More

    ಪೇಪರ್ ಮಿಲ್​ಗೆ ಗೋದಾಮು ಬಾಡಿಗೆ ನೀಡಲು ವಿರೋಧ

    ಹಳಿಯಾಳ: ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿನ ಗೋದಾಮುಗಳನ್ನು ದಾಂಡೇಲಿಯ ವೆಸ್ಟ್ ಕೋಸ್ಟ್ ಪೇಪರ್ ಮಿಲ್​ಗೆ ಮೂರು ತಿಂಗಳ ಅವಧಿಗೆ ಬಾಡಿಗೆ (ಲಿವ್ ಆಂಡ್ ಲೈಸನ್ಸ್)ಗೆ ನೀಡಿದ್ದಕ್ಕೆ ಮಾರುಕಟ್ಟೆ ಸಮಿತಿಯ ಬಿಜೆಪಿ ಬೆಂಬಲಿತ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

    ಹಳಿಯಾಳದ ಎಪಿಎಂಸಿ ಮಾರುಕಟ್ಟೆಯಲ್ಲಿನ ಪ್ರಾಂಗಣದಲ್ಲಿ 11 ಚಿಕ್ಕ ಗೋದಾಮುಗಳಿದ್ದು, ಅವುಗಳನ್ನು ಲೈಸನ್ಸ್ ಹೊಂದಿರುವವರಿಗೆ ನೀಡಲಾಗಿದೆ. 1000 ಮೆಟ್ರಿಕ್ ಟನ್ ಸಾಮರ್ಥ್ಯವುಳ್ಳ ಎರಡು ಗೋದಾಮುಗಳಿದ್ದು, ಅದರಲ್ಲಿ ಒಂದು ಗೋದಾಮನ್ನು ಆಹಾರ ನಿಗಮಕ್ಕೆ ನೀಡಲಾಗಿದೆ. ಈಗ ಖಾಲಿಯಿರುವ 1000 ಮೆಟ್ರಿಕ್ ಸಾಮರ್ಥ್ಯದ ಗೋದಾಮನ್ನು ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಗೆ ತಿಂಗಳಿಗೆ 60 ಸಾವಿರ ರೂ.ಗಳಂತೆ ಬಾಡಿಗೆ ನೀಡಲು ಮುಂದಾಗಿದೆ.

    ಸಮಿತಿಯಲ್ಲಿ ಪ್ರತಿಪಕ್ಷದ ಸ್ಥಾನದಲ್ಲಿರುವ ಬಿಜೆಪಿ ಬೆಂಬಲಿತ ಸದಸ್ಯರಾದ ಸೋನಪ್ಪ ಸುಣಕಾರ, ಗೀತಾ ಮೋರೆ, ನಬಿಸಾಬ ಕಪಟಗೇರಿ, ಟೋಪಣ್ಣಾ ಕಮ್ಮಾರ, ಸಂಗೀತಾ ಜಾವಳೇಕರ, ಜೈರಾಮ ಕಳ್ಳಿಮನಿ, ಯಲ್ಲಾರಿ ಹಟ್ಟಿಕರ ಅವರು ಆಕ್ಷೇಪಣಾ ಪತ್ರವನ್ನು ಎಪಿಎಂಸಿ ಕಾರ್ಯದರ್ಶಿಗೆ ಸಲ್ಲಿಸಿದ್ದಾರೆ.

    ಇದರಲ್ಲಿ ಜುಲೈ 8ರಂದು ಸಮಿತಿಯ ಸಭೆ ನಡೆದರೂ ಕಾಗದ ಕಾರ್ಖಾನೆಗೆ ಗೋದಾಮುಗಳನ್ನು ಬಾಡಿಗೆಗೆ ನೀಡುವ ವಿಷಯವನ್ನು ಪ್ರತಿಪಕ್ಷದಲ್ಲಿದ್ದ ನಮ್ಮ ಗಮನಕ್ಕೆ ತರದೇ ನಮ್ಮ ಅಭಿಪ್ರಾಯ ಕೇಳದೆ ಪೇಪರ್ ಮಿಲ್​ನವರಿಗೆ ನೀಡಲು ಮುಂದಾಗಿರುವುದಕ್ಕೆ ತಮ್ಮ ಆಕ್ಷೇಪಣೆ ಇದೆ ಎಂದು ತಿಳಿಸಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿರುವ ಸೋನಪ್ಪ ಸುಣಕಾರ, ಈ ಹಿಂದೆ ಎಪಿಎಂಸಿ ವ್ಯಾಪ್ತಿಯಲ್ಲಿ ಟಿಂಬರ್ ವ್ಯವಹಾರ ಬರುತ್ತಿದ್ದಾಗ ಕಾಗದ ಕಾರ್ಖಾನೆಯವರು ಎಪಿಎಂಸಿಯಿಂದ ಲೈಸನ್ಸ್ ಪಡೆದಿದ್ದರು. ಆದರೆ, ಈಗ ಟಿಂಬರ್ ವ್ಯವಹಾರವನ್ನು ಎಪಿಎಂಸಿ ವ್ಯಾಪ್ತಿಯಿಂದ ತೆಗೆಯಲಾಗಿದೆ. ಇದರರ್ಥ ಕಾಗದ ಕಾರ್ಖಾನೆಯವರ ಬಳಿಯಿದ್ದ ಲೈಸನ್ಸ್​ಗೆ ಮಾನ್ಯತೆಯಿಲ್ಲ ಎಂದಾಗಿದೆ. ಹೀಗಿರುವಾಗಲೂ ಕಾಗದ ಕಾರ್ಖಾನೆಯವರಿಗೆ ಗೋದಾಮು ನೀಡುವ ಕ್ರಮ ಸರಿಯಲ್ಲ ಎಂದಿದ್ದಾರೆ. ಆದರೆ, ಪ್ರತಿಪಕ್ಷದ ವಾದವನ್ನು ತಳ್ಳಿಹಾಕಿರುವ ಎಪಿಎಂಸಿ ಕಾರ್ಯದರ್ಶಿ ಸುಮಿತ್ರಾ ಹಾವಣ್ಣನವರ, ಟಿಂಬರ್ ವ್ಯವಹಾರವಿದ್ದಾಗ ಕಾರ್ಖಾನೆಯವರು ಎಪಿಎಂಸಿಯಿಂದ ಲೈಸನ್ಸ್ ಪಡೆದಿದ್ದರು. ಗೋದಾಮುಗಳು ಖಾಲಿಯಿದ್ದದ್ದನ್ನು ನೋಡಿಯೇ ಕಾರ್ಖಾನೆಯವರಿಗೆ ನೀಡಲು ಸಭೆಯಲ್ಲಿ ತೀರ್ವನಿಸಲಾಗಿದೆ ಎಂದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts