More

    ಪರೀಕ್ಷೆಯಿಂದ ಹೊರಗುಳಿಯದಂತೆ ಕ್ರಮ

    ಹಾವೇರಿ: ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ನೋಂದಾಯಿಸಿ ಕೊಂಡಿರುವ ಯಾವುದೇ ವಿದ್ಯಾರ್ಥಿ ಪರೀಕ್ಷೆಯಿಂದ ಹೊರಗುಳಿಯಬಾರದು. ಆಯಾ ಶಾಲಾ ಮುಖ್ಯಸ್ಥರು ಮಕ್ಕಳಿಗೆ ಸರಿಯಾದ ಮಾಹಿತಿ ನೀಡಿ, ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡುವಂತೆ ಡಿಡಿಪಿಐ ಅಂದಾನೆಪ್ಪ ವಡಗೇರಿ ಹೇಳಿದರು.
    ನಗರದ ಜಿಲ್ಲಾ ಗುರುಭವನದಲ್ಲಿ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ನಡೆಸುವ ಸಂಬಂಧ ಶಿಕ್ಷಣ ಇಲಾಖಾ ಅಧಿಕಾರಿಗಳಿಗೆ ಸೋಮವಾರ ಆಯೋಜಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
    ಕರೊನಾದಂತಹ ಸಂದಿಗ್ದ ಸಂದರ್ಭದಲ್ಲಿ ಕಳೆದ ಬಾರಿ ಅತ್ಯಂತ ಯಶಸ್ವಿಯಾಗಿ ಪರೀಕ್ಷೆ ನಡೆಸಿದ್ದೇವೆ. ಈ ಬಾರಿಯೂ ಕೋವಿಡ್ ಹಾಗೂ ಶಿಕ್ಷಣ ಇಲಾಖೆಯ ಮಾರ್ಗಸೂಚಿಯಂತೆ ಪರೀಕ್ಷೆ ನಡೆಸಬೇಕಾಗಿದೆ. ಮಕ್ಕಳ ಗರಿಷ್ಠ ಸುರಕ್ಷತೆಗೆ ಆದ್ಯತೆ ನೀಡಬೇಕು. ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ನಡೆಸುತ್ತಿರುವ ಶಿಕ್ಷಣ ಇಲಾಖೆಯ ಕ್ರಮವನ್ನು ದೇಶವೇ ಗಮನಿಸುತ್ತಿದೆ. ಕಳೆದ ಬಾರಿಯಂತೆ ಯಶಸ್ವಿಯಾಗಿ ಸುರಕ್ಷಾ ಮಾನದಂಡವನ್ನು ಅನುಸರಿಸಿ, ಮಕ್ಕಳ ರಕ್ಷಣೆಯೊಂದಿಗೆ ವಾರ್ಷಿಕ ಪರೀಕ್ಷೆಗೆ ಸಿದ್ಧರಾಗಬೇಕಾಗಿದೆ ಎಂದರು.
    ಎಲ್ಲ ಶಾಲಾ ಮುಖ್ಯಸ್ಥರು ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲು ಅತ್ಯಂತ ಜವಾಬ್ದಾರಿಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಮಕ್ಕಳ ಪರೀಕ್ಷಾ ಪ್ರವೇಶ ಪತ್ರವನ್ನು ಅಪ್​ಲೋಡ್ ಮಾಡಿದ 24 ಗಂಟೆಗಳಲ್ಲಿ ಜಿಲ್ಲೆಯ ನೋಂದಾಯಿತ ಎಲ್ಲ ವಿದ್ಯಾರ್ಥಿಗಳು ಪರೀಕ್ಷೆ ಅನುಮತಿ ಪತ್ರವನ್ನು ಡೌನ್​ಲೋಡ್ ಮಾಡಿಕೊಂಡಿದ್ದಾರೆ. ಇದರಲ್ಲಿ ಜಿಲ್ಲೆ ರಾಜ್ಯದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ. ಇದೇ ರೀತಿಯಾಗಿ ಎಲ್ಲರೂ ಮುಂದಿನ ದಿನಗಳಲ್ಲಿ ಅತ್ಯಂತ ಉತ್ಸಾಹದಿಂದ ಜವಾಬ್ದಾರಿಯುತವಾಗಿ ಪರೀಕ್ಷಾ ಕಾರ್ಯ ನಿರ್ವಹಿಸಬೇಕು ಎಂದರು.
    ಬಿಇಒ ಎಂ.ಎಚ್. ಪಾಟೀಲ ಮಾತನಾಡಿ, ಪರೀಕ್ಷಾ ಕೇಂದ್ರಗಳಲ್ಲಿ ಹೆಲ್ಪ್​ಡೆಸ್ಕ್ ಸ್ಥಾಪಿಸಲಾಗುವುದು. ಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿದೆ. ಪರೀಕ್ಷೆ ಆರಂಭದಿಂದ ಅತ್ಯಂದವರೆಗೆ ಪರೀಕ್ಷಾ ಕೇಂದ್ರಗಳಲ್ಲಿ ಗುಂಪು ಗೂಡುವಿಕೆಯನ್ನು ತಡೆಗಟ್ಟಲು ವ್ಯವಸ್ಥೆ ಮಾಡಲಾಗಿದೆ. ಪ್ರತಿ ಕೊಠಡಿಯಲ್ಲಿ 12 ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗಿದೆ. ಜಿಗ್​ಜಾಗ್ ಮಾದರಿಯಲ್ಲಿ ವಿದ್ಯಾರ್ಥಿಗಳನ್ನು ಕೂರಿಸಲಾಗುವುದು. ಒಂದು ಡೆಸ್ಕಿಗೆ ಒಬ್ಬ ವಿದ್ಯಾರ್ಥಿಯನ್ನು ಮಾತ್ರ ಕೂರಿಸಲಾಗುವುದು. ನೆಗಡಿ, ಜ್ವರ, ಕೆಮ್ಮಿನ ಲಕ್ಷಣಗಳು ಕಂಡುಬಂದರೆ, 94ಕ್ಕಿಂತ ಕಡಿಮೆ ಪಲ್ಸ್ ರೇಟ್ ಹೊಂದಿದ್ದರೆ ಇಂತಹ ವಿದ್ಯಾರ್ಥಿಗಳಿಗೆ ವಿಶೇಷ ಕೊಠಡಿಯಲ್ಲಿ ಕೂರಿಸಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಮಾಸ್ಕ್ ವಿತರಿಸಲಾಗುವುದು. ಅತ್ಯಂತ ವ್ಯವಸ್ಥಿತವಾಗಿ ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ಶಾಲಾ ಶಿಕ್ಷಕರು ನಿಯೋಜಿತ ಕೆಲಸವನ್ನು ನಿರ್ವಹಿಸಬೇಕು ಎಂದರು.
    ಕಾರ್ಯಾಗಾರದಲ್ಲಿ ದೈಹಿಕ ಶಿಕ್ಷಣಾಧಿಕಾರಿ ಎನ್.ಐ. ಇಚ್ಚಂಗಿ, ಸಂಪನ್ಮೂಲ ವ್ಯಕ್ತಿಗಳಾದ ಎನ್.ಐ. ಹಂಚಿನಾಳ, ಎಂ.ಎಸ್. ಗುಂಡಪಲ್ಲಿ ಹಾಗೂ ಪರೀಕ್ಷಾ ಕೇಂದ್ರಗಳ ಅಧೀಕ್ಷಕರು ಪಾಲ್ಗೊಂಡಿದ್ದರು.
    4,191 ವಿದ್ಯಾರ್ಥಿಗಳು ನೋಂದಣಿ: ಕೊಠಡಿಯಲ್ಲಿ ಪರಸ್ಪರ ಅಂತರ ಕಾಯ್ದುಕೊಳ್ಳಲು ಕಳೆದ ವರ್ಷಕ್ಕಿಂತ ಈ ವರ್ಷ 16 ಪರೀಕ್ಷಾ ಕೇಂದ್ರಗಳನ್ನು ಹೆಚ್ಚುವರಿಯಾಗಿ ವ್ಯವಸ್ಥೆ ಮಾಡಲಾಗಿದೆ. ಹಾವೇರಿ ತಾಲೂಕಿನಲ್ಲಿ ಒಟ್ಟು 4,191 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ. ತಾಲೂಕಿನಲ್ಲಿ 29 ಪರೀಕ್ಷಾ ಕೇಂದ್ರಗಳ ವ್ಯವಸ್ಥೆ ಮಾಡಲಾಗಿದೆ. 791 ಪರೀಕ್ಷಾ ಸಿಬ್ಬಂದಿ ನೇಮಿಸಲಾಗಿದೆ. ಬೇರೆ ಜಿಲ್ಲೆಯ 136 ವಿದ್ಯಾರ್ಥಿಗಳು ತಾಲೂಕಿನಲ್ಲಿ ಪರೀಕ್ಷೆ ಬರೆಯಲಿದ್ದಾರೆ ಎಂದು ಡಿಸಿಪಿಐ ವಡಗೇರಿ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts