More

    ಪೇಚಿಗೆ ಸಿಲುಕಿದ್ದಾರೆ ಬಾಣಂತಿಯರು!

    ಶಿರಸಿ: ಕಳೆದ ನಾಲ್ಕು ತಿಂಗಳುಗಳಿಂದ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಸರ್ಕಾರಿ ಆಸ್ಪತ್ರೆಗಳಲ್ಲಿ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗಳು ನಡೆದಿಲ್ಲ. ಹೀಗಾಗಿ, ಒಂದು ಸಾವಿರಕ್ಕೂ ಅಧಿಕ ಬಾಣಂತಿಯರು ಪೇಚಿಗೆ ಸಿಲುಕಿದ್ದಾರೆ. ಸರ್ಕಾರಿ ವ್ಯವಸ್ಥೆಯ ವಿಳಂಬ ನೀತಿಯಿಂದ ಮಹಿಳೆಯರಲ್ಲಿ ಗರ್ಭಪಾತ ಪ್ರಮಾಣ ಹೆಚ್ಚುವ ಆತಂಕ ಕೂಡ ಎದುರಾಗಿದೆ.

    ಕಳೆದ ಕೆಲ ವರ್ಷಗಳಿಂದೀಚೆಗೆ ಎರಡು ಮಕ್ಕಳಾದ ನಂತರ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವುದು ಮಾಮೂಲಾಗಿದೆ. ಆದರೆ, ಪ್ರಸ್ತುತ ಜಿಲ್ಲೆಯಲ್ಲಿ ಕುಟುಂಬ ಕಲ್ಯಾಣ ಇಲಾಖೆ ಆಯೋಜಿಸುವ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಶಿಬಿರಗಳು ಸ್ಥಗಿತಗೊಂಡಿವೆ. ಕರೊನಾ ಕಾರಣಕ್ಕೆ ಮಾರ್ಚ್ ತಿಂಗಳಿನಿಂದ ಈವರೆಗೆ ಯಾವೊಂದೂ ಶಸ್ತ್ರಚಿಕಿತ್ಸೆ ನಡೆದಿಲ್ಲ.

    ಮಾಸಿಕ ಶಿಬಿರ ಸ್ಥಗಿತ: ಜಿಲ್ಲೆಯ ಎಲ್ಲ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ತಿಂಗಳಿಗೆ ಒಂದು ಕ್ಯಾಂಪ್ ನಡೆಸಿ ಅಂದಾಜು 25ರಷ್ಟು ಬಾಣಂತಿಯರಿಗೆ ಆಯಾ ತಾಲೂಕಿನ ನುರಿತ ವೈದ್ಯರು ಶಸ್ತ್ರಚಿಕಿತ್ಸೆ ಮಾಡುತ್ತಿದ್ದರು. ಆದರೆ, ಈ ಬಾರಿ ಕೋವಿಡ್- 19 ಕಾರಣದಿಂದಾಗಿ ವೈದ್ಯರು ಶಸ್ತ್ರಚಿಕಿತ್ಸೆ ಮಾಡಲು ಹಿಂಜರಿಯುತ್ತಿರುವುದರಿಂದ ಶಿಬಿರ ಆಯೋಜನೆಗೊಂಡಿಲ್ಲ. ಇದರಿಂದ ಪ್ರತಿ ತಾಲೂಕಿನಲ್ಲಿ 80 ರಿಂದ 100 ಬಾಣಂತಿಯರು ಪೇಚಿಗೆ ಸಿಲುಕಿದ್ದಾರೆ. ಸರ್ಕಾರ 10 ಜನರಿಗಷ್ಟೇ ಶಿಬಿರ ಆಯೋಜಿಸಿ ಶಸ್ತ್ರಚಿಕಿತ್ಸೆ ಮಾಡಬಹುದು ಎಂದು ಸೂಚಿಸಿದೆ. ಆದರೂ ಜಿಲ್ಲೆಯಲ್ಲಿ ಇದಕ್ಕೆ ಆಸ್ಪದವಿಲ್ಲವಾಗಿದೆ. ಉಚಿತವಾಗಿ ನಡೆಯುವ ಶಸ್ತ್ರಚಿಕಿತ್ಸೆಗಾಗಿ ಕಳೆದ ಮಾರ್ಚ್​ನಿಂದ ಹಲವರು ಕಾಯುತ್ತಿದ್ದಾರೆ. ಇಲಾಖೆ ಮಾತ್ರ ಅನಗತ್ಯವಾಗಿ ದಿನ ದೂಡುತ್ತಿದೆ.

    ಸರ್ಕಾರಿ ವ್ಯವಸ್ಥೆಯತ್ತ ಚಿತ್ತ: ಬಹುತೇಕರು ಹೆರಿಗೆಯಾಗಿ 4-5 ತಿಂಗಳಿನಿಂದ ಶಸ್ತ್ರಚಿಕಿತ್ಸೆಗಾಗಿ ಕಾಯುತ್ತಿದ್ದಾರೆ. ಈಗಾಗಲೇ ಎರಡು ಅಥವಾ ಮೂರು ಮಕ್ಕಳನ್ನು ಹೆತ್ತವರು ಇನ್ನು ಮಕ್ಕಳು ಸಾಕೆಂದು ತೀರ್ವನಿಸಿದವರೂ ಇದ್ದಾರೆ. ಒಂದು ವೇಳೆ ಮತ್ತೆ ಗರ್ಭೀಣಿಯಾದರೆ ಅದು ಗರ್ಭಪಾತಕ್ಕೆ ದಾರಿಯಾಗಬಹುದು ಎಂಬುದು ತಜ್ಞ ವೈದ್ಯರ ಅಭಿಪ್ರಾಯವಾಗಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ನಡೆಯುವ ಶಸ್ತ್ರಚಿಕಿತ್ಸೆಗೆ ಖಾಸಗಿ ಆಸ್ಪತ್ರೆಯಲ್ಲಾದರೆ 15-20 ಸಾವಿರ ರೂಪಾಯಿ ಖರ್ಚು ಮಾಡಬೇಕು. ಇದರಿಂದ ಬಡ ದಂಪತಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳದೇ ಸರ್ಕಾರಿ ವ್ಯವಸ್ಥೆಯತ್ತ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೂಡಲೇ ಈ ಕ್ಯಾಂಪ್ ನಡೆಸಬೇಕು ಎಂಬುದು ಬಾಣಂತಿಯರ ಒತ್ತಾಯವಾಗಿದೆ.

    ಶ್ರೀಮಂತರಾದರೆ ಖಾಸಗಿ ಆಸ್ಪತ್ರೆಗಳಲ್ಲಿ ಎಷ್ಟಾದರೂ ಹಣ ನೀಡಿ ಶಸ್ತ್ರಚಿಕಿತ್ಸೆ ಮಾಡಿಕೊಳ್ಳುತ್ತಾರೆ. ಆದರೆ, ಬಡವರಾದವರಿಗೆ ಸರ್ಕಾರಿ ಆಸ್ಪತ್ರೆ, ಸರ್ಕಾರಿ ವ್ಯವಸ್ಥೆಯೇ ಆಗಬೇಕು. ಹೀಗಾಗಿ, ತಕ್ಷಣ ಕುಟುಂಬ ಕಲ್ಯಾಣ ಶಸ್ತ್ರಚಿಕಿತ್ಸೆಗೆ ಆಡಳಿತ ವರ್ಗ ಅವಕಾಶ ಕಲ್ಪಿಸಬೇಕು. | ಸರೋಜಾ ನಾಯ್ಕ ಗೃಹಿಣಿ

    ಕರೊನಾ ಕಾರಣದಿಂದ ಜಿಲ್ಲೆಯಲ್ಲಿ ಸ್ಥಗಿತಗೊಂಡಿದ್ದ ಕುಟುಂಬ ಕಲ್ಯಾಣ ಶಸ್ತ್ರಚಿಕಿತ್ಸೆ ಶಿಬಿರವನ್ನು ಪ್ರತಿ ತಾಲೂಕಿನಲ್ಲಿ ಆರಂಭಿಸಿ ಶಸ್ತ್ರಚಿಕಿತ್ಸೆ ಮಾಡುವಂತೆ ಸಂಬಂಧಪಟ್ಟ ವೈದ್ಯರು ಹಾಗೂ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಆದರೆ, ಸರ್ಜನ್​ಗಳು ಇದಕ್ಕೆ ಒಪ್ಪಿಲ್ಲ. ಜುಲೈ ತಿಂಗಳಿನಿಂದ ಆರಂಭಿಸುವಂತೆ ಮತ್ತೊಮ್ಮೆ ಸೂಚನೆ ನೀಡಲಾಗುವುದು. | ಡಾ. ಶರದ ನಾಯಕ ಜಿಲ್ಲಾ ಆರೋಗ್ಯಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts