More

    ಪಾಲಿಕೆ ಖಜಾನೆ ಸೇರಿದೆ 116 ಕೋಟಿ ತೆರಿಗೆ

    ಸಂತೋಷ ವೈದ್ಯ ಹುಬ್ಬಳ್ಳಿ

    ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯು ಕಳೆದ 2020-21ನೇ ಹಣಕಾಸು ವರ್ಷದಲ್ಲಿ ವಿವಿಧ ಮೂಲಗಳಿಂದ 116.13 ಕೋಟಿ ರೂಪಾಯಿ ತೆರಿಗೆ ಸಂಗ್ರಹಿಸಿದೆ. ಇದರಲ್ಲಿ ಎರಡು ಬಾರಿ ಪರಿಷ್ಕರಣೆಗೆ ಒಳಪಟ್ಟ ಆಸ್ತಿ ತೆರಿಗೆಯಿಂದಲೇ 70.70 ಕೋಟಿ ರೂಪಾಯಿ ಆದಾಯ ಗಳಿಸಿರುವುದು ವಿಶೇಷ.

    ಪಾಲಿಕೆಯು 2019-20ರಲ್ಲಿ ವಿವಿಧ ಮೂಲಗಳಿಂದ 106.20 ಕೋಟಿ ರೂ. ತೆರಿಗೆ ಸಂಗ್ರಹಿಸಿತ್ತು. ಮಾರ್ಚ್ 31ಕ್ಕೆ ಕೊನೆಗೊಂಡ 2020-21ರ ಹಣಕಾಸು ವರ್ಷದಲ್ಲಿ ಕಳೆದ ಸಾಲಿಗಿಂತ 10 ಕೋಟಿ ರೂಪಾಯಿ ಅಧಿಕ ಆದಾಯ ಗಳಿಸಲು ಆಸ್ತಿ ತೆರಿಗೆಯಲ್ಲಿ ಏರಿಕೆ ಮಾಡಿರುವುದು ಒಂದು ಕಾರಣವಾಗಿದೆ. 2019-20ರಲ್ಲಿ ಪಾಲಿಕೆ ಆಸ್ತಿ ತೆರಿಗೆಯಿಂದ 58.45 ಕೋಟಿ ರೂಪಾಯಿ ಗಳಿಸಿತ್ತು. ಇದಕ್ಕೆ ಹೋಲಿಸಿದರೆ, 2020-21ರಲ್ಲಿ 12.25 ಕೋಟಿ ರೂಪಾಯಿ ಆಸ್ತಿ ತೆರಿಗೆ ಸಂಗ್ರಹ ಹೆಚ್ಚಳ ಕಂಡಿದೆ.

    ಆಸ್ತಿ ತೆರಿಗೆ, ಪಾಲಿಕೆ ಒಡೆತನದ ಮಳಿಗೆಗಳ ಬಾಡಿಗೆ (ಸ್ಟಾಲೇಜ್), ಜಾಹೀರಾತು ಕರ, ಯೋಜನಾ ಶಾಖೆ, ಘನತ್ಯಾಜ್ಯ ನಿರ್ವಹಣೆ ಸೆಸ್, ಟ್ರೇಡ್ ಲೈಸೆನ್ಸ್ ಶುಲ್ಕ, ರೋಡ್ ಕಟ್ಟಿಂಗ್ ಶುಲ್ಕ, ಇವು ಪಾಲಿಕೆಯ ಬಹುಮುಖ್ಯ ಆದಾಯ ಮೂಲಗಳು.

    ಇದರಲ್ಲಿ ಪಾಲಿಕೆಗೆ ಅತಿ ದೊಡ್ಡ ಆದಾಯ ಮೂಲ ಆಸ್ತಿ ತೆರಿಗೆ. ಹಿಂದಿನ ಬಾಕಿ 14.33 ಕೋಟಿ ಹಾಗೂ 2020-21ನೇ ಸಾಲಿನ ಬೇಡಿಕೆ 79 ಕೋಟಿ ಸೇರಿ ಒಟ್ಟು 93.33 ಕೋಟಿ ರೂ. ಸಂಗ್ರಹಿಸಬೇಕಿತ್ತು. ಆದರೆ, ಪಾಲಿಕೆಗೆ 70.70 ಕೋಟಿ ರೂ. ಸಂಗ್ರಹಿಸಲು ಸಾಧ್ಯವಾಗಿದೆ. ಆಸ್ತಿ ಮಾಲೀಕರು ಇನ್ನೂ 22.63 ಕೋಟಿ ರೂ. ಬಾಕಿ ಉಳಿಸಿಕೊಂಡಿದ್ದಾರೆ.

    ಆಸ್ತಿ ಕರ ಏರಿಕೆ: ಆಸ್ತಿ ತೆರಿಗೆ ದರವು 2020-21ರಲ್ಲಿ 2 ಬಾರಿ ಪರಿಷ್ಕರಣೆಗೆ ಒಳಪಟ್ಟಿದ್ದು ವಿಶೇಷ. ಕರೊನಾ ಹಿನ್ನೆಲೆಯಲ್ಲಿ ಆಸ್ತಿ ತೆರಿಗೆ ದರ ಪರಿಷ್ಕರಣೆ (ಪ್ರತಿ ಮೂರು ವರ್ಷಕ್ಕೊಮ್ಮೆ ಕಡ್ಡಾಯ) ಮಾಡುವುದಿಲ್ಲ ಎಂದು ಪಾಲಿಕೆ ಮೊದಲು ಸ್ಪಷ್ಟಪಡಿಸಿತ್ತು. ಆದರೆ, ಅರ್ಥಿಕ ವರ್ಷ ಆರಂಭಗೊಂಡ ಬಳಿಕ ಮೇ ತಿಂಗಳಲ್ಲಿ ಏರಿಕೆ ಮಾಡಿ ವರ್ತಕರು, ವಾಣಿಜ್ಯ-ಕೈಗಾರಿಕೋದ್ಯಮಗಳ, ಆಸ್ತಿ ಮಾಲೀಕರ ತೀವ್ರ ಆಕ್ರೋಶಕ್ಕೆ ಗುರಿಯಾಗಿದೆ. ವಾಸದ ಕಟ್ಟಡಗಳಿಗೆ ಶೇ. 20, ವಾಣಿಜ್ಯ ಕಟ್ಟಡಗಳಿಗೆ ಶೇ. 30, ವಾಸೇತರ-ವಾಣಿಜ್ಯ ಬಳಕೆಯಲ್ಲದ ಕಟ್ಟಡಗಳಿಗೆ ಶೇ. 25 ಹಾಗೂ ಖುಲ್ಲಾ ಜಾಗಗಳಿಗೆ ಶೇ. 30ರಷ್ಟು ಏರಿಕೆ ಮಾಡಲಾಗಿತ್ತು. ತೀವ್ರ ಆಕ್ರೋಶದ ಬಳಿಕ, ಏರಿಕೆ ಮಾಡಿದ ಆರೇ ದಿನಗಳಲ್ಲಿ ಈ ಆಸ್ತಿ ತೆರಿಗೆ ದರವನ್ನು ಮರು ಪರಿಷ್ಕರಣೆ ಮಾಡಿ ಪಾಲಿಕೆ ಆಯುಕ್ತರು ಆದೇಶ ಹೊರಡಿಸಿದ್ದರು. ಅದರಂತೆ, ವಾಸದ ಕಟ್ಟಡಗಳ ಮೇಲೆ ಶೇ. 15, ವಾಣಿಜ್ಯ ಕಟ್ಟಡಗಳಿಗೆ ಶೇ. 20, ವಾಸೇತರ ಮತ್ತು ವಾಣಿಜ್ಯಕ್ಕಲ್ಲದ ಕಟ್ಟಡಗಳಿಗೆ ಶೇ. 20 ಹಾಗೂ ಎಲ್ಲ ಸ್ವರೂಪದ ಖುಲ್ಲಾ ಜಾಗಗಳಿಗೆ ಶೇ. 25ರಷ್ಟು ಏರಿಕೆ ಮಾಡಿದ್ದರು. ಇದರಿಂದಾಗಿ ಕೋವಿಡ್ ಸಂಕಷ್ಟದ ನಡುವೆಯೂ ಪಾಲಿಕೆಯ ಆದಾಯದಲ್ಲಿ ಏರಿಕೆಯಾಗಿದೆ.

    ‘ಆಸ್ತಿ ತೆರಿಗೆ ದರದಲ್ಲಿ ಏರಿಕೆ ಮಾಡಿರುವುದರಿಂದ ಮಾತ್ರ ಆದಾಯ ಹೆಚ್ಚಳವಾಗಿಲ್ಲ. ಮಾರ್ಚ್ ತಿಂಗಳಲ್ಲಿ ಕಠಿಣ ಕಾರ್ಯಾಚರಣೆ ನಡೆಸಿ ವಾಣಿಜ್ಯ ಮಳಿಗೆಗಳಿಂದ ಆಸ್ತಿ ತೆರಿಗೆ ವಸೂಲಿಗೆ ಕ್ರಮ ಕೈಗೊಂಡಿರುವುದರಿಂದಲೂ ಏರಿಕೆಯಾಗಿದೆ. ಆಸ್ತಿ ತೆರಿಗೆ, ಸ್ಟಾಲೇಜ್ ಬಾಕಿ ಉಳಿಸಿಕೊಂಡ ಹಾಗೂ ಟ್ರೇಡ್ ಲೈಸೆನ್ಸ್ ನವೀಕರಿಸದ ವಾಣಿಜ್ಯ ಮಳಿಗೆಗಳನ್ನು ಸೀಜ್ ಮಾಡುವ ಮೂಲಕವೂ ಕ್ರಮ ಜರುಗಿಸಲಾಗಿತ್ತು’ ಎಂದು ಪಾಲಿಕೆ ಅಧಿಕಾರಿಯೊಬ್ಬರು ‘ವಿಜಯವಾಣಿ’ಗೆ ತಿಳಿಸಿದ್ದಾರೆ.

    ಕೋವಿಡ್ ಸೋಂಕಿನ ಕಾರಣದಿಂದ ಹು-ಧಾ ಅವಳಿ ನಗರದ ಎಲ್ಲ ವರ್ಗದ ನಿವಾಸಿಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರಸಕ್ತ 2021-22ನೇ ಸಾಲಿನ ಆಸ್ತಿ ತೆರಿಗೆ ಪಾವತಿ ಮೇಲೆ ಶೇ. 5ರಷ್ಟು ರಿಯಾಯಿತಿ ಅವಧಿಯನ್ನು 3 ತಿಂಗಳು ಕಾಲ ವಿಸ್ತರಿಸಬೇಕು.
    | ರಜತ್ ಉಳ್ಳಾಗಡ್ಡಿಮಠ
    ಪ್ರಧಾನ ಕಾರ್ಯದರ್ಶಿ ಹು-ಧಾ ಮಹಾನಗರ ಜಿಲ್ಲಾ ಕಾಂಗ್ರೆಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts