸ್ತುತ ಕರೊನಾ ಹಿನ್ನೆಲೆಯಲ್ಲಿ ಈ ಸೌಲಭ್ಯವನ್ನು ತಾಯಿ ಹಾಗೂ ಮಕ್ಕಳು ವಾಸಿಸುವ ಮನೆಗೆ ವಿಸ್ತರಿಸಬೇಕು. ಈ ಉದ್ದೇಶಕ್ಕಾಗಿ ನಿಯೋಜನೆಗೊಂಡ ಪೋಷಣ ಅಭಿಯಾನದ ಸಂಯೋಜಕರು, ಅಂಗನವಾಡಿ ಕಾರ್ಯಕರ್ತೆಯರು, ಮೇಲ್ವಿಚಾರಕರು ನಿಗಾವಹಿಸಬೇಕು ಎಂದರು.

    ನರೇಗಾ ಯೋಜನೆಯಡಿ ಎಲ್ಲ ಅಂಗನವಾಡಿ ಕೇಂದ್ರಗಳಿಗೆ ಪೌಷ್ಟಿಕ ಕೈತೋಟ ನಿರ್ವಣಕ್ಕೆ ಕ್ರಮ ವಹಿಸಬೇಕು. ರೈತರ ಹೊಲಗಳ ಬದುಗಳಲ್ಲಿ ಹಣ್ಣು, ತರಕಾರಿ, ಸೊಪ್ಪು ಬೆಳೆಯುವ ಕಿಟ್​ಗಳನ್ನು ನೀಡಬೇಕು. ಒಂದೊಮ್ಮೆ ಅಂಗನವಾಡಿ ಆವರಣದಲ್ಲಿ ಸ್ಥಳವಕಾಶ ಕೊರತೆಯಿದ್ದರೆ ಶಾಲಾ ಆವರಣದಲ್ಲಿ ಬೆಳೆಯಲು ಕ್ರಮ ಕೈಗೊಳ್ಳಬೇಕು. ಸ್ವಂತ ಕಟ್ಟಡವಿಲ್ಲದ ಅಂಗನವಾಡಿಗಳಿಗೆ ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ನಿವೇಶನ ಗುರುತಿಸಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹೆಸರಿಗೆ ಮಂಜೂರು ಮಾಡಿಕೊಳ್ಳಬೇಕು. ಎಲ್ಲ ಅಂಗನವಾಡಿ ಕಟ್ಟಡಗಳಿಗೆ ಶುದ್ಧ ನೀರು ಪೂರೈಕೆ, ಶೌಚಗೃಹ, ವಿದ್ಯುತ್ ವ್ಯವಸ್ಥೆ, ಮಕ್ಕಳ ಮನಸೆಳೆಯುವಂತೆ ಗೋಡೆಗಳಿಗೆ ಬಣ್ಣದ ವಿನ್ಯಾಸ, ಕಲಿಕೆಗೆ ಪೂರಕ ಚಿತ್ರ ಬರಹಗಳ ಮೂಲಕ ನವೀಕರಿಸಬೇಕು. ದಾನಿಗಳ ನೆರವು ಪಡೆದು ಫ್ಯಾನ್, ಕುಡಿಯುವ ನೀರಿನ ಫೀಲ್ಟರ್ ವ್ಯವಸ್ಥೆ, ಸುಣ್ಣಬಣ್ಣದ ವ್ಯವಸ್ಥೆ, ಗೋಡೆ ಬರಹ ಬರೆಸಿ ಎಂದರು.

    ರಾಷ್ಟ್ರೀಯ ಪೋಷಣ ಅಭಿಯಾನ ಕುರಿತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಪರಶುರಾಮ ಶೆಟ್ಟೆಪ್ಪನವರ ಮಾಹಿತಿ ನೀಡಿದರು. ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts