More

    ನೇಕಾರರಿಗೆ ಸವಲತ್ತು ನೀಡದ ಸರ್ಕಾರಗಳು- ಮಲ್ಲಿಕಾರ್ಜುನ ಎಂ.‌ನಾಗಪ್ಪ

    ದಾವಣಗೆರೆ: ರೈತ ಮತ್ತು ನೇಕಾರ ದೇಶದ ಎರಡು ಕಣ್ಣು. ಆದರೆ, ರೈತರಿಗೆ ಸರ್ಕಾರಗಳು ನೀಡುವಷ್ಟು ಸವಲತ್ತನ್ನು ನೇಕಾರರಿಗೆ ನೀಡುತ್ತಿಲ್ಲ ಎಂದು ಮಾಜಿ ಸಚಿವ ಮಲ್ಲಿಕಾರ್ಜುನ ಎಂ. ನಾಗಪ್ಪ ಅಸಮಾಧಾನ ವ್ಯಕ್ತಪಡಿಸಿದರು.
    ಶನಿವಾರ, ಇಲ್ಲಿನ ಎಂಸಿಸಿ ಬಿ ಬ್ಲಾಕ್‌ನಲ್ಲಿ 2.5 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಕುರುಹಿನಶೆಟ್ಟಿ ಸಮಾಜದ ವಿದ್ಯಾರ್ಥಿನಿಲಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
    ರೈತರು ಅನ್ನ ನೀಡಿದರೆ ನೇಕಾರರು ಬಟ್ಟೆ ನೇಯ್ದು ಕೊಡುತ್ತಾರೆ. ಇಬ್ಬರೂ ಕೂಡ ಮುಖ್ಯ. ಅನ್ನದಾತರು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಬೀದಿಗಿಳಿದು ಹೋರಾಟ ಮಾಡುತ್ತಾರೆ. ನಮಗೆ ಸವಲತ್ತು ಸಿಗದಿರಲು ಹಾಗೆ ಹೋರಾಟ ಮಾಡದಿರುವುದೂ ಕಾರಣ ಎಂದು ವಿಶ್ಲೇಷಿಸಿದರು.
    ಸುಮಾರು 30 ಲಕ್ಷ ಜನಸಂಖ್ಯೆ ಹೊಂದಿರುವ ಕುರುಹಿನಶೆಟ್ಟಿ ಸಮಾಜ ನೇಕಾರರಲ್ಲಿ ಮೊದಲನೆ ಸ್ಥಾನದಲ್ಲಿ ನಿಲ್ಲುತ್ತಾರೆ. ಆದರೆ, ರಾಜ್ಯದಲ್ಲಿ ನೇಕಾರಿಕೆ ವೃತ್ತಿ ಇಂದು ಕಡಿಮೆಯಾಗಿದೆ. ನಾನು ಸಚಿವನಾಗಿದ್ದ ಅವಧಿಯಲ್ಲಿ ರಾಜ್ಯದಲ್ಲಿದ್ದ 35 ಸಾವಿರ ಕೈಮಗ್ಗಗಳಿಂದು 5ಸಾವಿರಕ್ಕೆ ಇಳಿದಿವೆ. ಅನೇಕರು ಕೈಮಗ್ಗದಿಂದ ವಿದ್ಯುತ್ ಮಗ್ಗದತ್ತ ಹೋಗಿದ್ದಾರೆ. ಕೆಲವರು ಪರ್ಯಾಯ ಉದ್ಯೋಗ ಅವಲಂಭಿಸಿದ್ದಾರೆ ಎಂದು ವಿಷಾದಿಸಿದರು.
    ಕುರುಹಿನ ಸಮಾಜದ ವಿವಿಧ ಪಂಗಡಗಳ ನಡುವೆ ವೈವಾಹಿಕ ಸಂಬಂಧ ಬೆಳೆಸಬೇಕು. ಸಮಾಜದ ಮುಖ್ಯವಾಹಿನಿಗೆ ನಾವು ಬರಲು ಶೈಕ್ಷಣಿಕವಾಗಿ ಬೆಳೆಯಬೇಕಿದೆ ಎಂದರು.
    ಮಾಜಿ ಸಚಿವ ಎಚ್.ಆಂಜನೇಯ ಮಾತನಾಡಿ ಕುರುಹಿನಶೆಟ್ಟಿ ಸಮಾಜ ಅತ್ಯಂತ ಹಿಂದುಳಿದಿದೆ. ಸಮಾಜದವರು ಇರುವೆಡೆ ಸರ್ವೇ ಮಾಡಿ ಅವರ ಮನೆಗಳಿಗೆ ಭೇಟಿ ನೀಡಿ ಬಡ ಮಕ್ಕಳನ್ನು ದತ್ತು ಪಡೆದು ಅವರ ಶಿಕ್ಷಣಕ್ಕೆ ಸಮಾಜದ ಮುಖಂಡರು ಆದ್ಯತೆ ನೀಡಬೇಕು ಎಂದು ಹೇಳಿದರು.
    ಕುರುಹಿನಶೆಟ್ಟಿ ಸಂಘದ ರಾಜ್ಯಾಧ್ಯಕ್ಷ ಅಂಬಾದಾಸ್ ಕಾಮೂರ್ತಿ ಮಾತನಾಡಿ ಸಮಾಜದ ರಾಜಕೀಯ ಶಕ್ತಿ ಬೆಳೆಯಬೇಕಿದೆ. ಮಕ್ಕಳನ್ನು ಐಎಎಸ್, ಕೆಎಎಸ್, ಐಪಿಎಸ್ ಮೊದಲಾದ ಉನ್ನತ ಓದಿಗೆ ಪ್ರೇರೇಪಿಸಬೇಕಿದೆ ಎಂದರು. ಧಾರವಾಡದಲ್ಲಿ ಡಿ.24ರಂದು ಸಮಾಜದ ವಧು ವರರ ಸಮ್ಮೇಳನ ನಡೆಯಲಿದ್ದು ಇದರ ಲಾಭ ಪಡೆಯಬೇಕು ಎಂದರು.
    ಸಂಘದ ರಾಜ್ಯ ಉಪಾಧ್ಯಕ್ಷ ಜಿ.ಸೋಮಶೇಖರ್ ಮಾತನಾಡಿ ಸಮಾಜದಲ್ಲಿ ಹಿರೇ ಕುರುಹಿನಶೆಟ್ಟಿ, ಕಿರೇ ಕುರುಹಿನಶೆಟ್ಟಿ, ಒಂಟಿಬೊಮ್ಮ, ಜೋಡಿಬೊಮ್ಮ ಮೊದಲಾದ ಪಂಗಡಗಳ ನಡುವಿನ ಭೇದ ನಿರ್ಮೂಲನೆ ಆಗಬೇಕು. ನೇಕಾರರ ಒಕ್ಕೂಟಕ್ಕೆ ಸಮಾಜ ಸೇರುವ ಮುನ್ನ ನಾವು ಮೊದಲು ಒಗ್ಗಟ್ಟಾಗಬೇಕು ಎಂದು ಹೇಳಿದರು.
    ಕೆಪಿಸಿಸಿ ವಕ್ತಾರ ಡಿ.ಬಸವರಾಜ್,ಸಮಾಜದ ಜಿಲ್ಲಾಧ್ಯಕ್ಷ ಆರ್.ಎಚ್.ನಾಗಭೂಷಣ್ ಮಾತನಾಡಿದರು.ಕಾರ್ಯಕ್ರಮದಲ್ಲಿ ಗದಗ ಬೆಟಗೇರಿಯ ನಾಲ್ವಡಿ ಶ್ರೀ ನೀಲಕಂಠೇಶ್ವರ ಪಟ್ಟದಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪಾಲಿಕೆ ವಿಪಕ್ಷ ನಾಯಕ ಮಂಜುನಾಥ ಗುಡಿಗುಡಾಳ್, ರವೀಂದ್ರನಾಥ ಎಂ. ನಾಗಪ್ಪ, ಎನ್.ವಿ.ರುದ್ರಮುನಿ, ಬೆನಕಲ್ಲಪ್ಪ, ಕೆ.ಎನ್. ಹನುಮಂತಪ್ಪ, ತಿಪ್ಪೇಸ್ವಾಮಿ ನಿಬಗೂರು ಇತರರಿದ್ದರು.
    —-

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts