More

    ಪಾಳುಬಿದ್ದ ನಂದೇಶ್ವರ ಪ್ರಾಥಮಿಕ ಆರೋಗ್ಯ ಉಪ ಕೇಂದ್ರ

    ನಂದೇಶ್ವರ: ಕರೊನಾ ಅಲೆಗಳು ಆರಂಭವಾದ ನಂತರದಲ್ಲಿ ಗ್ರಾಮೀಣ ಭಾಗದ ಜನರ ಆರೋಗ್ಯದ ಕುರಿತು ಎಲ್ಲೆಡೆ ತೀವ್ರ ಕಳವಳ ವ್ಯಕ್ತವಾಗುತ್ತಿದೆ. ನಗರಕ್ಕಿಂತ ಹಳ್ಳಿಗಳಲ್ಲಿ ಕರೊನಾ ತನ್ನ ಕಬಂಧಬಾಹು ವಿಸ್ತರಿಸುತ್ತ ಸಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಇಂಥ ವಿಷಮ ಪರಿಸ್ಥಿತಿಯಲ್ಲಿ ಹಳ್ಳಿಗಳ ಜನರ ಆರೋಗ್ಯ ಹಾಗೂ ಜೀವ ರಕ್ಷಕ ಕವಚಗಳೆಂದೇ ಪರಿಗಣಿಸಲ್ಪಡುವ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸುಸ್ಥಿತಿಯಲ್ಲಿ ಇರಬೇಕಾದದ್ದು ಅತ್ಯಗತ್ಯ. ಆದರೆ, ಬಹುತೇಕ ಕಡೆ ಪಿಎಚ್‌ಸಿಗಳ ಆರೋಗ್ಯವೇ ಸರಿ ಇಲ್ಲ. ಅದಕ್ಕೆ ಉದಾಹರಣೆ ಎಂಬಂತೆ ನಂದೇಶ್ವರ ಗ್ರಾಮದ ಪ್ರಾಥಮಿಕ ಆರೋಗ್ಯ ಉಪ ಕೇಂದ್ರ ಸಂಪೂರ್ಣ ಪಾಳು ಬಿದ್ದಿದೆ.

    ವರ್ಷಗಳು ಕಳೆದರೂ ವೈದ್ಯರು, ನರ್ಸ್‌ಗಳ ನೇಮಕವಾಗಿಲ್ಲ. ಆಸ್ಪತ್ರೆಯು ದನದ ಕೊಟ್ಟಿಗೆಯಂತಾಗಿದ್ದು, ಮೂಲ ಸೌಲಭ್ಯಗಳಿಲ್ಲ. ಕೋವಿಡ್-19 ಎರಡನೇ ಅಲೆಯಿಂದಾಗಿ ಗ್ರಾಮೀಣ ಜನರು ನಾನಾ ರೀತಿಯ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಆದರೆ, ಸ್ಥಳೀಯ ಆಸ್ಪತ್ರೆಯಲ್ಲಿ ಯಾವುದೇ ಸೌಲಭ್ಯಗಳು ಇಲ್ಲದೆ ಆರೋಗ್ಯ ಸೇವೆ ದೊರಕದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಎಡೆಮಾಡಿಕೊಟ್ಟಿದೆ. ಕಠಿಣ ಸಂದರ್ಭ ಗ್ರಾಮಸ್ಥರ ಪಾಲಿಗೆ ಮತ್ತೂ ಕಂಟಕವಾಗಿದೆ.

    ಆರೋಗ್ಯ ಉಪಕೇಂದ್ರಕ್ಕೆ ಎರಡು ಹುದ್ದೆ ಖಾಲಿ ಇದ್ದರೂ ಇದುವರೆಗೂ ನೇಮಕವಾಗಿಲ್ಲ. ಒಬ್ಬ ಮಹಿಳಾ ಸಿಬ್ಬಂದಿ ಮಾತ್ರ ಇನ್‌ಚಾರ್ಜ್ ಹುದ್ದೆಯಲ್ಲಿದ್ದು, ಅವಶ್ಯಕತೆ ಇದ್ದಾಗ ಮಾತ್ರ ಸೇವೆ ಸಲ್ಲಿಸುತ್ತಿದ್ದಾರೆ. ಗ್ರಾಮದಲ್ಲಿ ಸುಮಾರು 5 ಸಾವಿರ ಜನಸಂಖ್ಯೆ ಇದ್ದು, ಇಲ್ಲಿ ವಾಸಿಸುವ ಬಡ ಜನರಿಗೆ ಕಳೆದ 10 ವರ್ಷಗಳಿಂದ ಸರ್ಕಾರಿ ಪ್ರಾಥಮಿಕ ಆರೋಗ್ಯ ಉಪ ಕೇಂದ್ರದ ಸೇವೆಯೇ ಮರೀಚಿಕೆಯಾಗಿದೆ. ಅನೇಕ ವರ್ಷಗಳ ಹಿಂದೆ ಸರ್ಕಾರ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಪ್ರಾಥಮಿಕ ಆರೋಗ್ಯ ಉಪ ಕೇಂದ್ರ ಕಟ್ಟಡ ನಿರ್ಮಾಣ ಮಾಡಿದೆ. ಆದರೆ, ಕಟ್ಟಡ ಶಿಥಿಲಗೊಂಡಿದೆ.

    ಕಟ್ಟಡ ನೆಲಸಮಗೊಳಿಸಿ ಹೊಸದಾಗಿ ನಿರ್ಮಾಣ ಮಾಡುವುದು ಅಗತ್ಯವಾಗಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ. ಜನಸಾಮಾನ್ಯರ ಆರೋಗ್ಯದಲ್ಲಿ ಏರು ಪೇರಾದರೆ 4 ಕಿ.ಮೀ. ಅಂತರದಲ್ಲಿರುವ ಸತ್ತಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗಬೇಕು. ಚಿಕ್ಕ ಮಕ್ಕಳು, ವಯೋವೃದ್ಧರು, ಅಂಗವಿಕಲರು ಬೇರೆ ಸ್ಥಳಗಳಿಗೆ ಹೋಗಿ ಚಿಕಿತ್ಸೆ ಪಡೆಯುವುದು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸ್ಥಳೀಯ ಆರೋಗ್ಯ ಉಪಕೇಂದ್ರ ಬಡವರಿಗೆ ಪಾಲಿಗೆ ಇದ್ದೂ ಇಲ್ಲದಂತಾಗಿದೆ. ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

    ಈಗಾಗಲೇ ಆರೋಗ್ಯ ಉಪ ಕೇಂದ್ರದ ಸಮಸ್ಯೆ ಕುರಿತು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಗ್ರಾಮದ ಬಡ ಜನರಿಗೆ ವೈದ್ಯರ ಸೇವೆ ದೊರೆಯುತ್ತಿಲ್ಲ. ಸರ್ಕಾರ ಗ್ರಾಮೀಣ ಆರೋಗ್ಯ ಉಪಕೇಂದ್ರಗಳನ್ನು ಸುಸ್ಥಿತಿಯಲ್ಲಿಡಲು ಕಾಳಜಿ ವಹಿಸಬೇಕು.
    | ಬಸಪ್ಪ ಮುಧೋಳ ಪಿಕೆಪಿಎಸ್ ಅಧ್ಯಕ್ಷರು ನಂದೇಶ್ವರ

    ನಂದೇಶ್ವರ ಪ್ರಾಥಮಿಕ ಆರೋಗ್ಯ ಉಪ ಕೇಂದ್ರದ ಕಟ್ಟಡ ಸಂಪೂರ್ಣ ಶಿಥಿಲಗೊಂಡಿದ್ದು, ಉಪಯೋಗಕ್ಕೆ ಯೋಗ್ಯವಾಗಿಲ್ಲ. ಮೇಲಧಿಕಾರಿಗಳೊಂದಿಗೆ ಮಾತನಾಡಿ ಸಿಬ್ಬಂದಿ ನೇಮಕ ಮಾಡಲು ಹಾಗೂ ದುರಸ್ತಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು.
    | ಡಾ.ಅನೂಪ ಗಸ್ತಿ ವೈದ್ಯಾಧಿಕಾರಿ, ಪಿಎಚ್‌ಸಿ ಸತ್ತಿ

    | ಚಿದಾನಂದ ಅ. ಪಾಟೀಲ ನಂದೇಶ್ವರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts