More

    ಪೊಲೀಸ್ ಸಿಬ್ಬಂದಿಗೆ ಊಟದ ವ್ಯವಸ್ಥೆ



    ರಟ್ಟಿಹಳ್ಳಿ: ಕರೊನಾ, ಲಾಕ್​ಡೌನ್ ಕರ್ತವ್ಯದಲ್ಲಿರುವ ಪೊಲೀಸ್ ಇಲಾಖೆ, ಗ್ರಾಮ ಪಂಚಾಯಿತಿ, ಆರೋಗ್ಯ ಇಲಾಖೆ, ತಹಸೀಲ್ದಾರ್ ಕಚೇರಿಯ 70ಕ್ಕೂ ಹೆಚ್ಚು ಸಿಬ್ಬಂದಿಗೆ ಕುಮದ್ವತಿ ಮಹಿಳಾ ಸಂಘದಿಂದ ಶನಿವಾರ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿತ್ತು.

    ಎಲ್ಲ ಸಿಬ್ಬಂದಿ ಸಾಮಾಜಿಕ ಅಂತರ ಕಾಯ್ದುಕೊಂಡ ಊಟ ಮಾಡಿದರು. ಕುಮದ್ವತಿ ಮಹಿಳಾ ಸಂಘದ ನಿರ್ದೇಶಕರು, ಸಿಬ್ಬಂದಿ ವರ್ಗ, ಹೊಸಪೇಟಿ ವ್ಯಾಪರಸ್ಥರು ಇದ್ದರು.

    ಕುಮದ್ವತಿ ಮಹಿಳಾ ಸಹಕಾರಿ ಸಂಘದ ಅಧ್ಯಕ್ಷೆ ರೂಪಾ ಅಂಬ್ಲೇರ್ ಮಾತನಾಡಿ, ದೇಶಾದ್ಯಾಂತ ಪೊಲೀಸ್ ಇಲಾಖೆ, ವೈದ್ಯರು, ವಿವಿಧ ಇಲಾಖೆಗಳ ಸಿಬ್ಬಂದಿ ಜನರ ಆರೋಗ್ಯ ಸಂರಕ್ಷಣೆಗಾಗಿ ಹಗಲಿರುಳು ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ. ಅಂತಹರಿಗೆ ಊಟದ ವ್ಯವಸ್ಥೆ ಮಾಡುವುದು ನಮ್ಮ ಕರ್ತವ್ಯ ಎಂದು ಹೇಳಿದರು.

    ಪಟ್ಟಣದ ಹೊಸಪೇಟೆ ಸಂತೆ ವ್ಯಾಪಾರಸ್ಥರಿಂದ ಪೊಲೀಸ್ ಇಲಾಖೆ, ಇತರ ಸಿಬ್ಬಂದಿಗೆ ಭಾನುವಾರ ಮಧ್ಯಾಹ್ನ ಗೋದಿ ಹುಗ್ಗಿ, ಅನ್ನ ಸಂಬಾರ ಊಟದ ವ್ಯವಸ್ಥೆ ಮಾಡಲಾಯಿತು.

    ಗೂಡ್ಸ್ ವಾಹನದಲ್ಲಿ ಕಾರ್ವಿುಕರ ಸಾಗಣೆ

    ಹಾವೇರಿ: ಗೂಡ್ಸ್ ವಾಹನದಲ್ಲಿ ಕುರಿಗಳಂತೆ ತಾಡಪತ್ರೆಯಲ್ಲಿ ಮುಚ್ಚಿಕೊಂಡು ಕಾರ್ವಿುಕರನ್ನು ಕರೆದೊಯ್ಯುತ್ತಿರುವುದನ್ನು ಪೊಲೀಸರು ಭಾನುವಾರ ತಪಾಸಣೆ ವೇಳೆ ಪತ್ತೆಹಚ್ಚಿ, ವಾಹನ ಚಾಲಕನ ಮೇಲೆ ಪ್ರಕರಣ ದಾಖಲಿಸಿದ್ದಾರೆ.

    ನಗರದ ಸಿದ್ದಪ್ಪ ಹೊಸಮನಿ ವೃತ್ತದ ಬಳಿ ಸಾರ್ವಜನಿಕರ ಸಂಚಾರ ನಿರ್ಬಂಧ ಉಲ್ಲಂಘಿಸಿ ಚಲಿಸುತ್ತಿದ್ದ ಗೂಡ್ಸ್ ವಾಹನವನ್ನು ತಡೆದಿದ್ದಾರೆ. ಆಗ ಗೂಡ್ಸ್ ವಾಹನದ ಹಿಂಬದಿಯಲ್ಲಿ ತಾಡಪತ್ರೆ ಮುಚ್ಚಿಕೊಂಡು ಬಂದಿದ್ದನ್ನು ಗಮನಿಸಿದ ಪೊಲೀಸರು ತಾಡಪತ್ರೆ ತೆಗೆದು ನೋಡಿದರೆ, ಅದರಲ್ಲಿ ಮಹಿಳೆಯರು ಸೇರಿ 10ಕ್ಕೂ ಹೆಚ್ಚು ಕಾರ್ವಿುಕರಿದ್ದರು. ಅವರೊಂದಿಗೆ ಮೂವರು ಮಕ್ಕಳಿದ್ದರು. ಇವರೆಲ್ಲರೂ ತಾಲೂಕಿನ ಗಾಂಧಿಪುರ ನಿವಾಸಿಗಳು ಎಂದು ತಿಳಿದುಬಂದಿದೆ. ತೀರ್ಥಹಳ್ಳಿ ತಾಲೂಕಿನಲ್ಲಿ ಕಾಫಿ ಎಸ್ಟೇಟ್​ನಲ್ಲಿ ಕೆಲಸ ಮಾಡುತ್ತಿದ್ದ ಇವರು ಕಳೆದ ಕೆಲವು ದಿನಗಳಿಂದ ಕೆಲಸವಿಲ್ಲದೇ ಖಾಲಿ ಕುಳಿತುಕೊಳ್ಳುವಂತಾಗಿತ್ತು. ಊರಿಗೆ ಬರಲು ಸಾರಿಗೆ ಬಸ್​ಗಳು ಬಂದ್ ಆಗಿದ್ದರಿಂದ ಗೂಡ್ಸ್ ವಾಹನದಲ್ಲಿ ಯಾರಿಗೂ ಗೊತ್ತಾಗದ ರೀತಿಯಲ್ಲಿ ಗ್ರಾಮಕ್ಕೆ ಬರುತ್ತಿದ್ದರು. ಮೊದಲು ಮೊಟೆಬೆನ್ನೂರಿನಿಂದ ಬರುತ್ತಿರುವುದಾಗಿ ಚಾಲಕ ಸುಳ್ಳು ಹೇಳಿದ್ದ. ಬಳಿಕ ಪೊಲೀಸ್ ಠಾಣೆಗೆ ಕರೆತಂದು ವಿಚಾರಿಸಿದಾಗ ಸತ್ಯ ಬಾಯ್ಬಿಟ್ಟಿದ್ದಾನೆ. ಗೂಡ್ಸ್ ವಾಹನದಲ್ಲಿ ಜನರನ್ನು ಸಾಗಿಸಿದ್ದಕ್ಕಾಗಿ ಪ್ರಕರಣ ದಾಖಲಿಸಿ, ಕಾರ್ವಿುಕರ ಆರೋಗ್ಯ ತಪಾಸಣೆ ನಡೆಸಿ ಗಾಂಧಿಪುರಕ್ಕೆ ಕಳುಹಿಸಲಾಗಿದೆ ಎಂದು ಎಎಸ್​ಪಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದರು.

    ರಿಯಾಯಿತಿ ದರದಲ್ಲಿ ತರಕಾರಿ ಮಾರಾಟ

    ಹಾವೇರಿ: ಕರೊನಾ ವೈರಸ್ ಹರಡುವ ಭೀತಿಯಿಂದ ಗ್ರಾಮೀಣ ಪ್ರದೇಶಗಳಲ್ಲಿ ವಾರದ ಸಂತೆಗಳನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿದೆ. ಇದರಿಂದ ಹಳ್ಳಿಗರಿಗೆ ತರಕಾರಿ ಸಿಗದೇ ನಗರದತ್ತ ವಲಸೆ ಬರುವಂತಾಗಿತ್ತು. ಆದರೆ, ನಗರಕ್ಕೆ ಬಂದರೆ ಪೊಲೀಸರ ಲಾಠಿ ಏಟು ತಿನ್ನುವುದು ಅನಿವಾರ್ಯವಾಗಿತ್ತು. ಇದನ್ನರಿತ ಹಾವೇರಿ ತಾಲೂಕಿನ ದೇವಗಿರಿ ಗ್ರಾಮಸ್ಥ ಶಂಭಣ್ಣ ಸಂಗೂರ ಅವರು ಟಂಟಂ ವಾಹನದಲ್ಲಿ ನಗರದ ಎಪಿಎಂಸಿಯ ತರಕಾರಿ ಸಗಟು ಮಾರಾಟ ಮಳಿಗೆಯಿಂದ ತರಕಾರಿ ಖರೀದಿಸಿ ತಂದು ಗ್ರಾಮಸ್ಥರಿಗೆ ಅತಿಕಡಿಮೆ ದರದಲ್ಲಿ ಮನೆ-ಮನೆಗೆ ಹೋಗಿ ಮಾರಾಟ ಮಾಡಿದರು.

    ಈ ಕುರಿತು ‘ವಿಜಯವಾಣಿ’ಯೊಂದಿಗೆ ಮಾತನಾಡಿದ ಶಂಭಣ್ಣ ಸಂಗೂರ, ನಮ್ಮೂರಿನಲ್ಲಿ ಜನತೆಗೆ ತರಕಾರಿ ಸಿಗದೇ ಪರದಾಡುತ್ತಿರುವುದನ್ನು ಗಮನಿಸಿ ಈ ಕಾರ್ಯಕ್ಕೆ ಮುಂದಾಗಿದ್ದೇವೆ. ಎಪಿಎಂಸಿಯಲ್ಲಿ ಸಿಕ್ಕ ದರದೊಂದಿಗೆ ಟಂಟಂ ವಾಹನದ ಬಾಡಿಗೆ, ಮನೆಮನೆಗೆ ಹೋಗಿ ಮಾರಾಟ ಮಾಡುವ ಹುಡುಗರ ಕೂಲಿ ಮಾತ್ರ ಬರುವಂತೆ ಮಾರಾಟ ಮಾಡುತ್ತಿದ್ದೇವೆ. ಇದನ್ನು ಗ್ರಾಮದಲ್ಲಿ ವಾರ್ಡ್​ವಾರು ಗ್ರಾಪಂ ಸದಸ್ಯರು ಮಾಡಿದರೆ ಜನರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.

    ದಾಂಡೇಲಿಯಲ್ಲಿ ಹೆಚ್ಚಿದ ಕಟ್ಟು ನಿಟ್ಟಿನ ಕ್ರಮ

    ದಾಂಡೇಲಿ: ನಗರದಲ್ಲಿ ಸತತ ಧ್ವನಿ ವರ್ಧಕದ ಎಚ್ಚರಿಕೆಯ ಸಂದೇಶ, ಆರೋಗ್ಯ ಇಲಾಖೆಯ ಎಲ್ಲ ಸಿಬ್ಬಂದಿ, ಆಶಾ ಕಾರ್ಯಕರ್ತೆಯರ ಸೇವೆ ಮನೆ ಮನೆ ಭೇಟಿ, ಪೊಲೀಸ್ ಇಲಾಖೆಯ ಕಟ್ಟುನಿಟ್ಟಿನ ಕ್ರಮ, ಪೆಟ್ರೋಲ್ ವಿತರಣೆಯ ನಿರ್ಬಂಧದಿಂದ, ಜನರ ಓಡಾಟ ಸ್ವಲ್ಪ ಕಡಿಮೆಯಾಗಿದ್ದರೂ ಕೆಲವರು ಜೀವ ಭಯ ಇಲ್ಲದಂತೆ ವರ್ತಿಸುತ್ತಿದ್ದಾರೆ.

    ಆದರೂ ನಗರದಲ್ಲಿ ಹೊರ ರಾಜ್ಯ ಮತ್ತು ಹೊರ ದೇಶದಿಂದ ಬಂದವರ ಬಗ್ಗೆ ಇನ್ನು ಮಾಹಿತಿ ನೀಡಲು ಸಾರ್ವಜನಿಕರು, ಹಿಂದೇಟು ಹಾಕುತ್ತಿರುವುದು ಕೆಲವೆಡೆ ಕೇಳಿಬರುತ್ತಿದೆ. ಇದಕ್ಕೆ ನಗರದ ಪ್ರತಿಯೊಬ್ಬ ನಿವಾಸಿ, ಈ ಕುರಿತು ಖಚಿತ ಮಾಹಿತಿ ತಿಳಿದು ಬಂದರೆ ಸ್ಥಳೀಯ ಅಧಿಕಾರಿಗಳಿಗೆ ಮಾಹಿತಿ ನೀಡಿ ಸಹಕರಿಸಬೇಕಾಗಿದೆ.

    ನಗರದಲ್ಲಿ ಸಂಡೆ ಮಾರುಕಟ್ಟ್ಟೆಯಲ್ಲಿ ಸಂತೆ ನಡೆಯದೆ ಇದ್ದರೂ ವಾರ್ಡ್​ಗಳಲ್ಲಿ ಕೈ ಗಾಡಿಯಲ್ಲಿ ತರಕಾರಿ ಮಾರಾಟದ ವ್ಯವಸ್ಥೆ ಜೊತೆ ಕೆಲ ರೇಷನ್ ಅಂಗಡಿಗಳು, ಕಿರಾಣಿ ಅಂಗಡಿಗಳು ಕೆಲಕಾಲ ಆರಂಭವಿದ್ದು, ಗ್ರಾಹರಿಕೆ ಅಗತ್ಯ ವಸ್ತಗಳನ್ನು ಪೂರೈಸಿದವು.

    ಮಜ್ಜಿಗೆ ವಿತರಣೆ: ನಗರದ ಜೆ.ಎನ್. ರಸ್ತೆಯ ಗಣೇಶ ಮಂಡಳದವರು ಪೊಲೀಸ್ ಸಿಬ್ಬಂದಿಗೆ ಬಸ್​ನಿಲ್ದಾಣದ ಬಳಿ ಮಜ್ಜಿಗೆ ವಿತರಿಸಿದರು.

    ಹೊಸ ಪಾಸ್ ವಿತರಣೆ

    ಯಲ್ಲಾಪುರ: ಪಟ್ಟಣದಲ್ಲಿ ಕಳೆದೆರಡು ದಿನಗಳ ಹಿಂದೆ ಅಗತ್ಯ ಸೇವೆ ಹಾಗೂ ಅಗತ್ಯ ವಸ್ತುಗಳ ಪೂರೈಕೆದಾರರಿಗೆ ಪೊಲೀಸರು ನೀಡಿದ್ದ ಪಾಸ್ ರದ್ದುಗೊಳಿಸಿದ ಹಿನ್ನೆಲೆಯಲ್ಲಿ ಭಾನುವಾರ ತಹಸೀಲ್ದಾರ್ ಕಚೇರಿಯಲ್ಲಿ ಹೊಸದಾಗಿ ಪಾಸ್ ವಿತರಿಸಲಾಯಿತು.

    ದಿನಸಿ, ತರಕಾರಿ ವ್ಯಾಪಾರಸ್ಥರು ಹೊಸದಾಗಿ ಪಾಸ್ ಪಡೆದು ತಮಗೆ ನಿಯೋಜಿಸಿದ ವಾರ್ಡ್​ಗಳಲ್ಲಿ ವ್ಯಾಪಾರ ನಡೆಸಿದರು. ಪಟ್ಟಣದ ಗ್ರಾಮದೇವಿ ನಗರದಲ್ಲಿ ತರಕಾರಿ ಮತ್ತು ಹಣ್ಣಿನ ವ್ಯಾಪಾರದ ಸಂದರ್ಭದಲ್ಲಿ ಜನರು ಅಂತರ ಕಾಯ್ದುಕೊಳ್ಳುವಂತೆ ಪ.ಪಂ. ಸದಸ್ಯ ಆದಿತ್ಯ ಗುಡಿಗಾರ ಸ್ಥಳದಲ್ಲೇ ನಿಂತು ಜಾಗೃತಿ ಮೂಡಿಸಿದರು.

    ಹೋಮ್ ಕ್ವಾರಂಟೈನ್​ನಲ್ಲಿದ್ದ ವ್ಯಕ್ತಿ ಆಸ್ಪತ್ರೆಗೆ ದಾಖಲು

    ರಾಣೆಬೆನ್ನೂರ: ಕಳೆದ 27 ದಿನಗಳಿಂದ ಹೋಮ್ ಕ್ವಾರಂಟೈನ್​ಲ್ಲಿದ್ದ ವ್ಯಕ್ತಿಗೆ ಏಕಾಏಕಿ ಜ್ವರ ಕಾಣಿಸಿಕೊಂಡಿದ್ದು, ಚಿಕಿತ್ಸೆಗಾಗಿ ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಸಿದ್ಧೇಶ್ವರ ನಗರದ 30 ವರ್ಷದ ವ್ಯಕ್ತಿ 27 ದಿನಗಳ ಹಿಂದೆ ಸೌದಿ ಅರೇಬಿಯಾದಿಂದ ರಾಣೆಬೆನ್ನೂರಿಗೆ ಬಂದಿದ್ದನು. ಆತನನ್ನು ಹೋಮ್ ಕ್ವಾರಂಟೈನ್​ನಲ್ಲಿ ಇಡಲಾಗಿತ್ತು. ಆತನಿಗೆ ಈಗ ಜ್ವರ ಕಾಣಿಸಿದ್ದರಿಂದ ತಾಲೂಕು ಸರ್ಕಾರಿ ಆಸ್ಪತ್ರೆ ವೈದ್ಯರು ಪ್ರಾಥಮಿಕ ಚಿಕಿತ್ಸೆ ನೀಡಿ, ಜಿಲ್ಲಾಸ್ಪತ್ರೆಗೆ ವರ್ಗಾಯಿಸಿದ್ದಾರೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಸಂತೋಷಕುಮಾರ ತಿಳಿಸಿದ್ದಾರೆ.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts