More

    ಪಪ್ಪಾಯಿ ಕೃಷಿಕರಿಗೆ ಗಾಯದ ಮೇಲೆ ಬರೆ!

    ಹಾವೇರಿ: ಪಪ್ಪಾಯಿ ಬೆಳೆಗಾರರಿಗೆ ಗಾಯದ ಮೇಲೆ ಬರೆ ಬಿದ್ದಿದೆ. ಕರೊನಾ ಹಾವಳಿಯಿಂದಾಗಿ ಫಸಲಿಗೆ ಯೋಗ್ಯ ಬೆಲೆ ಲಭ್ಯವಾಗಲಿಲ್ಲ. ಇದೇ ವೇಳೆ ಜಿಟಿಜಿಟಿ ಮಳೆಯಿಂದಾಗಿ ಬೆಳೆ ಹಾಳಾಗಿದೆ.

    ತಾಲೂಕಿನ ಬಸಾಪುರ ಗ್ರಾಮದ ರೈತ ಕರಿಯಲ್ಲಪ್ಪ ಹನುಮಂತಪ್ಪ ಹಲಗಂಚಣ್ಣನವರ ತಮ್ಮ 4 ಎಕರೆ ಜಮೀನಿನಲ್ಲಿ 4,500 ಪಪ್ಪಾಯಿ ಗಿಡಗಳನ್ನು ಬೆಳೆದಿದ್ದಾರೆ. ಆದರೆ, ಜಿಟಿಜಿಟಿ ಮಳೆಯಿಂದಾಗಿ ಹಣ್ಣುಗಳೆಲ್ಲ ಕೊಳೆತಿವೆ. ಇದೇ ಗ್ರಾಮದ ಇನ್ನೋರ್ವ ರೈತ ನಿಂಗಪ್ಪ ಬೀರಪ್ಪ ಕೆಸರಳ್ಳಿ ಅವರು 2 ಎಕರೆ 28 ಗುಂಟೆಯಲ್ಲಿ ಪಪ್ಪಾಯಿ ಬೆಳೆದಿದ್ದಾರೆ. ಇವರು 3 ಸಾವಿರ ಗಿಡಗಳನ್ನು ಬೆಳೆಸಿದ್ದಾರೆ. ಪಪ್ಪಾಯಿಗೆ ಸ್ವಲ್ಪ ಹೆಚ್ಚಿನ ದರ ಬರಲಿ ಎಂದು ಕಟಾವು ಮಾಡಲು ವಿಳಂಬ ಮಾಡಿದ್ದರು. ಆದರೆ, ಮಳೆಯಿಂದ ಹಣ್ಣುಗಳೆಲ್ಲ ಹಾಳಾಗಿವೆ.

    ಈಗಾಗಲೇ ಬೆಳೆಗಾಗಿ ಈ ರೈತರು ಲಕ್ಷಾಂತರ ರೂಪಾಯಿ ಸಾಲ ಮಾಡಿದ್ದಾರೆ. ಫಸಲು ಕೈಗೆ ಬಂದಿದ್ದು, ಬಾಯಿಗೆ ಬರದಂತಾಗಿ ನಷ್ಟಕ್ಕೆ ಸಿಲುಕಿದ್ದಾರೆ. ಪಪ್ಪಾಯಿ ಹಣ್ಣಿಗೆ ವ್ಯಾಪಾರಿಗಳು ಈ ಮೊದಲು ಕೆಜಿಗೆ ಸುಮಾರು 20 ರೂಪಾಯಿಗೆ ಕೇಳಿ ಪಡೆಯುತ್ತಿದ್ದರು. ಈಗ 2 ರೂಪಾಯಿಗೆ ಕೇಳುತ್ತಿದ್ದಾರೆ. ಈ ದರಕ್ಕೆ ಮಾರಿದರೆ ಮಾಡಿದ ವೆಚ್ಚವೂ ಹುಟ್ಟುವುದಿಲ್ಲ. ಒಂದು ವರ್ಷದಿಂದ ಬ್ಯಾಂಕ್​ನಲ್ಲಿ ಮಾಡಿದ ಸಾಲವೂ ಈಗ ಮೈಮೇಲೆ ಬಿದ್ದಿದೆ ಎಂದು ರೈತ ನಿಂಗಪ್ಪ ಅಳಲು ತೋಡಿಕೊಂಡಿದ್ದಾರೆ.

    ಕೃಷಿ, ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ರೈತರ ಬೆಳೆ ಹಾನಿ ಸಮೀಕ್ಷೆ ಮಾಡಿಕೊಂಡು ಹೋಗಿದ್ದಾರೆ, ಆದರೆ, ಈತನಕ ಯಾವುದೇ ರೀತಿಯ ಪ್ರಯೋಜನವಾಗಿಲ್ಲ. ಕೂಡಲೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

    ಬ್ಯಾಂಕ್​ನಲ್ಲಿ ಸಾಲ ಮಾಡಿ ಪಪ್ಪಾಯಿ ಬೆಳೆದಿದ್ದೇವು. ಲಾಭದ ನಿರೀಕ್ಷೆಯೂ ಇತ್ತು. ಆದರೆ, ಕರೊನಾದಿಂದಾಗಿ ದರ ಕುಸಿತವಾಗಿದೆ ಅಲ್ಲದೆ, ಮಳೆಯಿಂದಾಗಿ ಸಂಪೂರ್ಣ ಬೆಳೆ ನಾಶವಾಗಿದೆ. ಈಗ ಸಾಲ ತೀರಿಸಲು ಬೇರೆ ಸಾಲ ಮಾಡುವ ಪರಿಸ್ಥಿತಿ ಎದುರಾಗಿದೆ. ಈ ಸಂಬಂಧ ತೋಟಗಾರಿಕೆ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಈತನಕ ಯಾವುದೇ ಪರಿಹಾರ ದೊರೆತಿಲ್ಲ.
    | ನಿಂಗಪ್ಪ ಕೆಸರಳ್ಳಿ, ಕರಿಯಲ್ಲಪ್ಪ ಹಲಗಂಚಣ್ಣನವರ ರೈತರು


    ತಾಲೂಕಿನಲ್ಲಿ ಬೆಳೆ ಸಮೀಕ್ಷೆಯ ಪಟ್ಟಿಯಲ್ಲಿದ್ದ ರೈತರಿಗೆ ಈಗಾಗಲೇ ಪರಿಹಾರ ನೇರವಾಗಿ ಅವರ ಖಾತೆಗೆ ಜಮೆಯಾಗಿದೆ. ಸಮೀಕ್ಷೆಯಲ್ಲಿ ಕೈಬಿಟ್ಟು ಹೋಗಿರುವ ರೈತರ ಜಮೀನಿಗೆ ನಾವೇ ತೆರಳಿ ಸಮೀಕ್ಷೆ ನಡೆಸಿದ್ದೇವೆ. ಅಂತಹ ರೈತರು ತಾಲೂಕಿನಲ್ಲಿ ಸಾಕಷ್ಟಿದ್ದು, ಅವುಗಳನ್ನೆಲ್ಲ ಕ್ರೂಢೀಕರಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಸರ್ಕಾರದಿಂದ ಅನುಮತಿ ಸಿಕ್ಕ ತಕ್ಷಣ ನೇರವಾಗಿ ರೈತರ ಖಾತೆಗೆ ಪರಿಹಾರ ಜಮೆಯಾಗಲಿದೆ.
    | ಬಸವರಾಜ ಬರೇಗಾರ ಸಹಾಯಕ ತೋಟಗಾರಿಕೆ ನಿರ್ದೇಶಕರು ಹಾವೇರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts