More

    ಪರಿಹಾರಧನಕ್ಕಿಲ್ಲ ‘ಬರ’ -ರೈತರಿಗೆ 14.21 ಕೋಟಿ ರೂ. ಪಾವತಿ – ಗಣರಾಜ್ಯೋತ್ಸವದಲ್ಲಿ ಸಚಿವ ಎಸ್ಸೆಸ್ ಮಲ್ಲಿಕಾರ್ಜುನ್ ಹೇಳಿಕೆ 

    ದಾವಣಗೆರೆ : ಜಿಲ್ಲೆಯಲ್ಲಿ ಬರ ಪರಿಹಾರ ಕಾಮಗಾರಿಗಳಿಗೆ ಅನುದಾನದ ಕೊರತೆ ಇಲ್ಲ. ಇಲ್ಲಿನ 74,188 ರೈತರಿಗೆ ತಲಾ 2 ಸಾವಿರ ರೂ.ನಂತೆ 14.21 ಕೋಟಿ ರೂ. ಪಾವತಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಹೇಳಿದರು.
    ಜಿಲ್ಲಾಡಳಿತ, ಜಿಪಂ ಹಾಗೂ ನಗರಪಾಲಿಕೆ ಸಹಯೋಗದಲ್ಲಿ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಅಮೃತ ವರ್ಷದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
    ಜಿಲ್ಲಾಧಿಕಾರಿ ಖಾತೆಯಲ್ಲಿ 18.78 ಕೋಟಿ ರೂ. ಅನುದಾನವಿದೆ. ಬರಪೀಡಿತ ತಾಲೂಕುಗಳಲ್ಲಿ ತುರ್ತು ಪರಿಹಾರ ಕಾರ್ಯಕ್ಕೆ ಕ್ರಮ ವಹಿಸಲಾಗಿದೆ. ಮುಂಗಾರು ಮಳೆ ಕೊರತೆ ನಡುವೆಯೂ 44 ವಾರಕ್ಕೆ ಆಗುವಷ್ಟು ಮೇವಿನ ಲಭ್ಯತೆ ಇದೆ. 4694 ರೈತರಿಗೆ ಮೇವು ಬೆಳೆಯಲು ಮಿನಿ ಕಿಟ್‌ಗಳನ್ನು ವಿತರಿಸಲಾಗಿದೆ ಎಂದು ತಿಳಿಸಿದರು.
    ನರೇಗಾ ಯೋಜನೆಯಡಿ 125 ಅಮೃತ ಸರೋವರ ಕಾಮಗಾರಿ ಪೂರ್ಣಗೊಳಿಸಲಾಗಿದ್ದು 305 ಗ್ರಾಮಗಳಿಗೆ ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆಯಡಿ 581 ಕೋಟಿ ರೂ. ಮೊತ್ತದ ನೀರಿನ ಕಾಮಗಾರಿ ಪ್ರಗತಿಯಲ್ಲಿವೆ ಎಂದರು.
    ಜಲಸಿರಿ ಯೋಜನೆಯಡಿ ದಾವಣಗೆರೆಯ 50 ವಲಯಗಳಲ್ಲಿ ನೀರು ಸರಬರಾಜು ಕಾಮಗಾರಿ ಪ್ರಗತಿಯಲ್ಲಿವೆ. ಮಾರ್ಚ್ ವೇಳೆಗೆ ಪಾಲಿಕೆಯ ಎಲ್ಲ ಬಡಾವಣೆಗಳಿಗೆ 24-7 ನೀರು ಪೂರೈಸಲು ಉದ್ದೇಶಿಸಲಾಗಿದೆ ಎಂದರು.
    ಶಕ್ತಿ ಯೋಜನೆಯಡಿ ದಾವಣಗೆರೆ ವಿಭಾಗದಲ್ಲಿ 2.26 ಕೋಟಿ ಮಹಿಳೆಯರು ಬಸ್‌ಗಳಲ್ಲಿ ಸಂಚರಿಸಿದ್ದು 61.67 ಕೋಟಿ ಮೊತ್ತವನ್ನು ನಿಗಮಕ್ಕೆ ನೀಡಲಾಗಿದೆ. ಅನ್ನಭಾಗ್ಯ ಯೋಜನೆಯಲ್ಲಿ 5 ಕೆ.ಜಿ.ಅಕ್ಕಿ ಬದಲಾಗಿ ಪ್ರತಿ ಸದಸ್ಯರಿಗೆ 170 ರೂ.ಗಳಂತೆ ಜಿಲ್ಲೆಯ 3.34 ಲಕ್ಷ ಬಿ.ಪಿ.ಎಲ್ ಕಾರ್ಡ್‌ದಾರರು ಲಾಭ ಪಡೆದಿದ್ದಾರೆ.
    ಗೃಹಜ್ಯೋತಿ ಯೋಜನೆಯಡಿ ಜಿಲ್ಲೆಯ 4,24,057 ಗ್ರಾಹಕರು ಲಾಭ ಪಡೆದಿದ್ದಾರೆ. ಗೃಹಲಕ್ಷ್ಮಿ ಯೋಜನೆಯಡಿ 3,38,867 ಸ್ತ್ರೀಯರಿಗೆ ಮಾಸಿಕ 2 ಸಾವಿರ ರೂ.ನಂತೆ 279 ಕೋಟಿ ರೂ.ಗಳನ್ನು ಜಮೆ ಮಾಡಲಾಗಿದೆ. ಯುವನಿಧಿಯಡಿ ನಿರುದ್ಯೋಗ ಭತ್ಯೆಗಾಗಿ 3616 ಯುವಜನರು ನೊಂದಣಿ ಮಾಡಿಸಿದ್ದಾರೆ ಎಂದು ವಿವರಿಸಿದರು.
    ಇದೇ ವೇಳೆ ಬುದ್ಧ, ಬಸವ ಪುತ್ಥಳಿ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆ ಒಳಗೊಂಡಿದ್ದ ಸಂವಿಧಾನ ಜಾಗೃತಿ ಜಾಥಾ ವಾಹನಕ್ಕೆ ಚಾಲನೆ ನೀಡಿದ ಸಚಿವರು, ಫೆ. 23 ರ ವರೆಗೆ ಜಿಲ್ಲೆಯ ಎಲ್ಲಾ 194 ಗ್ರಾಪಂ ಮತ್ತು 7 ಸ್ಥಳೀಯ ಸಂಸ್ಥೆಗಳಲ್ಲಿ ಸಂವಿಧಾನ ಅರಿವು ಜಾಥಾ ನಡೆಸಲಾಗುವುದು ಎಂದರು. ಸವಾಲುಗಳ ನಡುವೆಯೂ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಭದ್ರವಾಗಿದ್ದು, ಇದಕ್ಕೆ ಸಂವಿಧಾನದ ಅಡಿಪಾಯ ಕಾರಣವಾಗಿದೆ ಎಂದು ಹೇಳಿದರು.
    ಸನ್ಮಾನ: ದಾವಣಗೆರೆಯ ಎಸ್.ಎಸ್. ನಾರಾಯಣ ಹೃದಯಾಲಯ, ಸುಕ್ಷೇಮ ಆಸ್ಪತ್ರೆ, ಕೆರೆಬಿಳಚಿ ಪಿಎಚ್‌ಸಿ, ಹರಿಹರದ ದಾಮೋದರ ಮಂಜುನಾಥ ಸ್ಮಾರಕ ಆಸ್ಪತ್ರೆ ಹಾಗೂ ಹೊನ್ನಾಳಿ ತಾಲೂಕು ಕ್ಯಾಸನಕೆರೆಯ ಪಿಎಚ್‌ಸಿ ಕೇಂದ್ರಗಳು ಸಲ್ಲಿಸಿದ ಉತ್ತಮ ಸಾಮಾಜಿಕ ಸೇವೆಗಾಗಿ ಪ್ರಮಾಣಪತ್ರದೊಂದಿಗೆ ಅಲ್ಲಿನ ಅಧಿಕಾರಿಗಳನ್ನು ಸನ್ಮಾನಿಸಲಾಯಿತು.
    ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್, ಪೂರ್ವ ವಲಯದ ಐಜಿಪಿ ಡಾ. ಕೆ.ತ್ಯಾಗರಾಜ್, ಜಿ.ಪಂ ಸಿಇಒ ಸುರೇಶ್ ಬಿ.ಇಟ್ನಾಳ್, ಎಸ್ಪಿ ಉಮಾ ಪ್ರಶಾಂತ್, ಎಡಿಸಿ ಪಿ.ಎನ್. ಲೋಕೇಶ್ ಹಾಗೂ ನಗರಪಾಲಿಕೆ ಸದಸ್ಯರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts