More

    ಪಡಿತರಕ್ಕಾಗಿ ನೂಕುನುಗ್ಗಲು

    ನವಲಗುಂದ: ಕರೋನಾ ಸೋಂಕು ತಡೆಗಟ್ಟಲು ದೇಶದಾದ್ಯಂತ ಸಂಪೂರ್ಣ ಲಾಕ್​ಡೌನ್ ಘೊಷಿಸಲಾಗಿದೆ. ಆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಬಡವರಿಗಾಗಿ ರೇಶನ್ ನೀಡಲು ಮುಂದಾಗಿದ್ದು, ಸೋಮವಾರ ಪಡಿತರ ಚೀಟಿದಾರರು ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಎರಡು ತಿಂಗಳ ಅವಧಿಯ ರೇಶನ್ ಪಡೆಯಲು ಪಟ್ಟಣದ ಪುರಸಭೆ ಮಳಿಗೆಯ ನ್ಯಾಯಬೆಲೆ ಅಂಗಡಿ ಮುಂದೆ ಮುಗಿಬಿದ್ದರು.

    ಪೊಲೀಸರು ಸರದಿಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಆಹಾರ ಧಾನ್ಯ ಪಡೆಯಬೇಕು ಎಂದು ಸೂಚಿಸಿದ್ದರು. ಅದಕ್ಕೆ ಯಾರೊಬ್ಬರು ಕಿವಿಗೊಡದೇ ತಾ ಮುಂದು, ನಾ ಮುಂದು ಎಂದು ಪಡಿತರ ಪಡೆಯಲು ಮುಗಿಬಿದ್ದರು. ಅದರಲ್ಲಿ ಸ್ಥಳೀಯರು ಪಡಿತರವನ್ನು ನಿಗದಿತ ಅವಧಿಗೆ ಮಾತ್ರ ಹಂಚಿಕೆ ಮಾಡುತ್ತಾರೆ ಎಂಬ ವದಂತಿ ಹಬ್ಬಿಸಿದ್ದರು. ಇದರಿಂದ ಆತಂಕಗೊಂಡ ಜನತೆ ಗುಂಪು, ಗುಂಪಾಗಿ ನಿಂತು ಪಡಿತರ ಪಡೆಯಲು ಮುಂದಾದರು. ನ್ಯಾಯಬೆಲೆ ಅಂಗಡಿಯವರಿಗೂ ಅಡೆತಡೆ ಉಂಟಾಗಿದ್ದರಿಂದ ಗೊಂದಲ ಉಂಟಾಯಿತು. ಕೆಲವರು ಮಾಸ್ಕ್ ಧರಿಸದೇ ಧಾವಿಸಿದ್ದನ್ನು ಕಂಡು ಪೊಲೀಸರು ಎಚ್ಚರಿಸಿದರು.

    ನ್ಯಾಯಬೆಲೆ ಅಂಗಡಿಯಲ್ಲಿ 5 ಕೆ.ಜಿ. ಅಕ್ಕಿ ಮತ್ತು 2 ಕೆ.ಜಿ. ಗೋಧಿ ಸೇರಿ ಒಟ್ಟು ಏಳು ಕೆ.ಜಿ. ಪಡಿತರ ನೀಡಲಾಗುತ್ತಿದೆ. ಸರ್ಕಾರದಿಂದ ಹೆಚ್ಚಿನ ಆಹಾರ ಧಾನ್ಯ ನೀಡುತ್ತಿಲ್ಲ. ಮೊದಲಿದ್ದಂತೆ ರೇಶನ್ ನೀಡುತ್ತಿದ್ದಾರೆ ಎಂಬುದನ್ನು ಸರದಿಯಲ್ಲಿ ನಿಂತಿದ್ದ ಪಡಿತರ ಚೀಟಿದಾರರು ವಿವರಿಸಿದರು.

    ಸಿಪಿಐ ವಿ.ಬಿ. ಮಠಪತಿ, ಪಿಎಸ್​ಐ ಜಯಪಾಲ ಪಾಟೀಲ, ಪುರಸಭೆ ಸಿಬ್ಬಂದಿ ಜಂಟಿಯಾಗಿ ಪಟ್ಟಣದಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದಾರೆ. ಕರೊನಾ ಹಿಮ್ಮೆಟ್ಟಿಸಲು ಕಂಕಣಬದ್ಧರಾಗಿದ್ದಾರೆ. ತಾಲೂಕಿನಲ್ಲಿ ಯಾವುದೇ ಕರೋನಾ ಭೀತಿ, ಎದುರಾಗದಂತೆ ನೋಡಿಕೊಳ್ಳಲು ಸ್ಥಳೀಯರು ಸಹ ಸ್ವಯಂಪ್ರೇರಣೆ ಹೊಂದಬೇಕು ಎಂದು ಹೇಳಿದರು.

    ಪಡಿತರ ಚೀಟಿಯುಳ್ಳ ಪ್ರತಿಯೊಬ್ಬರಿಗೂ ಆಹಾರ ಧಾನ್ಯ ತಲುಪಿಸಬೇಕು. ಟೋಕನ್ ಹೊಂದಿದವರಿಗೆ ನಿಯಮಾನುಸಾರವಾಗಿ ಪಡಿತರ ವಿತರಿಸಲಾಗುತ್ತದೆ. ವದಂತಿ ಹಬ್ಬಿಸುವವರ ಮಾತಿಗೆ ಕಿವಿಗೊಡಬೇಡಿ. ಎಲ್ಲ ಪಡಿತರ ಚೀಟಿದಾರರಿಗೆ ಆಹಾರ ಧಾನ್ಯವನ್ನು ತಲುಪಿಸುವ ವ್ಯವಸ್ಥೆ ಮಾಡಿಸುತ್ತೇವೆ. ಒಟ್ಟಿನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡೇ ಪಡಿತರ ಪಡೆಯಲು ಮುಂದಾಗಬೇಕು. | ನವೀನ ಹುಲ್ಲೂರ ತಹಸೀಲ್ದಾರ್

    ಲಾಕ್​ಡೌನ್ ಆದೇಶಕ್ಕೆ ಎಳ್ಳು-ನೀರು: ಕಲಘಟಗಿ ಪಟ್ಟಣದ ಪೊಲೀಸ್ ಇಲಾಖೆ ಮತ್ತು ಪಪಂ ಸಿಬ್ಬಂದಿ ಎಷ್ಟೇ ಬಿಗಿ ಬಂದೋಬಸ್ತ್ ಒದಗಿಸಿದ್ದರೂ ಸಾರ್ವಜನಿಕರು ಹಾಗೂ ಯುವಕರು ಎಲ್ಲೆಂದರಲ್ಲಿ ಗುಂಪುಗುಂಪಾಗಿ ಕಂಡು ಬರುತ್ತಿದ್ದಾರೆ. ಗ್ರಾಮೀಣ ಭಾಗದ ಜನರು ಮುಖಕ್ಕೆ ಮಾಸ್ಕ್ ಧರಿಸದೆ ತಿರುಗಾಡುತ್ತಿರುವುದರಿಂದ ಲಾಕ್​ಡೌನ್ ಆದೇಶಕ್ಕೆ ಪಟ್ಟಣದ ಜನತೆ ಎಳ್ಳು-ನೀರು ಬಿಟ್ಟಂತಾಗಿದೆ.

    ಪಟ್ಟಣದ ಬಮ್ಮಿಗಟ್ಟಿ ಕ್ರಾಸ್, ಲಕ್ಷ್ಮೀಗುಡಿ ಓಣಿ, ಹಳಿಯಾಳ ಕ್ರಾಸ್, ಚೌಡಿಕೂಟ ಇನ್ನು ಕೆಲವು ಸ್ಥಳಗಳಲ್ಲಿ ಹಣ್ಣು ತರಕಾರಿ ಇನ್ನಿತರೆ ಸಾಮಗ್ರಿಯನ್ನು ಖರೀದಿಸುವ ನೆಪದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿಲ್ಲ. ಪಟ್ಟಣದಲ್ಲಿ ಕೆಲ ಕಿಡಗೇಡಿಗಳು ಮಧ್ಯಾಹ್ನ ಅನವಶ್ಯಕವಾಗಿ ಬೈಕ್​ಗಳ ಮೇಲೆ ಸುತ್ತಾಡುತ್ತಿದ್ದಾರೆ. ಹೀಗಾಗಿ ಸರ್ಕಾರಿ ಆದೇಶವನ್ನು ಗಾಳಿಗೆ ತೂರುತ್ತಿದ್ದಾರೆ. ದಿನಸಿ, ತರಕಾರಿ, ಹಣ್ಣು-ಹಂಪಲು ಖರೀದಿಯಲ್ಲಿ ಗುಂಪುಗುಂಪಾಗಿ ಸೇರುತ್ತಿದ್ದಾರೆ. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುತ್ತಿಲ್ಲ. ಪಟ್ಟಣದ ಸುತ್ತಮುತ್ತಲಿನ ಗ್ರಾಮಗಳಾದ ತಾವರಗೇರಿ, ಹುಲಿಗಿನಕಟ್ಟಿ, ಹಿರೇಹೊನ್ನಿಹಳ್ಳಿ, ದೇವಿಕೊಪ್ಪ ಸೇರಿ ಇನ್ನಿತರ ಗ್ರಾಮಗಳಲ್ಲಿ ಜನರು ಗುಂಪುಗುಂಪಾಗಿ ಕಂಡು ಬರುತ್ತಿದ್ದಾರೆ. ಈ ಬಗೆಗೆ ತಾಲೂಕಾಡಳಿತ ಇನ್ನು ಹೆಚ್ಚಿನ ನಿಗಾ ವಹಿಸಲು ಮುಂದಾಗಬೇಕಿದೆ.

    ಮಂಗಳವಾರದ ಸಂತೆ ಎಂದು ಹಳ್ಳಿಗಳ ರೈತರು ತರಕಾರಿ ಹೊತ್ತು ತಂದಿದ್ದರಿಂದ ಖರೀದಿಗೆ ಜನತೆ ಮುಗಿಬಿದ್ದಿದ್ದರು. ರೈತರಿಗೆ ತಿಳಿಹೇಳಿ ವಾಪಸ್ ಗ್ರಾಮಕ್ಕೆ ಕಳುಹಿಸಿದ್ದೇವೆ. ಬ್ಯಾಂಕ್, ಪಡಿತರ ಕೇಂದ್ರಗಳಲ್ಲಿ ಹೆಚ್ಚಿನ ಪೊಲೀಸರನ್ನು ನೇಮಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಎಚ್ಚರಿಕೆ ನೀಡಲಾಗಿದೆ. ತಾಲೂಕಿನಾದ್ಯಂತ ಬೇಕಾಬಿಟ್ಟಿ ತಿರುಗಾಡುತ್ತಿದ್ದ 120 ಬೈಕ್​ಗಳನ್ನು ವಶಪಡಿಸಿಕೊಂಡು ಸವಾರರಿಗೆ 55 ಸಾವಿರ ರೂ. ದಂಡ ಹಾಕಲಾಗಿದೆ. | ವಿಜಯ ಬಿರಾದಾರ ಸಿಪಿಐ, ಕಲಘಟಗಿ

    ಎದುರು-ಬದರು ಕುಳಿತು ಹರಟೆ: ಕರೊನಾ ತಡೆಗೆ ಕಲಘಟಗಿ ತಾಲೂಕಾಡಳಿತ ಹತ್ತಾರು ಕ್ರಮ ಕೈಗೊಂಡಿದೆ. ಆದರೆ, ಸಾರ್ವಜನಿಕರು ನ್ಯಾಯ ಬೆಲೆ ಅಂಗಡಿ ಮುಂಭಾಗದಲ್ಲಿ ಮಾತ್ರ ಪರಸ್ಪರ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ, ಮಾಸ್ಕ್ ಧರಿಸದೆ ಬೇಜವಾಬ್ದಾರಿತನದ ವರ್ತನೆ ತೋರುತಿದ್ದಾರೆ. ಇಂಥ ಘಟನೆ ಪಟ್ಟಣದ ಕಿಲ್ಲಾ ಬಳಿ ನ್ಯಾಯ ಬೆಲೆ ಅಂಗಡಿ ಮುಂದೆ ಜನ ಮಂಗಳವಾರ ಮಧ್ಯಾಹ್ನ 12ಕ್ಕೆ ನಡೆದಿದೆ. ಮಾಸ್ಕ್ ಧರಿಸದೆ ಆಗಮಿಸಿದ ಪಡಿತರ ಚೀಟಿದಾರರು ಆಹಾರ ಧಾನ್ಯಗಳನ್ನು ಪಡೆಯá-ವ ಮುಂಚೆ ಎದುರು-ಬದರು ಕುಳಿತು ಹರಟುತ್ತಿದ್ದರು. ಪಡಿತರ ವಿತರಣೆಗಾಗಿ ಸ್ಥಳೀಯ ಆಡಳಿತ ಸಾಕಷ್ಟು ಬಾರಿ ವಿನಂತಿಸಿದರೂ ಸಾರ್ವಜನಿಕರು ಎಚ್ಚರಗೊಳ್ಳುತಿಲ್ಲ ಎಂಬುದು ಪಪಂ, ಪೊಲೀಸ್ ಸಿಬ್ಬಂದಿ ಆರೋಪವಾಗಿದೆ.

    ಅವ್ಯವಸ್ಥೆಯಿಂದ ಬಿಸಿಲಲ್ಲಿ ನಿಲ್ಲುವ ಸ್ಥಿತಿ: ಕಲಘಟಗಿ ಪಟ್ಟಣದ ಸೆಂಟ್ರಲ್ ಬ್ಯಾಂಕ್ ಮುಂದೆ ಆಸನಗಳು, ಪೆಂಡಾಲ್ ವ್ಯವಸ್ಥೆ ಇಲ್ಲದಿರುವುದರಿಂದ ಗ್ರಾಹಕರು ಬಿರು ಬಿಸಿಲಿನಲ್ಲಿ ಹಣ ತೆಗೆದುಕೊಳ್ಳಲು ಸಾಲುಗಟ್ಟಿ ನಿಲ್ಲಬೇಕಾಯಿತು. ಬಿಸಿಲಿನ ಹೊಡೆತಕ್ಕೆ ಗ್ರಾಹಕರು ಕೂಡ ಸಾಮಾಜಿಕ ಅಂತರ ಕಾಯ್ದುಕೊಳ್ಳುವಲ್ಲಿ ಹಿಂದೇಟು ಹಾಕಿ ನೆರಳಿನತ್ತ ಗುಂಪು ಗುಂಪಾಗಿ ನಿಲ್ಲಲು ಮುಂದಾದರು. ಬ್ಯಾಂಕ್ ವ್ಯವಸ್ಥಾಪಕರು ಗ್ರಾಹಕರ ಅನುಕೂಲಕ್ಕಾಗಿ ಪೆಂಡಾಲ್ ವ್ಯವಸ್ಥೆ ಮಾಡಿ ಅನುಕೂಲ ಮಾಡಿಕೊಡಬೇಕು ಎಂಬ ಒತ್ತಾಯ ಕೇಳಿಬಂತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts