More

    ಪಾಲಿಕೆ ಬಜೆಟ್ ಮಂಡನೆ ಯಾರಿಂದ?

    ಬೆಳಗಾವಿ: ಇಲ್ಲಿನ ಮಹಾನಗರ ಪಾಲಿಕೆಯ 2022-23ನೇ ಸಾಲಿನ ಬಜೆಟ್ ಮಂಡನೆ ಮಾಡುವವರು ಯಾರು? ಆಯ್ಕೆಯಾಗುವ ನೂತನ ಮೇಯರ್ ಅಥವಾ ಪಾಲಿಕೆ ಆಡಳಿತಾಧಿಕಾರಿಯೋ ಎಂಬ ಚರ್ಚೆ ಪಾಲಿಕೆ ಅಂಗಳದಲ್ಲಿ ಜೋರಾಗಿದೆ.

    ಪ್ರಸಕ್ತ ಆರ್ಥಿಕ ವರ್ಷ ಆರಂಭವಾಗುವ ಮುನ್ನ ಮಾರ್ಚ್ ಅಂತ್ಯದ ಒಳಗಾಗಿ ಪಾಲಿಕೆ ಬಜೆಟ್ ಮಂಡನೆ ಮಾಡಬೇಕಾಗಿದೆ. ಹೀಗಾಗಿ, ಮೇಯರ್ ಆಯ್ಕೆ ಇನ್ನೂ ಆಗದ ಹಿನ್ನೆಲೆಯಲ್ಲಿ ಆಡಳಿತಾಧಿಕಾರಿಯಾಗಿರುವಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರೇ ಪಾಲಿಕೆ ಬಜೆಟ್ ಮಂಡಿಸಲು ಸಿದ್ಧತೆ ಆರಂಭಿಸಿದ್ದಾರೆ.

    ಅಧಿಕಾರಿಗಳೊಂದಿಗೆ ಸಭೆ: 58 ವಾರ್ಡ್‌ಗಳ ಚುನಾಯಿತ ಸದಸ್ಯರು ಬಜೆಟ್ ಒಳಗಾಗಿಯೇ ಮೇಯರ್, ಉಪಮೇಯರ್ ಆಯ್ಕೆ ಮಾಡಿ, ತಾವೇ ಬಜೆಟ್ ಮಂಡಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಪಾಲಿಕೆಯ ಆಡಳಿತಾಧಿಕಾರಿ ಬಜೆಟ್ ಪೂರ್ವಭಾವಿಯಾಗಿ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ಅಲ್ಲದೆ, ಉದ್ಯಮಿಗಳು, ಸಾರ್ವಜನಿಕರಿಂದ ಅಭಿಪ್ರಾಯಗಳನ್ನೂ ಪಡೆದುಕೊಂಡಿದ್ದಾರೆ.

    ಅಧಿಕಾರಿಗಳಲ್ಲೂ ಗೊಂದಲ: ಬಜೆಟ್ ಮಂಡಿಸಲು ಆಡಳಿತಾಧಿಕಾರಿ ಅಣಿಯಾಗುತ್ತಿದ್ದರೆ, ಇತ್ತ ಪಾಲಿಕೆಯ ನೂತನ ಸದಸ್ಯರು ತಮ್ಮ ವಾರ್ಡ್‌ಗಳಲ್ಲಿ ಕೈಗೊಳ್ಲಬೇಕಾದ ಅಭಿವೃದ್ಧಿ ಕೆಲಸ, ಹೊಸ ಯೋಜನೆಗಳ ಕುರಿತು ಕ್ರಿಯಾ ಯೋಜನೆ ಸಿದ್ಧಪಡಿಸಿಕೊಳ್ಳುತ್ತಿದ್ದಾರೆ. ಈ ನಡುವೆ ಶಾಸಕರೂ ಸಹ ತಮ್ಮ ಕ್ಷೇತ್ರಗಳಲ್ಲಿ ಕೈಗೊಳ್ಳಬಹುದಾದ ಹೊಸ ಕಾಮಗಾರಿಗಳ ಪಟ್ಟಿ ಸಿದ್ಧಪಡಿಸುತ್ತಿದ್ದಾರೆ. ಆದರೆ, ಬಜೆಟ್ ಮಂಡನೆ ಯಾರು ಮಾಡುತ್ತಾರೆ ಎಂದು ಪಾಲಿಕೆ ಸದಸ್ಯರು ಹಾಗೂ ಅಧಿಕಾರಿಗಳಲ್ಲಿ ಗೊಂದಲ ಮೂಡಿಸಿದೆ.

    ವಿಶೇಷ ಯೋಜನೆ: 2020-21 ಮತ್ತು 2021-22ನೇ ಸಾಲಿನಲ್ಲಿ ಪಾಲಿಕೆಯಲ್ಲಿ ಆಡಳಿತಾಧಿಕಾರಿಯು 58 ವಾರ್ಡ್‌ಗಳಲ್ಲಿ ರಸ್ತೆ, ಕುಡಿಯುವ ನೀರು, ಕಟ್ಟಡಗಳ ನಿರ್ಮಾಣ, ತೆರಿಗೆ ಸಂಗ್ರಹ ಹೆಚ್ಚಳ, ಬೀದಿ ಬದಿ ವ್ಯಾಪಾರಿಗಳಿಗೆ ವಿಶೇಷ ಯೋಜನೆಗಳ ಮೂಲಕ ಉಳಿತಾಯದ ಬಜೆಟ್ ಮಂಡನೆ ಮಾಡಿದ್ದರು. ಆದರೆ, ಈ ಬಾರಿ ಚುನಾಯಿತ ಸದಸ್ಯರು ಇರುವುದರಿಂದ ವಾರ್ಡ್‌ಗಳ ಅಭಿವೃದ್ಧಿ ಸೇರಿದಂತೆ ಯೋಜನೆಗಳ ಸಂಖ್ಯೆ ಹಾಗೂ ಬಜೆಟ್ ಗಾತ್ರ ಕೂಡ ಹೆಚ್ಚಾಗಲಿದೆ.

    430 ಕೋಟಿ ರೂ. ಗಾತ್ರ: ಕಳೆದ ವರ್ಷ ಪಾಲಿಕೆಯ ಆಡಳಿತಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರು 2021-22ನೇ ಸಾಲಿನಲ್ಲಿ 411.28 ಕೋಟಿ ರೂ. ಬಜೆಟ್ ಮಂಡಿಸಿದ್ದರು. ಹಿರಿಯ ನಾಗರಿಕರು, ಹಿಂದುಳಿದ ವರ್ಗಗಳು, ಎಸ್‌ಸಿ, ಎಸ್‌ಟಿ ಸಮುದಾಯ, ಮಹಿಳೆಯರು, ಶಾಲಾ ಮಕ್ಕಳು ಹಾಗೂ ಅಂಗವಿಕಲರ ಅನುಕೂಲಕ್ಕಾಗಿ ಸಾಕಷ್ಟು ಯೋಜನೆ ಘೋಷಣೆ ಮಾಡಿದ್ದರು. ಅಲ್ಲದೆ, ಪಾಲಿಕೆಯ ವಿವಿಧ ಮೂಲಗಳಿಂದ ವಾರ್ಷಿಕ 50 ಕೋಟಿ ರೂ. ಆದಾಯ ನಿರೀಕ್ಷೆಯ ಗುರಿ ಹಾಕಿಕೊಂಡಿದ್ದರು. ಈ ಬಾರಿ ಬಜೆಟ್ ಗಾತ್ರದ ಪ್ರಮಾಣ 430 ಕೋಟಿ ರೂ.ಗೆ ಏರಿಕೆಯಾಗಲಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

    ಸರ್ಕಾರದಿಂದಲೇ ನಗರಸೇವಕರಿಗೆ ಅನ್ಯಾಯ

    ನಾವೆಲ್ಲ ಆಯ್ಕೆಗೊಂಡು ಬರೋಬ್ಬರಿ 6 ತಿಂಗಳು ಕಳೆದಿದೆ. ಆದರೆ, ಮೇಯರ್, ಉಪಮೇಯರ್ ಆಯ್ಕೆ ಇನ್ನೂ ನಡೆದಿಲ್ಲ. ನಮ್ಮ ವಾರ್ಡ್‌ಗಳಲ್ಲಿ ಇರುವ ಸಮಸ್ಯೆಗಳನ್ನು ಪರಿಹರಿಸಲು ನಮ್ಮಿಂದ ಸಾಧ್ಯವಾಗುತ್ತಿಲ್ಲ. ಇದರಿಂದ ವಾರ್ಡ್ ನಿವಾಸಿಗರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಸರ್ಕಾರ ಕೂಡಲೇ ಪಾಲಿಕೆಗೆ ಮೇಯರ್ ಆಯ್ಕೆ ಮಾಡಬೇಕು. ಚುನಾಯಿತ ಸದಸ್ಯರೇ ಬಜೆಟ್ ಮಂಡನೆ ಮಾಡಬೇಕು. ಆದರೆ, ಸದಸ್ಯರಿದ್ದರೂ ಆಡಳಿತಾಧಿಕಾರಿ ಬಜೆಟ್ ಮಂಡನೆ ಮಾಡಲು ಸಿದ್ಧತೆ ಮಾಡುತ್ತಿರುವುದು ಸೂಕ್ತವಲ್ಲ. ಸರ್ಕಾರವೇ ನಮಗೆ ಅನ್ಯಾಯ ಮಾಡುತ್ತಿದೆ ಎಂದು ಹೆಸರು ಹೇಳಲಿಚ್ಛಿಸದ ಪಾಲಿಕೆಯ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಬಜೆಟ್ ಒಳಗಾಗಿ ಮೇಯರ್, ಉಪಮೇಯರ್ ಆಯ್ಕೆಯಾದರೆ ಚುನಾಯಿತ ಸದಸ್ಯರೇ ಮಂಡನೆ ಮಾಡಲಿದ್ದಾರೆ. ಆದರೆ, ಇನ್ನೂ ಮೇಯರ್ ಆಯ್ಕೆಯಾಗದ ಹಿನ್ನೆಲೆಯಲ್ಲಿ 2022-23ನೇ ಸಾಲಿನ ಬಜೆಟ್ ಮಂಡಿಸಲು ಸಿದ್ಧತೆ ಆರಂಭಿಸಲಾಗಿದ್ದು, ಶೀಘ್ರದಲ್ಲಿ ಶಾಸಕರ ಸಭೆ ಕರೆದು ಬಜೆಟ್ ಮಂಡನೆಯ ದಿನ ನಿಗದಿ ಪಡಿಸಲಾಗುವುದು.
    | ಡಾ.ರುದ್ರೇಶ ಘಾಳಿ ಬೆಳಗಾವಿ ಪಾಲಿಕೆ ಆಯುಕ್ತ

    | ಮಂಜುನಾಥ ಕೋಳಿಗುಡ್ಡ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts