More

    ಪಾಲಿಕೆ ಚುನಾವಣೆ ಗಗನಕುಸುಮ

    ವಾದಿರಾಜ ವ್ಯಾಸಮುದ್ರ ಕಲಬುರಗಿ
    ಕಲ್ಯಾಣ ಕರ್ನಾಟಕದಲ್ಲೇ ದೊಡ್ಡದಾಗಿರುವ ಕಲಬುರಗಿ ಮಹಾನಗರ ಪಾಲಿಕೆಗೆ ಚುನಾವಣೆ ಯಾವಾಗ? ಇಂಥದ್ದೊಂದು ಪ್ರಶ್ನೆ ನಗರದ ಜನತೆ ಮತ್ತು ರಾಜಕಾರಣಿಗಳನ್ನು ಕಾಡುತ್ತಿದೆ. ಕೂಡಲೇ ಚುನಾವಣೆ ನಡೆದರೆ ಸ್ಥಳೀಯ ಜನಪ್ರತಿನಿಧಿಗಳಿಂದ ನಗರದ ಅಭಿವೃದ್ಧಿ ಸಾಧ್ಯ ಎನ್ನುತ್ತಾರೆ ಮತದಾರರು.
    ಸುಮಾರು ಎರಡು ವರ್ಷವಾಗುತ್ತಿದ್ದರೂ ಕಲಬುರಗಿ ಸೇರಿ ರಾಜ್ಯದ ಹಲವು ಮಹಾನಗರ ಪಾಲಿಕೆಗಳಿಗೆ ಚುನಾವಣೆ ನಡೆದಿಲ್ಲ. ಇದಕ್ಕೆ ಏನಾದರೂ ಕಾರಣಗಳಿರಬಹುದು. ಇವುಗಳಿಗೆ ಪರಿಹಾರ ಕಂಡುಕೊಳ್ಳಬೇಕಿರುವ ಸರ್ಕಾರ ಏಕೆ ಈ ನಿಟ್ಟಿನಲ್ಲಿ ಅನಾಸಕ್ತಿ ಧೋರಣೆ ತಳೆದಿದೆ ಎಂಬ ಪ್ರಶ್ನೆಗೆ ಉತ್ತರ ಇಲ್ಲವಾಗಿದೆ.
    ಕಲಬುರಗಿ ದಿನೇದಿನೇ ಬೆಳೆಯುತ್ತಿರುವ ಮಹಾನಗರ. ನಗರ ಬೆಳೆದಂತೆ ಸಮಸ್ಯೆಗಳೂ ಬೆಟ್ಟದಷ್ಟು ಹೆಚ್ಚಾಗುತ್ತಿವೆ. ಈಗಿರುವ ಪಾಲಿಕೆ ಆಯುಕ್ತರು, ಅಧಿಕಾರಿಗಳು ಮತ್ತು ಸಿಬ್ಬಂದಿ ಎಲ್ಲ ಸಮಸ್ಯೆಗಳನ್ನು ಪರಿಹರಿಸುವುದು ಕಷ್ಟಸಾಧ್ಯ. ಅದೇ ಜನಪ್ರತಿನಿಧಿ ಇದ್ದರೆ ಜನರ ಸಮಸ್ಯೆಗಳನ್ನು ಆಲಿಸುವುದರ ಜತೆಗೆ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರ ಕಲ್ಪಿಸಲು ಸಾಧ್ಯವಾಗಲಿದೆ. ಅಂತೆಯೇ ಎಷ್ಟು ಬೇಗ ಚುನಾವಣೆ ನಡೆಯುತ್ತದೆಯೋ ಅಷ್ಟು ಒಳ್ಳೆಯದು ಎಂಬ ಅನಿಸಿಕೆಗಳು ಕೇಳಿಬರುತ್ತಿವೆ.
    ಅದೇನೋ ಅರ್ಥವಾಗುತ್ತಿಲ್ಲ. ಮಹಾನಗರ ಪಾಲಿಕೆಗೆ ಅನಿಷ್ಟ ಅಂಟಿಕೊಂಡು ಬಿಟ್ಟಿದೆ. ಸರ್ಕಾರ ಇಲ್ಲಿ ಕನಿಷ್ಠ ಎರಡು ವರ್ಷ ಪೂರ್ಣಾವಧಿಗೆ ಆಯುಕ್ತರನ್ನು ಇಡುತ್ತಿಲ್ಲ. ನಗರವನ್ನು ಅರ್ಥ ಮಾಡಿಕೊಳ್ಳುವ ಮೊದಲೇ ವರ್ಗಾವಣೆ ಮಾಡಲಾಗುತ್ತಿದೆ. ಹೀಗಾಗಿ ಎರಡು ವರ್ಷಗಳಲ್ಲಿ ಇಬ್ಬರು ಆಯುಕ್ತರು ಬಂದು ಹೋಗಿದ್ದಾರೆ. ಒಬ್ಬರು ಈಗ ಕೆಲಸ ಮಾಡುತ್ತಿದ್ದಾರೆ. ಕಲಬುರಗಿ ಸಮಸ್ಯೆ ಬೆಳೆಯಲು ಇದೂ ಸಹ ಒಂದು ಕಾರಣ.
    ಸದ್ಯದ ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ರಾಹುಲ್ ಪಾಂಡ್ವೆ ಪಾಲಿಕೆ ಆಯುಕ್ತರಾಗಿ ಬಂದ ತಕ್ಷಣ ನಗರ ಪ್ರದಕ್ಷಿಣೆ ಮಾಡಿ ಆಡಳಿತಕ್ಕೆ ಚುರುಕು ಮುಟ್ಟಿಸಿದ್ದರು. ಇನ್ನೇನು ಅವರ ಖುರ್ಚಿ ಎರಡು ವರ್ಷಕ್ಕೆ ಗಟ್ಟಿಯಾಗಿ ಇರಲಿದೆ ಎನ್ನುಷ್ಟರಲ್ಲೇ ಜೆಸ್ಕಾಂ ಎಂಡಿಯಾಗಿ ವರ್ಗವಾದರು. ಈಗ ಮತ್ತೊಬ್ಬ ಐಎಎಸ್ ಅಧಿಕಾರಿ ಆಯುಕ್ತರ ಖುರ್ಚಿ ಮೇಲೆ ಕುಳಿತಿದ್ದಾರೆ.
    ಇತ್ತೀಚೆಗೆ ಎಲ್ಲೆಡೆ ಭಾರಿ ಮಳೆ ಸುರಿದಿದೆ. ಪರಿಣಾಮ ನಗರದ ಅನೇಕ ರಸ್ತೆ ಮತ್ತು ಚರಂಡಿಗಳು ಹಾಳಾಗಿವೆ. ಇವುಗಳ ದುರಸ್ತಿ ಮಾಡಿಸಿ ಎಂದು ಜನತೆ ಅಧಿಕಾರಿಗಳ ಬಳಿ ಹೋಗಿ ಮನವಿ ಮಾಡಬೇಕು. ಆದರೆ ಯಾರು ಜವಾಬ್ದಾರಿ ತೆಗೆದುಕೊಂಡು ಪಾಲಿಕೆಗೆ ಹೋಗುತ್ತಾರೆ ಎಂಬ ಪ್ರಶ್ನೆಯೂ ಇದೆ. ಅಲ್ಲದೆ ಜನರ ನೋವಿಗೆ ಪಾಲಿಕೆಯವರು ಸ್ಪಂದಿಸುತ್ತಾರೆಯೇ ಎಂಬ ಸಂಶಯವೂ ಕಾಡುತ್ತಿದೆ. ಪಾಲಿಕೆಗೆ ಬರಬೇಕಾದ ತೆರಿಗೆ ಹಣವೂ ನಿರೀಕ್ಷಿತ ಮಟ್ಟದಲ್ಲಿ ಬಂದಿಲ್ಲ ಎನ್ನಲಾಗುತ್ತಿದೆ. ಅಧಿಕಾರಿಗಳಾದವರು ಪತ್ರಿಕಾ ಪ್ರಕಟಣೆ ಹೊರಡಿಸಿ ತೆರಿಗೆ ಕಟ್ಟಿರಿ ಎಂದು ಹೇಳಿ ಕೈ ತೊಳೆದುಕೊಂಡು ಬಿಡುತ್ತಾರೆ. ಇನ್ನು ತೆರಿಗೆ ಕಟ್ಟಲು ಹೋದವನಿಗೂ ಗೌರವವಿಲ್ಲ.
    ಆದರೆ ಅದೇ ಜನಪ್ರತಿನಿಧಿಗಳಿದ್ದರೆ ಅವರು ಜನರ ನೋವಿಗೆ ಸ್ಪಂದಿಸುತ್ತಾರೆ. ಜನರೂ ಅವರ ಬಳಿ ಹೋಗುತ್ತಾರೆ. ಹೀಗಾಗಿ ಪಾಲಿಕೆಗೆ ಕೂಡಲೇ ಚುನಾವಣೆ ನಡೆಸಿ ಎಂದು ಬಿಜೆಪಿಯ ಮಾಜಿ ಸದಸ್ಯೆಯೊಬ್ಬರು ಸಕರ್ಾರಕ್ಕೆ ಮನವಿ ಮಾಡಿದ್ದು, ಇದುವರೆಗೆ ಸ್ಪಂದನೆ ಸಿಕ್ಕಿಲ್ಲ. ಹೀಗಾಗಿ ಪಾಲಿಕೆ ಚುನಾವಣೆ ಗಗನಕುಸುಮ ಎನಿಸಿದೆ.

    ರಾಜ್ಯದಲ್ಲಿ ಸರ್ಕಾರ ಎಂಬುದು ಎಷ್ಟು ಮುಖ್ಯವೋ ಸ್ಥಳೀಯವಾಗಿ ಸ್ಥಳೀಯ ಜನಪ್ರತಿನಿಧಿಗಳ ಆಡಳಿತವೂ ಅಷ್ಟೇ ಮುಖ್ಯವಾಗುತ್ತದೆ. ಎರಡೆರಡು ವರ್ಷ ಕಳೆದರೂ ಕಲಬುರಗಿ ಮಹಾನಗರ ಪಾಲಿಕೆಗೆ ಚುನಾವಣೆ ನಡೆಸಲು ಸಕರ್ಾರ ಮುಂದಾಗುತ್ತಿಲ್ಲ ಎಂದರೆ, ಯಾವ ರೀತಿ ಬಣ್ಣಿಸಬೇಕೋ ಅರ್ಥವಾಗುತ್ತಿಲ್ಲ. ಸ್ಥಳೀಯ ಜನಪ್ರತಿನಿಧಿಗಳಿದ್ದರೆ, ಜನತೆ ಅವರ ಮೂಲಕ ಪಾಲಿಕೆಯಿಂದ ಆಗಬೇಕಿರುವ ಕೆಲಸ ಮಾಡಿಸಿಕೊಳ್ಳಲು ಸಾಧ್ಯ. ಅಂತೆಯೇ ಸಕರ್ಾರ ಕೂಡಲೇ ಚುನಾವಣೆ ನಡೆಸಲಿ.
    | ಭೀಮರಡ್ಡಿ ಪಾಟೀಲ್ ಕುರಕುಂದಾ
    ಮಹಾನಗರ ಪಾಲಿಕೆ ಮಾಜಿ ಮೇಯರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts