More

    ಪುಂಡಾನೆ ಸೆರೆಗೆ ಮುಂದುವರಿದ ಕಾರ್ಯಾಚರಣೆ

    ಗುಂಡ್ಲುಪೇಟೆ: ತಾಲೂಕಿನ ಹಂಗಳ ಭಾಗದಲ್ಲಿ ರೈತರ ಜಮೀನಿಗೆ ನುಗ್ಗಿ ಬೆಳೆಹಾನಿ ಮಾಡುತ್ತಿರುವ ಪುಂಡಾನೆ ಸೆರೆ ಹಿಡಿಯಲು ಅರಣ್ಯ ಇಲಾಖೆ ಕಾರ್ಯಾಚರಣೆ ಮೂರನೇ ದಿನವೂ ಮುಂದುವರಿದಿದೆ.

    ಬಂಡೀಪುರ ಹುಲಿ ಯೋಜನೆಯ ಗೋಪಾಲಸ್ವಾಮಿ ಬೆಟ್ಟ ವಲಯಕ್ಕೆ ಸೇರಿದ ಹಂಗಳ, ದೇವರಹಳ್ಳಿ, ಹೊನ್ನೇಗೌಡನಗಳ್ಳಿ, ಗೋಪಾಲಪುರ ಮುಂತಾದ ಗ್ರಾಮಗಳ ಕಾಡಂಚಿನ ಜಮೀನುಗಳಲ್ಲಿ ಬೆಳೆದಿರುವ ಬೆಳೆಗಳನ್ನು ನಾಶ ಮಾಡುತ್ತಿರುವ ಹಿನ್ನೆಲೆಯಲ್ಲಿ ರೈತರ ಒತ್ತಾಯದ ಮೇರೆಗೆ ಅರಣ್ಯ ಇಲಾಖೆ ಪುಂಡಾನೆ ಸೆರೆಗೆ ಕಾರ್ಯಾಚರಣೆ ಆರಂಭಿಸಿದೆ.

    ಮತ್ತಿಗೋಡು ಶಿಬಿರದ ಆನೆಗಳಾದ ಮಹೇಂದ್ರ, ಭೀಮ, ಅಶ್ವತ್ಥಾಮ, ಬಂಡೀಪುರದ ರಾಂಪುರ ಸಾಕಾನೆ ಶಿಬಿರದ ಗಣೇಶ, ರೋಹಿತ್ ಹಾಗೂ ಪಾರ್ಥಸಾರಥಿ ಆನೆಗಳ ನೆರವಿನಿಂದ ಭಾನುವಾರದಿಂದಲೇ ಕೂಂಬಿಂಗ್ ಆರಂಭಿಸಿದೆ. ಬಂಡೀಪುರ ಉಪವಿಭಾಗದ ಎಸಿಎಫ್ ನವೀನ್, ಗೋಪಾಲಸ್ವಾಮಿಬೆಟ್ಟ ವಲಯದ ಆರ್.ಎಫ್.ಒ ಮಂಜುನಾಥ್, ಅರಣ್ಯ ಇಲಾಖೆಯ ಪಶುವೈದ್ಯ ಡಾ.ವಾಸಿಂ ಮಿರ್ಜಾ ಹಾಗೂ 25 ಎಸ್ ಟಿ ಪಿ ಎಫ್ ಸಿಬ್ಬಂದಿ ಕೂಂಬಿಂಗ್‌ನಲ್ಲಿ ಪಾಲ್ಗೊಂಡಿದ್ದಾರೆ. ಡ್ರೋಣ್ ಕ್ಯಾಮರಾ ಮೂಲಕ ಪತ್ತೆಹಚ್ಚಿದ್ದರೂ ಅಲ್ಲಿಗೆ ಸಾಕಾನೆಗಳನ್ನು ಕರೆದೊಯ್ಯುವ ವೇಳೆಗೆ ಪುಂಡಾನೆ ಪರಾರಿಯಾಗುತ್ತಿದೆ.

    ಪ್ರತಿ ದಿನವೂ ಹಿರೀಕೆರೆ ಸುತ್ತಮುತ್ತಲೇ ಸುಳಿದಾಡುತ್ತಿದ್ದ ಪುಂಡಾನೆ ಭಾನುವಾರ ಹಾಗೂ ಸೋಮವಾರ ಕಾರ್ಯಾಚರಣೆ ನಡೆಸಿದ್ದರಿಂದ ಬೇರೆಡೆಗೆ ತೆರಳಿದೆ. ಆನೆಯ ಚಲನವಲನಗಳನ್ನು ಕಾಲ್ನಡಿಗೆಯಲ್ಲಿ ಬೆನ್ನತ್ತಿರುವ ಅರಣ್ಯ ಸಿಬ್ಬಂದಿ ಮಂಗಳವಾರ ಹುಂಡೀಪುರದ ಬಳಿ ಪತ್ತೆ ಹಚ್ಚಿದ್ದರು. ಕೂಡಲೇ ಸ್ಥಳಕ್ಕೆ ತೆರಳಿದ ಸಿಬ್ಬಂದಿ ಸ್ಥಳವನ್ನು ನಿಖರವಾಗಿ ಗುರುತಿಸಿದ ನಂತರ ಸಾಕಾನೆಗಳನ್ನು ಅತ್ತ ಕರೆದೊಯ್ಯಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts