More

    ಪುಗಸಟ್ಟೆ ಬಾರ್​ಗಳ ದರ್ಬಾರ್!

    ವಿಜಯವಾಣಿ ವಿಶೇಷ ರಾಣೆಬೆನ್ನೂರ

    ನಗರದ ಹೊರವಲಯದಲ್ಲಿರುವ ಲೇಔಟ್​ಗಳನ್ನು ಎಣ್ಣೆ ಹೊಡೆಯುವ ಪಡ್ಡೆ ಹುಡುಗರು ಅಡ್ಡೆಗಳನ್ನಾಗಿ ಮಾಡಿಕೊಂಡಿದ್ದಾರೆ. ಖಾಲಿ ಬಿದ್ದಿರುವ ಈ ಲೇಔಟ್​ಗಳು ಈಗ ಮದ್ಯದ ಕಿಕ್ಕೇರಿಸುವ ತಾಣಗಳಾಗಿವೆ.

    ನಗರದ ಹೊರವಲಯದ ಹಲಗೇರಿ ರಸ್ತೆ, ಎರೇಕುಪ್ಪಿ ರಸ್ತೆ, ಶ್ರೀರಾಮ ನಗರ ಮೊದಲಾದೆಡೆಗಳಲ್ಲಿ ಹೊಸ ಲೇಔಟ್​ಗಳನ್ನು ನಿರ್ವಿುಸಲಾಗಿದೆ. ಇಲ್ಲಿ ಮನೆಗಳು ನಿರ್ವಣವಾಗದ ಕಾರಣ ಖಾಲಿ ಬಿದ್ದಿವೆ. ಹೀಗಾಗಿ, ನಿತ್ಯವೂ ಮದ್ಯ ಪ್ರಿಯರು ಇವುಗಳನ್ನೇ ಬಾರ್​ಗಳನ್ನಾಗಿ ಮಾಡಿಕೊಳ್ಳುತ್ತಿದ್ದಾರೆ. ಪ್ರತಿಯೊಂದು ಲೇಔಟ್​ನ ತಿರುವಿನ ಕಟ್ಟೆ ಬಳಿ ಮೇಲೆ ಬೈಕ್, ಕಾರು ನಿಲ್ಲಿಸಿ ಮದ್ಯ ಸೇವಿಸುತ್ತಿದ್ದಾರೆ.

    ಬೇಸಿಗೆಯಲ್ಲಿ ಹೌಸ್​ಫುಲ್: ದಿನದಿಂದ ದಿನಕ್ಕೆ ಬೇಸಿಗೆಯ ಬಿಸಿಲು ಹೆಚ್ಚುತ್ತಲೇ ಇದೆ. ಬಿಸಿಲಿನ ಝುಳಕ್ಕೆ ಬಾರ್​ನಲ್ಲಿ ಕುಳಿತು ಮದ್ಯ ಸೇವಿಸಲು ಹಲವರಿಗೆ ತೊಂದರೆಯಾಗುತ್ತಿದೆ. ಹೀಗಾಗಿ. ಕತ್ತಲಾಗುತ್ತಿದ್ದಂತೆ ಮದ್ಯದ ಬಾಟಲ್​ಗಳನ್ನು ಪಾರ್ಸಲ್ ತೆಗೆದುಕೊಂಡು ಲೇಔಟ್​ಗಳತ್ತ ಮುಖ ಮಾಡುತ್ತಿದ್ದಾರೆ. ಇದರಿಂದಾಗಿ ನಿತ್ಯವೂ ರಾತ್ರಿ ಲೇಔಟ್​ಗಳು ಹೌಸ್​ಫುಲ್ ಆಗುತ್ತಿವೆ. ಭಾನುವಾರವಂತೂ ಕುಳಿತುಕೊಳ್ಳಲು ಜಾಗ ಸಿಗುವುದು ಕಷ್ಟವಾಗುತ್ತಿದೆಯಂತೆ.

    ಕಾಲಿಟ್ಟರೆ ರಕ್ತ: ಖಾಲಿ ಲೇಔಟ್​ಗಳು ರಾತ್ರಿ ಮದ್ಯವ್ಯಸನಿಗಳಿಗೆ ಎಣ್ಣೆ ಹೊಡೆಯುವ ಅಡ್ಡೆಗಳಾದರೆ ಬೆಳಗಿನ ಜಾವ ಹಾಗೂ ಸಂಜೆ ಸಮಯ ವಾಯು ವಿಹಾರಿಗಳ ತಾಣವಾಗಿವೆ. ಆದರೆ, ಇತ್ತೀಚೆಗೆ ಎಣ್ಣೆ ಹೊಡೆದು ಬಾಟಲ್​ಗಳನ್ನು ಅಲ್ಲಿಯೇ ಬಿಸಾಕುವವರ ಸಂಖ್ಯೆ ಅಧಿಕವಾಗಿದೆ. ಕೆಲವರು ರಸ್ತೆ ನಡುವೆಯೇ ಬಾಟಲ್​ಗಳನ್ನು ಒಡೆದು ಹಾಕುತ್ತಿದ್ದಾರೆ. ಇದರಿಂದಾಗಿ ಲೇಔಟ್​ಗಳಲ್ಲಿ ಗಮನಹರಿಸದೆ ಓಡಾಡಿದರೆ ಕಾಲಿಗೆ ಬಾಟಲ್​ನ ಗಾಜು ಚುಚ್ಚಿ ರಕ್ತ ಸೋರಿಕೆಯಾಗುವ ಘಟನೆಗಳು ನಡೆಯುತ್ತಿವೆ. ಹೀಗಾಗಿ, ವಾಯು ವಿಹಾರಿಗಳು ಲೇಔಟ್​ಗಳ ಬಳಿ ಸುಳಿಯುವುದಕ್ಕೂ ಹೆದರುವ ಸ್ಥಿತಿ ನಿರ್ವಣವಾಗಿದೆ. ಆದರೆ, ಇದೇ ಮಾರ್ಗವಾಗಿ ಪೊಲೀಸರು, ಕಂದಾಯ, ನಗರಸಭೆ ಅಧಿಕಾರಿಗಳು ಸಂಚರಿಸುತ್ತಿದ್ದರೂ ಲೇಔಟ್​ಗಳಲ್ಲಿ ಎಣ್ಣೆ ಹೊಡೆಯುವವರ ವಿರುದ್ಧ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಕೂಡಲೆ ಸಂಬಂಧಪಟ್ಟ ಅಧಿಕಾರಿಗಳು ಲೇಔಟ್ ಮದ್ಯ ಸೇವಿಸುವವರಿಗೆ ಪಾಠ ಕಲಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

    ಇದ್ದಲ್ಲೇ ಸರ್ವಿಸ್: ಲೇಔಟ್​ಗಳಲ್ಲಿ ಮದ್ಯ ಸೇವಿಸಲು ಬರುವವರ ಸಂಖ್ಯೆ ಅಧಿಕವಾಗುತ್ತಿದ್ದಂತೆ ಕೆಲವರು ಅಕ್ರಮವಾಗಿ ಮದ್ಯವನ್ನು ಸಹ ಅಲ್ಲಿಯೇ ತಂದು ಕೊಡುತ್ತಿದ್ದಾರೆ. ಅದರೊಂದಿಗೆ ಸ್ನ್ಯಾಕ್ಸ್, ಸಾಫ್ಟ್ ಡ್ರಿಂಕ್ಸ್, ಊಟ, ಪಾನ್ ಮಸಾಲಾಗಳನ್ನು ಅಲ್ಲಿಯೇ ಮಾರಾಟ ಮಾಡುತ್ತಿದ್ದು, ಮದ್ಯ ಪ್ರಿಯರಿಗೆ ಇನ್ನಷ್ಟು ಅನುಕೂಲ ಮಾಡಿಕೊಡುತ್ತಿದ್ದಾರೆ.

    ಖಾಲಿ ಲೇಔಟ್​ಗಳಲ್ಲಿ ಅನಧಿಕೃತ ಚಟುವಟಿಕೆ ನಡೆಯದಂತೆ ನೋಡಿಕೊಳ್ಳಲು ಆಯಾ ಲೇಔಟ್​ಗಳ ಮಾಲೀಕರಿಗೆ ನೋಟಿಸ್ ಜಾರಿ ಮಾಡಲಾಗುವುದು. ಪೊಲೀಸ್ ಇಲಾಖೆ ಹಾಗೂ ನಾವು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುತ್ತೇವೆ. | ಡಾ. ಎನ್. ಮಹಾಂತೇಶ, ರಾಣೆಬೆನ್ನೂರ ನಗರಸಭೆ ಆಯುಕ್ತ

    ರಾಣೆಬೆನ್ನೂರ ನಗರದ ಹೊರವಲಯದಲ್ಲಿ ಉತ್ತಮ ಗಾಳಿ ದೊರೆಯುತ್ತದೆ ಎನ್ನುವ ಕಾರಣಕ್ಕೆ ವಾಯುವಿಹಾರಕ್ಕೆ ಬಂದರೆ ಇಲ್ಲಿ ಬಿದ್ದಿರುವ ಮದ್ಯದ ಬಾಟಲಿಗಳನ್ನು ನೋಡಿಯೇ ಓಡಾಡಲು ಹೆದರಿಕೆಯಾಗುತ್ತಿದೆ. ಇಂಥವರ ವಿರುದ್ಧ ಪೊಲೀಸ್ ಹಾಗೂ ನಗರಸಭೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. | ಸುರೇಶ ಜಿ., ಹಿರಿಯ ನಾಗರಿಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts