More

    ನ್ಯಾಯಾಲಯ ಮೆಟ್ಟಿಲೇರಲು ತೀರ್ಮಾನ

    ಧಾರವಾಡ: ಮಹಾನಗರ ಪಾಲಿಕೆ ಚುನಾವಣೆಗೆ ವಾರ್ಡ್ 19ರಿಂದ ಸ್ಪರ್ಧೆ ಬಯಸಿದ್ದ ಜೆಡಿಎಸ್ ಅಭ್ಯರ್ಥಿ ನಾಮಪತ್ರ ಸ್ವೀಕರಿಸದ ಅಧಿಕಾರಿ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಈ ವಿಷಯವಾಗಿ ನ್ಯಾಯಲಯ ಮೊರೆ ಹೋಗುವುದಾಗಿ ಜೆಡಿಎಸ್ ಜಿಲ್ಲಾಧ್ಯಕ್ಷ ಗುರುರಾಜ ಹುಣಸಿಮರದ ಹೇಳಿದರು.

    ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೆಡಿಎಸ್ ಅಭ್ಯರ್ಥಿ ಹಸೀನಾಬಾನು ಟಪಾಲವಾಲೆ ನಾಮಪತ್ರ ಸಲ್ಲಿಕೆಗೆ ಸೋಮವಾರ ತೆರಳಿದ್ದರು. ನಿಗದಿತ ಸಮಯಕ್ಕೆ ತೆರಳಿದ್ದ ಅವರಿಗೆ 3 ಗಂಟೆ ಬಳಿಕ ಕೂಪನ್ ನೀಡಿ ಕಾಯುವಂತೆ ಸೂಚಿಸಲಾಗಿತ್ತು. ಬಳಿಕ ನಾಮಪತ್ರ ಸಲ್ಲಿಕೆಗೆ ತೆಳಿದ್ದಾಗ ಕೆಲ ದಾಖಲೆಗಳನ್ನು ದೃಢೀಕರಣ ಮಾಡಿಸುವಂತೆ ಚುನಾವಣಾಧಿಕಾರಿ ಪ್ರಭಾಕರ ಅಂಗಡಿ ಸೂಚಿಸಿ ಅರ್ಜಿ ಮರಳಿಸಿದ್ದಾರೆ. ಅದರಂತೆ ಎಲ್ಲ ದಾಖಲೆ ಸರಿಪಡಿಸಿಕೊಂಡು ನಾಮಪತ್ರ ಸಲ್ಲಿಸಲು ಹೋದರೂ ಸ್ವೀಕರಿಸದೆ ಕರ್ತವ್ಯ ಲೋಪ ಎಸಗಿದ್ದಾರೆ ಎಂದು ದೂರಿದರು.

    ನಮ್ಮ ಅಭ್ಯರ್ಥಿ ನಾಮಪತ್ರ ಸ್ವೀಕರಿಸಲು ಚುನಾವಣಾಧಿಕಾರಿಗೆ ಹಲವು ಬಾರಿ ಮನವಿ ಮಾಡಿದರೂ ಸ್ಪಂದಿಸಿಲ್ಲ. ನಿಮ್ಮ ಅಭ್ಯರ್ಥಿಯನ್ನು ಕರೆದಾಗ ಕಚೇರಿಯಲ್ಲಿ ಇರಲಿಲ್ಲ. 5.55 ಗಂಟೆಗೆ ಅವರು ನಾಪತ್ರ ಸಲ್ಲಿಕೆಗೆ ಬಂದ ಕಾರಣ ಅರ್ಜಿ ಸ್ವೀಕರಿಸಿಲ್ಲ ಎಂದು ಸುಳ್ಳು ಮಾಹಿತಿ ಬರೆದುಕೊಟ್ಟಿದ್ದಾರೆ. ಈ ಬಗ್ಗೆ ಆಯೋಗದ ನಿಯಮಾವಳಿ ವೀಡಿಯೋ ದೃಶ್ಯ ನೀಡುವಂತೆ ಕೋರಿದರೆ, ಪೂರ್ಣ ದೃಶ್ಯಾವಳಿ ನೀಡಿಲ್ಲ. ಹೀಗಾಗಿ ಅಧಿಕಾರಿಗಳು ಆಡಳಿತ ಪಕ್ಷದ ಕೈಗೊಂಬೆಯಂತೆ ಕೆಲಸ ಮಾಡುತ್ತಿದ್ದಾರೆ ಎಂಬ ಭಾವನೆ ಮೂಡಿದೆ. ಈ ಕುರಿತು ಪೊಲೀಸರಿಗೆ ಮತ್ತು ಜಿಲ್ಲಾಧಿಕಾರಿಗೆ ದೂರು ಸಲ್ಲಿಸಲಾಗಿದೆ. ಈ ಪ್ರಕರಣದಲ್ಲಿ ತಮಗೆ ನ್ಯಾಯ ಸಿಗದಿದ್ದರೆ ನ್ಯಾಯಾಲಯದ ಮೊರೆ ಹೋಗಲಾಗುವುದು ಎಂದರು.

    ಪಾಲಿಕೆ ಚುನಾವಣೆಯಲ್ಲಿ ಅಧಿಕಾರಿಗಳು ಪಾರದರ್ಶಕವಾಗಿಲ್ಲ ಎಂಬುದು ಮೇಲ್ನೋಟಕ್ಕೆ ಕಾಣುತ್ತಿದೆ. ಇಂತಹ ಅಧಿಕಾರಿ ಮೇಲೆ ಸೂಕ್ತ ಕ್ರಮಕೈಗೊಳ್ಳಬೇಕಲ್ಲದೆ, ಚುನಾವಣಾ ಕಾರ್ಯದಿಂದ ಅವರನ್ನು ಹಿಂಪಡೆಯಬೇಕು. ಇದಲ್ಲದೆ ಆಯೋಗದ ಕಾನೂನುಗಳನ್ನು ಅಭ್ಯರ್ಥಿಗಳಿಗೆ ತಿಳಿಸುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.

    ಮುಖಂಡರಾದ ದೇವರಾಜ ಕಂಬಳಿ, ವೆಂಕಟೇಶ ಸಗಬಾಲ, ಹಸೀನಾಬಾನು ಟಪಾಲವಾಲೆ, ಇತರರು ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts