More

    ನೆರೆವು ಕನ್ನ ಮಾಹಿತಿ ನೀಡದ ಅಧಿಕಾರಿಗಳು

    ಬ್ಯಾಡಗಿ: ಬೆಳೆ ವಿಮೆ ಹಾಗೂ ಮಳೆಯಿಂದಾದ ಮನೆ ಹಾನಿ ಪರಿಹಾರ ವಿತರಣೆ ಮಾಹಿತಿ ನೀಡಬೇಕಿದ್ದ ತಹಸೀಲ್ದಾರರನ್ನು ಸದಸ್ಯರು ಪಟ್ಟು ಹಿಡಿದು ತಾ.ಪಂ. ಕೆಡಿಪಿ ಸಭೆಗೆ ಕರೆಸಿದ ಪ್ರಸಂಗ ನಡೆಯಿತು.

    ಪಟ್ಟಣದ ತಾ.ಪಂ. ಸಭಾಭವನದಲ್ಲಿ ಗುರುವಾರ ಆಯೋಜಿಸಿದ್ದ ಕೆಡಿಪಿ ಸಭೆಗೆ ಆಗಮಿಸಿದ ಉಪತಹಸೀಲ್ದಾರ್ ಬಂಕಾಪುರ ಪರಿಹಾರ ವಿತರಣೆ ಕುರಿತು ಅಪೂರ್ಣ ಮಾಹಿತಿ ನೀಡಿದರು. ಇದರಿಂದ ಸದಸ್ಯರು ತಹಸೀಲ್ದಾರರನ್ನು ಸಭೆಗೆ ಕರೆಸುವಂತೆ ಪಟ್ಟು ಹಿಡಿದರು.

    ಅಧ್ಯಕ್ಷೆ ಸವಿತಾ ಸುತ್ತಕೋಟಿ, ಉಪಾಧ್ಯಕ್ಷೆ ಶಾಂತವ್ವ ದೇಸಾಯಿ, ತಾಲೂಕಿನ ಬಹುತೇಕ ರೈತರಿಗೆ ಪರಿಹಾರ ಹಣ ಬಂದಿಲ್ಲ, ಈ ಕುರಿತು ತಹಸೀಲ್ದಾರ್, ಗ್ರಾಮಲೆಕ್ಕಾಧಿಕಾರಿ, ಆಪರೇಟರ್ ಹಾಗೂ ಕೃಷಿ ಸಹಾಯಕ ನಿರ್ದೇಶಕ, ತೋಟಗಾರಿಕೆ ಸಹಾಯಕ ನಿರ್ದೇಶಕರ ಮೇಲೆ ಪ್ರಕರಣ ದಾಖಲಾಗಿದೆ. ಬೆಳೆ ವಿಮೆ ಹಾಗೂ ಮಳೆಯಿಂದಾದ ಮನೆ ಹಾನಿ ಪರಿಹಾರ ವಿತರಣೆಯಲ್ಲಿ ಅರ್ಹರಿಗೆ ಅನ್ಯಾಯವಾಗಿದೆ. ಈ ಕುರಿತು ರ್ಚಚಿಸಲು ತಹಸೀಲ್ದಾರ್ ಕೆಡಿಪಿ ಸಭೆಗೆ ಬರುತ್ತಿಲ್ಲ ಎಂದು ತಾ.ಪಂ. ಅಧ್ಯಕ್ಷ, ಉಪಾಧ್ಯಕ್ಷರು ಆಕ್ರೋಶ ವ್ಯಕ್ತಪಡಿಸಿದರು.

    ಮಧ್ಯಾಹ್ನ 2 ಗಂಟೆಗೆ ಆಗಮಿಸಿದ ತಹಸೀಲ್ದಾರ್ ಶರಣಮ್ಮ ಕಾರಿ, ತಾಲೂಕಿನಲ್ಲಿ ಪರಿಹಾರ ವಿತರಣೆ ಕುರಿತು ಅವ್ಯವಹಾರವಾಗಿಲ್ಲ, ಈ ಕುರಿತು ತನಿಖೆ ನಡೆದ ಬಳಿಕ ಎಲ್ಲವೂ ತಿಳಿಯಲಿದೆ ಎಂದರು.

    ಸ್ಥಾಯಿ ಸಮಿತಿ ಚೇರ್ಮನ್ ಯಲ್ಲನಗೌಡ್ರ ಕರೇಗೌಡ್ರ ಮಾತನಾಡಿ, ತಾಲೂಕಿನ ಗುಂಡೇನಹಳ್ಳಿ ಗ್ರಾಮದಲ್ಲಿ ಮನೆಬಿದ್ದ ಅರ್ಹರಿಗೆ ಪರಿಹಾರ ಸಿಕ್ಕಿಲ್ಲ. ಹಿಂದಿನ ಸಭೆಯಲ್ಲಿ ಮರುಪರಿಶೀಲನೆಗೆ ಠರಾವು ಮಾಡಲಾಗಿತ್ತು. ತಹಸೀಲ್ದಾರ್ ಗುಂಡೇನಹಳ್ಳಿ ಗ್ರಾಮಕ್ಕೆ ಭೇಟಿಯೂ ನೀಡಿಲ್ಲ, ಪರಿಶೀಲನೆಯನ್ನೂ ನಡೆಸಿಲ್ಲ. ಗುಂಡೇನಹಳ್ಳಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮೂವರು ಗ್ರಾಮಲೆಕ್ಕಾಧಿಕಾರಿಗಳು ಬದಲಾಗಿದ್ದು, ನಾಲ್ಕನೇಯವರು ಅಧಿಕಾರ ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ತಹಸೀಲ್ದಾರ್ ಅರ್ಜಿದಾರರ ದಾಖಲೆ ಕಡತ ನೀಡದಿರುವುದು ಸಂಶಯಕ್ಕೆ ಆಸ್ಪದವಾಗಿದೆ. ಒಂದೇ ಮನೆ ಎದುರು ಎರಡು ಜನ ಫೋಟೋ ತೆಗೆಸಿ ಪರಿಹಾರ ಪಡೆದಿರುವುದು ಬೆಳಕಿಗೆ ಬಂದಿದ್ದು, ಜಿಲ್ಲಾಧಿಕಾರಿ ಗಮನಹರಿಸಬೇಕು ಎಂದು ಒತ್ತಾಯಿಸಿದರು.

    ನನಗೆ ಯಾವುದೇ ಮಾಹಿತಿಯಿಲ್ಲ

    ತೋಟಗಾರಿಕೆ ಸಹಾಯಕ ನಿರ್ದೇಶಕ ಅಶೋಕ ಕುರುಬರ, ನಾನು ಇತ್ತೀಚೆಗೆ ವರ್ಗಾವಣೆಯಾಗಿ ಬಂದಿದ್ದು, ಯಾವುದೇ ಮಾಹಿತಿ ಇಲ್ಲ ಎನ್ನುತ್ತಿದ್ದಂತೆ, ಇಒ ಅಬೀದ್ ಗದ್ಯಾಳ, ‘ಏನ್ರೀ,.. ನಿಮ್ಮ ಇಲಾಖೆ ಯೋಜನೆ, ಫಲಾನುಭವಿಗಳು, ಸಿಬ್ಬಂದಿ, ಪ್ರಗತಿ ವರದಿ ಹಾಗೂ ಹಿಂದಿನ ಸಭೆಯ ನಡಾವಳಿ ಕುರಿತು ಗೊತ್ತಿಲ್ಲವೆಂದರೆ ಏಕೆ ಬರಬೇಕು. ಸಂಬಂಧಿಸಿದ ಸಿಬ್ಬಂದಿ ಕರೆಸಿ ಪ್ರಗತಿ ವರದಿ ಕೊಡಿ’ ಎಂದರು. ಆದರೆ ಸಭೆ ಮುಗಿದರೂ ಯಾರೂ ಬರಲಿಲ್ಲ.

    ಸಭೆಯಲ್ಲಿ ಆರೋಗ್ಯಾಧಿಕಾರಿ ಡಾ.ಬಿ.ಆರ್. ಲಮಾಣಿ, ಬಿಇಒ ಬಿ.ಕೆ. ರುದ್ರಮನಿ, ಇಂಜಿನಿಯರ್ ಆರ್.ಎಂ. ಸೊಪ್ಪಿನಮಠ, ಸುರೇಂದ್ರ ದೊಡ್ಡಮನಿ, ತಾ.ಪಂ. ವ್ಯವಸ್ಥಾಪಕ ಪ್ರಕಾಶ ಹಿರೇಮಠ ಇತರರಿದ್ದರು.

    ಸಭೆಗೆ ಬಾರದ ಮುಖ್ಯ ಇಂಜಿನಿಯರ್

    ತಾ.ಪಂ. ಅಧ್ಯಕ್ಷೆ ಸವಿತಾ ಸುತ್ತಕೋಟಿ ಮಾತನಾಡಿ, ಸಣ್ಣ ನೀರಾವರಿ ಇಲಾಖೆ ವತಿಯಿಂದ 40 ಲಕ್ಷ ರೂ. ವೆಚ್ಚದಲ್ಲಿ 2017ರಲ್ಲಿ ಕೆರೂಡಿ ಗ್ರಾಮದ ಕೆರೆ ಹೂಳೆತ್ತಲು ಅನುದಾನ ಬಿಡುಗಡೆಯಾಗಿದೆ. ಆದರೆ, ಈವರೆಗೂ ಕಾಮಗಾರಿ ಕೈಗತ್ತಿಕೊಳ್ಳದೆ ಪ್ರಗತಿ ಪತ್ರದಲ್ಲಿ ನೀರು ನಿಂತಿರುವುದರಿಂದ ಕಾಮಗಾರಿ ನಿಂತಿದೆ ಎಂದು ತಿಳಿಸಿದ್ದೀರಿ. ಪ್ರಗತಿ ಏನೇನಾಗಿದೆ ವಿವರ ನೀಡಿ ಎಂದರು. ನೀರಾವರಿ ಇಲಾಖೆ ಸಿಬ್ಬಂದಿ ನನಗೇನೂ ಗೊತ್ತಿಲ್ಲ ಎಂದರು. ಆಗ ಅಧ್ಯಕ್ಷರು, ‘ನಾನು ಪಕ್ಕದ ಊರಿನವಳು, ಸುಳ್ಳು ಮಾಹಿತಿ ನೀಡುವುದು ಸರಿಯಲ್ಲ. ಮುಖ್ಯ ಇಂಜಿನಿಯರ್ ಕರೆಸಿ ಮಾಹಿತಿ ಕೊಡಿ’ ಎಂದು ಸೂಚನೆ ನೀಡಿದರು. ಆದರೆ, ಇಂಜಿನಿಯರ್ ಕೊನೆಗೂ ಬರಲಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts