More

    ನೇಕಾರರ ಬದುಕು ಹಸನಾಗಲಿ



    ಗದಗ: ಕೃಷಿ ಮತ್ತು ನೇಕಾರಿಕೆ ಪರಿಶ್ರಮದ ಕೆಲಸ. ಸ್ವಾತಂತ್ರ್ಯ ನಂತರ ಆಡಳಿತ ನಡೆಸಿದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಆಡಳಿತದಲ್ಲಿ ರೈತರ ಮತ್ತು ನೇಕಾರರ ಬದುಕನ್ನು ಹಸನಾಗಿಸುವ ಕಾರ್ಯ ತೃಪ್ತಿದಾಯಕವಾಗಿ ನಡೆದಿಲ್ಲ ಎಂದು ಶಾಸಕ ಎಚ್.ಕೆ. ಪಾಟೀಲ ಹೇಳಿದರು.

    ಬೆಟಗೇರಿಯ ನೇಕಾರರ ಪತ್ತಿನ ಸಹಕಾರ ಸಂಘ ಕಚೇರಿಯಲ್ಲಿ ಕೈಮಗ್ಗ ಮತ್ತು ಜವಳಿ ಇಲಾಖೆಯಿಂದ ಶುಕ್ರವಾರ ಏರ್ಪಡಿಸಿದ್ದ ನೇಕಾರರ ಸಾಲ ಮತ್ತು ಬಡ್ಡಿ ಮನ್ನಾದ ಚೆಕ್ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ನೇಕಾರಿಕೆಗೆ ರಾಜ್ಯದಲ್ಲಿಯೇ ಬೆಟಗೇರಿ ಖ್ಯಾತಿಯನ್ನು ಪಡೆದುಕೊಂಡಿದೆ. ನೇಕಾರಿಕೆಯೇ ಇಲ್ಲಿನ ಮುಖ್ಯ ಕಸಬು, ನೇಕಾರಿಕೆಯನ್ನು ನಂಬಿಕೊಂಡಿರುವ ನೇಕಾರರ ಬದುಕು ಬಹು ಕಷ್ಟದಲ್ಲಿದೆ. ಹತ್ತು ಹಲವು ಸಮಸ್ಯೆಗಳ ಮಧ್ಯದಲ್ಲಿಯೂ ನೇಕಾರಿಕೆಯನ್ನು ಮುಂದುವರಿಸಿಕೊಂಡು ಬಂದಿರುವ ಈ ಸಮುದಾಯಕ್ಕೆ ಸಾಮಾಜಿಕ ನ್ಯಾಯ ಮತ್ತು ಸರ್ಕಾರದಿಂದ ಲಭ್ಯವಿರುವ ಸೌಲಭ್ಯಗಳನ್ನು ಕೊಡಿಸಲು ಪ್ರಯತ್ನ ಮಾಡಲಾಗುವುದು ಎಂದರು.

    ಕೇಂದ್ರ ಸರ್ಕಾರ ಕೃಷಿ ಕುಟುಂಬಕ್ಕೆ ನೀಡುತ್ತಿರುವ ವಾರ್ಷಿಕ 6 ಸಾವಿರ ರೂ. ಕೃಷಿ ಸಮ್ಮಾನ ಯೋಜನೆಯ ಮೊತ್ತವನ್ನು ಹೆಚ್ಚಿಸಬೇಕು. ವರ್ಷಕ್ಕೆ 6 ಸಾವಿರ ರೂ.ಗಳಾದರೆ ತಿಂಗಳಿಗೆ 500 ರೂ.ಗಳಷ್ಟಾಯಿತು. ಇದರಿಂದ ಸಂಕಷ್ಟದಲ್ಲಿರುವ ಕೃಷಿಕರಿಗೆ ಈ ಮೊತ್ತ ಸಾಕಾಗದು. ಈ ಕುರಿತು ಅಧಿವೇಶನದಲ್ಲಿ ಪ್ರಸ್ತಾಪಿಸಿ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ಹೇಳಿದರು. ನಂತರ ಶಾಸಕ ಎಚ್.ಕೆ. ಪಾಟೀಲ ಅವರು ಫಲಾನುಭವಿಯೊಬ್ಬರಿಗೆ ಸಾಲ ಮತ್ತು ಬಡ್ಡಿ ಮನ್ನಾದ ಚೆಕ್ ವಿತರಣೆ ಮಾಡಿದರು.

    ಅಧ್ಯಕ್ಷತೆ ವಹಿಸಿದ್ದ ಸಂಘದ ಸಂಸ್ಥಾಪಕ ಗೌರವ ಅಧ್ಯಕ್ಷ ಶ್ರೀಶೈಲಪ್ಪ ಬಿದರೂರ ಮಾತನಾಡಿ, 2011ರಲ್ಲಿ 380 ಸದಸ್ಯರೊಂದಿಗೆ ಆರಂಭಗೊಂಡ ಸಂಘದಲ್ಲಿ ಇದೀಗ 845 ಸದಸ್ಯರಿದ್ದಾರೆ. 25.29 ಲಕ್ಷ ರೂ. ಸದಸ್ಯರ ಷೇರು ಬಂಡವಾಳವಿದ್ದು 10 ಲಕ್ಷ ರೂ. ಸರ್ಕಾರದ ಷೇರು ಬಂಡವಾಳ ಸೇರಿ ಒಟ್ಟು 35.20 ಲಕ್ಷ ರೂ. ಷೇರು ಬಂಡವಾಳ ಹೊಂದಿದೆ ಎಂದರು.

    ಜಿಪಂ ಅಧ್ಯಕ್ಷ ಸಿದ್ದಲಿಂಗೇಶ್ವರ ಪಾಟೀಲ, ನಿರ್ದೆಶಕರಾದ ವಿ.ಕೆ. ಗುರುಮಠ, ಮೋಹನಸಾ ರಾಯಬಾಗಿ, ವೀರಭದ್ರಪ್ಪ ಗಂಜಿ, ಸುರೇಶ ಉಂಕಿ, ವಿಜಯಕುಮಾರ ಕಬಾಡಿ, ರಮೇಶ ಗಡ್ಡಿ, ಚನ್ನವೀರಪ್ಪ ಚನ್ನಪ್ಪನವರ, ಅಮರೇಶ ಚ್ಯಾಗಿ, ಮೈಲಾರಪ್ಪ ಅರಣಿ, ವಿಷ್ಣು ಪಾಸ್ತೆ, ನಾಮದೇವ ಸೂರೆ, ವೀಣಾ ನೀಲಗುಂದ, ನೀಲಾವತಿ ದೇವಧರ ಉಪಸ್ಥಿತರಿದ್ದರು.

    ಇದೇ ಸಂದರ್ಭದಲ್ಲಿ ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪನಿರ್ದೇಶಕ ಶಿವರಾಜ ಕುಲಕರ್ಣಿ ಅವರನ್ನು ಸನ್ಮಾನಿಸಲಾಯಿತು.

    ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಬೆಲ್ಲದ ಸ್ವಾಗತಿಸಿದರು, ಅನಿಲ ಗಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಕಾರ್ಯನಿರ್ವಾಹಕ ಪ್ರಭು ನೀಲಗುಂದ ನಿರೂಪಿಸಿದರು. ಸುಭಾಸ ಗಂಜಿ ವಂದಿಸಿದರು.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts