More

    ಪರೀಕ್ಷೆಗೆ ಸಕಲ ತಯಾರಿ

    ಹಳಿಯಾಳ: ಜೂ. 25ರಿಂದ ಆರಂಭಗೊಳ್ಳಲಿರುವ ಎಸ್​ಎಸ್​ಎಲ್​ಸಿ ಪರೀಕ್ಷೆಯನ್ನು ಹಳಿಯಾಳ ಮತ್ತು ದಾಂಡೇಲಿ ತಾಲೂಕಿನಲ್ಲಿ ಒಟ್ಟು 2874 ವಿದ್ಯಾರ್ಥಿಗಳು ಬರೆಯಲಿದ್ದಾರೆ ಎಂದು ಬಿಇಒ ಸಮೀರ ಮುಲ್ಲಾ ತಿಳಿಸಿದ್ದಾರೆ.

    ಜೂನ್ 24ರಂದು ಬುಧವಾರ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 2ರವರೆಗೆ ತಾಲೂಕಿನ ಎಲ್ಲ 7 ಪರೀಕ್ಷಾ ಕೇಂದ್ರಗಳನ್ನು ಪರೀಕ್ಷಾರ್ಥಿಗಳಿಗೆ ಹಾಗೂ ಅವರ ಪಾಲಕರಿಗೆ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿದೆ.

    ಹಳಿಯಾಳ ತಾಲೂಕಿನಲ್ಲಿ 1744 ಹಾಗೂ ದಾಂಡೇಲಿ ತಾಲೂಕಿನಲ್ಲಿ 1130 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಹಳಿಯಾಳ ತಾಲೂಕಿನಲ್ಲಿ 4 ಪರೀಕ್ಷಾ ಕೇಂದ್ರ ಹಾಗೂ 2 ಉಪಕೇಂದ್ರಗಳಲ್ಲಿ ಮತ್ತು ದಾಂಡೇಲಿಯಲ್ಲಿ 3 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಪರೀಕ್ಷೆಯನ್ನು ಸುಸೂತ್ರವಾಗಿ ನಡೆಸಲು ಪರೀಕ್ಷೆ ಕೇಂದ್ರಗಳ ಮೇಲ್ವಿಚಾರಣೆಗೆ 7 ಅಧೀಕ್ಷಕರು, 5 ಉಪ ಅಧೀಕ್ಷಕರು, 7 ಪ್ರಶ್ನೆ ಪತ್ರಿಕೆ ಪಾಲಕರು, 233 ಕೊಠಡಿ ಮೇಲ್ವಿಚಾರಕರು, 9 ಮೊಬೈಲ್ ಸ್ವಾಧಿನಾಧಿಕಾರಿಗಳು, 7 ಸ್ಥಾನಿಕ ಜಾಗೃತ ದಳ, 7 ವೀಕ್ಷಕರು, 7 ಅಧಿಕಾರಿಗಳು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರ ನಿಗಾ ವಹಿಸಲು, 32 ಆರೋಗ್ಯ ಸಿಬ್ಬಂದಿ, 28 ಸ್ಕೌಟ್ಸ್ ಗೈಡ್ಸ್ ಸ್ವಯಂ ಸೇವಕರು, 21 ಪೊಲೀಸ್ ಸಿಬ್ಬಂದಿ, 4 ಸಂಚಾರಿ ದಳಗಳನ್ನು ನೇಮಿಸಲಾಗಿದೆ.

    ಹಳಿಯಾಳ ಸಾರಿಗೆ ಘಟಕದಿಂದ 27 ರೂಟ್​ಗಳಲ್ಲಿ, ಹಾಗೂ ದಾಂಡೇಲಿ ಘಟಕದಿಂದ 10 ರೂಟ್​ಗಳಲ್ಲಿ ಬಸ್ ವ್ಯವಸ್ಥೆ ಮಾಡಲಾಗಿದ್ದು, 600 ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂದು ತಿಳಿಸಿದ್ದಾರೆ.

    ಎಸ್​ಎಸ್​ಎಲ್​ಸಿ ಪರೀಕ್ಷೆಗೆ ಬದಲಿ ವ್ಯವಸ್ಥೆ: ಎಸ್​ಎಸ್​ಎಲ್​ಸಿ ಪರೀಕ್ಷೆಗೆ ವಿದ್ಯಾರ್ಥಿಗಳು ಹಾಜರಾಗಲು ಅನುಕೂಲವಾಗುವಂತೆ ಯಲ್ಲಾಪುರ ತಾಲೂಕಿನ 8 ಮಾರ್ಗಗಳಿಗೆ ಬಸ್ ವ್ಯವಸ್ಥೆ ಕಲ್ಪಿಸುವ ನಿರ್ಣಯವನ್ನು ಶಿಕ್ಷಣ ಇಲಾಖೆ ಕೈಗೊಂಡಿತ್ತು. ಆದರೆ, ಘಟಕದ ನಿರ್ವಾಹಕರೊಬ್ಬರಿಗೆ ಕರೊನಾ ಇರುವುದರಿಂದ ಇಲ್ಲಿನ ಯಾವ ಸಿಬ್ಬಂದಿಯನ್ನೂ ಪರೀಕ್ಷೆ ವೇಳೆ ಕರ್ತವ್ಯಕ್ಕೆ ಬಳಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಪರೀಕ್ಷೆಗೆ ವಿದ್ಯಾರ್ಥಿಗಳನ್ನು ಕರೆತರಲು ಶಿರಸಿ ಹಾಗೂ ಅಂಕೋಲಾದ ಬಸ್​ಗಳು, ಚಾಲಕರು ಹಾಗೂ ನಿರ್ವಾಹಕರನ್ನು ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ಪಾಲಕರು, ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗಬಾರದೆಂದು ಬಿಇಒ ಎನ್. ಆರ್. ಹೆಗಡೆ ತಿಳಿಸಿದ್ದಾರೆ.

    ಮಕ್ಕಳಿಗೆ ಬಸ್ ಸೌಲಭ್ಯ: ಎಸ್​ಎಸ್​ಎಲ್​ಸಿ ಪರೀಕ್ಷೆಗೆ ಹಾಜರಾಗುವ ಶಿರಸಿ ಶೈಕ್ಷಣಿಕ ಜಿಲ್ಲೆಯ ಮಕ್ಕಳಿಗೆ ಬಸ್ ಸೌಲಭ್ಯ ಕಲ್ಪಿಸಿದ್ದು, ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳು ಕೋವಿಡ್ 19 ಆತಂಕಕ್ಕೆ ಒಳಗಾಗಬಾರದು. ವಿದ್ಯಾರ್ಥಿಗಳಿಗಾಗಿ ಸಾರಿಗೆ ಸೌಲಭ್ಯ ಒದಗಿಸುವ ಬಗ್ಗೆ ಈಗಾಗಲೆ ಸಾರಿಗೆ ಸಂಸ್ಥೆಯ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿಗಳ ಬಳಿ ಕೋರಲಾಗಿದೆ ಎಂದು ಡಿಡಿಪಿಐ ದಿವಾಕರ ಶೆಟ್ಟಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts