More

    ಪರೀಕ್ಷೆ ಮಾಡದಿದ್ದರೂ ಪಾಸಿಟಿವ್!

    ಖಾನಾಪುರ: ಆರೋಗ್ಯ ಇಲಾಖೆ ಮಾಡಿದ ಎಡವಟ್ಟಿನಿಂದಾಗಿ ದಂಪತಿ ಸಂಕಷ್ಟಕ್ಕೆ ಒಳಗಾಗುವಂತಾಗಿದೆ. ಕೋವಿಡ್ ಪರೀಕ್ಷೆಯನ್ನೇ ಮಾಡಿಸದಿದ್ದರೂ ವರದಿ ಪಾಸಿಟಿವ್ ಬಂದಿದ್ದರಿಂದ ದಂಪತಿ ಬೆಚ್ಚಿಬಿದ್ದಿದ್ದಾರೆ. ಇದು ಕೋವಿಡ್ ಪರೀಕ್ಷೆ ಬಗ್ಗೆ ಇನ್ನಷ್ಟು ಅನುಮಾನ ಹುಟ್ಟುವಂತಾಗಿದೆ.

    ಗ್ರಾಮದ ಮಹೇಂದ್ರಗೌಡ ಪಾಟೀಲ ಎಂಬುವರು ಮೇ 4ರಂದು ಕೋವಿಡ್ ತಪಾಸಣೆಗಾಗಿ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಿದ್ದರು. ಅಲ್ಲಿ ಒಂದೇ ಮೊಬೈಲ್ ಸಂಖ್ಯೆ ನೀಡಿ ಇಬ್ಬರ ಪರೀಕ್ಷೆ ಮಾಡಿಸಲು ಹೆಸರು ನೋಂದಾಯಿಸಿದ್ದರು. ಅಲ್ಲದೆ, ಮೊಬೈಲ್‌ಗೆ ಒಟಿಪಿ ಬಂದಿತ್ತು. ಬಳಿಕ ಟೆಸ್ಟ್‌ಗೆ ಪಾಳಿ ಬರಲು ಇನ್ನೂ ಸಮಯ ಇದ್ದುದರಿಂದ ಮನೆಗೆ ಹೋಗಿ ಪತ್ನಿಯನ್ನು ಕರೆತಂದಿದ್ದಾರೆ. ಆದರೆ, ಅವರು ವಾಪಸ್ ಬರುವಷ್ಟರಲ್ಲೇ ಕೋವಿಡ್ ಪರೀಕ್ಷಾ ತಂಡ ಹುಕ್ಕೇರಿಗೆ ತೆರಳಿತ್ತು. ಹೀಗಾಗಿ ಮಹೇಂದ್ರ ದಂಪತಿಗೆ ಕೋವಿಡ್ ಪರೀಕ್ಷೆ ಮಾಡಿಸಲು ಆಗಿರಲಿಲ್ಲ. ಬಳಿಕ ಅವರು ಗೊಣಗುತ್ತಲೇ ಮನೆಗೆ ವಾಪಸ್ ತೆರಳಿದ್ದರು.

    ಒಂದು ವಾರದ ಬಳಿಕ ಮಹೇಂದ್ರ ಪಾಟೀಲ ಅವರ ಮೊಬೈಲ್‌ಗೆ ‘ನಿಮಗೆ ಕರೊನಾ ಪಾಸಿಟಿವ್ ಬಂದಿವೆ. ನಿಮ್ಮ ಜಿಲ್ಲಾ ರೋಗಿ ಕೋಡ್ ಬಿಎಲ್‌ವಿ-43151, ಕರ್ನಾಟಕ ಸರ್ಕಾರ’ ಎಂಬ ಸಂದೇಶ ಬಂದಿದೆ. ಆದರೆ, ಅವರ ಪತ್ನಿಯ ವರದಿ ನೆಗೆಟಿವ್ ಎಂದು ನೀಡಿದ್ದಾರೆ. ನಾವಿಬ್ಬರೂ ಗಂಟಲು ಹಾಗೂ ಮೂಗಿನ ದ್ರವ ಮಾದರಿಯನ್ನೇ ನೀಡಿಲ್ಲ. ಆದರೂ ನಮಗೆ ಪಾಸಿಟಿವ್ ಹಾಗೂ ನೆಗೆಟಿವ್ ವರದಿ ಹೇಗೆ ಕೊಟ್ಟರು ಎಂದು ಮಹೇಂದ್ರಗೌಡ ಪ್ರಶ್ನಿಸಿದ್ದಾರೆ.

    ಸಿಬ್ಬಂದಿಗೂ ಗೊಂದಲ: ಪರೀಕ್ಷಾ ವರದಿ ಪಾಸಿಟಿವ್ ಬಂದಿದ್ದರಿಂದ ಗ್ರಾಪಂ ಸಿಬ್ಬಂದಿ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಮಹೇಂದ್ರ ಪಾಟೀಲ ಮನೆಯತ್ತ ಧಾವಿಸಿದ್ದಾರೆ. ಅವರ ಸಂಪರ್ಕದಲ್ಲಿರುವವರ ಮಾಹಿತಿ ನೀಡುವಂತೆ ತಿಳಿಸಿದ್ದಾರೆ. ಆದರೆ, ‘ನಾನೇ ಪರೀಕ್ಷೆ ಮಾಡಿಸಿಕೊಂಡಿಲ್ಲ. ನನ್ನ ಸಂಪರ್ಕದಲ್ಲಿದ್ದವರ ಮಾಹಿತಿ ನೀಡುವುದು ಹೇಗೆ?’ ಎನ್ನುತ್ತ ಮಹೇಂದ್ರಗೌಡ ಅವರು ವಾಪಸ್ ಕಳುಹಿಸಿದ್ದಾರೆ. ಇದರಿಂದಾಗಿ ಸ್ವತಃ ಸಿಬ್ಬಂದಿಯೂ ಗೊಂದಲಕ್ಕೆ ಒಳಗಾಗಿದ್ದಾರೆ.

    ಈ ಬೆಳವಣಿಗೆಯಿಂದ ನಾನು, ಪತ್ನಿ ಮಾನಸಿಕ ಯಾತನೆ ಅನುಭವಿಸುತ್ತಿದ್ದೇವೆ. ಇಂತಹ ಪ್ರಮಾದಗಳು ತಲೆದೋರದಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಎಚ್ಚರ ವಹಿಸಬೇಕು. ಸಮಸ್ಯೆ ಸರಿಪಡಿಸಬೇಕು.
    | ಮಹೇಂದ್ರಗೌಡ ಪಾಟೀಲ ಉಳ್ಳಾಗಡ್ಡಿ-ಖಾನಾಪುರ ನಿವಾಸಿ

    | ಸಂಜೀವ ಮುಷ್ಟಗಿ ಉಳ್ಳಾಗಡ್ಡಿ|

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts