More

    ಪಾಲನೆಯಾಗದ ಪರಸ್ಪರ ಅಂತರ!

    ರೋಣ: ಸುತ್ತೋಲೆ ಹೊರಡಿಸಿ ಜನರು ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು ಎಂದು ಹೇಳಬೇಕಿದ್ದ ತಾಲೂಕಾಡಳಿತದ ಬಹುತೇಕ ಅಧಿಕಾರಿಗಳು ತಾವೇ ಕರೊನಾ ವೈರಸ್ ಸುರಕ್ಷತಾ ಕ್ರಮಗಳನ್ನು ಅನುಸರಿಸದೆ ಅಜಾಗರೂಕತೆ ತೋರುತ್ತಿರುವುದು ಸಾರ್ವಜನಿಕರಲ್ಲಿ ಅಸಮಾಧಾನ ಮೂಡಿಸಿದೆ.

    ಪಟ್ಟಣದ ಮಿನಿ ವಿಧಾನಸೌಧದ ಕೂಗಳತೆಯಲ್ಲಿಯೇ ಇರುವ ಉಪ ನೋಂದಣಾಧಿಕಾರಿ (ಸಬ್ ರಿಜಿಸ್ಟ್ರಾರ್) ಕಚೇರಿಯಲ್ಲಿ ಪ್ರತಿನಿತ್ಯ ಜನಜಂಗುಳಿ ಸೇರುತ್ತಿದೆ. ಆಸ್ತಿ ಖರೀದಿ, ಮಾರಾಟ ಹಾಗೂ ವಿವಿಧ ವ್ಯವಹಾರಗಳಿಗೆ ಆಗಮಿಸುವ ನೂರಾರು ಜನರು ಅಲ್ಲಿಯೇ ಗಂಟೆಗಟ್ಟಲೇ ಕುಳಿತು ಹರಟೆ ಹೊಡೆದು ಎಲೆ, ಅಡಕೆ, ಗುಟ್ಖಾ ತಿಂದು ಉಗುಳುವುದು ಸರ್ವೆ ಸಾಮಾನ್ಯವಾಗಿದೆ. ಪರಸ್ಪರ ದೈಹಿಕ ಅಂತರ ಇಲ್ಲವೇ ಇಲ್ಲ. ಇನ್ನು ಬಹುತೇಕ ಜನರು ಮಾಸ್ಕ್ ಧರಿಸದೇ ಅಡ್ಡಾದಿಡ್ಡಿ ಓಡಾಡಿದರೂ ಕೇಳುವವರಿಲ್ಲದಂತಾಗಿದೆ.

    ಇಲ್ಲಿ ಯಾವುದೇ ಸ್ಯಾನಿಟೈಸರ್ ಬಳಸುತ್ತಿಲ್ಲ. ಯಾವುದೇ ಸುರಕ್ಷತಾ ಕ್ರಮಗಳನ್ನು ಅನುಸರಿಸುತ್ತಿಲ್ಲ.

    ಪಟ್ಟಣದ ತಹಸೀಲ್ದಾರ್ ಕಚೇರಿ ಸೇರಿ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಪರಸ್ಪರ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಿದೆ. ಆದರೆ, ಅದನ್ನು ಪಾಲಿಸದಿರುವುದನ್ನು ನೋಡಿದರೆ ತಾಲೂಕಾಡಳಿತದ ನಿರ್ಲಕ್ಷ್ಯ ಧೋರಣೆ ತಾಳಿದೆ ಎಂಬುದು ಸ್ಪಷ್ಟವಾಗಿ ಕಾಣುತ್ತದೆ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

    ನಿತ್ಯ ಅನೇಕ ಆಸ್ತಿ ಖರೀದಿ ಮತ್ತು ಮಾರಾಟದ ನೋಂದಣಿ ಮಾಡಿಸುವ ಇಲ್ಲಿನ ಉಪ ನೋಂದಣಾಧಿಕಾರಿಗಳ ಕಾರ್ಯಾಲಯದ ಸಿಬ್ಬಂದಿ ಕರೋನಾ ತಡೆಗೆ ಯಾವುದೇ ಮುಂಜಾಗ್ರತೆ ಕ್ರಮ ಕೈಗೊಳ್ಳದಿರುವುದು ಸರಿಯಲ್ಲ. ತಮ್ಮ ವ್ಯವಹಾರದೊಂದಿಗೆ ಸಾರ್ವಜನಿಕರ ಆರೋಗ್ಯದ ಬಗ್ಗೆಯೂ ಗಮನ ಹರಿಸಬೇಕು.

    | ನಾಗನಗೌಡ ಗಿರಡ್ಡಿ, ಸಾರ್ವಜನಿಕ

    ಸರ್ಕಾರ ಸುತ್ತೋಲೆ ಹೊರಡಿಸಿ, ಆನ್​ಲೈನ್ ಮೂಲಕ ತಮ್ಮ ನೋಂದಣಿ ದಿನಾಂಕವನ್ನು ಖಚಿತ ಪಡಿಸಿಕೊಂಡು ನೋಂದಣಿ ಕಾರ್ಯಕ್ಕೆ ಆಗಮಿಸಬೇಕೆಂಬ ಆದೇಶವಿದೆ. ಈ ಕುರಿತು ತಿಳಿಹೇಳಿದರೂ ಜನ ಕೇಳುವುದಿಲ್ಲ. ತಾಳ್ಮೆ ಕಳೆದುಕೊಂಡವರಂತೆ ವರ್ತಿಸುತ್ತಾರೆ.

    | ವಿ.ಕೆ. ಪತ್ತಾರ ಉಪ ನೋಂದಣಾಧಿಕಾರಿ, ರೋಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts