More

    ಕೋಟೆನಗರಿಯಲ್ಲಿ ಮಳೆ ಅಬ್ಬರ: ಚಿತ್ರದುರ್ಗದಲ್ಲಿ 50 ಮರಗಳು ಧರೆಗೆ

    ಚಿತ್ರದುರ್ಗ: ಕೋಟೆನಗರಿ ಸೇರಿ ತಾಲೂಕಿನ ಹಲವೆಡೆ ಬುಧವಾರ ಸಂಜೆ ಸುರಿದ ಬಿರುಗಾಳಿ ಸಹಿತ ಭಾರಿ ಮಳೆಗೆ 50ಕ್ಕೂ ಹೆಚ್ಚು ಮರಗಳು ಧರೆಗುರುಳಿವೆ.

    ನೂರಾರು ಮನೆ, ಜಾನುವಾರು ಶೆಡ್‌ಗಳ ಶೀಟ್‌ಗಳು ಹಾರಿ ಹೋಗಿದ್ದು, ಜನ ಪರದಾಡುವಂತಾಯಿತು.

    ಸಂಜೆ 4ಕ್ಕೆ ಮೋಡಕವಿದ ವಾತಾವರಣ ನಿರ್ಮಾಣವಾಗಿತ್ತು. 5ರ ನಂತರ ಭಾರಿ ಗುಡುಗು-ಮಿಂಚು ಸಹಿತ ಮಳೆಯಾದ್ದರಿಂದ ಜನಸಂಚಾರ ಅಸ್ತವ್ಯಸ್ತವಾಯಿತು.

    ಬಿರುಸಿನ ಮಳೆಯಿಂದಾಗಿ ಜಿಲ್ಲಾ ಕ್ರೀಡಾಂಗಣ ರಸ್ತೆ, ಸಾದಿಕ್ ನಗರ, ಕೋಟೆ ರಸ್ತೆ ಸೇರಿ ಇತರೆಡೆಗಳಲ್ಲಿ ಮರಗಳು ನೆಲಕ್ಕುರುಳಿದವು. ಮರ ಬಿದ್ದ ರಭಸಕ್ಕೆ ಕೆಲವೆಡೆ ಪಕ್ಕದಲ್ಲಿದ್ದ ವಿದ್ಯುತ್ ಕಂಬಗಳಿಗೂ ಹಾನಿ ಉಂಟಾಯಿತು.

    ಇದ್ದಕ್ಕಿದ್ದಂತೆ ಸುರಿದ ಮಳೆಯಿಂದಾಗಿ, ಜೋರಾದ ಗಾಳಿಯಿಂದಾಗಿ ಮೇವಿಗೆ, ತೆಂಗಿನ ಸಸಿಗಳಿಗೆ ತೀವ್ರ ಹಾನಿಯಾಗಿದೆ.

    ಗುಡುಗು-ಮಿಂಚಿನ ಆರ್ಭಟ ಜೋರಾಗಿದ್ದ ಪರಿಣಾಮ ಹೊಲ, ತೋಟಗಳಲ್ಲಿ ಕೆಲಸ ಮಾಡಲು ಹೋದವರು ಗೂಡು ಸೇರಲು ಹರಸಾಹಸ ಪಟ್ಟರು.

    ಮನೆಗಳಿಗೆ ನುಗ್ಗಿದ ನೀರು
    ಕೋಟೆ ರಸ್ತೆಯ ಕೆಳಭಾಗ, ಅಗಳೇರಿ, ಕೆಳಗೋಟೆ, ನೆಹರು ನಗರ, ಚೇಳುಗುಡ್ಡ, ಬುದ್ಧನಗರ, ಸಂತೆಹೊಂಡ ಸೇರಿ ವಿವಿಧ ಬಡಾವಣೆಗಳ ತಗ್ಗು ಪ್ರದೇಶದ ಮನೆಗಳಿಗೂ, ಅಂಗಡಿಗಳಿಗೂ ನೀರು ನುಗ್ಗಿತು.

    ತುರುವನೂರು ರಸ್ತೆ, ಮೆದೇಹಳ್ಳಿ ರಸ್ತೆ, ಜೆಸಿಆರ್ ರಸ್ತೆ ಒಳಗೊಂಡು ಹಲವೆಡೆಗಳ ಕೆಳ ಸೇತುವೆಗಳ ಬಳಿ ಜಲಾವೃತಗೊಂಡಿತ್ತು. ಕೆಲಕಾಲ ವಾಹನ ಸವಾರರು ಸಂಚರಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಯಿತು.

    ಸಿರಿಗೆರೆ ಭಾಗದಲ್ಲೂ ಮಳೆಯಾದ್ದರಿಂದ ಸಂಜೆಯ ನಂತರ ಸಾಕಷ್ಟು ಹೊತ್ತು ವಿದ್ಯುತ್ ವ್ಯತ್ಯಯ ಉಂಟಾಯಿತು.

    ಸಂಚರಿಸುವ ವೇಳೆ ದ್ವಿಚಕ್ರ ವಾಹನಗಳಿಂದ ಬಿದ್ದು ಕೆಲವರು ಪೆಟ್ಟು ಮಾಡಿಕೊಂಡಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
    5 ಮನೆ ಭಾಗಶಃ ಹಾನಿ
    ಮಳೆಯಿಂದಾಗಿ ಚಿತ್ರದುರ್ಗ ತಾಲೂಕಿನಲ್ಲಿ 4, ಹೊಸದುರ್ಗ ತಾಲೂಕಿನಲ್ಲಿ 1 ಸೇರಿ ಜಿಲ್ಲಾದ್ಯಂತ 5 ಮನೆಗಳು ಭಾಗಶಃ ಹಾನಿಯಾಗಿವೆ. 2 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿದೆ.

    ಕೋಟೆನಗರಿಯಲ್ಲಿ ಮಳೆ ಅಬ್ಬರ: ಚಿತ್ರದುರ್ಗದಲ್ಲಿ 50 ಮರಗಳು ಧರೆಗೆ

    ಬಿದ್ದ ವಿದ್ಯುತ್ ಕಂಬಗಳು
    ಗಾಳಿ ಸಹಿತ ಸುರಿದ ಭಾರಿ ಮಳೆಗೆ ಹತ್ತಾರು ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ.

    ಬುಧವಾರ ಕಂಬಗಳು ನೆಲಕ್ಕುರುಳಿದ ಪರಿಣಾಮ ಚಿತ್ರದುರ್ಗ ನಗರದ ಬಹುತೇಕ ಬಡಾವಣೆ, ತಾಲೂಕಿನ ಸಿರಿಗೆರೆ, ಭೀಮಸಮುದ್ರ, ಭರಮಸಾಗರ ಸೇರಿ ಗ್ರಾಮೀಣ ಭಾಗಗಳಲ್ಲೂ ಬೆಳಕಿಲ್ಲದೆ ನಿವಾಸಿಗಳು ಪರದಾಡುವಂತಾಯಿತು.

    ಮೆದೇಹಳ್ಳಿ ರಸ್ತೆಯಲ್ಲಿ ವಿದ್ಯುತ್ ಪರಿವರ್ತಕಕ್ಕೆ ಹಾನಿ ಉಂಟಾಗಿದೆ. ಬೆಸ್ಕಾಂ ಕಚೇರಿ ಪಕ್ಕದಲ್ಲೇ ಮರಗಳು ಧರೆಗುರುಳಿದ ಪರಿಣಾಮ ಮೂರು ಕಂಬಗಳಿಗೆ ಹಾನಿಯಾಗಿದೆ. ಮಾಹಿತಿ ಆಧರಿಸಿ ಬಿದ್ದಿರುವ ಕಂಬಗಳನ್ನು ಬೆಸ್ಕಾಂ ಸಿಬ್ಬಂದಿ ತೆರವು ಮಾಡಲು ಮುಂದಾದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts