More

    ಪಾಸ್ ಸಿಕ್ಕಿದೆ.. ಮಾತನಾಡಲು ಮಗನೇ ಇಲ್ಲ

    ಆನಂದಪುರ: ಮಡದಿ, ಮಕ್ಕಳನ್ನು ಸುಖವಾಗಿ ಇಡುವ ಆಸೆ ಅವರದು. ಈ ಕಾರಣಕ್ಕಾಗಿಯೇ ಅವರು 12 ವರ್ಷಗಳಿಂದ ಆಂಧ್ರಪ್ರದೇಶದ ಬೇಕರಿಯಲ್ಲಿ ಕೆಲಸ ಮಾಡಿಕೊಂಡಿದ್ದಾರೆ. 13 ವರ್ಷದ ಮಗ ಸಾವು ಬದುಕಿನ ನಡುವೆ ಹೋರಾಡುತ್ತಿರುವ ವಿಷಯ ತಿಳಿದರೂ ಲಾಕ್​ಡೌನ್ ಕಾರಣ ಬಂದು ಅವನನ್ನು ನೋಡಲಾಗದ ಸ್ಥಿತಿ. ಕೊನೆಗೂ ಊರಿಗೆ ಬರಲು ಪಾಸ್ ಸಿಕ್ಕಿದೆ. ಆದರೆ ಮಗ ಇಲ್ಲ.

    ಇದು ಸಾಗರ ತಾಲೂಕು ಭೈರಾಪುರ ಗ್ರಾಮದ ಲೋಕಪ್ಪ ಅವರ ಕರುಣಾಜನಕ ಕತೆ.

    ಲೋಕಪ್ಪ ಅವರಿಗೆ ಇಬ್ಬರು ಹೆಣ್ಣುಮಕ್ಕಳು, ಒಬ್ಬ ಮಗ. ಜೀವನೋಪಾಯಕ್ಕಾಗಿ ಆಂಧ್ರಪ್ರದೇಶಕ್ಕೆ ತೆರಳಿದ್ದು, ಬೇಕರಿಯಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ಮೂರು ತಿಂಗಳ ಹಿಂದೆ ಊರಿಗೆ ಬಂದು ಹೋಗಿದ್ದರು.

    ಚಿಕ್ಕಂದಿನಿಂದಲೇ ಚರಣನಿಗೆ ಕಿಡ್ನಿ ಸಮಸ್ಯೆ. ಭೈರಾಪುರದಲ್ಲೇ ಏಳನೇ ತರಗತಿ ಓದುತ್ತಿರುವ ಅವನ ಆರೋಗ್ಯ ಈಚೆಗೆ ಬಿಗಡಾಯಿಸಿತ್ತು. ಬದುಕುವುದು ಕಷ್ಟ ಎನ್ನುವುದನ್ನು ತಿಳಿದ ಅವನಿಗೆ ತಂದೆಯನ್ನು ನೋಡುವ ಆಸೆ. ಮಗನ ಸ್ಥಿತಿ ಮತ್ತು ಅವನ ಆಸೆ ತಿಳಿದರೂ ಲಾಕ್​ಡೌನ್​ನಿಂದಾಗಿ ತಂದೆಗೆ ಆಂಧ್ರದಿಂದ ಬರಲು ಸಾಧ್ಯವಾಗಿರಲಿಲ್ಲ.

    ಆರೋಗ್ಯ ಸ್ಥಿತಿ ತುಂಬಾ ಗಂಭೀರವಾದ ಕಾರಣ ಚರಣನನ್ನು ಶಿವಮೊಗ್ಗದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ವೈದ್ಯರ ಸಲಹೆ ಮೇರೆಗೆ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆರು ದಿನ ಜೀವನ್ಮರಣದ ಹೋರಾಟ ನಡೆಸಿದ ಚರಣ ಮಂಗಳವಾರ ಕೊನೆಯುಸಿರೆಳೆದಿದ್ದಾನೆ. ಮಗನನ್ನು ಉಳಿಸಿಕೊಳ್ಳಬೇಕು ಎನ್ನುವ ತಂದೆಯ ಪ್ರಯತ್ನ ಫಲ ನೀಡಿಲ್ಲ. ಕೊನೆಯುಸಿರೆಳೆಯುವ ಮುನ್ನ ತಂದೆಯನ್ನು ನೋಡಬೇಕು ಎನ್ನುವ ಮಗನ ಆಸೆ ಈಡೇರಿಲ್ಲ. ಕೊನೆಗೂ ಆಂಧ್ರದಿಂದ ಊರಿಗೆ ಬರಲು ಈಗ ಪಾಸ್ ಸಿಕ್ಕಿದೆ. ಮಾತನಾಡಲು ಮಗನೇ ಇಲ್ಲ.

    ಕಣ್ಣೀರು ಹಾಕುತ್ತಿದ್ದ ಚರಣ: ಲೋಕಪ್ಪ ಫೆಬ್ರವರಿಯಲ್ಲಿ ಊರಿಗೆ ಬಂದು ಹೋಗಿದ್ದರು. ಮಾರ್ಚ್, ಏಪ್ರಿಲ್​ನಲ್ಲಿ ಮಗ ಚರಣನ ಆರೋಗ್ಯ ಸಮಸ್ಯೆ ಉಲ್ಬಣಿಸಿತು. ಕಳೆದ 15 ದಿನಗಳಲ್ಲಿ ಸ್ಥಿತಿ ಗಂಭೀರವಾಯಿತು. ತಂದೆಯನ್ನು ನೋಡಬೇಕು ಎಂದು ಚರಣ ಪದೇ ಪದೇ ಅಳುತ್ತಿದ್ದ. ತಂದೆಗೆ ವಿಷಯ ತಿಳಿಸಿದರೂ ಲಾಕ್​ಡೌನ್​ನಿಂದ ಪಾಸ್ ಸಿಗದೆ ಲೋಕಪ್ಪಗೆ ಊರಿಗೆ ಬರಲು ಸಾಧ್ಯವಾಗಿರಲಿಲ್ಲ.

    ಹಣ ಸಂಗ್ರಹ: ಚರಣನ ಆರೋಗ್ಯ ಸ್ಥಿತಿ ಗಂಭೀರವಾಗುತ್ತಿರುವುದನ್ನು ಮನಗಂಡು ಗ್ರಾಮದ ನಿವೃತ್ತ ಯೋಧ ಕಿಶೋರ ಹಾಗೂ ಧನರಾಜ್ ನೇತೃತ್ವದಲ್ಲಿ ಗ್ರಾಮಸ್ಥರು ಮನೆ ಮನೆಗೆ ತೆರಳಿ ಹಣ ಸಂಗ್ರಹ ಮಾಡಿದರು. ಆರ್ಥಿಕ ನೆರವಿಗಾಗಿ ಸಾಮಾಜಿಕ ಜಾಲದ ಮೊರೆ ಹೋದರು. ಸುಮಾರು ಒಂದು ಲಕ್ಷ ರೂ. ಹಣ ಸಂಗ್ರಹವಾಗಿದ್ದು, ವಾರದ ಹಿಂದೆ ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಿದ್ದರು. ಎರಡೂ ಕಿಡ್ನಿ ವಿಫಲವಾಗಿ ಲಿವರ್​ಗೆ ಸೋಂಕು ತಗುಲಿದ ಕಾರಣ ಅವನನ್ನು ಉಳಿಸಿಕೊಳ್ಳುವ ಪ್ರಯತ್ನ ಫಲ ನೀಡಲೇ ಇಲ್ಲ.

    ತಂದೆ ಬಂದ ನಂತರ ಅಂತ್ಯಕ್ರಿಯೆ: ತಂದೆಯನ್ನು ನೋಡುವ ಬಯಕೆ ಚರಣನದಾಗಿತ್ತು. ಆದರೆ ಅವನ ಆಸೆ ಈಡೇರಲಿಲ್ಲ. ಹೀಗಾಗಿ ಆತನ ತಂದೆ ಬರುವ ತನಕ ಅಂತ್ಯಕ್ರಿಯೆ ಮಾಡದಿರಲು ನಿರ್ಧರಿಸಲಾಗಿದ್ದು. ಈಗ ಪಾಸ್ ಪಡೆದಿರುವ ಲೋಕೇಶಪ್ಪ ಆಂಧ್ರಪ್ರದೇಶದಿಂದ ಹೊರಟಿದ್ದಾರೆ. ಅವರು ಬಂದ ನಂತರ ಅಂತ್ಯಕ್ರಿಯೆ ನಡೆಯಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts