More

    ಪಹಣಿಯಲ್ಲಿನ ತಪ್ಪು ಸರಿಪಡಿಸಿ

    ಶಿರಸಿ: 2018-19ನೇ ಸಾಲಿಗೆ ಸಂಬಂಧಿಸಿ ಬೆಳೆಸಾಲದ ಬಾಕಿ, ಪಹಣಿಯಲ್ಲಿ ಬೆಳೆಗಳ ತಪ್ಪು ನಮೂದು, ಬರದ ಸಾಲಮನ್ನಾ ಸೌಲಭ್ಯ, ಸ್ಥಗಿತಗೊಂಡ ಯಶಸ್ವಿನಿ ಆರೋಗ್ಯ ವಿಮೆ ಯೋಜನೆ ಸೇರಿ ವಿವಿಧ ಸಮಸ್ಯೆಗಳನ್ನು ಪರಿಹರಿಸುವಂತೆ ಒತ್ತಾಯಿಸಿ ಶುಕ್ರವಾರ ಇಲ್ಲಿನ ಕೃಷಿ, ಕೃಷಿಕ ಹಾಗೂ ಕೃಷಿ ಪತ್ತಿನ ಸಹಕಾರ ಸಂಘಗಳ ಶ್ರೇಯೋಭಿವೃದ್ಧಿ ಟ್ರಸ್ಟ್ ಪ್ರಮುಖರು ಉಪವಿಭಾಗಾಧಿಕಾರಿ ಮೂಲಕ ರಾಜ್ಯದ ಮುಖ್ಯಮಂತ್ರಿಯನ್ನು ಒತ್ತಾಯಿಸಿದ್ದಾರೆ.

    ಈ ಕುರಿತು ಉಪವಿಭಾಗಾಧಿಕಾರಿ ಡಾ.ಈಶ್ವರ ಉಳ್ಳಾಗಡ್ಡಿ ಅವರಿಗೆ ಮನವಿ ನೀಡಿದ್ದು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ವ್ಯವಹರಿಸುತ್ತಿರುವ ಕೃಷಿಕ ಸದಸ್ಯರು, ಸರ್ಕಾರದಿಂದ ಸಿಗುತ್ತಿರುವ ಕೆಲವು ಸೌಲಭ್ಯಗಳನ್ನು ಪಡೆಯುವಲ್ಲಿ ಸರ್ಕಾರ ವಂಚಿತರಾಗುತ್ತಿದ್ದಾರೆ. 2018-19ನೇ ಸಾಲಿಗೆ ಸಂಬಂಧಿಸಿ ಬೆಳೆಸಾಲ ಪಡೆದ ಸಹಕಾರಿ ಸಂಘಗಳ ಕೃಷಿಕ ಸದಸ್ಯರು ತಮ್ಮ ಕೃಷಿ ಕ್ಷೇತ್ರಕ್ಕೆ ಬೆಳೆವಿಮೆ ಮಾಡಿಸಿದ್ದು, ಈವರೆಗೂ ಕೆಲವು ಪಂಚಾಯಿತಿಗೆ ಒಳಪಡುವ ಕೃಷಿಕ ಸದಸ್ಯರಿಗೆ ಬೆಳೆವಿಮೆ ಪರಿಹಾರ ದೊರಕಿಲ್ಲ. ಕಂದಾಯ ಇಲಾಖೆಯಿಂದ ಉಂಟಾದ ಸಮಸ್ಯೆಯಿಂದ ರೈತರಿಗೆ ಪರಿಹಾರ ದೊರಕದಿರುವ ಪರಿಸ್ಥಿತಿ ಉಂಟಾಗಿದ್ದು, ಕೂಡಲೇ ಸೂಕ್ತ ಕ್ರಮ ಕೈಗೊಂಡು ರೈತರಿಗೆ ಪರಿಹಾರ ಹಣ ಜಮಾಗೊಳ್ಳುವಂತೆ ಕ್ರಮ ಕೈಗೊಳ್ಳಬೇಕು.

    ಇತ್ತೀಚೆಗೆ ರೈತರು ಬೆಳೆದ ಬೆಳೆಗಳನ್ನು ಪಹಣಿಯಲ್ಲಿ ನಮೂದಿಸಲು ಕಂದಾಯ ಇಲಾಖೆಯವರು ಮೊಬೈಲ್ ಆಪ್ ಮೂಲಕ ದಾಖಲಿಸುವ ಕ್ರಮ ಕೈಗೊಂಡಿದ್ದು, ಪ್ರಸ್ತುತ ಹಲವಾರು ರೈತರ ಪಹಣಿಯಲ್ಲಿ ದೀರ್ಘಾವಧಿ ಬೆಳೆಗಳಾದ ತೆಂಗು ಹಾಗೂ ಅಡಕೆ ಇದ್ದರೂ ಬಾಳೆ, ಹಸಿಹುಲ್ಲು, ಅಕೇಶಿಯಾ, ನೋ ಕ್ರಾಪ್ ಇತ್ಯಾದಿ ವಿವರಗಳು, ಭತ್ತ ಬೆಳೆಯುವ ಕ್ಷೇತ್ರದಲ್ಲಿ ಹಸಿಹುಲ್ಲು, ಒಣಹುಲ್ಲು, ಪಾಳು ಭೂಮಿ ಇತ್ಯಾದಿ ನಮೂದಾಗುತ್ತಿದೆ. ಅಲ್ಲದೇ ಮುಖ್ಯಬೆಳೆಯಾಗಿ ಅಡಕೆ ಇರುವ ಕ್ಷೇತ್ರದ ಪಹಣಿಯಲ್ಲಿ ಉಪಬೆಳೆಯಾಗಿ ಅಡಕೆಯನ್ನು, ಮುಖ್ಯಬೆಳೆಯಾಗಿ ಬಾಳೆ ಅಥವಾ ಕಾಳುಮೆಣಸು ಎಂದು ತಪ್ಪಾಗಿ ನಮೂದಿಸಲಾಗುತ್ತಿದೆ. ಸಮರ್ಪಕ ಬೆಳೆವಿವರ ದಾಖಲಾಗದಿದ್ದಲ್ಲಿ ಸದಸ್ಯರು ಹಾಗೂ ಸಾಲ ನೀಡುವ ಸಂಘ-ಸಂಸ್ಥೆಗಳು ರೈತರ ಬೆಳೆಗಳಿಗೆ ಬೆಳೆವಿಮೆ ದಾಖಲಿಸುವಲ್ಲಿ ಸಮಸ್ಯೆಗಳನ್ನು ಎದುರಿಸುವ ಪರಿಸ್ಥಿತಿ ನಿರ್ವಣವಾಗಿದೆ. ಹಾಗಾಗಿ ಪ್ರತೀ ವರ್ಷ ಮಾರ್ಚ್ ತಿಂಗಳ ಒಳಗಡೆ ರೈತರ ಪಹಣಿಪತ್ರಿಕೆಯಲ್ಲಿ ಸಕಾಲಿಕವಾಗಿ ಹಾಗೂ ಸಮರ್ಪಕವಾಗಿ ನಮೂದಾಗುವಂತೆ ಮಾಡಬೇಕು ಎಂದು ಒತ್ತಾಯಿಸಿದರು.

    ಈ ವೇಳೆ ತಹಸೀಲ್ದಾರ್ ಎಂ.ಆರ್.ಕುಲಕರ್ಣಿ, ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ಹೆಗಡೆ ಕಡವೆ, ಕಾರ್ಯದರ್ಶಿ ಎನ್.ಬಿ.ಹೆಗಡೆ ಮತ್ತೀಹಳ್ಳಿ, ಪ್ರಮುಖರಾದ ಗೋಪಾಲಕೃಷ್ಣ ವೈದ್ಯ, ಎಸ್.ಎನ್.ಭಟ್ಟ, ಜಿ.ಆರ್.ಹೆಗಡೆ ಇತರರಿದ್ದರು.

    ಯಶಸ್ವಿನಿ ಪುನಃ ಜಾರಿಯಾಗಲಿ: ಈ ಹಿಂದೆ ಇದ್ದ ಯಶಸ್ವಿನಿ ಆರೋಗ್ಯ ವಿಮೆ ಯೋಜನೆಯನ್ನು ಸಮಗ್ರ ಕರ್ನಾಟಕ ವಿಮಾ ಯೋಜನೆಯಲ್ಲಿ ವಿಲೀನಗೊಳಿಸಿರುವುದು ಸದಸ್ಯರಿಗೆ ಹೆಚ್ಚಿನ ಪ್ರಯೋಜನ ದೊರಕದಂತಾಗಿದೆ. ಸಹಕಾರ ಸಂಘಗಳ ಸದಸ್ಯರಿಗೆ ಅನುಕೂಲವಾಗುತ್ತಿದ್ದ ಯಶಸ್ವಿನಿ ವಿಮಾ ಯೋಜನೆಯನ್ನು ಪುನಃ ಈ ಮೊದಲಿದ್ದ ಪದ್ಧತಿಯಲ್ಲಿಯೇ ಜಾರಿಗೊಳಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

    ಅರ್ಹರಿಗೆ ಸಾಲಮನ್ನಾ ಸೌಲಭ್ಯ ಸಿಗಲಿ: ಹೊರಬಾಕಿ ಇರುವ ಕೃಷಿಕ ಸದಸ್ಯರ ಬೆಳೆಸಾಲದ ಪೈಕಿ 1 ಲಕ್ಷ ರೂ.ವರೆಗೆ ಮನ್ನಾವನ್ನು ಸರ್ಕಾರವು ಘೊಷಣೆ ಮಾಡಿದ್ದು, ಕೆಲವು ಕೃಷಿಕರು ನೈಜವಾಗಿ ಸಾಲಮನ್ನಾ ಪಡೆಯಲು ಅರ್ಹತೆ ಹೊಂದಿದ್ದರೂ ಇದುವರೆಗೆ ಸಾಲ ಮನ್ನಾ ದೊರಕಿಲ್ಲ. ಈ ನಿಟ್ಟಿನಲ್ಲಿ ಈಗಾಗಲೇ ಸಂಬಂಧಿಸಿದ ಇಲಾಖೆಗಳಿಗೆ ಮನವಿ ಸಲ್ಲಿಸಿದ್ದರೂ ಇದುವರೆಗೂ ಮಾಹಿತಿ ಸರಿಪಡಿಸಲು ಆದೇಶ ದೊರಕಿಲ್ಲ. ಸಾಲಮನ್ನಾ ಮಾಡಿ ಸರಿಸುಮಾರು ಒಂದೂವರೆ ವರ್ಷಗಳೇ ಕಳೆದರೂ ಕೆಲವು ಅರ್ಹ ಕೃಷಿಕರಿಗೆ ದೊರಕಿಲ್ಲ. ಈ ನಿಟ್ಟಿನಲ್ಲಿ ಸರ್ಕಾರಕ್ಕೆ ಹಾಗೂ ಸಂಬಂಧಿಸಿದ ಇಲಾಖೆಗಳಿಗೆ ಒತ್ತಾಯಿಸಿ ಶೀಘ್ರವಾಗಿ ನೈಜ ಅರ್ಹತೆ ಹೊಂದಿದ ಸಾಲಮನ್ನಾದಿಂದ ವಂಚಿತರಾದ ಸದಸ್ಯ ಸಂಘಗಳ ಕೃಷಿಕರಿಗೆ ಸೌಲಭ್ಯ ದೊರಕುವಂತೆ ಕ್ರಮವಹಿಸಬೇಕು ಎಂದು ಕೃಷಿ ಪತ್ತಿನ ಸಹಕಾರ ಸಂಘಗಳ ಶ್ರೇಯೋಭಿವೃದ್ಧಿ ಟ್ರಸ್ಟ್ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts