More

    ಪೆನ್ನು, ಪುಸ್ತಕ ಪಕ್ಕಕ್ಕಿಟ್ಟು ನಾಟಿ ಮಾಡಿದ ವಿದ್ಯಾರ್ಥಿಗಳು!


    ಮಡಿಕೇರಿ : ಶಾಲೆಯಲ್ಲಿ ಪೆನ್ನು, ಪುಸ್ತಕ ಹಿಡಿದು ಓದುತ್ತಿದ್ದ ಪುಟ್ಟ ಕೈಗಳು ನೋಡ ನೋಡುತ್ತಿದ್ದಂತೆಯೇ ನಾಟಿ ಕಾರ್ಯ ಮಾಡಿದವು.
    ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಕೂಡುಮಂಗಳೂರು ಗ್ರಾಮ ಪಂಚಾಯಿತಿ ಹಾಗೂ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ಇಕೋ ಕ್ಲಬ್ ವತಿಯಿಂದ ಕೂಡ್ಲೂರು ಗ್ರಾಮದ ಭತ್ತದ ಗದ್ದೆಯಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ನಾಟಿ ಮಾಡಿದರು. ಇದು ನೋಡುಗರ ಗಮನ ಸೆಳೆಯಿತು.


    ನಾಟಿ ಕಾರ್ಯದಲ್ಲಿ ಮಕ್ಕಳು ಉತ್ಸಾಹದಿಂದ ಪಾಲ್ಗೊಂಡಿದ್ದರು. ಶಾಲೆಯ ಬಳಿ ಕಾವೇರಿ ನದಿ ದಂಡೆಯ ಮೇಲೆ ಕೂಡ್ಲೂರು ಗ್ರಾಮದ ಕೆ.ಎಸ್.ರಾಜಾಚಾರಿ ಅವರು ಭತ್ತದ ನಾಟಿಗಾಗಿ ಸಿದ್ಧತೆ ಮಾಡಿಕೊಂಡು, ನಾಟಿ ಕಾರ್ಯದಲ್ಲಿ ತೊಡಗಿದ್ದರು. ಸಂಜೆ ಶಾಲಾ ಅವಧಿಯ ನಂತರ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ತಮ್ಮ ಶಿಕ್ಷಕರೊಂದಿಗೆ ಸಮವಸ್ತ್ರದಲ್ಲಿಯೇ ಬಂದು ನಾಟಿ ಕಾರ್ಯದಲ್ಲಿ ಪಾಲ್ಗೊಂಡರು.
    ವಿವಿಧ ಗುಂಪುಗಳನ್ನಾಗಿ ಮಾಡಿಕೊಂಡು ಸಸಿ ಮಡಿಗಳಿಗೆ ಇಳಿದ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್ ಹಾಗೂ ಮಕ್ಕಳು ಸಸಿಗಳನ್ನು ನೆಟ್ಟು ಮಂದಹಾಸ ಬೀರಿದರು.


    ಟಿ.ಜಿ.ಪ್ರೇಮ್‌ಕುಮಾರ್ ಮಾತನಾಡಿ, ಮಕ್ಕಳಿಗೆ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆ ಮುಖ್ಯ. ಈ ಭಾಗವಾಗಿ ಅವರಿಗೆ ಕೃಷಿಯ ಅನುಭವವನ್ನು ಒದಗಿಸಬೇಕು ಎಂಬ ಉದ್ದೇಶದಿಂದ ಗದ್ದೆಯಲ್ಲಿ ಭತ್ತದ ನಾಟಿ ಕಾರ್ಯದ ಯೋಜನೆ ರೂಪಿಸಿದ್ದು, ಮಕ್ಕಳೆಲ್ಲರೂ ಸ್ವ ಪ್ರೇರಣೆಯಿಂದ ಬಂದು ಕ್ರೀಯಾಶೀಲರಾಗಿ ಭಾಗವಹಿಸಿದ್ದಾರೆ ಎಂದು ತಿಳಿಸಿದರು.


    ನನಗೆ ಕೃಷಿ ವಿಜ್ಞಾನಿಯಾಗಬೇಕು ಎಂಬ ಆಸೆಯಿದೆ. ನಾವು ರೈತರ ಜತೆಗೂಡಿ ನಾಟಿ ಮಾಡಿದ್ದು ಉತ್ತಮ ಅನುಭವ ನೀಡಿದೆ ಎಂದು ಶಾಲಾ ವಿದ್ಯಾರ್ಥಿ ನಾಯಕಿ ಸಂಜನಾ ಹೇಳಿದಳು.


    ಎಲ್ಲರೂ ಸರ್ಕಾರಿ ಕೆಲಸಗಳಿಗೆ ಹೋದರೆ ಕೃಷಿ ಚಟುವಟಿಕೆ ನಡೆಯುವುದಾದರೂ ಹೇಗೆ? ನಾನು ರಜಾ ದಿನಗಳಲ್ಲಿ ಪಾಲಕರೊಂದಿಗೆ ನಮ್ಮ ಗದ್ದೆ ನಾಟಿ ನೋಡಲು ಹೋಗುತ್ತಿದ್ದೆ, ಇಂದು ನನ್ನ ಸ್ನೇಹಿತರೊಂದಿಗೆ ಗದ್ದೆಗಿಳಿದು ನಾಟಿ ಮಾಡಿದ್ದು ಬಹಳ ಖುಷಿ ನೀಡಿತು ಎಂದು ಸತೀಶ್ ಸಂಭ್ರಮ ಹಂಚಿಕೊಂಡನು.


    ಪ್ರಗತಿಪರ ರೈತ ಕೆ.ಎಸ್.ರಾಜಾಚಾರಿ ಮಾತನಾಡಿ, ನಾಟಿ ಕಾರ್ಯ ಹಮ್ಮಿಕೊಳ್ಳುವ ಮೂಲಕ ಮಕ್ಕಳಲ್ಲಿ ಕೃಷಿ ಚಟುವಟಿಕೆಗಳ ಅನುಭವ ನೀಡುತ್ತಿರುವುದು ಸಂತಸದ ಸಂಗತಿ ಎಂದರು.


    ಶಿಕ್ಷಕರಾದ ಕೆ.ಗೋಪಾಲಕೃಷ್ಣ, ದಯಾನಂದ ಪ್ರಕಾಶ್, ಬಿ.ಡಿ.ರಮ್ಯಾ, ಅನ್ಸಿಲಾ ರೇಖಾ, ವೈ.ಎಂ.ಸರಸ್ವತಿ ಮಕ್ಕಳಿಗೆ ಸಹಕಾರ ನೀಡಿದರು. ಗ್ರಾಮ ಪಂಚಾಯಿತಿ ಸದಸ್ಯೆ ಶಿವಮ್ಮ, ವಿಪತ್ತು ನಿರ್ವಹಣಾ ಶೌರ್ಯ ತಂಡದ ಪ್ರತಿನಿಧಿ ಕೆ.ಆರ್.ನಾಗರಾಜು, ಸತೀಶ್, ಗಣೇಶ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts