More

    ಪರಿಹಾರ ವಿತರಣೆ ಸರ್ಕಾರ ವಿಫಲ

    ಚಿತ್ರದುರ್ಗ: ಬರ ಸಂಬಂಧ ಜನಪ್ರತಿನಿಧಿಗಳ್ಯಾರೂ ಕ್ಷೇತ್ರಗಳಿಗೆ ಭೇಟಿ ನೀಡುತ್ತಿಲ್ಲ. ನಿರ್ವಹಣೆ, ಪರಿಹಾರ ವಿತರಣೆಯಲ್ಲೂ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ವಾಸುದೇವ ಮೇಟಿ ದೂರಿದರು.

    ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬರ ಪರಿಹಾರವಾಗಿ ಹೆಕ್ಟೇರ್‌ಗೆ ರೂ. 2ಸಾವಿರದಂತೆ ಚಪ್ಪಲಿ ಬೆಲೆಯಷ್ಟು ನಿಗದಿಪಡಿಸಿರುವುದು ಸೂಕ್ತವಲ್ಲ. ಅನ್ನದಾತರು ಎಕರೆಗೆ 35 ಸಾವಿರ ರೂ. ಖರ್ಚು ಮಾಡಿದ್ದು, ಕನಿಷ್ಠ 20 ಸಾವಿರ ರೂ. ಪರಿಹಾರ ವಿತರಿಸಬೇಕು ಎಂದು ಒತ್ತಾಯಿಸಿದರು.

    ರಾಜ್ಯದಲ್ಲಿ ಸಂಪೂರ್ಣ ಬರ ಆವರಿಸಿರುವ ಕಾರಣ ಸಮಸ್ಯೆಗಳು ಸಾಕಷ್ಟಿವೆ. ಜಾನುವಾರುಗಳಿಗೆ ಮೇವಿನ ಅಭಾವ ಉಂಟಾಗಿದೆ. ಗುಳೆ ಹೋಗುವವರ ಸಂಖ್ಯೆಯೂ ದಿನೇ ದಿನೆ ಹೆಚ್ಚುತ್ತಿದೆ. ಆದ್ದರಿಂದ ಸರ್ಕಾರ ಮೇವು ಬ್ಯಾಂಕ್‌ಗಳನ್ನು, ಗೋ-ಶಾಲೆಗಳನ್ನು ತೆರೆಯಬೇಕು. ಬರ ಕಾಮಗಾರಿ ಚುರುಕುಗೊಳಿಸಿ, ನರೇಗಾದಡಿ ಹೆಚ್ಚೆಚ್ಚು ಉದ್ಯೋಗ ಸೃಷ್ಟಿಸಿ ಗುಳೆ ತಪ್ಪಿಸಬೇಕು ಎಂದು ಆಗ್ರಹಿಸಿದರು.

    ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ. ನೀರಾವರಿ ಸಚಿವರು ಬೆಂಗಳೂರಿಗೆ ಸೀಮಿತವಾಗಿದ್ದು, ಯೋಜನೆಗಳ ಕುರಿತು ಗಮನಹರಿಸುತ್ತಿಲ್ಲ. ಕೂಡಲೇ ಅವರ ರಾಜೀನಾಮೆ ಪಡೆದು ಸೂಕ್ತರನ್ನು ನಿಯೋಜಿಸಬೇಕು. ಬಿಜೆಪಿಯ 25 ಸಂಸದರಿಗೆ ರಾಜ್ಯದ ಕುರಿತು ಕಾಳಜಿ ಇದ್ದರೆ ನೀರಾವರಿ ಯೋಜನೆಗಳನ್ನು ರಾಷ್ಟ್ರೀಯ ಯೋಜನೆಯಾಗಿಸಲು ಕೇಂದ್ರದ ಮೇಲೆ ಒತ್ತಡ ಹೇರಿ, ಅನುದಾನ ತರಬೇಕು ಎಂದು ಒತ್ತಾಯಿಸಿದರು.

    ಜಿಲ್ಲಾ ಅಧ್ಯಕ್ಷ ಲಕ್ಷ್ಮಿಕಾಂತ್ ಮಾತನಾಡಿ, ಆತ್ಮಹತ್ಯೆ ಮಾಡಿಕೊಂಡ ಮೇಲೆ ರೈತರಿಗೆ ಬರ ಪರಿಹಾರ ಬಿಡುಗಡೆ ಮಾಡುತ್ತಾರಾ? ತ್ವರಿತವಾಗಿ ಬಿಡುಗಡೆಗೊಳಿಸಬೇಕು. ಕೇಂದ್ರ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆಗೆ ಘೋಷಿಸಿರುವ ಅನುದಾನ ನೀಡಬೇಕು. ವಿದ್ಯುತ್ ಪರಿವರ್ತಕ ಅಳವಡಿಕೆಯ ನೂತನ ಆದೇಶ ಹಿಂಪಡೆಯಬೇಕು ಎಂದು ಕೋರಿದರು.

    ಉಪಾಧ್ಯಕ್ಷ ಎಂ.ಪ್ರಕಾಶ್, ಪದಾಧಿಕಾರಿಗಳಾದ ಸಂಗಣ್ಣ ಬಾಗೇವಾಡಿ, ಎಫ್.ಕೆ.ಪೂಜಾರ್, ಬಸವರಾಜ ಗುಮ್ಮನುರು, ಭೀಮಣ್ಣ, ಮರಳಸಿದ್ದಪ್ಪ, ಪ್ರತಾಪಸಿಂಹ, ಹನುಮಂತಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts