More

    ಪೈಪ್​ಲೈನ್ ಅಳವಡಿಕೆ ನನೆಗುದಿಗೆ

    ಸವಣೂರ: ಸವಣೂರ ಏತ ನೀರಾವರಿ ಯೋಜನೆಯಡಿ ತಾಲೂಕಿನ ಕಲಿವಾಳ ಗ್ರಾಮದ ಕೆರೆ ತುಂಬಿಸಲು ಅಳವಡಿಸಲಾಗುತ್ತಿರುವ ಪೈಪ್​ಲೈನ್ ಕಾಮಗಾರಿಯು 11 ತಿಂಗಳಿನಿಂದ ನನೆಗುದಿಗೆ ಬಿದ್ದಿದೆ.

    ಕಳಸೂರು ಗ್ರಾಮದ ಬಳಿ ವರದಾ ನದಿಗೆ ಅಡ್ಡಲಾಗಿ ಕಟ್ಟಿದ ಬ್ಯಾರೇಜ್​ನಿಂದ 1.50 ಟಿಎಂಸಿ ನೀರು ಬಳಸಿ ತಾಲೂಕಿನ 30 ಗ್ರಾಮಗಳ 15,500 ಹೆಕ್ಟೇರ್ ಪ್ರದೇಶಕ್ಕೆ ಹನಿ ನೀರಾವರಿ ಸೌಲಭ್ಯ ಕಲ್ಪಿಸುವುದು ಹಾಗೂ ಸವಣೂರ ತಾಲೂಕಿನ 9 ಸಣ್ಣ ನೀರಾವರಿ ಕೆರೆಗಳನ್ನು, ಶಿಗ್ಗಾಂವಿ ತಾಲೂಕಿನ 1 ಕೆರೆ ಹಾಗೂ ಕುಂದಗೋಳ ತಾಲೂಕಿನ 1 ಕೆರೆ ಸೇರಿ 11 ಕೆರೆಗಳನ್ನು ತುಂಬಿಸಲು ಉದ್ದೇಶಿಸಲಾಗಿದೆ. ಯೋಜನೆಯಡಿ ಕಲಿವಾಳ ಗ್ರಾಮದಲ್ಲಿರುವ 270 ಎಕರೆ ವಿಸ್ತೀರ್ಣ ಹೊಂದಿರುವ ಕೆರೆಯನ್ನು ತುಂಬಿಸಲು ಪೈಪ್​ಲೈನ್ ಅಳವಡಿಸಬೇಕಿದೆ.

    90.57 ಕೋಟಿ ರೂ. ಕಾಮಗಾರಿ ವೆಚ್ಚವಾಗಿದ್ದು, ಕಾಮಗಾರಿಗೆ ನಿಗದಿಪಡಿಸಿದ ಕಾಲಮಿತಿ 2019ರ ಜುಲೈ. ಕಾಲಮಿತಿ ಮುಗಿದರೂ ಇನ್ನೂ ಕಾಮಗಾರಿ ಪೂರ್ಣಗೊಂಡಿಲ್ಲ.

    ಟರ್ನ್ ಕೀ ಆಧಾರದ ಮೇಲೆ (ಕಾಮಗಾರಿಯನ್ನು ಸಂಪೂರ್ಣ ಮುಗಿಸಿ ಮುಂದಿನ ಐದು ವರ್ಷಗಳವರೆಗೆ ನಿರ್ವಹಣೆಯನ್ನು ಕೈಗೊಳ್ಳುವುದು.) ಪೈಪ್​ಲೈನ್ ಕಾಮಗಾರಿಯನ್ನು ಖಾಸಗಿ ಕಂಪನಿಗೆ (ಓಸಿಯನ್ ಕನ್​ಸ್ಟ್ರಕ್ಷನ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಮಂಗಳೂರು) ವಹಿಸಿಕೊಡಲಾಗಿದೆ. ಕಾಮಗಾರಿಯ ವ್ಯಾಪ್ತಿಯಲ್ಲಿರುವ ಕೆರೆಗಳ ಸಾಮರ್ಥ್ಯಕ್ಕೆ ಅನುಗುಣವಾಗಿ ರೈಸಿಂಗ್ ಮೇನ್ ಮತ್ತು ಗ್ರ್ಯಾವಿಟಿ ಮೇನ್ ಪೈಪ್​ಗಳನ್ನು ವಿನ್ಯಾಸಗೊಳಿಸಿ (ಪಂಪ್ ಮಾಡುವ ಮೂಲಕ ನೀರನ್ನು ಸರಾಗವಾಗಿ ಹರಿಸುವಿಕೆಯನ್ನು ಹೊಂದಿರುವ ಪೈಪ್​ಗಳನ್ನು ಅಳವಡಿಸುವುದು) ಅಳವಡಿಸಬೇಕಿದೆ. ಆದರೆ, ತಾಲೂಕಿನ ಕಲಿವಾಳ ಕೆರೆಯ ವಾಸ್ತವಿಕ ಸಾಮರ್ಥ್ಯ ಪರಿಗಣನೆಗೆ ತೆಗೆದುಕೊಳ್ಳದೆ, ಸಣ್ಣ ನೀರಾವರಿ ಇಲಾಖೆ ನೀಡಿದ ಮಾಹಿತಿ ಆಧರಿಸಿ ಪೈಪ್​ಲೈನ್ ಅಳವಡಿಸುತ್ತಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

    ಕೆರೆಯ ವಿಸ್ತೀರ್ಣದ ತಪ್ಪು ಮಾಹಿತಿ ನೀಡಲಾಗಿದೆ, ಕೆರೆ ಸಣ್ಣ ನೀರಾವರಿ ಇಲಾಖೆಗೆ ಸೇರಿದ್ದು ಎಂಬ ಸುಳ್ಳು ವರದಿ ನೀಡಲಾಗಿದೆ ಹಾಗೂ ಕೆರೆ ತುಂಬಿಸುವ ಯೋಜನೆಗಾಗಿ ಅಳವಡಿಸುತ್ತಿರುವ ಪೈಪ್​ಪೈನ್ ಅಳತೆ ಅವೈಜ್ಞಾನಿಕವಾಗಿದೆ ಎಂದು ಆರೋಪಿಸಿದ ತಾಲೂಕು ರೈತ ಸಂಘ ಹಾಗೂ ಸ್ಥಳೀಯ ರೈತರು ಕಾಮಗಾರಿಗೆ ತಡೆಯೊಡ್ಡಿದ್ದಾರೆ. ಕೆರೆಯ ಒಟ್ಟು ವಿಸ್ತೀರ್ಣ 270 ಎಕರೆ. ಇಷ್ಟೊಂದು ದೊಡ್ಡ ಕ್ಷೇತ್ರ ತುಂಬುವಷ್ಟು ನೀರು ಹರಿಸಲು ಬೇಕಾಗುವಂತಹ ಅಳತೆಯ ಪೈಪ್ ಅಳವಡಿಸಿಲ್ಲ. ಈಗ ಅಳವಡಿಸಿರುವ ಪೈಪ್​ಗಳಿಂದ ಕೆರೆ ತುಂಬುವುದು ಸಾಧ್ಯವಿಲ್ಲ. ಹೀಗಾಗಿ, ವಾಸ್ತವಿಕ ಸಾಮರ್ಥ್ಯಕ್ಕೆ ಅನುಗುಣವಾಗಿ ಪೈಪ್ ಹಾಗೂ ಪಂಪ್​ಗಳ ಡಿಸೈನ್ ಮಾಡಿ ಅಳವಡಿಸಬೇಕು ಎಂಬ ಬೇಡಿಕೆ ಮುಂದಿಟ್ಟು ರೈತರು ಹೋರಾಟ ಮುಂದುವರಿಸಿದ್ದಾರೆ.

    ಈ ಕುರಿತು ಹಲವಾರು ಬಾರಿ ಸಂಬಂಧಪಟ್ಟ ಇಲಾಖೆಗೆ ಮನವಿ ಸಲ್ಲಿಸಿದರೂ, ಈವರೆಗೆ ಪ್ರಯೋಜನವಾಗಿಲ್ಲ. ಕೆರೆಯ ಸರ್ವೆ ಕಾರ್ಯ, ಪೈಪ್​ಲೈನ್ ಅಳವಡಿಕೆ ಹಾಗೂ ಪೈಪ್ ಅಳತೆ ಹೆಚ್ಚಳ ಕುರಿತು ಶಿಗ್ಗಾಂವಿ-ಸವಣೂರ ಏತ ನೀರಾವರಿ ವಿಭಾಗದ ಕರ್ನಾಟಕ ನೀರಾವರಿ ನಿಗಮ ನಿಯಮಿತ ಕಾರ್ಯನಿರ್ವಾಹಕ ಇಂಜಿನಿಯರ್ ಅವರು ಕಾಮಗಾರಿ ಗುತ್ತಿಗೆ ಪಡೆದ ಖಾಸಗಿ ಕಂಪನಿಗೆ ಮೌಖಿಕವಾಗಿ ತಿಳಿಸಿದ್ದಾರೆ ಎನ್ನಲಾಗಿದೆ. ಇನ್ನೊಂದೆಡೆ, ಏತ ನೀರಾವರಿ ವಿಭಾಗದ ಅವೈಜ್ಞಾನಿಕ ಕ್ರಮಕ್ಕೆ ರೈತರು ವಿರೋಧಿಸುತ್ತಿರುವ ಹಿನ್ನೆಲೆಯಲ್ಲಿ ಕಲಿವಾಳ ಗ್ರಾಮದ ಕೆರೆ ತುಂಬಿಸುವ ಯೋಜನೆ ಕೈಬಿಡಲಾಗಿದೆ ಎಂಬ ಮಾತುಗಳೂ ಕೇಳಿಬರುತ್ತಿವೆ.

    ಕಲಿವಾಳ ಕೆರೆಗೆ ನೀರು ಪೂರೈಸಲು ಅಳವಡಿಸುತ್ತಿರುವ ಪೈಪ್​ಲೈನ್ ಕುರಿತು ಸಂಬಂಧಪಟ್ಟ ಸಚಿವರು ಹಾಗೂ ಇಲಾಖೆಯ ಉನ್ನತ ಅಧಿಕಾರಿಗಳು ಪರಿಶೀಲನೆ ಕೈಗೊಂಡು ಕಾಮಗಾರಿ ಮುಕ್ತಾಯಗೊಳಿಸಿ, ಅನುಕೂಲ ಕಲ್ಪಿಸಬೇಕು ಎಂಬುದು ರೈತರ ಆಗ್ರಹವಾಗಿದೆ.

    ಕೆರೆಗೆ ನೀರು ತುಂಬಿಸುವ ಯೋಜನೆಯ ಪೈಪ್ ಅಳವಡಿಕೆಯಲ್ಲಿ ನಡೆದಿರುವ ಅಕ್ರಮ ಪತ್ತೆ ಮಾಡಿ ಸೂಕ್ತ ಕಾಮಗಾರಿಗೆ ಆದೇಶಿಸಬೇಕು. ಸರ್ವೆ ಕಾರ್ಯ ಕೈಗೊಂಡು ಕೆರೆ ಪಹಣಿಯಲ್ಲಿ ಇರುವ ರೈತರ ಹೆಸರು ಕಡಿಮೆಗೊಳಿಸುವ ಮೂಲಕ ರೈತರ ಬೇಡಿಕೆ ಈಡೇರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು.
    | ನೀಲಪ್ಪ ಹರಿಜನ ಅಖಂಡ ಕರ್ನಾಟಕ ರೈತ ಸಂಘದ ತಾಲೂಕು ಅಧ್ಯಕ್ಷ


    ಕೆರೆಯ ವಿಸ್ತೀರ್ಣ ಹಾಗೂ ಆಳ ಮಹತ್ವಕ್ಕೆ ಬರುವುದಿಲ್ಲ. ಏತ ನೀರಾವರಿ ಯೋಜನೆಯಡಿ ಕೆರೆ ತುಂಬಿಸುವ ಯೋಜನೆಯ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಸವಣೂರ ತಾಲೂಕಿನ ಕಲಿವಾಳ ಗ್ರಾಮದ ಕೆರೆ ತುಂಬಿಸಲು ಅಳವಡಿಸಿರುವ ಪೈಪ್​ಗಳನ್ನು ಬದಲಿಸಲು ಸೂಚಿಸಲಾಗಿದೆ. ಸ್ಥಳ ಪರಿಶೀಲನೆ ಕೈಗೊಂಡು ಮುಂದಿನ ನಿರ್ಣಯ ಕೈಗೊಳ್ಳಲಾಗುವುದು.
    | ಶ್ರೀಧರ ಕುಲಕರ್ಣಿ ಕಾರ್ಯನಿರ್ವಾಹಕ ಇಂಜಿನಿಯರ್, ಶಿಗ್ಗಾಂವಿ-ಸವಣೂರ ಏತ ನೀರಾವರಿ ವಿಭಾಗ ಧಾರವಾಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts