More

    ಪೊಲೀಸ್ ಠಾಣೆಯಲ್ಲಿ ಶಾಸಕ ಹಾಲಪ್ಪ ಧರಣಿ

    ರಿಪ್ಪನ್​ಪೇಟೆ: ರಿಪ್ಪನ್​ಪೇಟೆ ಪೊಲೀಸ್ ಠಾಣೆಯಲ್ಲಿ ಅರಣ್ಯ ರಕ್ಷಕ ದಾಖಲಿಸಿದ ದೂರಿಗೆ ರೈತ ಮಹಿಳೆ ನೀಡಿದ ಪ್ರತಿದೂರು ದಾಖಲಿಸದ ಅಧಿಕಾರಿಗಳ ವಿರುದ್ಧ ಭಾನುವಾರ ರಾತ್ರಿ ಠಾಣೆಯಲ್ಲೇ ಶಾಸಕ ಹರತಾಳು ಹಾಲಪ್ಪ ಬೆಂಬಲಿಗರೊಂದಿಗೆ ಧರಣಿ ನಡೆಸಿದರು.

    ನೀವು ಬಾರ್ಡರ್ ಸೆಕ್ಯೂರಿಟಿ ಫೋರ್ಸಾ? ನಾವು ಪಾಕಿಸ್ತಾನಿ ನುಸುಳುಕೋರರಾ? ಎಂದು ಪ್ರಶ್ನಿಸಿದ ಆಕ್ರೋಶ ವ್ಯಕ್ತಪಡಿಸಿದರು.

    ರೈತ ಮಹಿಳೆ ದೂರು ನೀಡಿ 3 ದಿನಗಳಾದರೂ ಯಾವುದೇ ಪ್ರಕರಣ ದಾಖಲಾಗದ್ದಕ್ಕೆ ವಿಚಾರಿಸಲು ಠಾಣೆಗೆ ಆಗಮಿಸಿದ ಶಾಸಕರು, ಸಂಬಂಧಿತ ಅಧಿಕಾರಿಗಳು ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಜತೆ ದೂರವಾಣಿ ಮೂಲಕ ಮಾತನಾಡಿ, ಸಮಸ್ಯೆಯಾದವನಿಗೆ ನ್ಯಾಯ ದೊರಕಿಸಿಕೊಡಬೇಕು. ಅದರಂತೆ ಈ ಪ್ರಕರಣಗಳಲ್ಲಿ ನಿಜವಾಗಿ ಸಂತ್ರಸ್ತನಾದವನು ಹಸು ಕಳೆದುಕೊಂಡ ರೈತ. ಇದನ್ನು ಅರಿಯದ ಅರಣ್ಯಾಧಿಕಾರಿಗಳು ಇವರು ಮಾತ್ರ ರಕ್ಷಕರು, ಜನಗಳು ಮಾತ್ರ ನುಸುಳುಕೋರು ಎಂದು ವರ್ತಿಸುತ್ತಿದ್ದಾರೆ. ಇದು ಸಹಿಸಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಜನರ ಮೇಲೆ ಪ್ರಕರಣ ದಾಖಲು ಮಾಡುವುದಾದರೆ ರೈತನ ಆತ್ಮಹತ್ಯೆ ಯತ್ನಕ್ಕೆ ಕಾರಣರಾದ ಇಲಾಖೆಯ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಾಗಲಿ ಎಂದು ಠಾಣೆಯಲ್ಲಿಯೇ ರಾತ್ರಿ 10 ಗಂಟೆವರೆಗೆ ಕೂತು ಆಗ್ರಹಿಸಿದರು. ನಂತರ ಅಧಿಕಾರಿಗಳೊಂದಿಗಿನ ದೂರವಾಣಿ ಸಂಭಾಷಣೆಯ ನಂತರ ಯಾರ ಮೇಲೂ ಕೇಸು ದಾಖಲಾಗದಿರುವ ಭರವಸೆ ನೀಡಿದ್ದಾರೆ ಎಂದು ತಿಳಿದು ಠಾಣೆಯಿಂದ ತೆರಳಿದರು.

    ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ತಾಪಂ ಅಧ್ಯಕ್ಷ ವೀರೇಶ ಆಲುವಳ್ಳಿ, ಮುಖಂಡರಾದ ಆರ್.ಟಿ.ಗೋಪಾಲ್, ರಾಜೇಶ್, ಸಿಪಿಐ ಗುರಣ್ಣಹೆಬ್ಬಾಳ್, ಪಿಎಸ್​ಐ ಪಾರ್ವತಿಬಾಯಿ ಇದ್ದರು.

    —–

    ಆಗಿದ್ದೇನು? ಮೇ 15 ರಂದು ಮೂಗುಡ್ತಿ ವನ್ಯಜೀವಿ ವಲಯ ವ್ಯಾಪ್ತಿಯ ದೊಬೈಲು ಗ್ರಾಮದ ಹೆಬ್ಬುರುಳಿಯಲ್ಲಿ ರೈತನೊಬ್ಬನ ಕೊಟ್ಟಿಗೆಯ ಮೇಲೆ ಮರ ಬಿದ್ದು ಹಸುವೊಂದು ಮೃತಪಟ್ಟಿತ್ತು. ಅಪರಿಚಿತರು ಅರಣ್ಯ ರಕ್ಷಕನಿಗೆ ದೂರವಾಣಿ ಕರೆ ಮಾಡಿ ಅಕ್ರಮ ಮರ ಕಡಿತಲೆ ಮಾಡುತ್ತಿರುವುದಾಗಿ ತಿಳಿಸಿದ್ದಾರೆ. ಈ ಮಾಹಿತಿಯನ್ವಯ ಅರಣ್ಯ ಇಲಾಖಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು ಆ ಸಮಯದಲ್ಲಿ ಮರ ಕಡಿತಲೆಯ ಬದಲಾಗಿ ಕೊಟ್ಟಿಗೆ ಮೇಲೆ ಮರ ಬಿದ್ದಿರುವ ವಿಷಯಕ್ಕೆ ಸಂಬಂಧಿಸಿ ಜನಜಂಗುಳಿ ಸೇರಿದ್ದು ಅಲ್ಲಿ ಜನಪ್ರತಿನಿಧಿಗಳೂ ಇದ್ದರು.

    ಈ ಸಂದರ್ಭದಲ್ಲಿ ಅರಣ್ಯ ರಕ್ಷಕನನ್ನು ಕಂಡ ಕೆಲವರು ಆತನ ಮೇಲೆ ದೈಹಿಕ ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿರುವುದಾಗಿ ರಿಪ್ಪನ್​ಪೇಟೆ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಅರಣ್ಯ ರಕ್ಷಕ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದೇ ವಿಷಯಕ್ಕೆ ಸಂಬಂಧಪಟ್ಟಂತೆ ಮಾರನೇ ದಿನ ರೈತ ಮಹಿಳೆಯೊಬ್ಬರು ಅರಣ್ಯ ಇಲಾಖೆ ಸಿಬ್ಬಂದಿ ವಿರುದ್ಧ ಕಿರುಕುಳ ನೀಡುತ್ತಿರುವುದಾಗಿ ಪ್ರತಿದೂರು ನೀಡಿದ್ದರು. ಮೇ 16ರಂದು ಮೂಗುಡ್ತಿ ಅರಣ್ಯ ಕಚೇರಿಯಲ್ಲಿ ವನ್ಯಜೀವಿ ಉಪ ಸಂರಕ್ಷಣಾಧಿಕಾರಿ, ಪೊಲೀಸ್ ವೃತ್ತನಿರೀಕ್ಷಕ ಹಾಗೂ ಕೆಲವು ಜನಪ್ರತಿನಿಧಿಗಳ ಸಮ್ಮುಖದಲ್ಲಿ ದೂರಿನಲ್ಲಿರುವ ಕೆಲವು ಜನರ ಹೆಸರನ್ನು ಕೈಬಿಟ್ಟು ಉಳಿದವರ ಮೇಲೆ ದೂರು ನೀಡುವಂತೆ ರಕ್ಷಕನಿಗೆ ಮನವೊಲಿಸಲಾಗಿತ್ತು. ಅದರಂತೆ ಮತ್ತೊಂದು ದೂರು ಠಾಣೆಗೆ ನೀಡಲಾಗಿದೆ. ಈ ಮಧ್ಯೆ ಮರಬಿದ್ದು ಹಸು ಕಳೆದುಕೊಂಡ ರೈತ ಅದೇ ದಿನ ಸಂಜೆ ಅರಣ್ಯ ಇಲಾಖೆಯ ಕಿರುಕುಳಕ್ಕೆ ಬೇಸತ್ತು ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದ ಎನ್ನಲಾಗಿದ್ದು ಚಿಕಿತ್ಸೆಗಾಗಿ ಶಿವಮೊಗ್ಗ ಆಸ್ಪತ್ರೆಗೆ ದಾಖಲಾಗಿರುವುದಾಗಿ ತಿಳಿದುಬಂದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts