More

    ಅಬ್ಬರ, ಆರ್ಭಟವಿಲ್ಲದ ಚಾಮುಂಡೇಶ್ವರಿ

    ಮಂಜುನಾಥ ತಿಮ್ಮಯ್ಯ ಭೋವಿ ಮೈಸೂರು

    ಅಬ್ಬರದ ಪ್ರಚಾರ, ಮತಯಾಚನೆ ಆರ್ಭಟ, ಕಣ್ಣು ಕುಕ್ಕುವ ರೋಡ್ ಶೋ, ರಾಜ್ಯ-ರಾಷ್ಟ್ರ ನಾಯಕರ ಲಗ್ಗೆ, ಆರೋಪ-ಪ್ರತ್ಯಾರೋಪದ ಸದ್ದು ಈ ಸಲ ಇಲ್ಲ…!

    ಕಳೆದ ಚುನಾವಣೆಯಲ್ಲಿ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದ್ದ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಪ್ರಸಕ್ತ ಎಲೆಕ್ಷನ್‌ನ ಚಿತ್ರಣ ಇದು. ಈ ಬಾರಿ ಮತಪ್ರಚಾರ ನೀರಸವಾಗಿ ಸಾಗಿದ್ದು, ಪ್ರಮುಖ ಅಭ್ಯರ್ಥಿಗಳು ತಮ್ಮ ಪಾಡಿಗೆ ತಾವು ಮತಯಾಚಿಸುತ್ತಿದ್ದಾರೆ.


    ಕಳೆದ ಸಲ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಸ್ಪರ್ಧೆಯ ಕಾರಣಕ್ಕೆ ‘ಚಾಮುಂಡೇಶ್ವರಿ’ ಜಿದ್ದಾಜಿದ್ದಿನ ಕ್ಷೇತ್ರವಾಗಿ ಪರಿವರ್ತನೆಗೊಂಡಿತ್ತು. ಇವರ ವಿರುದ್ಧ ಒಂದು ಕಾಲದ ಆಪ್ತಮಿತ್ರ ಜಿ.ಟಿ. ದೇವೇಗೌಡ ಅವರೇ ತೊಡೆತಟ್ಟಿದ್ದರು. ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಜಂಗೀ ಕುಸ್ತಿಯೇ ಏರ್ಪಟ್ಟಿತ್ತು. ಆಟಕ್ಕೆ ಉಂಟು ಲೆಕ್ಕಕ್ಕಿಲ್ಲ ಎಂಬ ಸ್ಥಿತಿಯಲ್ಲಿ ಬಿಜೆಪಿಗೆ ಇತ್ತು.

    ಚಾಮುಂಡೇಶ್ವರಿ ಕ್ಷೇತ್ರ ಸಿದ್ದರಾಮಯ್ಯ ರಾಜಕೀಯ ಕರ್ಮಭೂಮಿ. ಇಲ್ಲಿ 8 ಸಲ ಸ್ಪರ್ಧಿಸಿರುವ ಅವರು 5 ಬಾರಿ ಜಯ ಕಂಡಿದ್ದರೆ, 3 ಬಾರಿ ಪರಾಭವಗೊಂಡಿದ್ದಾರೆ.


    2006ರಲ್ಲಿ ರಾಜಕೀಯ ಪಲ್ಲಟಕ್ಕೆ ಸಿಲುಕಿಕೊಂಡ ಅವರು ಜೆಡಿಎಸ್ ತೊರೆದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ನಡೆದ ಉಪಚುನಾವಣೆ ಸಹ ರಾಜ್ಯದ ಗಮನ ಸೆಳೆದಿತ್ತು. ಜೆಡಿಎಸ್ ಸರ್ಕಾರ, ದೇವೇಗೌಡರ ಪ್ರಬಲ ಪೈಪೋಟಿಯ ನಡುವೆಯೂ ಸಿದ್ದರಾಮಯ್ಯ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜೆಡಿಎಸ್‌ನ ಶಿವಬಸಪ್ಪ ವಿರುದ್ಧ ಜಯ ಸಾಧಿಸಿದರು. ಇದರೊಂದಿಗೆ ಅವರಿಗೆ ರಾಜಕೀಯ ಮರುಜನ್ಮ ದೊರೆಯಿತು.


    2008ರ ಚುನಾವಣೆಯಲ್ಲಿ ಕ್ಷೇತ್ರ ಬದಲಿಸಿದರು. ಚಾಮುಂಡೇಶ್ವರಿಯನ್ನು ಬಿಟ್ಟು ಹೊಸದಾಗಿ ರಚನೆಯಾದ ವರುಣ ಕ್ಷೇತ್ರಕ್ಕೆ ವಲಸೆ ಹೋದರು. ಅಲ್ಲಿ ಎರಡು ಸಲ ಜಯ ಕಂಡು ವಿಧಾನಸಭೆ ಪ್ರತಿಪಕ್ಷ ನಾಯಕರಾಗಿ, 2013ರಲ್ಲಿ ಮುಖ್ಯಮಂತ್ರಿಯಾದರು. 2018ರಲ್ಲಿ ವರುಣ ಕ್ಷೇತ್ರವನ್ನು ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ಅವರಿಗೆ ಬಿಟ್ಟುಕೊಟ್ಟು, ಮತ್ತೆ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಮರು ವಲಸೆ ಬಂದರು. ಆಗಲೇ ಚಾಮುಂಡೇಶ್ವರಿ ಕ್ಷೇತ್ರ ರಾಜಕೀಯದ ದೋಸೆ ಕಲ್ಲಿನಂತಾಗಿದ್ದು.
    ಸಿದ್ದರಾಮಯ್ಯ ಅವರನ್ನು ಶತಾಯಗತಾಯ ಸೋಲಿಸಬೇಕೆಂದೇ ಜೆಡಿಎಸ್, ಬಿಜೆಪಿ ಪಣತೊಟ್ಟಿದ್ದವು.

    ಜತೆಗೆ, ಸಿದ್ದರಾಮಯ್ಯ ವಿರೋಧಿಗಳು ಒಂದಾಗಿ ಕೈಜೋಡಿಸಿದ್ದರು. ವಿ.ಶ್ರೀನಿವಾಸಪ್ರಸಾದ್, ಎಚ್.ವಿಶ್ವನಾಥ್ ಸಹ ರಣತಂತ್ರ ರೂಪಿಸಿದ್ದರು. ಮೊದಮೊದಲು ಮಂಕಾಗಿದ್ದ ಜಿ.ಟಿ.ದೇವೇಗೌಡ ಅವರಿಗೆ ರಾಜಕೀಯ ಚದುರಂಗದಾಟದಿಂದ ಆನೆಬಲ ಬಂದಿತ್ತು. ಹೀಗಾಗಿ, ಚಾಮುಂಡೇಶ್ವರಿ ಕ್ಷೇತ್ರದ ಅಖಾಡ ರಂಗೇರಿತ್ತು.


    ಚಾಮುಂಡೇಶ್ವರಿಯಲ್ಲಿ ಆರಂಭದಲ್ಲಿ ಒಂದು ಎರಡು ದಿನ ಮಾತ್ರ ಮತಪ್ರಚಾರ ಮಾಡುವುದಾಗಿ ಹೇಳಿದ್ದ ಸಿದ್ದರಾಮಯ್ಯ ಅವರು, ತೆರೆಮರೆ ಆಟವನ್ನು ಗಮನಿಸಿ ಕ್ಷೇತ್ರದ ಊರೂರು ಸುತ್ತಿದರು. ಆದಾಗ್ಯೂ, ಅವರ ಪರ ಅಲೆ ಎದ್ದೇಳಲಿಲ್ಲ. ಕೊನೆ ಕ್ಷಣದಲ್ಲಿ ಬಾದಾಮಿ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದರು.


    ಚಾಮುಂಡೇಶ್ವರಿ ಕ್ಷೇತ್ರದ ಕೋಟೆಯಲ್ಲಿ ಪ್ರತಿಸ್ಪರ್ಧಿಗಳು ಹೆಣೆದ ಚಕ್ರವ್ಯೆಹಕ್ಕೆ ಸಿಲುಕಿದ ಸಿದ್ದರಾಮಯ್ಯ ಹೊರಬರಲಾಗದೆ 36,042 ಮತಗಳ ಅಂತರದಲ್ಲಿ ಪರಾಭವಗೊಂಡರು. 1,21,325 ಮತ ಗಳಿಸಿ ಜಿ.ಟಿ.ದೇವೇಗೌಡ ಜಯ ದಾಖಲಿಸಿದರು. ಸಿದ್ದರಾಮಯ್ಯ ಅವರಿಗೆ ದೊರೆತದ್ದು 85,283 ಮತಗಳು. ಆಗ, ಬಿಜೆಪಿ ಅಭ್ಯರ್ಥಿ ಎಸ್.ಆರ್.ಗೋಪಾಲರಾವ್ 3ನೇ ಸ್ಥಾನ ಪಡೆದುಕೊಂಡಿದ್ದರು.


    ಪ್ರಸಕ್ತ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ರಂಗೇರಿದ ವಾತಾವರಣ ಕಾಣುತ್ತಿಲ್ಲ. ಜೆಡಿಎಸ್ ಅಭ್ಯರ್ಥಿ ಜಿ.ಟಿ. ದೇವೇಗೌಡ ಹ್ಯಾಟ್ರಿಕ್ ಜಯದ ಕನಸಿನೊಂದಿಗೆ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಕಳೆದ ಬಾರಿ ಜಿಟಿಡಿಗೆ ಹೆಗಲುಕೊಟ್ಟು ಕೆಲಸ ಮಾಡಿದ್ದ ಮಾವಿನಹಳ್ಳಿ ಎಸ್.ಸಿದ್ದೇಗೌಡ ಈಗ ಕಾಂಗ್ರೆಸ್ ಅಭ್ಯರ್ಥಿ. ಒಡನಾಡಿಯನ್ನು ಮಣಿಸಲು ಪಣ ತೊಟ್ಟಿದ್ದಾರೆ. ಇನ್ನು ಬಿಜೆಪಿ ಹೊಸ ಪ್ರಯೋಗಕ್ಕೆ ಕೈ ಹಾಕಿದೆ. ಚಾಮರಾಜ ಕ್ಷೇತ್ರದ ಮಾಜಿ ಶಾಸಕ, ಕಾಂಗ್ರೆಸ್ ಮುಖಂಡ ವಾಸು ಪುತ್ರ ವಿ.ಕವೀಶ್‌ಗೌಡ ಅವರಿಗೆ ಅವಕಾಶ ಮಾಡಿಕೊಟ್ಟಿದೆ. ಇದು ಇವರಿಗೆ ಮತ್ತು ಸಿದ್ದೇಗೌಡರಿಗೂ ಮೊದಲ ಚುನಾವಣೆ. ಅಖಾಡದ ಅನುಭವಿ ಹುರಿಯಾಳು ಜಿ.ಟಿ.ದೇವೇಗೌಡರು ಸದ್ದುಗದ್ದಲವಿಲ್ಲದೆ ಚುನಾವಣಾ ರಣತಂತ್ರದೊಂದಿಗೆ ಮುನ್ನುಗ್ಗುತ್ತಿದ್ದಾರೆ. ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗಳು ಸಹ ತಮ್ಮ ಪಾಡಿಗೆ ತಾವು ಕಾಲಿಗೆ ಚಕ್ರಕಟ್ಟಿಕೊಂಡು ಊರೂರು ಸುತ್ತುವ ಮೂಲಕ ಮತಪ್ರಚಾರದಲ್ಲಿ ತಲ್ಲೀನವಾಗಿದ್ದಾರೆ.


    ಪ್ರತಿಸ್ಪಧಿಗಳ ವಿರುದ್ಧ ಯಾವುದೇ ಅಭ್ಯರ್ಥಿಗಳು ಕಿಡಿಕಾರುವ, ಕೆಂಡ ಕಾರುವ ಹೇಳಿಕೆಯನ್ನೂ ನೀಡುತ್ತಿಲ್ಲ. ಜತೆಗೆ, ಮೂರು ಪಕ್ಷದಿಂದ ಸ್ಟಾರ್ ಪ್ರಚಾರಕರು, ರಾಷ್ಟ್ರ-ರಾಜ್ಯ ನಾಯಕರು ಕ್ಷೇತ್ರದ ಮೇಲೆ ದಾಳಿ ಮಾಡುತ್ತಿಲ್ಲ. ಚಾಮರಾಜ, ಕೃಷ್ಣರಾಜ ಕ್ಷೇತ್ರದಲ್ಲಿ ಮತಪ್ರಚಾರ ಮಾಡಿದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪಕ್ಕದ ಚಾಮುಂಡೇಶ್ವರಿಯಲ್ಲಿ ಒಂದು ರೌಂಡ್ ಕೂಡ ಹಾಕಲಿಲ್ಲ. ಸಿದ್ದರಾಮಯ್ಯ ಹೊರತುಪಡಿಸಿ ಕಾಂಗ್ರೆಸ್‌ನಿಂದ ಯಾವುದೇ ನಾಯಕರು ಬಂದಿಲ್ಲ. ಬಿಜೆಪಿಯಿಂದ ಅಂತಹ ಅಬ್ಬರದ ಪ್ರಚಾರವೂ ಕಾಣುತ್ತಿಲ್ಲ. ಚಾಮರಾಜ, ಕೃಷ್ಣರಾಜ, ವರುಣಕ್ಕೆ ನೀಡಿದಂತಹ ಆದ್ಯತೆಯನ್ನು ಚಾಮುಂಡೇಶ್ವರಿಗೆ ನೀಡುತ್ತಿಲ್ಲ. ಮೂರು ಪಕ್ಷಗಳು ಚಾಮುಂಡೇಶ್ವರಿ ಕ್ಷೇತ್ರದತ್ತ ಅಂತಹ ಲಕ್ಷೃ ಕೊಟ್ಟಿಲ್ಲ.

    ಚಾಮುಂಡಿಯಿಂದ ವರುಣ ಕಡೆಗೆ
    ಈ ಸಲ ಚಾಮುಂಡೇಶ್ವರಿ ಬದಲಿ ವರುಣ ಕ್ಷೇತ್ರ ಜಿದ್ದಾಜಿದ್ದಿನ ಕಣವಾಗಿ ರೂಪಾಂತರಗೊಂಡಿದೆ. ಬಾದಾಮಿ, ಕೋಲಾರ ಕ್ಷೇತ್ರವನ್ನು ಬಿಟ್ಟು ಸಿದ್ದರಾಮಯ್ಯ ವರುಣದಲ್ಲೇ ಕೊನೆ ಚುನಾವಣೆಯಲ್ಲಿ ಸ್ಪರ್ಧೆಗಿಳಿದಿದ್ದಾರೆ. ಇಲ್ಲಿಯೇ ಇವರನ್ನು ಕಟ್ಟಿಹಾಕಲು ಬಿಜೆಪಿಯಿಂದ ಸಚಿವ ವಿ.ಸೋಮಣ್ಣ ಅವರನ್ನು ಕಣಕ್ಕಿಳಿಸಿದೆ. ಆರೋಪ-ಪ್ರತ್ಯಾರೋಪ ಮಾರ್ದನಿಸುತ್ತಿದ್ದು, ಅಖಾಡ ರಣಾಂಗಣವಾಗಿ ಪರಿವರ್ತನೆಗೊಂಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts