More

    ಪಾಲಿಕೆ ಮಾಜಿ ಸದಸ್ಯರು ಅತಂತ್ರ!

    ಬೆಳಗಾವಿ: ಭಾಷೆ ಹಾಗೂ ಗಡಿ ವಿವಾದದ ಅಸ್ತ್ರಗಳನ್ನು ಪ್ರಯೋಗಿಸುವ ಮೂಲಕ ಗೆಲುವಿನ ದಡ ಸೇರುತ್ತ ಬಂದಿದ್ದ ಮಹಾನಗರ ಪಾಲಿಕೆ ಸದಸ್ಯರು ಸದ್ಯ ಸಂದಿಗ್ಧತೆಗೆ ಸಿಲುಕಿದ್ದಾರೆ. ಪಾಲಿಕೆ ಚುನಾವಣೆಗೆ ಪಕ್ಷೇತರರಾಗಿ ಕಣಕ್ಕಿಳಿಯಬೇಕೇ ಅಥವಾ ರಾಜಕೀಯ ಪಕ್ಷಗಳ ಕದ ತಟ್ಟಬೇಕೆ? ಎನ್ನುವ ಗೊಂದಲಕ್ಕೆ ಸಿಲುಕಿದ್ದಾರೆ.
    ಮಹಾನಗರ ಪಾಲಿಕೆ 58 ಸದಸ್ಯರ ಬಲಾಬಲ ಹೊಂದಿದೆ. ಈ ಹಿಂದೆ ಭಾಷಾವಾರು ಇಲ್ಲಿ ಚುನಾವಣೆ ನಡೆಯುತ್ತಿತ್ತು.

    ಈ ಪೈಕಿ 32 ಸದಸ್ಯರು ಸತತ 3-4 ಬಾರಿ ಗೆಲುವು ಸಾಧಿಸುತ್ತ ಬಂದಿದ್ದರು. ಆದರೆ, ಈ ಬಾರಿ ಪಾಲಿಕೆ ಅಂಗಳಕ್ಕೆ ರಾಜಕೀಯ ಪಕ್ಷಗಳು ಕಾಲಿಟ್ಟಿರುವುದು ಸದಸ್ಯರನ್ನು ಕಕ್ಕಾಬಿಕ್ಕಿಯಾಗಿಸಿದೆ. ದಿನಕ್ಕೊಂದು ಸ್ವರೂಪ ಪಡೆಯುತ್ತಿರುವ ರಾಜಕೀಯ ಬೆಳವಣಿಗೆಗಳನ್ನು ಅಳೆದು ತೂಗಿ, ಎಚ್ಚರಿಕೆಯ ಹೆಜ್ಜೆಯಿಡಲು ಮಾಜಿ ಸದಸ್ಯರು ಮುಂದಾಗಿದ್ದಾರೆ.

    ಕೈ, ಕಮಲದ ಪಾಲಾಗುತ್ತಿರುವ ಸದಸ್ಯರು: 2013-14ನೇ ಸಾಲಿನ ಪಾಲಿಕೆ ಚುನಾವಣೆಯಲ್ಲಿ 32ಎಂಇಎಸ್(ಮಹಾರಾಷ್ಟ್ರ ಏಕೀಕರಣ ಸಮಿತಿ)ಬೆಂಬಲಿತ ಸದಸ್ಯರು ಹಾಗೂ ಇತರ (ಕನ್ನಡ ಮತ್ತು ಉರ್ದು ಭಾಷಿಕರು) 26 ಸದಸ್ಯರು ಆಯ್ಕೆಯಾಗಿದ್ದರು. 2018ರ ವಿಧಾನಸಭೆ ಚುನಾವಣೆ ವೇಳೆ ಬದಲಾದ ರಾಜಕೀಯದಿಂದಾಗಿ ಬೆಳಗಾವಿ ದಕ್ಷಿಣ, ಉತ್ತರ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಗ್ರಾಮೀಣ ಕ್ಷೇತ್ರದ ಅಭ್ಯರ್ಥಿ ಗೆಲುವು ಸಾಧಿಸಿದ್ದರು. ಎಂಇಎಸ್ ಬೆಂಬಲಿತ ಅಭ್ಯರ್ಥಿಗಳು ಸೋಲು ಅನುಭವಿಸಿದ್ದರು. ಸಮಿತಿಯ ಒಳಜಗದಿಂದಾಗಿ ಕೆಲ ಮುಖಂಡರು ಬಿಜೆಪಿ, ಕಾಂಗ್ರೆಸ್ ಸೇರ್ಪಡೆಯಾಗುತ್ತಿರುವುದು ಸಮಿತಿಗೆ ಮತ್ತಷ್ಟು ಆತಂಕವನ್ನು ಸೃಷ್ಟಿಸಿದೆ.

    ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಮರಾಠಿಗರು ಅಧಿಕ ಪ್ರಮಾಣದಲ್ಲಿರುವುದರಿಂದ ಬಿಜೆಪಿ ಮತ್ತು ಸಮಿತಿ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ. ಹಾಗಾಗಿ ಈ ಭಾಗದಲ್ಲಿ ಕಾಂಗ್ರೆಸ್, ಜೆಡಿಎಸ್ ಹಾಗೂ ಪಕ್ಷೇತರ ಅಭ್ಯರ್ಥಿಗಳು ಸ್ಪರ್ಧಿಸಲು ಹಿಂದೇಟು ಹಾಕುತ್ತಿದ್ದಾರೆ. ಈ ನಡುವೆ ಪಾಲಿಕೆಯ ಮಾಜಿ ಸದಸ್ಯರನ್ನು ಕಾಂಗ್ರೆಸ್ ಮುಖಂಡರು ಸಂಪರ್ಕಿಸಿ, ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸುವಂತೆ ಆಹ್ವಾನ ನೀಡುತ್ತಿದ್ದಾರೆ ಎಂಬುದು ಮೂಲಗಳಿಂದ ಸಿಕ್ಕ ಮಾಹಿತಿ.

    ಕೂತುಹಲ ಮೂಡಿಸಿದ ಚುನಾವಣೆ: ಬೆಳಗಾವಿ ಉತ್ತರ ಮತ್ತು ಗ್ರಾಮೀಣ ವಿಧಾನಸಭೆ ಕ್ಷೇತ್ರದಲ್ಲಿ ಮರಾಠಿ, ಲಿಂಗಾಯತ, ಅಲ್ಪಸಂಖ್ಯಾತ ಮತದಾರರು ಸಮ ಪ್ರಮಾಣದಲ್ಲಿರುವುದರಿಂದ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸೇರಿ ಎಂಇಎಸ್ ಬೆಂಬಲಿತ ಆಕಾಂಕ್ಷಿಗಳು ಸ್ಪರ್ಧಿಸಲು ಸಿದ್ಧತೆ ಆರಂಭಿಸಿದ್ದಾರೆ. ಈ ನಡುವೆ ಕೆಲ ಪಾಲಿಕೆಯ ಮಾಜಿ ಮೇಯರ್, ಉಪ ಮೇಯರ್‌ಗಳು ರಾಜಕೀಯ ಪಕ್ಷಗಳ ಕದ ತಟ್ಟುತ್ತಿರುವುದು ಕೂತೂಹಲ ಉಂಟು ಮಾಡಿದೆ ಎಂದು ವಿಶ್ಲೇಷಿಸಲಾಗಿದೆ.

    | ಮಂಜುನಾಥ ಕೋಳಿಗುಡ್ಡ

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts