More

    ಪಾರಂಪರಿಕ ಗೋಪುರ ಗಡಿಯಾರ ದುರಸ್ತಿ

    ಹುಬ್ಬಳ್ಳಿ: ಧಾರವಾಡದ ಕರ್ನಾಟಕ ಕಲಾ ಮಹಾವಿದ್ಯಾಲಯ ಕಟ್ಟಡದ ಪಾರಂಪರಿಕ ಗೋಪುರ ಗಡಿಯಾರವನ್ನು ದುರಸ್ತಿಗೊಳಿಸಿ ಯಥಾಸ್ಥಿತಿಗೆ ತರುವಲ್ಲಿ ಹುಬ್ಬಳ್ಳಿ ರೈಲ್ವೆ ಕಾರ್ಯಾಗಾರದ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

    ಅಂದಾಜು 130 ವರ್ಷಗಳಷ್ಟು ಹಳೇಯದಾದ ಈ ಗೋಪುರ ಗಡಿಯಾರ 2010ರಿಂದ ಬಂದ್ ಇತ್ತು. ಈ ನಡುವೆ ಕಾಲೇಜಿನ ಪ್ರಾಚಾರ್ಯರು ಗಡಿಯಾರ ದುರಸ್ತಿಗೆ ಪ್ರಖ್ಯಾತ ಎಚ್​ಎಂಟಿ ವಾಚ್ ಫ್ಯಾಕ್ಟರಿಯಿಂದ ಹಿಡಿದು ಹಲವು ಕಡೆ ಪ್ರಯತ್ನಿಸಿದ್ದರೂ ಪ್ರಯೋಜನವಾಗಿರಲಿಲ್ಲ. ಆಗಸ್ಟ್ 25ರಂದು ಕರ್ನಾಟಕ ವಿಶ್ವವಿದ್ಯಾಲಯದ ರಜಿಸ್ಟ್ರಾರ್ ಅವರು ಹುಬ್ಬಳ್ಳಿಯಲ್ಲಿ ವಲಯ ಕಚೇರಿ ಹೊಂದಿರುವ ನೈಋತ್ಯ ರೈಲ್ವೆಗೆ ಪತ್ರ ಬರೆದು ಪಾರಂಪರಿಕ ಗೋಪುರ ಗಡಿಯಾರವನ್ನು ಸರಿಪಡಿಸಬೇಕೆಂದು ಕೋರಿದ್ದರು.

    ಇದಕ್ಕೆ ಸ್ಪಂದಿಸಿದ ರೈಲ್ವೆ ಕಾರ್ಯಾಗಾರದ ಮುಖ್ಯ ಕಾರ್ಯ ವ್ಯವಸ್ಥಾಪಕ ನೀರಜ ಜೈನ್ ಅವರು ಇದನ್ನು ಸವಾಲಾಗಿ ಸ್ವೀಕರಿಸಿದರು. ಕಾರ್ಯಾಗಾರದ ಸಿಬ್ಬಂದಿ 1 ತಿಂಗಳ ಅವಧಿಯಲ್ಲಿ ಗೋಪುರ ಗಡಿಯಾರವನ್ನು ದುರಸ್ತಿಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ 4 ದಿನ ಗಳಿಂದ ಗಡಿಯಾರದ ಚಲನೆಯ ಮೇಲೆ ನಿಗಾ ಇಟ್ಟಿದ್ದ ರೈಲ್ವೆ ಅಧಿಕಾರಿಗಳು ಶುಕ್ರವಾರದಂದು ಗಡಿಯಾರ ಸರಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಘೊಷಿಸಿದ್ದಾರೆ.

    ರೈಲ್ವೆ ಏಕೆ?

    ಧಾರವಾಡದ ಹಾಲಿ ಕರ್ನಾಟಕ ಕಲಾ ಮಹಾವಿದ್ಯಾಲಯ ಕಟ್ಟಡವು ಸದರ್ನ್ ಮಹ್ರತ್ ರೈಲ್ವೆ(ಎಸ್​ಎಂಆರ್)ಯ ಕೇಂದ್ರ ಕಚೇರಿಯಾಗಿತ್ತು. 1890ರಲ್ಲಿ ಕಚೇರಿ ಕಾರ್ಯಾರಂಭ ಮಾಡಿತ್ತು. 1920ರಲ್ಲಿ ಬಾಂಬೆ ಪ್ರಿಸಿಡೆನ್ಸಿಯು ಈ ಭಾಗದಲ್ಲಿ ಉನ್ನತ ಶಿಕ್ಷಣಕ್ಕಾಗಿ ಈ ಕಟ್ಟಡವನ್ನು ರೈಲ್ವೆಯಿಂದ 3,26,956 ರೂ.ಗೆ ಖರೀದಿಸಿತ್ತು. ಆಗಲೇ ಕರ್ನಾಟಕ ಕಲಾ ಮಹಾವಿದ್ಯಾಲಯ ಉದಯವಾಗಿದ್ದು.

    1890ರಲ್ಲಿಯೇ ಈ ಕಟ್ಟಡದ ಮೇಲೆ ಗೋಪುರ ಗಡಿಯಾರವನ್ನು ಅಳವಡಿಸಲಾಗಿತ್ತು. ಲಂಡನ್ನಿನ ಖ್ಯಾತ ವಾಚ್ ಮೇಕರ್ ಪೀಟರ್ ಓರ್ ಅವರಿಂದ ಈ ಗಡಿಯಾರವನ್ನು ತರಿಸಲಾಗಿತ್ತು. ಗಡಿಯಾರದ ಚಲನೆಯ ತಂತ್ರಜ್ಞಾನವು ವಿಶಿಷ್ಟವಾಗಿದ್ದು, ವಿಶಾಲವಾದ ಕೊಠಡಿಯಲ್ಲಿ ಗೇರ್ ಬಾಕ್ಸ್, ಇನ್ನಿತರ ಬಿಡಿಭಾಗಗಳನ್ನು ಸ್ಥಾಪಿಸಲಾಗಿದೆ. ಗೇರ್ ಬಾಕ್ಸ್ ಸುತ್ತಳತೆ 2 ಅಡಿ 9 ಇಂಚು ಇದೆ. ಗಡಿಯಾರದ ಗಂಟೆ ಮುಳ್ಳು 1 ಅಡಿ 9 ಇಂಚು, ನಿಮಿಷದ ಮುಳ್ಳು 2 ಅಡಿ 5 ಇಂಚು ಉದ್ದವಿದೆ.

    ಉಪ ಕಾರ್ಯ ವ್ಯವಸ್ಥಾಪಕ ಅನ್ವೇಶಕುಮಾರ ನೇತೃತ್ವದಲ್ಲಿ, ಹಿರಿಯ ಸೆಕ್ಷನ್ ಇಂಜಿನಿಯರ್ ವಿ.ವಿ. ವಿಶ್ವನಾಥ, ಸಿಬ್ಬಂದಿ ಡಿ.ಎಸ್.ಲೋಂಡೆ, ಮನ್ಸೂರ್ ಅಲಿ ಮುಲ್ಲಾ, ಅಲ್ತಾಫ್ ಗಡಿಯಾರವನ್ನು ದುರಸ್ತಿಗೊಳಿಸುವಲ್ಲಿ ಶ್ರಮಿಸಿದ್ದಾರೆ.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts