More

    ನೆರೆ ನೆರವಿಗೆ ಕೇಂದ್ರಕ್ಕೆ ಮೊರೆ

    ಕಾರವಾರ: ಜುಲೈ ತಿಂಗಳಲ್ಲಿ ಸಂಭವಿಸಿದ ನೆರೆಯಿಂದ ಉತ್ತರ ಕನ್ನಡದಲ್ಲಿ 700 ಕೋಟಿಗೂ ಅಧಿಕ ಸಾರ್ವಜನಿಕ ಆಸ್ತಿ ಪಾಸ್ತಿಗೆ ಹಾನಿಯಾಗಿದ್ದು, ಅದರ ಸಮಗ್ರ ವರದಿಯನ್ನು ಶೀಘ್ರ ರಾಜ್ಯ ಸರ್ಕಾರಕ್ಕೆ ಸಲ್ಲಿಸುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ ಎಂದು ಕಾರ್ವಿುಕ ಸಚಿವ ಶಿವರಾಮ ಹೆಬ್ಬಾರ ತಿಳಿಸಿದರು.
    ಕಾರವಾರದಲ್ಲಿ ವಿವಿಧ ಇಲಾಖೆ ಅಧಿಕಾರಿಗಳ ಜತೆ ನೆರೆ ಹಾಗೂ ಕೋವಿಡ್ ಸಂಬಂಧ ಶನಿವಾರ ರ್ಚಚಿಸಿದ ನಂತರ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಈಗಾಗಲೇ ಸಿಎಂ ಅವರು ಜಿಲ್ಲೆಗೆ ಭೇಟಿ ನೀಡಿ ಇಲ್ಲಿನ ಪರಿಸ್ಥಿತಿ ಅವಲೋಕಿಸಿದ್ದಾರೆ. 210 ಕೋಟಿ ರೂಪಾಯಿಗಳನ್ನು ತಕ್ಷಣಕ್ಕೆ ಬಿಡುಗಡೆಯನ್ನೂ ಮಾಡಿದ್ದಾರೆ. ಇನ್ನೂ ಹೆಚ್ಚಿನ ನೆರವಿಗಾಗಿ ಸಚಿವ ಸಂಪುಟ ರಚನೆಯಾದ ನಂತರ ಮೊದಲ ಸಭೆಯಲ್ಲೇ ಒತ್ತಾಯಿಸಲಾಗುವುದು. ಹೆಚ್ಚಿನ ಪರಿಹಾರಕ್ಕೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗುವುದು. ಹಾನಿಯ ಸ್ಪಷ್ಟ ವರದಿ ಸಿಕ್ಕರೆ ಸಮೀಕ್ಷೆಗೆ ಕೇಂದ್ರ ತಂಡ ಕರೆಸಲು ಇದು ಅನುಕೂಲವಾಗಲಿದೆ ಎಂದರು.
    ಪುನರ್ವಸತಿಗೆ ವ್ಯವಸ್ಥೆ: ಯಲ್ಲಾಪುರ ತಾಲೂಕಿನ ಕಳಚೆ, ಅಂಕೋಲಾ ತಾಲೂಕಿನ ಗಂಗಾವಳಿ ನದಿ ತಟದ ಗ್ರಾಮಗಳು, ಶಿರಸಿಯ ಮೊಗಳ್ಳಿ, ಕಾರವಾರದ ಕದ್ರಾ, ಮಲ್ಲಾಪುರದಲ್ಲಿ ನೆರೆ ಪೀಡಿತರು ಪರ್ಯಾಯ ಸುರಕ್ಷಿತ ಸ್ಥಳ ಕೇಳುತ್ತಿದ್ದಾರೆ. ಸ್ಥಳಾಂತರಗೊಳ್ಳಲು ಸಿದ್ಧರಿರುವವರ ಪಟ್ಟಿ ತಯಾರಿಸಲು ಅಧಿಕಾರಿಗಳಿಗೆ ಹಾಗೂ ಸ್ಥಳೀಯ ಜನಪ್ರತಿನಿಧಿಗಳಿಗೆ ಸೂಚಿಸಿದ್ದೇನೆ. ಕಂದಾಯ ಭೂಮಿ ಗುರುತಿಸಿ ಸಂತ್ರಸ್ತರಿಗೆ ಪುನರ್ವಸತಿ ವ್ಯವಸ್ಥೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು. ಕಳಚೆ ಗ್ರಾಮಕ್ಕೆ ತೆರಳಲು ಇನ್ನೂ ಸಾಧ್ಯವಾಗುತ್ತಿಲ್ಲ. ಸಂಪರ್ಕ ಸಾಧ್ಯವಾದ ತಕ್ಷಣ ಅಲ್ಲಿನ ಜನರ ಜತೆ ಮಾತುಕತೆ ನಡೆಸಿ ನಿರ್ಣಯ ಕೈಗೊಳ್ಳಲಾಗುವುದು ಎಂದರು.
    24 ಗಂಟೆ ಸಂಚಾರಕ್ಕೆ ಕ್ರಮ: ಕರಾವಳಿ ಹಾಗೂ ಬಯಲು ಸೀಮೆಯನ್ನು ಸಂರ್ಪಸುವ ಪ್ರಮುಖ ರಾಷ್ಟ್ರೀಯ ಹೆದ್ದಾರಿ-63 ರಲ್ಲಿ ಅರಬೈಲ್ ಘಟ್ಟ ಕುಸಿದಿದ್ದರಿಂದ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಇದುವರೆಗೆ ಹಗಲು ಹೊತ್ತಿನಲ್ಲಿ ಮಾತ್ರ ಅರಬೈಲ್ ಘಟ್ಟ ವ್ಯಾಪ್ತಿಯಲ್ಲಿ ವಾಹನಗಳ ಏಕಮುಖ ಸಂಚಾರಕ್ಕೆ ಅವಕಾಶ ನೀಡಲಾಗುತ್ತಿತ್ತು. ಆದರೆ, ಮಂಗಳೂರು- ಬೆಂಗಳೂರು, ಕಾರವಾರ-ಜೊಯಿಡಾ ಮುಂತಾದ ರಸ್ತೆಗಳಲ್ಲಿ ವಾಹನ ಓಡಾಟ ಬಂದ್ ಆಗಿದೆ. ಶಿರಸಿ-ಕುಮಟಾ ರಸ್ತೆಯಲ್ಲಿ ಭಾರಿ ವಾಹನ ಸಂಚಾರ ಸಾಧ್ಯವಾಗುತ್ತಿಲ್ಲ. ಇದರಿಂದ ರಾಷ್ಟ್ರೀಯ ಹೆದ್ದಾರಿ 63 ರ ಮೇಲೆ ಒತ್ತಡ ಹೆಚ್ಚಿದೆ. ಅರಬೈಲ್ ಘಟ್ಟದ ಇಕ್ಕೆಲಗಳಲ್ಲಿ 29 ಕಿಮೀವರೆಗೆ ವಾಹನಗಳು ಸರದಿಯಲ್ಲಿ ಕಾದು ನಿಂತಿವೆ.ಯಾವುದಾದರೂ ಒಂದು ವಾಹನ ಅಡ್ಡ ಬಂದರೆ, ಮೂರ್ನಾಲ್ಕು ತಾಸು ಸಂಪೂರ್ಣ ವಾಹನ ಸಂಚಾರ ಸ್ಥಗಿತವಾಗುತ್ತಿದೆ. ಇದನ್ನು ಅರಿತು ದಿನದ 24 ಗಂಟೆಯೂ ಬಾಳೆಗುಳಿ-ಯಲ್ಲಾಪುರ ನಡುವೆ ವಾಹನ ಓಡಾಟಕ್ಕೆ ಅವಕಾಶ ನೀಡಲು ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ. ಹೆದ್ದಾರಿಯ ಎರಡೂ ಕಡೆ ನಾಕಾ ಬಂದಿ ಮಾಡಿ, ಗುಡ್ಡ ಕುಸಿತದ ಸ್ಥಳದಲ್ಲಿ ಸುರಕ್ಷಿತವಾಗಿ ವಾಹನ ಓಡಾಟಕ್ಕೆ ಸೂಚಿಸಲಾಗಿದೆ. ಮಳೆ ಕಡಿಮೆಯಾದ ನಂತರ ಕಾಯಂ ದುರಸ್ತಿಗೆ ಕ್ರಮ ವಹಿಸಲಾಗುವುದು ಎಂದರು.
    ಶೀಘ್ರ ನೆರವು: ಅಧಿಕ ಮಳೆಯಿಂದ 133 ಗ್ರಾಮಗಳ 23 ಸಾವಿರಕ್ಕೂ ಹೆಚ್ಚು ಜನ ತೊಂದರೆಗೆ ಸಿಲುಕಿದ್ದರು. 8 ಸಾವಿರಕ್ಕೂ ಅಧಿಕ ಮನೆಗಳು ನೀರಿನಲ್ಲಿ ಮುಳುಗಿದ್ದವು. ಮನೆ ನೀರಿನಲ್ಲಿ ಮುಳುಗಿದವರಿಗೆ ಪ್ರಾಥಮಿಕ ಪರಿಹಾರವಾಗಿ ತಲಾ 10 ಸಾವಿರವನ್ನು ಶೀಘ್ರ ವಿತರಣೆ ಮಾಡಲು ಸೂಚಿಸಲಾಗಿದೆ. ಸದ್ಯ 4 ತಾಲೂಕುಗಳ ನೆರೆ ಹಾನಿ ಸರ್ವೆ ಮುಗಿದಿದೆ. ಇನ್ನೂ 7 ತಾಲೂಕುಗಳ ಸರ್ವೆಯನ್ನು 15 ದಿನಗಳಲ್ಲಿ ಮುಗಿಸಿ ಪರಿಹಾರ ವಿತರಿಸಲು ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ. ಬಿದ್ದ ಮನೆಗಳ ಮರು ನಿರ್ವಣಕ್ಕೆ ರಾಜೀವ ಗಾಂಧಿ ವಸತಿ ನಿಗಮದ ಅಡಿ ಸಹಾಯಧನ ನೀಡಲಾಗುವುದು ಎಂದರು. ಶಾಸಕರಾದ ರೂಪಾಲಿ ನಾಯ್ಕ, ದಿನಕರ ಶೆಟ್ಟಿ, ಎಂಎಲ್​ಸಿ ಶಾಂತಾರಾಮ ಸಿದ್ದಿ, ಕಾರವಾರ ನಗರಸಭೆ ಅಧ್ಯಕ್ಷ ಡಾ. ನಿತಿನ್ ಪಿಕಳೆ, ಉಪಾಧ್ಯಕ್ಷ ಪ್ರಕಾಶ ನಾಯ್ಕ ಇದ್ದರು.

    ಖಾತೆ ಬಗ್ಗೆ ಸಮಾಧಾನವಿದೆ
    ಕಾರ್ಯಕರ್ತನಾಗಿದ್ದವ ಶಾಸಕನಾಗಬಯಸುವುದು, ಶಾಸಕನಾಗಿದ್ದವ ಸಚಿವನಾಗಬಯಸುವುದು, ಸಚಿವನಾಗಿದ್ದವ ಸಿಎಂ ಹುದ್ದೆಯತ್ತ ಕಣ್ಣಿಡುವುದು ಸಹಜ. ಅದಕ್ಕಾಗಿ ಪ್ರತಿ ಬಾರಿ ಮಂತ್ರಿ ಮಂಡಲ ರಚನೆಯ ಸಂದರ್ಭದಲ್ಲಿ ಪೈಪೋಟಿ ನಡೆಯುತ್ತದೆ. ಅದನ್ನು ನಿಭಾಯಿಸುವುದು ಎಷ್ಟು ಕಷ್ಟ ಎಂಬುದು ಸಿಎಂ ಆಗಿದ್ದವರಿಗೇ ಗೊತ್ತು. ಖಾತೆ ಹಂಚಿಕೆಯಲ್ಲಿ ಅಲ್ಪ ಸ್ವಲ್ಪ ಅಸಮಾಧಾನವಿದ್ದರೂ ನಂತರ ಎಲ್ಲವೂ ಸರಿಯಾಗುತ್ತದೆ. ನನಗೆ ಮರಳಿ ಕಾರ್ವಿುಕ ಖಾತೆ ನೀಡಲಾಗಿದೆ. ಅದರ ಬಗ್ಗೆ ಸಮಾಧಾನವಿದೆ ಎಂದು ಸಚಿವ ಶಿವರಾಮ ಹೆಬ್ಬಾರ ಹೇಳಿದರು.
    ಕೋವಿಡ್ ನಿಯಂತ್ರಣಕ್ಕೆ ಸಹಕರಿಸಿ
    ರಾಜ್ಯದ ಇತರ ಕೆಲ ಜಿಲ್ಲೆಗಳಿಗೆ ಹೋಲಿಸಿದರೆ ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವಿಟಿ ದರ ಕಡಿಮೆ ಇದೆ. ಸದ್ಯ ಜಿಲ್ಲೆಯಲ್ಲಿ ಆಕ್ಸಿಜನ್, ಆಂಬುಲೆನ್ಸ್, ಬೆಡ್ ಮುಂತಾದ ಯಾವುದೇ ಮೂಲ ಸೌಕರ್ಯದ ಕೊರತೆ ಇಲ್ಲ. ಮೂರನೇ ಅಲೆಯನ್ನು ಎದುರಿಸಲು ಎಲ್ಲ ಸಜ್ಜಾಗಿದೆ. ಆದರೆ, ಕೋವಿಡ್ ನಿಯಂತ್ರಣಕ್ಕೆ ಜಿಲ್ಲೆಯ ಜನರೂ ಸಹಕಾರ ನೀಡಬೇಕು. ಹೊರಗಿನಿಂದ ಬಂದವರು ಮನೆಯಿಂದ ದೂರ ಇದ್ದು, ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು. ಮಾಸ್ಕ್ ಧರಿಸಬೇಕು ಮತ್ತೆ ಲಾಕ್​ಡೌನ್ ಮಾಡುವ ಪರಿಸ್ಥಿತಿ ಬಾರದಂತೆ ನೋಡಿಕೊಳ್ಳಿ ಎಂದು ಸಚಿವ ಶಿವರಾಮ ಹೆಬ್ಬಾರ ಮನವಿ ಮಾಡಿದರು.

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts