More

    ನೇಹಾ ಹತ್ಯೆ ಆರೋಪಿ ಗಲ್ಲಿಗೇರಿಸಿ

    ಚಿತ್ರದುರ್ಗ: ಹಾಡಹಗಲೆ ಹುಬ್ಬಳ್ಳಿಯಲ್ಲಿ ಈಚೆಗೆ ವಿದ್ಯಾರ್ಥಿನಿ ನೇಹಾ ಹಿರೇಮಠ್‌ರನ್ನು ಭೀಕರವಾಗಿ ಹತ್ಯೆಗೈದ ಆರೋಪಿ ಫಯಾಜ್‌ಗೆ ಗಲ್ಲಿಗೇರಿಸಬೇಕು ಎಂದು ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.

    ನೀಲಕಂಠೇಶ್ವರ ಸ್ವಾಮಿ ದೇಗುಲದಿಂದ ಮೆರವಣಿಗೆ ನಡೆಸಿದರು. ಪ್ರವಾಸಿ ಮಂದಿರ ಮುಂಭಾಗ ಪ್ರತಿಭಟನಾಕಾರರನ್ನು ಪೊಲೀಸರು ತಡೆದರು. ಈ ವೇಳೆ ಕಾಂಗ್ರೆಸ್ ವಿರುದ್ಧ ಧಿಕ್ಕಾರ ಕೂಗಿದರು. ತಪ್ಪಿತಸ್ಥನಿಗೆ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ರಾಜ್ಯಪಾಲರಿಗೆ ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ಮನವಿ ರವಾನಿಸಿದರು.

    ಎಂಎಲ್ಸಿ ಎನ್.ರವಿಕುಮಾರ್ ಮಾತನಾಡಿ, ಮೈ ಬ್ರದರ್ಸ್‌ ಸಂಸ್ಕೃತಿಯಿಂದಾಗಿ ಭಯೋತ್ಪಾದಕರು, ಉಗ್ರರು, ಗೂಂಡಾಗಳಿಗೆ ರಾಜ್ಯದ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ರಕ್ಷಣೆ ನೀಡಿ, ಸಾಕುತ್ತಿದ್ದಾರೆ. ವಿಧಾನಸಭೆಯಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದವರ ವಿರುದ್ಧ ಕ್ರಮ ಕೈಗೊಳ್ಳದ ಹೇಡಿ ಸರ್ಕಾರಕ್ಕೆ ಜನರೇ ಈ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

    ಒಂದು ಕೋಮಿನ ತುಷ್ಠಿಕರಣ, ಮತಕ್ಕಾಗಿ ಓಲೈಕೆ ರಾಜಕಾರಣಕ್ಕೆ ಮುಂದಾಗಿರುವ ಕಾಂಗ್ರೆಸ್ ಸರ್ಕಾರದಿಂದ ಹಿಂದು ನಾರಿಯರಿಗೆ ರಕ್ಷಣೆ ಇಲ್ಲವಾಗಿದೆ. ಪೊಲೀಸರ ಕೈ ಕಟ್ಟಿ ಹಾಕಿದೆ. ಸ್ವಾತಂತ್ರ ನೀಡಿದ್ದರೆ, ದುಷ್ಟರನ್ನು ಸದೆಬಡಿದು ಸಿಎಂ ಮುಂದೆ ನಿಲ್ಲಿಸುತ್ತಿದ್ದರು. ರಾಜ್ಯದಲ್ಲಿ ರಕ್ಷಣೆ ಇರುವುದು ಕರ್ನಾಟಕ ಪೊಲೀಸರಿಂದಲೇ ಹೊರತು ಸಿದ್ದರಾಮಯ್ಯ ಅವರಿಂದಲ್ಲ ಎಂದು ಕಿಡಿಕಾರಿದರು.

    ಏ. 26ರ ಮತದಾನ ದಿನದಂದು ಒಂದು ಕೋಟಿಗೂ ಅಧಿಕ ಹಿಂದುಗಳು ರಾಜ್ಯದಲ್ಲಿ ಜೈ ಶ್ರೀರಾಮ್ ಜಯಘೋಷದೊಂದಿಗೆ ಮತ ಚಲಾಯಿಸುತ್ತೇವೆ. ತಾಕತ್ತಿದ್ದರೆ, ಎಲ್ಲರನ್ನು ಬಂಧಿಸಲು ಸಾಧ್ಯವೇ ಎಂದು ರಾಜ್ಯ ಸರ್ಕಾರಕ್ಕೆ ಸವಾಲು ಹಾಕಿದರು.

    ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಗೋವಿಂದ ಎಂ ಕಾರಜೋಳ ಮಾತನಾಡಿ, ನೇಹಾ ನನ್ನ ಮಗಳಿದ್ದಂತೆ. ಆ ಯುವತಿಯ ಹತ್ಯೆಯಿಂದ ತುಂಬಾ ನೋವಾಗಿದೆ. ಹಿಂದುಗಳ ಕಗ್ಗೊಲೆ ತಡೆಯುವಲ್ಲಿ ಸಿಎಂ ಸಿದ್ದರಾಮಯ್ಯ ವಿಫಲರಾಗಿದ್ದಾರೆ. ಆದರೆ, ನರೇಂದ್ರ ಮೋದಿ ಅವರು ಪ್ರಧಾನಿಯಾದ ನಂತರ ಭಯೋತ್ಪಾದನೆ ಕಡಿಮೆಯಾಗಿದೆ ಎಂದರು.

    ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಮಾತನಾಡಿ, ಲವ್ ಜಿಹಾದ್ ಬಲವಂತದ ಮತಾಂತರವಾಗಿದೆ. ಹಿಂದು ಯುವತಿಯರೇ ಹೆಚ್ಚು ಟಾರ್ಗೆಟ್ ಆಗುತ್ತಿದ್ದು, ಹಿಂದುತ್ವ ವಿರೋಧಿ ಚಟುವಟಿಕೆ ಉತ್ತರ ಕರ್ನಾಟಕವನ್ನು ವ್ಯಾಪಿಸಿದೆ. ರಕ್ಷಣೆ ನೀಡುವಲ್ಲಿ ಕಾಂಗ್ರೆಸ್ ವಿಫಲವಾಗಿದೆ. ಎಲ್ಲ ಧರ್ಮೀಯರ ಭದ್ರತೆ, ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಬಲತೆ ಬಿಜೆಪಿಯಿಂದ ಮಾತ್ರ ಸಾಧ್ಯ ಎಂದರು.

    ಎಂಎಲ್ಸಿ ಕೆ.ಎಸ್.ನವೀನ್ ಮಾತನಾಡಿ, ರಾಜ್ಯದಲ್ಲಿ ದುಷ್ಟ ಸರ್ಕಾರವಿದೆ. ನಾಲಾಯಕ್ ಗೃಹ ಸಚಿವರಿಂದಾಗಿ ಸ್ತ್ರೀಯರಿಗೆ ರಕ್ಷಣೆ ಇಲ್ಲವಾಗಿದೆ. ಒಂದೇ ದಿನ ವಿವಿಧೆಡೆ 14 ಕೊಲೆಗಳಾಗಿವೆ. ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ವಾಗ್ದಾಳಿ ನಡೆಸಿದರು.

    ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ ಮಾತನಾಡಿ, ನೇಹಾ ಕುಟುಂಬಕ್ಕೆ ನ್ಯಾಯ ಒದಗಿಸುವ ಬದಲು ಆರೋಪಿಗೆ ಉಪಚಾರ ಮಾಡುತ್ತಿರುವುದು ಯಾವ ನ್ಯಾಯ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಗಲಭೆ, ಅತ್ಯಾಚಾರ, ಕೊಲೆ, ಇನ್ನಿತರೆ ಅಪರಾಧ ಪ್ರಕರಣ ಹೆಚ್ಚುತ್ತಿವೆ. ಮತಾಂತರವಾದಿಗಳು ಅಟ್ಟಹಾಸದಿಂದ ಮೆರೆಯುತ್ತಿದ್ದಾರೆ ಎಂದು ಕಿಡಿಕಾರಿದರು.

    ಮಾಜಿ ಸಚಿವ ಬೆಳ್ಳುಬ್ಬಿ, ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ, ಮಧುಗಿರಿ ಜಿಲ್ಲಾಧ್ಯಕ್ಷ ಹನುಮಂತೆಗೌಡ, ಮುಖಂಡರಾದ ಸುರೇಶ್ ಸಿದ್ದಾಪುರ, ಡಾ.ಸಿದ್ದಾರ್ಥ ಗುಂಡಾರ್ಪಿ, ಮಾಧುರಿಗಿರೀಶ್, ಶೈಲಜಾ ರೆಡ್ಡಿ, ಸಂಪತ್, ಭಾರತಿ, ಕವನಾ, ಮಂಜುಳಾ, ಬಸಮ್ಮ, ಶೀಲಾ, ಪೂರ್ಣಿಮಾ, ದಗ್ಗೆ ಶಿವಪ್ರಕಾಶ್, ನಾಗರಾಜ್ ಬೇದ್ರೆ, ನಗರಸಭೆ ಸದಸ್ಯರಾದ ಹರೀಶ್, ಭಾಸ್ಕರ್, ಸುರೇಶ್, ತಿಪ್ಪಮ್ಮ ವೆಂಕಟೇಶ್, ತಾರಕೇಶ್ವರಿ, ಅನುರಾಧ ರವಿಕುಮಾರ್, ವೆಂಕಟೇಶ್, ಭಾಗ್ಯಮ್ಮ ಇತರರಿದ್ದರು.

    ನೀತಿಸಂಹಿತೆ ಉಲ್ಲಂಘನೆ: ಪ್ರತಿಭಟನೆ ಹಿನ್ನಲೆಯಲ್ಲಿ ಅದರ ಸಂಪೂರ್ಣ ಖರ್ಚು ಅಭ್ಯರ್ಥಿಯ ಚುನಾವಣಾ ವೆಚ್ಚದ ಮೇಲೆ ಹಾಕಲಾಗುವುದು. ಅಲ್ಲದೆ, ನೀತಿಸಂಹಿತೆ ಉಲ್ಲಂಘನೆಯಡಿ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಟಿ.ವೆಂಕಟೇಶ್ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts