More

    ಪಂಚರತ್ನ ಯೋಜನೆಯಿಂದ ರಾಜ್ಯದ ಸಮಗ್ರ ಅಭಿವೃದ್ಧಿ

    ಅರಸೀಕೆರೆ: ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪಂಚರತ್ನ ಯಾತ್ರೆ ಹಮ್ಮಿಕೊಂಡಿದ್ದು, ಇದು ಫಲ ನೀಡುತ್ತಿದೆ ಎಂದು ಜೆಡಿಎಸ್ ಅಭ್ಯರ್ಥಿ ಎನ್.ಆರ್ ಸಂತೋಷ್ ಹೇಳಿದರು.

    ತಾಲೂಕಿನ ಕಸಬಾ ಹೋಬಳಿ ವ್ಯಾಪ್ತಿಯ ದುಮ್ಮೇನಹಳ್ಳಿ, ಬಂಡೀಹಳ್ಳಿ ಚಂದ್ಲಾಪುರ, ಸೂಳೆಕೆರೆ, ದಾಸಿಹಳ್ಳಿ, ಕೆರೆಕೋಡಿಹಳ್ಳಿ ಸೇರಿ ಹಲವು ಗ್ರಾಮಗಳಲ್ಲಿ ಶುಕ್ರವಾರ ಮಿಂಚಿನ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದರು.

    ಶ್ರೀಮಂತರ ಮಕ್ಕಳಿಗೆ ದೊರೆಯುವ ಶೈಕ್ಷಣಿಕ ಸವಲತ್ತು ಗ್ರಾಮೀಣ ಭಾಗದ ಬಡ ಹಾಗೂ ಮಧ್ಯಮವರ್ಗದ ಜನರಿಗೂ ಸಿಗಬೇಕೆಂಬುದು ನನ್ನ ಹೆಬ್ಬಯಕೆ. ಶಿಕ್ಷಣ,ಆರೋಗ್ಯ, ಉದ್ಯೋಗ, ವಸತಿ ಜತೆಗೆ ಬಯಲು ಸೀಮೆಯ ಜನರ ಬದುಕನ್ನು ಹಸನಗೊಳಿಸಲು ಕೆರೆಗಳನ್ನು ತುಂಬಿಸುವ ಯೋಜನೆಗೆ ಆದ್ಯತೆ ನೀಡಲಾಗಿದೆ ಎಂದರು.

    ಕೊಬ್ಬರಿ ಬೆಲೆ ಕುಸಿತದಿಂದ ಅನ್ನದಾತ ಕಂಗಾಲಾಗಿದ್ದು, ಪ್ರತಿ ಕ್ವಿಂಟಾಲ್ ಕೊಬ್ಬರಿಗೆ 15 ಸಾವಿರ ರೂ.ನಿಗದಿಪಡಿಸಿ ಖರೀದಿಗೂ ಹಸಿರುನಿಶಾನೆ ತೋರುವುದಾಗಿ ಎಚ್‌ಡಿಕೆ ಭರವಸೆ ನೀಡಿದ್ದಾರೆ. 65 ವರ್ಷ ಮೇಲ್ಪಟ್ಟವರಿಗೆ, ಅವಿವಾಹಿತ ಹೆಣ್ಣುಮಕ್ಕಳಿಗೆ ಮಾಸಿಕ 5 ಸಾವಿರ ರೂ. ಹಾಗೂ ವಿಧವಾ, ಅಂಗವಿಕಲ ಹೆಣ್ಣುಮಕ್ಕಳ ಮಾಸಾಶನವನ್ನು ಎರಡೂವರೆ ಸಾವಿರ ರೂ.ಗೆ ನಿಗದಿ ಮಾಡುವುದಾಗಿ ತಿಳಿಸಲಾಗಿದೆ. ತೆಂಗು ಆಧಾರಿತ ಉತ್ಪನ್ನಗಳ ಕೈಗಾರಿಕೆ ಆರಂಭಿಸಲು ಅಗತ್ಯ ಸಾಲಸೌಲಭ್ಯ ಕಲ್ಪಿಸುವ ವಾಗ್ದಾನ ಜೆಡಿಎಸ್ ವರಿಷ್ಠರಿಂದ ದೊರೆತಿದೆ ಎಂದರು.

    ನುಸಿರೋಗ ಸೇರಿ ಹಲವು ಕಾರಣಗಳಿಂದ ತೆಂಗು ಬೆಳೆ ವಿನಾಶದ ಅಂಚಿಗೆ ತಲುಪಿದ್ದ ವೇಳೆ ತಾಲೂಕಿಗೆ ಅಂದಾಜು 35 ಕೋಟಿ ರೂ. ಪರಿಹಾರಧನ ನೀಡಿದ್ದಾರೆ. ಅಲ್ಲದೆ ಸಾಲಮನ್ನಾ ಘೋಷಣೆಯಿಂದ ಅನ್ನದಾತರ ಸಮಸ್ಯೆ ಪರಿಹಾರವಾಗುವುದಿಲ್ಲ ಎನ್ನುವುದನ್ನು ಮನಗಂಡು ಐದಂಶಗಳ ಪಂಚರತ್ನ ಕಾರ್ಯಕ್ರಮ ಅನುಸಾರ ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಲಾಗಿದೆ. ವಾಸ್ತವ ಮನಗಂಡು ಜೆಡಿಎಸ್ ಬೆಂಬಲಿಸಬೇಕು ಎಂದು ಮನವಿ ಮಾಡಿದರು.

    ಕ್ಷೇತ್ರದ ಜನರು ಸ್ವಾಭಿಮಾನಿಗಳು ಎನ್ನುವುದನ್ನು ಮರೆತಿರುವ ಮಾಜಿ ಶಾಸಕ ಕೆ.ಎಂ.ಶಿವಲಿಂಗೇಗೌಡ ಮತ ವ್ಯಾಪಾರದ ಭ್ರಮೆಯಲ್ಲಿ ತೊಡಗಿದ್ದಾರೆ. ಜತೆಗೆ ಬೆಂಬಲಿಗರನ್ನು ಮುಂದಿಟ್ಟುಕೊಂಡು ಅಪಪ್ರಚಾರ ಮಾಡುತ್ತಿದ್ದಾರೆ. ಹದಿನೈದು ವರ್ಷದಿಂದ ಜಾತಿ, ಉಪ ಜಾತಿಗಳನ್ನು ಎತ್ತಿಕಟ್ಟಿ ತೆರೆಮರೆಯಲ್ಲಿ ಸಭೆ ನಡೆಸುವ ಮೂಲಕ ಓಲೈಕೆ ರಾಜಕಾರಣದಲ್ಲಿ ತೊಡಗಿರುವವರನ್ನು ಮನೆಗೆ ಕಳುಹಿಸುವ ಕಾಲ ಹತ್ತಿರವಾಗಿದೆ ಎಂದು ಗುಡುಗಿದರು.

    ಮೇ10 ರಂದು ನಡೆಯಲಿರುವ ಚುನಾವಣೆಯಲ್ಲಿ ನಿಮ್ಮೆಲ್ಲರ ಆಶೀರ್ವಾದ ಬಲದಿಂದ ಗ್ರಾಮಗಳ ಸಮಸ್ಯೆ ಪರಿಹರಿಸಲು ಅಧಿಕಾರಿಗಳ ತಂಡದೊಂದಿಗೆ ಬರುವುದಾಗಿ ಹೇಳಿದರು.

    ಪಕ್ಷದ ತಾಲೂಕು ಅಧ್ಯಕ್ಷ ಚಂದ್ರಶೇಖರ್, ಮುಖಂಡರಾದ ಮೋಹನ್‌ಕುಮಾರ್, ವೆಂಕಟೇಶ್ ಬೋವಿ, ಕ್ಯಾತನಹಳ್ಳಿ ಪ್ರಸನ್ನ, ಕೆವಿಎನ್ ಶಿವು, ಲೋಕೇಶ್, ಅಮ್ಮನಹಟ್ಟಿ ಹರೀಶ್, ಕುಮಾರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts