More

    ನೇಕಾರ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಿ, ರಾಜಕೀಯ ಪಕ್ಷಗಳಿಗೆ ಸ್ವಾಮೀಜಿಗಳ ಆಗ್ರಹ

    ಹುಬ್ಬಳ್ಳಿ: ಮುಂಬರುವ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ನೇಕಾರ ಸಮುದಾಯದ ಅಭ್ಯರ್ಥಿಗಳ ಸ್ಪರ್ಧೆಗೆ ರಾಜಕೀಯ ಪಕ್ಷಗಳು ಹೆಚ್ಚಿನ ಅವಕಾಶ ನೀಡಬೇಕು ಎಂದು ಕರ್ನಾಟಕ ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟದ ಪರವಾಗಿ ವಿವಿಧ ಸ್ವಾಮೀಜಿಗಳು ಒತ್ತಾಯಿಸಿದರು.

    ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗುಳೇದಗುಡ್ಡದ ಶ್ರೀ ಬಸವರಾಜ ಪಟ್ಟದಾರ್ಯ ಸ್ವಾಮೀಜಿ, ಹಿಂದುಳಿದ ವರ್ಗಕ್ಕೆ ಸೇರಿದ ನೇಕಾರ ಸಮುದಾಯವು 29 ಒಳಪಂಗಡಗಳನ್ನು ಹೊಂದಿದೆ. ಸುಮಾರು 60 ಲಕ್ಷ ಜನಸಂಖ್ಯೆ ಹೊಂದಿದೆ. ಮುಂದಿನ ಚುನಾವಣೆಯಲ್ಲಿ ಕನಿಷ್ಠ 5 ವಿಧಾನಸಭೆ ಕ್ಷೇತ್ರಗಳಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಎಲ್ಲ ಪಕ್ಷಗಳು ನೇಕಾರರಿಗೆ ಅವಕಾಶ ನೀಡಬೇಕೆಂದು ಕೋರಿದರು.

    ರಾಜ್ಯದ ಸುಮಾರು 59 ಕ್ಷೇತ್ರಗಳಲ್ಲಿ ನೇಕಾರ ಸಮುದಾಯ ನಿರ್ಣಾಯಕ ಸ್ಥಾನದಲ್ಲಿದೆ. ಇಷ್ಟಿದ್ದರೂ ರಾಜಕೀಯ ಪ್ರಾತಿನಿಧ್ಯ ಇದುವರೆಗೂ ಸಿಗದೇ ಇರುವುದು ದುರದೃಷ್ಟಕರ ಸಂಗತಿ ಎಂದರು.

    ಹುಬ್ಬಳ್ಳಿಯ ವೀರಭಿಕ್ಷಾವರ್ತಿಮಠದ ಶ್ರೀ ಶಿವಶಂಕರ ಸ್ವಾಮೀಜಿ ಮಾತನಾಡಿ, ‘ಜಿಸ್ಕಾ ಲಾಠಿ ಉಸ್ಕಾ ಬೈಂಸ್…’ ಎನ್ನುವಂತೆ ರಾಜ್ಯದಲ್ಲಿ ಯಾರು ಒತ್ತಡ ತರುತ್ತಾರೋ ಅವರಿಗೆ ರಾಜಕೀಯ ಅಧಿಕಾರ ಎಂಬಂತಾಗಿದೆ. ನೇಕಾರ ಸಮುದಾಯ ಇದುವರೆಗೆ ಏನೂ ಕೇಳದೇ ಇದ್ದುದರಿಂದ ನಿರ್ಲಕ್ಷ್ಯ ವಹಿಸಲಾಗಿದೆ. ತೇರದಾಳ ಕ್ಷೇತ್ರದಲ್ಲಿ ಬಿಜೆಪಿ ಈ ಬಾರಿಯೂ ನೇಕಾರ ಸಮುದಾಯಕ್ಕೆ ಅನ್ಯಾಯ ಮಾಡಿದರೆ ಸುಮ್ಮನಿರುವುದಿಲ್ಲ ಎಂದು ಗುಡುಗಿದರು.

    ಕರ್ನಾಟಕದ ತೇರದಾಳ, ಹುನಗುಂದ, ಬೀಳಗಿ, ಬಾಗಲಕೋಟೆ, ಕಲಘಟಗಿ, ಗಾಂಧಿನಗರ, ಚಿಕ್ಕಪೇಟೆ, ಬೆಳಗಾವಿ ದಕ್ಷಿಣ, ರಾಮದುರ್ಗ, ಮೊಳಕಾಲ್ಮೂರು, ದೊಡ್ಡಬಳ್ಳಾಪುರದಲ್ಲಿ ನೇಕಾರರಿಗೆ ಎಲ್ಲ ಪಕ್ಷದವರು ಅವಕಾಶ ನೀಡಬೇಕೆಂದು ಮನವಿ ಮಾಡಿದರು.

    ಇದುವರೆಗೂ ಸಮಾಜದವರಿಗೆ ಸರ್ಕಾರದ ಅನುದಾನ ಮತ್ತು ಸವಲತ್ತುಗಳನ್ನು ಪಡೆಯುವುದು ಕಷ್ಟವಾಗಿದೆ. ಈ ನಿಟ್ಟಿನಲ್ಲಿ ರಾಜಕೀಯ ಪ್ರಾತಿನಿಧ್ಯ ಆವಶ್ಯಕವಾಗಿದೆ ಎಂದು ಸ್ವಾಮೀಜಿ ಹೇಳಿದರು.

    ದೊಡ್ಡಬಳ್ಳಾಪುರದ ಶ್ರೀ ದಿವ್ಯಜ್ಞಾನಂದಗಿರಿ ಸ್ವಾಮೀಜಿ ಮಾತನಾಡಿ, ಸಮುದಾಯದ ವಿವಿಧ ಒಳಪಂಗಡಗಳ ಅಭಿವೃದ್ಧಿಗಾಗಿ ನೇಕಾರ ಸಮುದಾಯಗಳ ಅಭಿವೃದ್ಧಿ ನಿಗಮ ಸ್ಥಾಪನೆ ಅಗತ್ಯವಾಗಿದೆ. ಸುಮಾರು 500 ಕೋಟಿ ರೂ. ಅನುದಾನ ನೀಡಿ ಕೂಡಲೇ ಇದನ್ನು ಜಾರಿ ಮಾಡಬೇಕು ಎಂದು ಆಗ್ರಹಿಸಿದರು. ಕೆಎಚ್​ಡಿಸಿ ನಿಗಮಕ್ಕೆ ನೇಕಾರ ಸಮುದಾಯದವರನ್ನು ನೇಮಿಸಬೇಕು ಎಂದು ಮನವಿ ಮಾಡಿದರು.

    ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಸರ್ಕಾರವು ಹಲವು ಸಮುದಾಯ, ಜಾತಿಗಳ ನಿಗಮ ರಚಿಸಿರುವುದು ಸ್ವಾಗತಾರ್ಹ. ಅದರಂತೆ ನೇಕಾರ ನಿಗಮ ರಚಿಸಿ ಎಂದು ಹರಿಹರದ ಶ್ರೀ ಪ್ರಭುಲಿಂಗ ಸ್ವಾಮೀಜಿ ಕೋರಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts