More

    ಪದ್ಮಶ್ರೀ ಸೆಲೆಬ್ರಿಟಿಯ ಸಿಂಪ್ಲಿಸಿಟಿ

    ಕಾರವಾರ: ದೇಶದ ಪ್ರತಿಷ್ಠಿತ ಪ್ರಶಸ್ತಿಯಾದ ಪದ್ಮಶ್ರೀ ಮುಡಿಗೇಡಿದ್ದರೂ ಈಕೆಯ ಸರಳತೆಯಲ್ಲಿ ಮಾತ್ರ ಯಾವುದೇ ಬದಲಾವಣೆ ಇರಲಿಲ್ಲ. ತನಗೆ ಏರ್ಪಡಿಸಿದ ಸನ್ಮಾನ ಸಮಾರಂಭಕ್ಕೆ ಬರೀಗಾಗಲ್ಲೇ ಆಗಮಿಸಿದಳು. ಅದೇ ಮಾಸಿದ ಹಳೇ ಬಟ್ಟೆ ಧರಿಸಿಕೊಂಡೇ ದರ್ಶನ ನೀಡಿದಳು. ಸೋಮವಾರ ಇಲ್ಲಿನ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಈಕೆ ಸೆಲಿಬ್ರಿಟಿಯಾಗಿದ್ದಳು. ಮೆತ್ತನೆಯ ಸೋಪಾ ಮೇಲೆ ಮುದುಡಿಯೇ ಕುಳಿತಳು. ಉನ್ನತ ದರ್ಜೆ ಅಧಿಕಾರಿಗಳು ಆಕೆಯನ್ನು ಮಾತನಾಡಿಸಿ, ಗೌರವ ಸಲ್ಲಿಸಿದರು. ಸೂಟು, ಬೂಟು ಹಾಕಿಕೊಂಡ ಜನ ಬಂದು ಆಕೆಯೊಡನೆ ಸೆಲ್ಪಿ ತೆಗೆಸಿಕೊಂಡರು. ತಮ್ಮ ಬೊಚ್ಚು ಬಾಯಿಯ ಅದೇ ಮುಗ್ಧ ನಗೆಯೊಂದಿಗೆ ಫೋಟೋಗೆ ಪೋಸು ನೀಡಿದಳು.

    ಈಕೆಯೇ ಅಂಕೋಲಾದ ತುಳಸಿ ಬೊಮ್ಮು ಗೌಡ. ಈ ಬಾರಿಯ ಪದ್ಮಶ್ರೀ ಪುರಸ್ಕೃತಳಾದ ಹೆಮ್ಮೆಯ ಗೌಡತಿ.

    ಭಾನುವಾರ ಪೊಲೀಸ್ ಪರೇಡ್ ಮೈದಾನದಲ್ಲಿ ಆಯೋಜನೆಯಾಗಿದ್ದ ಜಿಲ್ಲಾ ಮಟ್ಟದ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ತುಳಸಿ ಗೌಡ ಅವರನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಕರೆಸಿ ಸನ್ಮಾನಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ, ಶಾಸಕಿ ರೂಪಾಲಿ ನಾಯ್ಕ ಆಕೆಯನ್ನು ಪ್ರತ್ಯೇಕವಾಗಿ ಗೌರವಿಸಿದರು.

    ಮರ ಬೆಳೆಸಿ, ಉಳಿಸಿ: ಮಾಧ್ಯಮಗಳ ಜತೆ ಮಾತನಾಡಿದ ತುಳಸಿ ಬೊಮ್ಮು ಗೌಡ ಅವರು, ‘ಪ್ರಶಸ್ತಿ ಯಾರು ಕೊಡಿಸಿದರು ಎಂದು ಗೊತ್ತಿಲ್ಲ. ಆದರೆ, ಬಂದಿದ್ದು ಖುಷಿಯಾಗಿದೆ. ಹಿಂದೆ ನಮ್ಮ ಸಮುದಾಯದ ಹಾಡುಗಾರ್ತಿ ಸುಕ್ರಿ ಗೌಡ ಅವರಿಗೂ ಇದೇ ಪ್ರಶಸ್ತಿ ಬಂದಿತ್ತು.’ ಎಂದು ಮುಗ್ಧವಾಗಿ ಹೇಳಿದರು. ‘ಪ್ರತಿ ವರ್ಷ ಕನಿಷ್ಠ ಸಾವಿರ ಮರಗಳನ್ನು ಹೆಚ್ಚುವರಿಯಾಗಿ ಬೆಳೆಸಬೇಕು. ಮರ ಕಳ್ಳತನವನ್ನು ನಿಲ್ಲಿಸಬೇಕು. ಈ ಪ್ರಶಸ್ತಿ ನನಗಲ್ಲ. ನಾನು ಬೆಳೆಸಿದ ಮರಗಳಿಗೆ’ ಎಂದು ತಮ್ಮ ಪರಿಸರ ಕಾಳಜಿ ಮೆರೆದರು.

    ಲಕ್ಷಾಂತರ ಗಿಡ ನೆಟ್ಟು ಸಲಹಿ ವೃಕ್ಷ ಮಾತೆ ಎನಿಸಿಕೊಂಡ ತುಳಸಿ ಗೌಡ ಅವರಿಗೆ ದೇಶದ ಅತ್ಯುನ್ನದ ಗೌರವ ದೊರಕಿರುವುದು ಹೆಮ್ಮೆಯ ವಿಷಯ. ನನ್ನ ಉಸ್ತುವಾರಿ ಜಿಲ್ಲೆಯವರಾದ ಅವರನ್ನು ಅಭಿನಂದಿಸುತ್ತೇನೆ. — ಶಶಿಕಲಾ ಜೊಲ್ಲೆ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts