More

    ಪೂರ್ಣಗೊಳ್ಳದ ಪೂರ್ವಸಿದ್ಧತೆ

    ಶಿರಸಿ: ನಗರದೊಳಗಿನ ಮಳೆಗಾಲಪೂರ್ವ ಸ್ವಚ್ಛತಾ ಕಾರ್ಯ ವಿಳಂಬವಾಗುತ್ತಿರುವ ಕಾರಣ ಕಾಲುವೆಗಳಲ್ಲಿ ಕಳೆ ಬೆಳೆದು, ಹೂಳು, ತ್ಯಾಜ್ಯ ತುಂಬಿಕೊಂಡಿದ್ದು ದುರ್ನಾತ ಬೀರುತ್ತಿದೆ.
    ಸೊಳ್ಳೆ ಕಾಟ ಜೋರಾಗಿದ್ದು, ಕರೊನಾ ಸೋಂಕಿನಿಂದ ಆತಂಕಗೊಂಡಿರುವ ಸಾರ್ವಜನಿಕರಲ್ಲಿ ಈಗ ಇತರೆ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ. ಈಗಾಗಲೇ ಒಂದೆರಡು ಬಾರಿ ಮಳೆ ಬಂದು ಹೋಗಿದೆ. ಮುಂಗಾರು ಕೂಡ ಶೀಘ್ರದಲ್ಲಿ ಆರಂಭವಾಗಲಿದೆ. ಮಳೆಯಿಂದ ಸಂಭವಿಸಬಹುದಾದ ಅನಾಹುತಗಳನ್ನು ತಡೆಯಲು ಇಷ್ಟರಲ್ಲಿ ನಗರಸಭೆ ಸಿದ್ಧವಾಗಬೇಕಿತ್ತು.
    ಕೆಲ ಕಾರ್ವಿುಕರನ್ನು ಬಳಸಿಕೊಂಡು ಕೆಲವೆಡೆ ಮಾತ್ರ ಚರಂಡಿ ಹೂಳೆತ್ತುವ ಕಾರ್ಯವಾಗಿದೆ ಹೊರತು ಪ್ರಮುಖವಾದ ರಾಜಕಾಲುವೆ, ಮೋರಿಗಳ ಸ್ವಚ್ಛತೆ ಇನ್ನೂ ಆಗಬೇಕಿದೆ. ಮಳೆಗಾಲಪೂರ್ವ ಕಾಮಗಾರಿ ನಡೆಯದ ಕಾರಣ ಈ ಚರಂಡಿಗಳ ಸುತ್ತ ವಾಸಿಸುತ್ತಿರುವವರಿಗೆ ನಿತ್ಯ ನರಕವಾಗಿದೆ.
    ಬಹುತೇಕ ಬಡಾವಣೆಗಳ ಕಾಲುವೆಗಳಲ್ಲಿ ಈ ಸಮಸ್ಯೆ ಇದೆ. ಸೊಳ್ಳೆ ಕಾಟ ಎಷ್ಟು ಜೋರಿದೆ ಎಂದರೆ ಬ್ಯಾಟು, ಬತ್ತಿ, ಕಾಯಿಲ್​ಗಳೂ ಪ್ರಯೋಜನಕ್ಕೆ ಬಾರದಂತಾಗಿವೆ. ಮುಂಗಾರು ಪ್ರವೇಶಕ್ಕೂ ಮುನ್ನವೇ ಕಾಮಗಾರಿ ನಡೆದರೆ ಅನಾಹುತ ತಪ್ಪಿಸಬಹುದು. ನಗರಸಭೆಗೆ ನಮ್ಮ ಗೋಳು ಕೇಳಿದಂತಿಲ್ಲ. ಕಾಲುವೆಗಳ ಸ್ವಚ್ಛತೆ ಬಗ್ಗೆ ಗಮನ ಹರಿಸಿಲ್ಲ. ಪ್ರತಿ ವರ್ಷ ಇದೇ ಗೋಳು ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
    ಕೊಳಚೆ ಕಾಲುವೆಗಳು: ನಗರದ ಹಲವು ಚರಂಡಿಗಳಲ್ಲಿ ಹೂಳು, ಕಟ್ಟಡ ಅವಶೇಷ, ತ್ಯಾಜ್ಯ ತುಂಬಿಕೊಂಡಿವೆ. ಗಿಡಗಳು ಬೆಳೆದು ಮಳೆಯ ನೀರು ಸರಾಗವಾಗಿ ಹರಿದು ಹೋಗಲು ಜಾಗವೂ ಇಲ್ಲದಂತೆ ಮುಚ್ಚಿ ಹೋಗಿವೆ. ಸುತ್ತಮುತ್ತಲಿನ ನಿವಾಸಿಗಳು, ವಾಣಿಜ್ಯ ಮಳಿಗೆ, ಅಂಗಡಿಯವರು ತ್ಯಾಜ್ಯ, ಮದ್ಯದ ಪೌಚ್-ಬಾಟಲಿ, ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್​ಗಳನ್ನು ಎಸೆಯುತ್ತಿದ್ದಾರೆ.
    ಇನ್ನೊಂದೆಡೆ ಮಾಂಸದ ಅಂಗಡಿಗಳ ತ್ಯಾಜ್ಯವನ್ನು ರಾತ್ರಿ ವೇಳೆ ತಂದು ಹಾಕುತ್ತಿದ್ದಾರೆ. ಇದು ಹಲವಾರು ಸಮಸ್ಯೆಗಳನ್ನು ಸೃಷ್ಟಿಸಿದೆ. ಸೊಳ್ಳೆಗಳ ಉತ್ಪತ್ತಿ ತಾಣವಾಗಿದೆ. ವಿವಿಧ ಬಗೆಯ ರೋಗ-ರುಜಿನಗಳ ಉಗಮ ಸ್ಥಾನವಾಗಿದೆ. ಮಳೆ ನೀರಷ್ಟೇ ಹರಿಯಬೇಕಿದ್ದ ಕಾಲುವೆಗಳಿಗೆ ನಗರದ ಹಲವು ಬಡಾವಣೆಗಳ ಒಳಚರಂಡಿ ನೀರು ಬಂದು ಸೇರುತ್ತಿದೆ. ಹೀಗಾಗಿ, ಕೆಲ ರಾಜಕಾಲುವೆಗಳು ಕೊಳಚೆ ಕಾಲುವೆಗಳಾಗಿವೆ.
    ತಗ್ಗು ಪ್ರದೇಶ ಜಲಾವೃತ: ಇಲ್ಲಿನ ಮರಾಠಿಕೊಪ್ಪ, ಲಯನ್ಸ್​ನಗರ, ಬಸವೇಶ್ವರ ನಗರ, ಕರಿಗುಂಡಿ ರಸ್ತೆ ಭಾಗದಲ್ಲಿ ಹಾದು ಹೋಗುವ ಬೃಹತ್ ಕಾಲುವೆಗಳು ಸಂಪೂರ್ಣ ಕೊಳಚೆಯಿಂದ ಕಟ್ಟಿವೆ. ಕಾಲುವೆಗಳಲ್ಲಿ ಸರಿಯಾಗಿ ನೀರು ಹರಿಯದ ಕಾರಣ ಈ ಭಾಗದ ತಗ್ಗು ಪ್ರದೇಶದ ಮನೆಗಳು ಸಣ್ಣ ಮಳೆಗೂ ಜಲಾವೃತಗೊಳ್ಳುತ್ತವೆ. ಈ ಸಮಸ್ಯೆ ಹಲವು ವರ್ಷಗಳಿಂದ ಜೀವಂತವಾಗಿದೆ. ಶಾಶ್ವತ ಪರಿಹಾರ ಕಾಣದೆ ಜನರು ಹೈರಾಣಾಗಿದ್ದಾರೆ. ಮಳೆಗಾಲ ಆರಂಭವಾಗುತ್ತಿದ್ದಂತೆ ತಗ್ಗು ಪ್ರದೇಶದ ಜನರು ಪ್ರಾಣ ಭಯದಲ್ಲೇ ಕಾಲ ಕಳೆಯುತ್ತಿದ್ದಾರೆ.

    ಪ್ರತೀ ವರ್ಷ ಮಳೆಗಾಲ ಆರಂಭವಾದರೂ ಮಳೆಗಾಲಪೂರ್ವ ಕೈಗೊಳ್ಳಬೇಕಿದ್ದ ಕಾಮಗಾರಿಗಳನ್ನು ಪೂರ್ಣ ಮಾಡುತ್ತಿಲ್ಲ. ಇದರಿಂದ ಚರಂಡಿಗಳು ಗಬ್ಬು ನಾರುವ ಜತೆ ಸಾಂಕ್ರಾಮಿಕ ರೋಗಕ್ಕೂ ಮೂಲವಾಗುತ್ತಿವೆ. ತಕ್ಷಣ ನಗರಾಡಳಿತ ಈ ಬಗ್ಗೆ ಕ್ರಮವಹಿಸಬೇಕು.
    | ಸುರೇಶ ನಾಯ್ಕ
    ನಗರ ನಿವಾಸಿ

    ಸದ್ಯ ಕರೊನಾ ಇರುವ ಕಾರಣಕ್ಕೆ ಹೊರ ಗುತ್ತಿಗೆ ಕಾರ್ವಿುರನ್ನು ತೆಗೆದುಕೊಂಡಿಲ್ಲ. ಕೇವಲ ನಗರಸಭೆ ಕಾರ್ವಿುಕರನ್ನೇ ಬಳಸಿಕೊಂಡು ತುರ್ತು ಕಾಮಗಾರಿ ಮಾಡಲಾಗುತ್ತಿದೆ. ಪ್ರಸ್ತುತ ಮಳೆಗಾಲಪೂರ್ವ ಕಾಮಗಾರಿ ಕೈಗೊಳ್ಳಲು ಗುತ್ತಿಗೆ ಕರೆಯಲಾಗುತ್ತಿದ್ದು, ಮೂರ್ನಾಲ್ಕು ದಿನಗಳಲ್ಲಿ ಈ ಪ್ರಕ್ರಿಯೆ ಅಂತಿಮವಾಗಲಿದೆ. ನಂತರ ತ್ವರಿತವಾಗಿ ಕೆಲಸ ಮಾಡಲಾಗುವುದು.
    | ರಮೇಶ ನಾಯಕ
    ಪೌರಾಯುಕ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts