More

    ಪಿಯು ಪರೀಕ್ಷೆ ನಿರಾತಂಕ

    ಗದಗ: ಕೋವಿಡ್-19 ಭೀತಿಯಿಂದ ಕಳೆದ ಮಾರ್ಚ್​ನಲ್ಲಿ ಮುಂದೂಡಲಾಗಿದ್ದ ದ್ವಿತೀಯ ಪಿಯುಸಿ ಇಂಗ್ಲಿಷ್ ವಿಷಯದ ಪರೀಕ್ಷೆ ಗುರುವಾರ ನಡೆಯಿತು.

    ಮಹಾಮಾರಿ ಕರೊನಾ ಸೋಂಕು ಹರಡುವಿಕೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ, ಅತ್ಯಂತ ಸುರಕ್ಷಿತವಾಗಿ ಪರೀಕ್ಷೆ ನಡೆಸುವ ಉದ್ದೇಶದಿಂದ ಪರೀಕ್ಷಾ ಕೇಂದ್ರದ ಪ್ರತಿ ಕೊಠಡಿಗೂ ಸ್ಯಾನಿಟೈಸರ್ ಸಿಂಪಡಣೆ ಮಾಡಲಾಗಿತ್ತು. ಪರೀಕ್ಷಾರ್ಥಿಗಳು ಮಾಸ್ಕ್ ಧರಿಸಿ ಪರಸ್ಪರ ಅಂತರ ಕಾಪಾಡಿಕೊಳ್ಳುವ ಮೂಲಕ ಪರೀಕ್ಷೆ ಬರೆದರು. ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರು ಪರೀಕ್ಷಾ ಕೇಂದ್ರಗಳಾದ ನಗರದ ಮುನ್ಸಿಪಲ್ ಕಾಲೇಜ್, ಕೆಎಲ್​ಇ ಜೆಟಿ ಕಾಲೇಜ್, ಕೆವಿಎಸ್​ಆರ್ ಕಾಲೇಜ್​ಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

    ಗುಂಪುಗೂಡಿದ ವಿದ್ಯಾರ್ಥಿಗಳು : ವಿದ್ಯಾರ್ಥಿಗಳು ಏಕಕಾಲಕ್ಕೆ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ್ದರಿಂದ ಪರಸ್ಪರ ಅಂತರ ಮಾಯವಾಗಿತ್ತು. ಪರೀಕ್ಷೆಗೆ ತೆರಳುವ ಮುನ್ನ ಗೇಟ್​ನ ಹೊರಭಾಗದಲ್ಲಿ ಹಾಗೂ ಪರೀಕ್ಷೆ ಅವಧಿ ಪೂರ್ಣಗೊಂಡ ನಂತರ ವಿದ್ಯಾರ್ಥಿಗಳು ಗುಂಪುಗೂಡಿ ಮಾತನಾಡುತ್ತಿರುವುದು ಕಂಡುಬಂದಿತು. ಪರೀಕ್ಷೆ ನಂತರ ವಿದ್ಯಾರ್ಥಿಗಳು, ಪಾಲಕರು, ಸ್ನೇಹಿತರು ಎಲ್ಲರೂ ಒಟ್ಟಿಗೆ ಕೂಡಿದ್ದರಿಂದ ಅಂತರ ಇರಲಿಲ್ಲ. ಪೊಲೀಸರು ಅಂತರ ಕಾಪಾಡಿಕೊಳ್ಳಿ ಎಂದು ಮನವಿ ಮಾಡಿಕೊಂಡರೂ ಪ್ರಯೋಜನವಾಗಲಿಲ್ಲ.

    ಜಿಲ್ಲೆಯಲ್ಲಿ 19 ಪರೀಕ್ಷಾ ಕೇಂದ್ರ: ದ್ವಿತೀಯ ಪಿಯುಸಿ ಪರೀಕ್ಷೆಗೆ ಸಂಬಂಧಿಸಿದಂತೆ ಗದಗ-ಬೆಟಗೇರಿಯಲ್ಲಿ 8, ರೋಣ 2, ಗಜೇಂದ್ರಗಡ 2, ಲಕ್ಷೆ್ಮೕಶ್ವರ 1, ಶಿರಹಟ್ಟಿ 1, ನರಗುಂದ 2, ನರೇಗಲ್ 1, ಮುಂಡರಗಿ 2 ಸೇರಿ ಜಿಲ್ಲೆಯಲ್ಲಿ ಒಟ್ಟು 19 ಪರೀಕ್ಷಾ ಕೇಂದ್ರಗಳನ್ನು ಗುರುತಿಸಲಾಗಿತ್ತು. ಇಂಗ್ಲಿಷ್ ವಿಷಯಕ್ಕೆ 11,081 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ನೋಂದಣಿ ಮಾಡಿಕೊಂಡಿದ್ದರು. ಇದರಲ್ಲಿ ಹೊರ ಜಿಲ್ಲೆಯ 535 ಪರೀಕ್ಷಾರ್ಥಿಗಳೂ ಸೇರಿದ್ದಾರೆ. ಒಂದು ಕೊಠಡಿಯಲ್ಲಿ 24 ಆಸನ ವ್ಯವಸ್ಥೆ ಮಾಡಲಾಗಿತ್ತು.

    ಪರೀಕ್ಷಾ ಕೇಂದ್ರಕ್ಕೆ ಬಂದ ಪ್ರತಿ ಪರೀಕ್ಷಾರ್ಥಿಗೆ ಆರೋಗ್ಯ ಇಲಾಖೆಯಿಂದ ಥರ್ಮಲ್ ಸ್ಕ್ರೀನಿಂಗ್ ಮಾಡಿದ ಬಳಿಕವೇ ಪರೀಕ್ಷಾ ಕೇಂದ್ರದ ಒಳಗೆ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಗುತ್ತಿತ್ತು.

    ಕೋವಿಡ್-19 ಭೀತಿ ಮಧ್ಯೆ ನಡೆದ ದ್ವಿತೀಯ ಪಿಯುಸಿ ಇಂಗ್ಲಿಷ್ ವಿಷಯದ ಪರೀಕ್ಷೆ ಬರೆಯಲು ಆಗಮಿಸುವ ಪರೀಕ್ಷಾರ್ಥಿಗಳಿಗೆ ಒಂದು ಗಂಟೆ ಮುಂಚಿತವಾಗಿ ಪರೀಕ್ಷಾ ಕೇಂದ್ರಕ್ಕೆ ಆಗಮಿಸಬೇಕೆಂದು ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿತ್ತು. ಕೆಲವರು ಒಂದು ಗಂಟೆ ಮುಂಚೆ ಬಂದರೆ, ಮತ್ತೆ ಗ್ರಾಮೀಣ ಭಾಗದಿಂದ ಬಂದ ಕೆಲವರು ಬೆಳಗ್ಗೆ ಎಂಟು ಗಂಟೆಗೇ ಪರೀಕ್ಷಾ ಕೇಂದ್ರದ ಬಳಿ ಹಾಜರಿದ್ದರು.

    ನಗರದ ನಗರಸಭೆ ಸಂಯುಕ್ತ ಪದವಿಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ ಎನ್. ಹಾಗೂ ಜಿಪಂ ಸಿಇಒ ಡಾ. ಆನಂದ ಕೆ. ಸೇರಿ ಕೇಂದ್ರಕ್ಕೆ ಭೇಟಿ ನೀಡಿದ ಅಧಿಕಾರಿಗಳಿಗೂ ಇಲ್ಲಿನ ವೈದ್ಯಕೀಯ ಸಿಬ್ಬಂದಿ ಥರ್ಮಲ್ ಸ್ಕ್ರೀನಿಂಗ್ ತಪಾಸಣೆ ನಡೆಸಿದರು.

    ಮಾಸ್ಕ್ ವಿತರಣೆ: ಪರೀಕ್ಷೆ ಬರೆಯಲು ಆಗಮಿಸಿದ್ದ ವಿದ್ಯಾರ್ಥಿಗಳು ಮನೆಯಿಂದಲೇ ಮಾಸ್ಕ್ ಧರಿಸಿಕೊಂಡು ಬಂದಿದ್ದರು. ಆದರೆ, ಕೆಲವರು ಮುಖಕ್ಕೆ ಮಾಸ್ಕ್ ಬದಲಾಗಿ ಕರವಸ್ತ್ರ, ಕೆಲ ವಿದ್ಯಾರ್ಥಿನಿಯರು ಮಫ್ಲರ್ ಕಟ್ಟಿಕೊಂಡಿದ್ದರಿಂದ ಅವರಿಗೆ ಮಾಸ್ಕ್ ನೀಡಲಾಯಿತು.

    ಇಬ್ಬರಲ್ಲಿ ಉಷ್ಣಾಂಶ ಹೆಚ್ಚಳ: ದ್ವಿತೀಯ ಪಿಯುಸಿ ಇಂಗ್ಲಿಷ್ ವಿಷಯದ ಪರೀಕ್ಷೆಗೆ ಆಗಮಿಸಿದ್ದ ಪರೀಕ್ಷಾರ್ಥಿಗಳ ಪೈಕಿ ಗದಗ ನಗರದ ಕೆ.ಎಲ್.ಇ. ಸಂಸ್ಥೆಯ ಜೆ.ಟಿ. ಪಿಯು ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಇಬ್ಬರು ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಉಷ್ಣಾಂಶ ಕಂಡು ಬಂದ ಪರಿಣಾಮ ಅವರಿಗೆ ಪ್ರತ್ಯೇಕ ಕೊಠಡಿಯಲ್ಲಿ ಕೂರಿಸಿ ಪರೀಕ್ಷೆ ಬರೆಸಲಾಯಿತು. ಆದರೆ, ಇವರಲ್ಲಿ ಒಬ್ಬ ವಿದ್ಯಾರ್ಥಿ ತಪಾಸಣೆಗೂ ಮುನ್ನ ಮನೆಯಿಂದ ಓಡಿಕೊಂಡು ಕೇಂದ್ರಕ್ಕೆ ಬಂದಿದ್ದರಿಂದ ಹೆಚ್ಚು ಟೆಂಪರೇಚರ್ ತೋರಿಸಿದೆ. ಅರ್ಧ ಗಂಟೆ ಬಳಿಕ ಮತ್ತೆ ತಪಾಸಣೆ ಮಾಡಿದಾಗ ಉಷ್ಣಾಂಶ ಸಾಮಾನ್ಯ ಸ್ಥಿತಿಯಲ್ಲಿತ್ತು ಎಂದು ಆರೋಗ್ಯ ಸಿಬ್ಬಂದಿ ಹೇಳಿದರು.

    ದ್ವಿತೀಯ ಪಿಯುಸಿ ಇಂಗ್ಲಿಷ್ ವಿಷಯಕ್ಕೆ ಜಿಲ್ಲೆಯಲ್ಲಿ ಒಟ್ಟು 11,081 ವಿದ್ಯಾರ್ಥಿಗಳು ನೋಂದಣಿಯಾಗಿದ್ದು, ಇದರಲ್ಲಿ 10,415 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. 669 ವಿದ್ಯಾರ್ಥಿಗಳು ಗೈರಾಗಿದ್ದಾರೆ ಎಂದು ಪಪೂ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಚ್.ಎಸ್. ರಾಜೂರ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts